ಉಡುಪಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವರದಿ ಮಾಡಿದ್ದಕ್ಕೆ ‘ಕನ್ನಡಪ್ರಭ’ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಸರ್ಕಾರಿ ವೈದ್ಯರೊಬ್ಬರು ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಪತ್ರಕರ್ತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ. ಇನ್ನು ಹಲ್ಲೆ ಮಾಡುವ ದೃಶ್ಯವೂ ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೋಟೆಲ್ ಸಿಬ್ಬಂದಿ ಹಲ್ಲೆಯಾಗುವುದನ್ನು ತಡೆದಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿರುವ ವೈದ್ಯರೊಬ್ಬರು ಮಾಧ್ಯಮ ಪ್ರತಿನಿಧಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ವರದಿ ಮಾಡುವುದು ಪತ್ರಕರ್ತರ ವೃತ್ತಿಪರ ಕರ್ತವ್ಯವಾಗಿದ್ದು, ವರದಿಯ ಬಗ್ಗೆ ಆಕ್ಷೇಪವಿದ್ದರೆ ಕಾನೂನುಬದ್ಧವಾಗಿ ಸ್ಪಷ್ಟನೆ ನೀಡುವುದು ಅಥವಾ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸುವ ಬದಲು ಹಲ್ಲೆಯಂತಹ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ ಎಂದು ಪತ್ರಕರ್ತರ ವಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : ಎಸ್ಐಆರ್ ಹೆಸರಲ್ಲಿ ಮತಹರಣ: ‘ಸಹಜ ಪ್ರಕ್ರಿಯೆ ಹಗರಣದಂತೆ ಕಾಣುತ್ತಿದೆ – ನಟ ಕಿಶೋರ್
ವ್ಯಾಪಾಕ ಖಂಡನೆ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬ್ರಹ್ಮಾವರ, ಬೈಂದೂರು, ಕಾಪು, ಕುಂದಾಪುರ, ಹೆಬ್ರಿ, ಕಾರ್ಕಳ ತಾಲೂಕು ಘಟಕಗಳು ತೀವ್ರವಾಗಿ ಖಂಡಿಸಿವೆ.
ಅದೇ ರೀತಿ ಈ ಹಲ್ಲೆಯನ್ನು ಸಹಬಾಳ್ವೆ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಪ್ರೊ.ಫಣಿರಾಜ್, ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹಾಗೂ ಡಿವೈಎಫ್ಐ ರಾಜ್ಯ ಮುಖಂಡ ಸಂತೋಷ ಬಜಾಲ್ ತೀವ್ರವಾಗಿ ಖಂಡಿಸಿ, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ : ಕುಂದಾಪುರ| ಭ್ರಷ್ಟಾಚಾರ ವರದಿ ಮಾಡಿದ್ದಕ್ಕೆ ವರದಿಗಾರನ ಮೇಲೆ ಸರ್ಕಾರಿ ವೈದ್ಯನಿಂದ ಹಲ್ಲೆ!Janashakthi Media
