ಬೆಂಗಳೂರು: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ 1971ರ ಜನಗಣತಿಯನ್ನೇ ಆಧಾರವಾಗಿರಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಲಿ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳವರೆಗೆ ಮುಂದುವರಿಸಬೇಕು ಹಾಗೂ ಇದೇ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 1971
ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.
ದಕ್ಷಿಣ ಭಾರತದ ರಾಜ್ಯಗಳು ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿವೆ. ಜನಸಂಖ್ಯೆ ನಿಯಂತ್ರಣದಲ್ಲೂ ಈ ರಾಜ್ಯಗಳು ಗಮನಾರ್ಹ ಸಾಧನೆ ಮಾಡಿವೆ. ಆದರೆ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳಿಗೆ ಕ್ಷೇತ್ರ ಮರುವಿಂಗಡಣೆ ಮೂಲಕ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುವಂತಾಗಬಾರದು ಎಂದು ಶಿವಕುಮಾರ್ ಪ್ರತಿಪಾದಿಸಿದರು.
ದಕ್ಷಿಣ ಭಾರತದ ರಾಜ್ಯಗಳ ಆರ್ಥಿಕ ಕೊಡುಗೆಗೆ ಅನುಗುಣವಾಗಿ ಅವುಗಳ ರಾಜಕೀಯ ಧ್ವನಿಯೂ ಇರಬೇಕು. ಜನಸಂಖ್ಯೆ ನಿಯಂತ್ರಿಸಿದ ಕಾರಣಕ್ಕೆ ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ : ಎಸ್‌ಐಆರ್ ಹೆಸರಲ್ಲಿ ಮತಹರಣ: ‘ಸಹಜ ಪ್ರಕ್ರಿಯೆ ಹಗರಣದಂತೆ ಕಾಣುತ್ತಿದೆ – ನಟ ಕಿಶೋರ್
543 ಕ್ಷೇತ್ರಗಳ ಸಂಖ್ಯೆಯನ್ನು ಮುಂದುವರಿಸಲು ಆಗ್ರಹ
ಪ್ರಸ್ತುತ ಇರುವ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳವರೆಗೆ ಮುಂದುವರಿಸಬೇಕು ಎಂದು ಶಿವಕುಮಾರ್ ಸಲಹೆ ನೀಡಿದರು. ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಮೇಲೆ ಪರಿಣಾಮ ಬೀರದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
1971ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆಸುವಂತೆ ದಕ್ಷಿಣ ವಲಯ ಮಂಡಳಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.1971
ಮಹಿಳಾ ಮೀಸಲಾತಿ ವಿಳಂಬವಾಗಬಾರದು
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾದ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯ ನೆಪದಲ್ಲಿ ಮತ್ತಷ್ಟು ವಿಳಂಬ ಮಾಡಬಾರದು ಎಂದು ಶಿವಕುಮಾರ್ ಹೇಳಿದರು.
ಮಹಿಳೆಯರು ರಾಜಕೀಯದಲ್ಲಿ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಹೊಸ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಳ್ಳುವವರೆಗೆ ಮಹಿಳಾ ಮೀಸಲಾತಿ ಜಾರಿಯನ್ನು ಮುಂದೂಡುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ದಕ್ಷಿಣ ಭಾರತದ ಆರ್ಥಿಕ ಕೊಡುಗೆ ಉಲ್ಲೇಖ
ದಕ್ಷಿಣ ಭಾರತದ ಐದು ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯ ಸುಮಾರು 20 ಪ್ರತಿಶತವನ್ನು ಹೊಂದಿದ್ದರೂ, ದೇಶದ ಒಟ್ಟು ಜಿಡಿಪಿಗೆ ಸುಮಾರು 33 ಪ್ರತಿಶತದಷ್ಟು ಕೊಡುಗೆ ನೀಡುತ್ತಿವೆ ಎಂದು ಶಿವಕುಮಾರ್ ಸಭೆಯಲ್ಲಿ ಗಮನ ಸೆಳೆದರು.
ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ರಕ್ಷಿಸುವುದು ಅಗತ್ಯ. ಜನಸಂಖ್ಯೆ ನಿಯಂತ್ರಣ ಮತ್ತು ಉತ್ತಮ ಆಡಳಿತಕ್ಕೆ ಉತ್ತೇಜನ ನೀಡಬೇಕೇ ಹೊರತು ಅದಕ್ಕೆ ವಿರುದ್ಧ ಪರಿಣಾಮ ಬೀರುವ ನೀತಿಗಳನ್ನು ರೂಪಿಸಬಾರದು ಎಂದು ಅವರು ಹೇಳಿದರು.
ಕರ್ನಾಟಕಕ್ಕೆ ಹಣಕಾಸು ನಷ್ಟದ ಆರೋಪ
ಹಣಕಾಸು ಹಂಚಿಕೆಯಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಶಿವಕುಮಾರ್ ಆರೋಪಿಸಿದರು. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಮೊತ್ತದಲ್ಲಿ ಕರ್ನಾಟಕದ ಪಾಲು 4.7 ಪ್ರತಿಶತದಿಂದ 3.6 ಪ್ರತಿಶತಕ್ಕೆ ಇಳಿದಿದೆ. ಇದರಿಂದ ಆರು ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಸುಮಾರು ₹65,000 ಕೋಟಿ ನಷ್ಟವಾಗಿದೆ ಎಂದು ಅವರು ಹೇಳಿದರು.
ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹5,495 ಕೋಟಿ ವಿಶೇಷ ಅನುದಾನ ಹಾಗೂ ₹6,000 ಕೋಟಿ ರಾಜ್ಯ-ನಿರ್ದಿಷ್ಟ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದರು.
ಇದನ್ನೂ ನೋಡಿ : ಬೆಳಕು ನೀಡುವ ಕೈಗಳಿಗೆ ಕತ್ತಲೆಯ ಬದುಕು: ವಿದ್ಯುತ್ ಕಾರ್ಮಿಕರ ಆಕ್ರೋಶದ ಹೋರಾಟ Janashakthi Media
