ಉದ್ಯೋಗಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಬಾಡಿಗೆ ಮನೆ ಬದಲಿಸುವುದು, ಮಕ್ಕಳ ಶಿಕ್ಷಣಕ್ಕಾಗಿ ನಗರ ಬದಲಿಸುವುದು, ಮದುವೆಯಾದ ಬಳಿಕ ಮಹಿಳೆ ಗಂಡನ ಮನೆಗೆ ಹೋಗುವುದು ಇವೆಲ್ಲವೂ ಭಾರತದ ಸಾಮಾಜಿಕ ಬದುಕಿನ ಸಹಜ ಭಾಗಗಳು. ಆದರೆ ಈ ಸಹಜ ಕ್ರಿಯೆ ಈಗ ಕರ್ನಾಟಕದಲ್ಲಿ 1 ಕೋಟಿ ಮತದಾರರನ್ನು ಡಿಲೀಟ್ ಮಾಡುವಂತೆ ಮಾಡುತ್ತಿದೆ. SIR
ಗುರುರಾಜ ದೇಸಾಯಿ
SIRನ ಮನೆ-ಮನೆ ಭೇಟಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಜೂನ್ 30ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ 5,54,32,314 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ 4,46,00,369 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಪರಿಶೀಲನೆಯ ವೇಳೆ ಒಟ್ಟು 1,08,31,945 ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ.
ASDDO ಎಂದರೆ ಗೈರುಹಾಜರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಡುಪ್ಲಿಕೇಟ್ ಹೆಸರುಗಳು ಮತ್ತು ಇತರೆ ಕಾರಣಗಳಿಂದ ಪರಿಶೀಲನೆ ಅಗತ್ಯವಿರುವ ಮತದಾರರು ಎಂದು ವಿಭಾಗಿಸಲಾಗಿದೆ.
ಈ 1.08 ಕೋಟಿ ಸಂಖ್ಯೆಯೊಳಗೆ ಅತ್ಯಂತ ಗಮನ ಸೆಳೆಯುವ ಅಂಶ ಒಂದಿದೆ. 65,45,721 ಮತದಾರರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ಗುರುತಿಸಲಾಗಿದೆ. ಅಂದರೆ ಒಟ್ಟು ಮತದಾರರ ಶೇ.11.81ರಷ್ಟು ಮಂದಿ ಈ ವರ್ಗಕ್ಕೆ ಸೇರಿದ್ದಾರೆ. ASDDO ಪಟ್ಟಿಯಲ್ಲಿರುವವರ ಪೈಕಿ ಸುಮಾರು ಶೇ.60ರಷ್ಟು ಮಂದಿ ‘ಶಾಶ್ವತ ಸ್ಥಳಾಂತರ’ ವರ್ಗದಲ್ಲಿದ್ದಾರೆ.
ಮೃತರು 16,39,871, ಗೈರು ಅಥವಾ ಪತ್ತೆಯಾಗದವರು 15,17,056, ನಕಲಿ ಅಥವಾ ಡುಪ್ಲಿಕೇಟ್ ಮತದಾರರು 7,09,875 ಮತ್ತು ಇತರೆ ಕಾರಣಗಳಿಂದ ಗುರುತಿಸಲ್ಪಟ್ಟವರು 3,83,892.
ಹೀಗಾಗಿ SIRನ ಚರ್ಚೆಯನ್ನು ಕೇವಲ ‘ಮೃತ ಮತದಾರರ ಹೆಸರು ತೆಗೆದುಹಾಕುವುದು’ ಅಥವಾ ‘ಡುಪ್ಲಿಕೇಟ್ ಮತದಾರರನ್ನು ಪತ್ತೆಹಚ್ಚುವುದು’ ಎಂಬ ಮಟ್ಟಕ್ಕೆ ಸೀಮಿತಗೊಳಿಸಲಾಗುವುದಿಲ್ಲ. SIRನ ದೊಡ್ಡ ಪ್ರಶ್ನೆ ಜೀವಂತ ಮತದಾರರು. ಅದರಲ್ಲೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ಗುರುತಿಸಲ್ಪಟ್ಟ 65.45 ಲಕ್ಷ ಮತದಾರರು. SIR
ಸ್ಥಳ ಬದಲಾವಣೆಗೆ Form-8 ನಿಯಮವೇನು?
ಇಲ್ಲಿಯೇ ಮತ್ತೊಂದು ಪ್ರಶ್ನೆ ಹುಟ್ಟುತ್ತದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ವ್ಯಕ್ತಿ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, ಅವರ ಮತದಾರರ ದಾಖಲೆಯನ್ನು ಹೊಸ ವಿಳಾಸಕ್ಕೆ ವರ್ಗಾಯಿಸುವುದೇ ಸಹಜ ಪ್ರಕ್ರಿಯೆ. ಹಾಗಿದ್ದರೆ ಅಂತಹ ವ್ಯಕ್ತಿಗಳಿಗೆ Form-8 ಬದಲಿಗೆ Form-6 ಸಲ್ಲಿಸಿ ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಕೊಳ್ಳುವಂತೆ ಏಕೆ ಹೇಳಲಾಗುತ್ತಿದೆ?
ಚುನಾವಣಾ ಆಯೋಗ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲಂಘಿಸುತ್ತಿದೆಯೇ? Form-6 ಮತ್ತು Form-8ರ ಕುರಿತು ಚುನಾವಣಾ ಆಯೋಗ ಏನು ಹೇಳುತ್ತದೆ ಎಂಬುದರ ಸುತ್ತ ಅನುಮಾನದ ಹುತ್ತ ಬೆಳೆಯುತ್ತದೆ.
ಫಾರ್ಮ್ 6 ಮತ್ತು 8ರ ಕುರಿತು ಚುನಾವಣಾ ಆಯೋಗ ಏನು ಹೇಳುತ್ತದೆ ಎಂಬುದನ್ನು ನಾವೀಗ ನೋಡೋಣ. “ನಿಮ್ಮ ಹಳೆಯ ಮನೆ ಮತ್ತು ಹೊಸ ಮನೆ ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ, Form-8ರಲ್ಲಿ ‘Shifting of Residence’ ಆಯ್ಕೆ ಮಾಡಿ ‘Within Assembly Constituency’ ಎಂಬುದನ್ನು ಗುರುತಿಸಬೇಕು.”
“ನೀವು ಒಂದು ಕ್ಷೇತ್ರದಿಂದ ಮತ್ತೊಂದು ಹೊಸ ಕ್ಷೇತ್ರಕ್ಕೆ, ಉದಾಹರಣೆಗೆ ಮೈಸೂರಿನಿಂದ ಬೆಂಗಳೂರಿಗೆ, ಸ್ಥಳಾಂತರಗೊಂಡಿದ್ದರೆ ಆಗಲೂ Form-8 ಅನ್ನೇ ಸಲ್ಲಿಸಬೇಕು. ಅಲ್ಲಿ ‘Outside Assembly Constituency’ ಆಯ್ಕೆಯನ್ನು ಆರಿಸಿಕೊಳ್ಳಬೇಕು.”
Form-8 ಸಲ್ಲಿಸಿದಾಗ ಏನಾಗುತ್ತದೆ?
ನೀವು ಹೊಸ ವಿಳಾಸದ ಪುರಾವೆಯೊಂದಿಗೆ Form-8 ಸಲ್ಲಿಸಿದಾಗ, ನಿಮ್ಮ ಹಳೆಯ ಮತದಾರರ ಚೀಟಿ ಸಂಖ್ಯೆ (EPIC No.) ಹಾಗೆಯೇ ಉಳಿಯುತ್ತದೆ. ಆದರೆ ನಿಮ್ಮ ಹೆಸರು ಹಳೆಯ ಮತದಾರರ ಪಟ್ಟಿಯಿಂದ ಕಡಿತಗೊಂಡು, ಹೊಸ ಕ್ಷೇತ್ರದ ಪಟ್ಟಿಗೆ ಸೇರ್ಪಡೆಯಾಗುತ್ತದೆ.
Form-6 ಯಾವಾಗ ಬಳಸಬೇಕು?
Form-6 ಕೇವಲ ಹೊಸ ಮತದಾರರ ನೋಂದಣಿಗೆ, ಅಂದರೆ ಮೊದಲ ಬಾರಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳುವವರಿಗೆ, ಬಳಸುವ ನಮೂನೆಯಾಗಿದೆ.
ಈಗಾಗಲೇ ಮತದಾರರಾಗಿರುವ ವ್ಯಕ್ತಿ ವಾಸಸ್ಥಳ ಬದಲಿಸಿದರೆ, ಮತದಾರರ ದಾಖಲೆಯಲ್ಲಿನ ವಿಳಾಸ ಅಥವಾ ಕ್ಷೇತ್ರ ಬದಲಾವಣೆಗೆ Form-8 ಬಳಸುವ ವ್ಯವಸ್ಥೆ ಇದೆ. ಹೀಗಿರುವಾಗ ಒಬ್ಬ ವ್ಯಕ್ತಿ ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲ್ಪಟ್ಟ ನಂತರ, ಅವರ ಹಳೆಯ ಹೆಸರು ಅಳಿಸಿ ಹೊಸದಾಗಿ Form-6 ಸಲ್ಲಿಸುವಂತೆ ಮಾಡುವುದು ಏಕೆ? ಇದು SIRನ ಅತ್ಯಂತ ಸೂಕ್ಷ್ಮವಾದ ಪ್ರಶ್ನೆಯಾಗಿದೆ.
ಇದನ್ನೂ ಓದಿ :

ವಿಳಾಸ ಬದಲಾಗಬಹುದು, ಮತದಾನದ ಹಕ್ಕು ಬದಲಾಗುವುದಿಲ್ಲ
ಒಬ್ಬ ವ್ಯಕ್ತಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಬಹುದು, ಮೈಸೂರಿನಿಂದ ಬೆಂಗಳೂರಿಗೆ ಬರಬಹುದು, ಕಲಬುರಗಿಯಿಂದ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಬಹುದು. ಅವರ ವಿಳಾಸ ಬದಲಾಗಿದೆ. ಆದರೆ ಅವರು ಭಾರತೀಯ ನಾಗರಿಕರಾಗಿದ್ದರೆ ಮತ್ತು ಮತದಾರರಾಗಿ ಅರ್ಹರಾಗಿದ್ದರೆ, ಅವರ ಮತದಾನದ ಹಕ್ಕು ಬದಲಾಗುವುದಿಲ್ಲ. ಬದಲಾಗುವುದು ಮತದಾರರ ಪಟ್ಟಿಯಲ್ಲಿನ ಅವರ ವಿಳಾಸ ಮತ್ತು ಕ್ಷೇತ್ರ.
ಇದನ್ನು ಇನ್ನಷ್ಟು ಸೂಕ್ಷ್ಮವಾಗಿಸುವುದು ಕರ್ನಾಟಕದ ಸಾಮಾಜಿಕ ವಾಸ್ತವ್ಯ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ನಿರಂತರವಾಗಿ ವಲಸೆ ನಡೆಯುತ್ತದೆ. ಸಾವಿರಾರು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತವೆ. ಉದ್ಯೋಗ ಬದಲಾದಾಗ ಮನೆ ಬದಲಾಗುತ್ತದೆ. ವಿದ್ಯಾರ್ಥಿಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳುತ್ತಾರೆ. ಮದುವೆಯಾದ ಮಹಿಳೆಯರು ತಂದೆ-ತಾಯಿಯ ಮನೆಯಿಂದ ಗಂಡನ ಮನೆಗೆ ಹೋಗುತ್ತಾರೆ. ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಕುಟುಂಬಗಳ ಮತದಾರರ ಪಟ್ಟಿಯಲ್ಲಿ ಮಾತ್ರ ಇನ್ನೂ ಹಳೆಯ ಊರಿನ ವಿಳಾಸ ಉಳಿದಿರಬಹುದು.
ಇಂತಹ ಸಂದರ್ಭದಲ್ಲಿ BLO ಮನೆಗೆ ಹೋದಾಗ ವ್ಯಕ್ತಿ ಅಲ್ಲಿಲ್ಲ ಎಂಬ ಕಾರಣಕ್ಕೆ ಅವರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ಗುರುತಿಸುವುದು ಎಷ್ಟು ಸಮರ್ಪಕ? ಅವರು ನಿಜವಾಗಿಯೂ ಶಾಶ್ವತವಾಗಿ ಬೇರೆಡೆಗೆ ಹೋಗಿದ್ದಾರೆಯೇ? ಹೊಸ ವಿಳಾಸ ಯಾವುದು? ಅವರು ಈಗಾಗಲೇ ಹೊಸ ಕ್ಷೇತ್ರದಲ್ಲಿ ಮತದಾರರಾಗಿ ನೋಂದಣಿಯಾಗಿದ್ದಾರೆಯೇ? ಅಥವಾ ಇನ್ನೂ ಯಾವುದೇ ಮತದಾರರ ಪಟ್ಟಿಯಲ್ಲಿಲ್ಲವೇ? ಇವುಗಳನ್ನು ಪರಿಶೀಲಿಸದೆ ‘ಶಾಶ್ವತ ಸ್ಥಳಾಂತರ’ ಎಂಬ ಗುರುತು ಹಾಕಿದರೆ, ಒಂದು ಆಡಳಿತಾತ್ಮಕ ವರ್ಗೀಕರಣವೇ ಮತದಾರರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೆಸರು ಅಳಿಸುವ ಮೊದಲು ನೋಟಿಸ್ ನೀಡಲಾಗುತ್ತಿದೆಯೇ?
ಇಲ್ಲಿಯೇ ನೋಟಿಸ್ ನೀಡುವ ಪ್ರಕ್ರಿಯೆ ಅತ್ಯಂತ ಮುಖ್ಯವಾಗುತ್ತದೆ. ಮತದಾರರ ಪಟ್ಟಿಯಿಂದ ವ್ಯಕ್ತಿಯ ಹೆಸರನ್ನು ತೆಗೆದುಹಾಕುವ ಸಂದರ್ಭದಲ್ಲಿ, ಅವರಿಗೆ ಮಾಹಿತಿ ನೀಡಿ, ತಮ್ಮ ಬಗ್ಗೆ ಇರುವ ದಾಖಲೆಯನ್ನು ಪ್ರಶ್ನಿಸಲು ಮತ್ತು ಸ್ಪಷ್ಟೀಕರಣ ನೀಡಲು ಅವಕಾಶ ಕಲ್ಪಿಸುವುದು ಪ್ರಕ್ರಿಯೆಯ ಮೂಲ ಉದ್ದೇಶ. ವ್ಯಕ್ತಿ ಎಲ್ಲಿಗೆ ಸ್ಥಳಾಂತರಗೊಂಡಿದ್ದಾರೆ ಎಂಬುದು ತಿಳಿದಿಲ್ಲದಿದ್ದರೂ, ಹಿಂದಿನ ವಿಳಾಸದಲ್ಲಿ ನೋಟಿಸ್ ನೀಡುವ ಅಥವಾ ಪ್ರಕಟಿಸುವ ವಿಧಾನಗಳಿವೆ. ನಿಗದಿತ ಅವಧಿ ಮುಗಿದ ಬಳಿಕವೇ ಅಂತಿಮವಾಗಿ ಹೆಸರು ತೆಗೆದುಹಾಕುವ ಕ್ರಮ ನಡೆಯಬೇಕೆಂಬುದು ಈ ಪ್ರಕ್ರಿಯೆಯ ಹಿಂದಿನ ತತ್ವ.
ಆದರೆ SIR ಕುರಿತು ಕೇಳಿಬರುತ್ತಿರುವ ಆರೋಪವೇನೆಂದರೆ, ಕೆಲವು ಕಡೆ ವ್ಯಕ್ತಿ ಮನೆಯಲ್ಲಿ ಸಿಗದಿದ್ದರೆ ಅಥವಾ ಮದುವೆಯಾಗಿ ಬೇರೆ ಮನೆಗೆ ಹೋಗಿದ್ದರೆ, ಅವರಿಗೆ ನೋಟಿಸ್ ನೀಡದೆ ನೇರವಾಗಿ ‘Permanent Shift’ ಎಂದು ಗುರುತಿಸಲಾಗುತ್ತಿದೆ. ಈ ಆರೋಪಗಳು ನಿಜವಾಗಿದ್ದರೆ, ಪ್ರಶ್ನೆ ಕೇವಲ ಒಬ್ಬ ಮತದಾರರ ಹೆಸರಿನದ್ದಲ್ಲ; ಮತದಾರರನ್ನು ಹೊರಗಿಡುವ ಮೊದಲು ಅನುಸರಿಸಬೇಕಾದ ಪ್ರಕ್ರಿಯೆಯದ್ದಾಗಿದೆ.
ಬೆಂಗಳೂರಿನಲ್ಲಿ 43.42% ಮತದಾರರು ASDDO ವರ್ಗದಲ್ಲಿ
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಂಕಿ-ಅಂಶಗಳು ಇನ್ನಷ್ಟು ಕುತೂಹಲ ಮೂಡಿಸುತ್ತವೆ. ನಾಲ್ಕು ಬೆಂಗಳೂರು ಜಿಲ್ಲೆಗಳಲ್ಲಿ ಒಟ್ಟು 1,03,88,363 ಮತದಾರರಿದ್ದು, ಅವರ ಪೈಕಿ 46,88,744 ಮಂದಿ ASDDO ವರ್ಗದಲ್ಲಿದ್ದಾರೆ. ಅಂದರೆ ಶೇ.43.42ರಷ್ಟು ಮತದಾರರು ಈ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಉದ್ಯೋಗ, ವಲಸೆ, ಬಾಡಿಗೆ ವಸತಿ ಮತ್ತು ನಿರಂತರ ಜನಸಂಚಾರವಿರುವ ಬೆಂಗಳೂರಿನಲ್ಲಿ ಈ ಪ್ರಮಾಣದ ASDDO ಮತದಾರರು ಪತ್ತೆಯಾಗಿರುವುದು ಸ್ವತಃ ಒಂದು ಅಧ್ಯಯನದ ವಿಷಯ. ಇವರಲ್ಲಿ ಎಷ್ಟು ಮಂದಿ ‘ಶಾಶ್ವತ ಸ್ಥಳಾಂತರ’ ವರ್ಗದಲ್ಲಿದ್ದಾರೆ ಎಂಬ ವಿವರವನ್ನು ಪ್ರತ್ಯೇಕವಾಗಿ ಸಾರ್ವಜನಿಕಗೊಳಿಸಿದರೆ, ಸಮಸ್ಯೆಯ ಸ್ವರೂಪ ಇನ್ನಷ್ಟು ಸ್ಪಷ್ಟವಾಗಬಹುದು.
Form-6ಗೆ ಮತ್ತೆ ಅರ್ಜಿ ಸಲ್ಲಿಸುವುದು ಏಕೆ ಅಪಾಯಕಾರಿಯಾಗಬಹುದು?
ಇಲ್ಲಿ ಮತ್ತೊಂದು ಅಪಾಯವೂ ಇದೆ. ಈಗಾಗಲೇ ಮತದಾರರಾಗಿರುವ ವ್ಯಕ್ತಿಗಳನ್ನು ಹಳೆಯ ಪಟ್ಟಿಯಿಂದ ಹೊರಗಿಟ್ಟು, ಹೊಸದಾಗಿ Form-6 ಸಲ್ಲಿಸುವಂತೆ ಮಾಡಿದರೆ, ಅವರು ಮಧ್ಯಂತರ ಅವಧಿಯಲ್ಲಿ ಮತದಾರರ ಪಟ್ಟಿಯ ಹೊರಗೆ ಹೋಗಬಹುದು.
Form ಸಲ್ಲಿಸುವುದು, ದಾಖಲೆಗಳನ್ನು ಒದಗಿಸುವುದು, ಪರಿಶೀಲನೆ ಮುಗಿಯುವುದು ಮತ್ತು ಅಂತಿಮ ಪಟ್ಟಿಯಲ್ಲಿ ಹೆಸರು ಸೇರುವುದು—ಇವೆಲ್ಲವೂ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಗಳು. ಈ ಹಂತಗಳಲ್ಲಿ ಯಾವುದಾದರೂ ಕಾರಣಕ್ಕೆ ಹೆಸರು ಸೇರದಿದ್ದರೆ, ಅರ್ಹ ಮತದಾರರು ಚುನಾವಣೆಯ ವೇಳೆಗೆ ಮತದಾನದ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.
ಇದರ ಪರಿಣಾಮ ಬಡವರು, ವಲಸೆ ಕಾರ್ಮಿಕರು, ಬಾಡಿಗೆದಾರರು, ವಿದ್ಯಾರ್ಥಿಗಳು ಮತ್ತು ಮದುವೆಯ ನಂತರ ವಾಸಸ್ಥಳ ಬದಲಿಸಿದ ಮಹಿಳೆಯರ ಮೇಲೆ ಹೆಚ್ಚು ಬೀಳುವ ಸಾಧ್ಯತೆಯಿದೆ. ಏಕೆಂದರೆ ಇವರು ಒಂದೇ ವಿಳಾಸದಲ್ಲಿ ದೀರ್ಘಕಾಲ ವಾಸಿಸುವವರಿಗಿಂತ ಹೆಚ್ಚು ಸ್ಥಳಾಂತರಗೊಳ್ಳುವ ವರ್ಗಕ್ಕೆ ಸೇರಿದವರು.
ಅವರ ಹಳೆಯ ವಿಳಾಸದ ದಾಖಲೆ, ಹೊಸ ವಿಳಾಸದ ದಾಖಲೆ ಮತ್ತು ಮತದಾರರ ಪಟ್ಟಿಯಲ್ಲಿನ ಮಾಹಿತಿ ನಡುವೆ ವ್ಯತ್ಯಾಸ ಸಹಜವಾಗಿರಬಹುದು. ಆ ವ್ಯತ್ಯಾಸವನ್ನು ಸರಿಪಡಿಸುವುದು ಆಡಳಿತದ ಕೆಲಸ; ಅದಕ್ಕಾಗಿ ಮತದಾರರನ್ನು ಮತ್ತೆ ‘ಹೊಸ ಮತದಾರರ’ಂತೆ ಪರೀಕ್ಷೆಗೆ ಒಳಪಡಿಸುವುದು ಎಷ್ಟು ಸಮಂಜಸ ಎಂಬುದೇ ಪ್ರಶ್ನೆ.
ಪ್ರಕಾಶ್ ರಾಜ್ ಪ್ರಕರಣ ಎತ್ತಿದ ಪ್ರಶ್ನೆ ಏನು?
ಇತ್ತೀಚೆಗೆ ನಟ ಪ್ರಕಾಶ್ ರಾಜ್ ಅವರ ಮತದಾರರ ಹೆಸರು SIR ಹಿನ್ನೆಲೆಯಲ್ಲಿ ಬೆಂಗಳೂರು ಮತದಾರರ ಪಟ್ಟಿಯಲ್ಲಿ ಕಾಣಿಸದಿರುವುದು ಇದೇ ಚರ್ಚೆಗೆ ಮತ್ತೊಂದು ಆಯಾಮ ನೀಡಿತು. ಪ್ರಕಾಶ್ ರಾಜ್ ಅವರು ತಮ್ಮ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರಶ್ನಿಸಿದ್ದರು. ನಂತರ ಪಾಲಿಕೆ ನೀಡಿದ ಸ್ಪಷ್ಟನೆಯ ಪ್ರಕಾರ, ಅವರು ಸಂಬಂಧಿಸಿದ ವಿಳಾಸದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರಲಿಲ್ಲ ಮತ್ತು ಅದನ್ನು ಸ್ಥಳಾಂತರದ ಕಾರಣವಾಗಿ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಯಾರು ಸರಿ, ಯಾರು ತಪ್ಪು ಎಂಬುದಕ್ಕಿಂತ ಮುಖ್ಯವಾದ ಪ್ರಶ್ನೆ ಮತ್ತೊಂದಿದೆ. ಒಬ್ಬ ವ್ಯಕ್ತಿ ಆ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದಾದರೆ, ಅವರ ಮತದಾರರ ದಾಖಲೆಯನ್ನು ಹೊಸ ವಿಳಾಸಕ್ಕೆ ವರ್ಗಾಯಿಸುವ ಪ್ರಕ್ರಿಯೆ ಏನು? ಈ ಪ್ರಶ್ನೆ ಪ್ರಕಾಶ್ ರಾಜ್ ಅವರಿಗೆ ಮಾತ್ರವಲ್ಲ; ಇದೇ ಪರಿಸ್ಥಿತಿಯಲ್ಲಿರುವ ಲಕ್ಷಾಂತರ ಸಾಮಾನ್ಯ ಮತದಾರರಿಗೂ ಅನ್ವಯಿಸುತ್ತದೆ.

ASDDO ಪಟ್ಟಿಯ ಮಾಹಿತಿ ಮತದಾರರಿಗೆ ತಲುಪಿದೆಯೇ?
ಚುನಾವಣಾ ಆಯೋಗದ ಪ್ರಕಾರ ಅಂತಿಮ ASDDO ಪಟ್ಟಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್, ಚುನಾವಣಾ ಕಚೇರಿಗಳು ಮತ್ತು ಪಂಚಾಯಿತಿ ಕಚೇರಿಗಳಲ್ಲೂ ಸಾರ್ವಜನಿಕ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ.
ಆದರೆ ನೆಲಮಟ್ಟದಲ್ಲಿ ಪ್ರಶ್ನೆ ಬೇರೆ. ತಮ್ಮ ಹೆಸರು ASDDO ಪಟ್ಟಿಯಲ್ಲಿದೆ ಎಂಬುದೇ ಗೊತ್ತಿಲ್ಲದ ಮತದಾರರು ಆಕ್ಷೇಪಣೆ ಹೇಗೆ ಸಲ್ಲಿಸುತ್ತಾರೆ? ‘Permanent Shift’ ಎಂದು ಯಾವ ಆಧಾರದ ಮೇಲೆ ಗುರುತಿಸಲಾಗಿದೆ ಎಂಬ ಮಾಹಿತಿ ಅವರಿಗೆ ತಲುಪಿದೆಯೇ? ತಮ್ಮ ಹೆಸರು ತೆಗೆದುಹಾಕುವ ಮೊದಲು ತಮ್ಮ ಮಾತು ಹೇಳಲು ಅವಕಾಶ ದೊರೆತಿದೆಯೇ?
ಸಾರ್ವಜನಿಕವಾಗಿ ಮಾಹಿತಿ ಲಭ್ಯವಿದೆ ಎನ್ನುವುದಷ್ಟೇ ಸಾಕಾಗುವುದಿಲ್ಲ; ಆ ಮಾಹಿತಿ ಸಂಬಂಧಪಟ್ಟ ಮತದಾರರಿಗೆ ತಲುಪಬೇಕು.
65.45 ಲಕ್ಷ ‘ಶಾಶ್ವತ ಸ್ಥಳಾಂತರ’—ಅಂಕಿಯ ಹಿಂದಿರುವ ಪ್ರಶ್ನೆಗಳು
ವಿಶೇಷವಾಗಿ 65.45 ಲಕ್ಷ ಶಾಶ್ವತ ಸ್ಥಳಾಂತರಗೊಂಡವರು ಎಂಬ ಅಂಕಿ-ಅಂಶವನ್ನು ಪ್ರತ್ಯೇಕವಾಗಿ ನೋಡಬೇಕು.
ಈ ಸಂಖ್ಯೆಯೊಳಗೆ ನಿಜವಾಗಿಯೂ ಶಾಶ್ವತವಾಗಿ ಬೇರೆಡೆಗೆ ತೆರಳಿದವರು ಎಷ್ಟು? ಈಗಾಗಲೇ ಹೊಸ ವಿಳಾಸದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡವರು ಎಷ್ಟು? ಹಳೆಯ ಪಟ್ಟಿಯಲ್ಲಿಯೂ, ಹೊಸ ಪಟ್ಟಿಯಲ್ಲಿಯೂ ಹೆಸರು ಹೊಂದಿರುವವರು ಎಷ್ಟು? ಇನ್ನೂ ಯಾವುದೇ ಕ್ಷೇತ್ರದಲ್ಲೂ ಹೆಸರು ಇಲ್ಲದವರು ಎಷ್ಟು? ಇವರಿಗೆ ನೋಟಿಸ್ ನೀಡಲಾಗಿದೆಯೇ? Form-8 ಮೂಲಕ ಸ್ಥಳಾಂತರ ಪ್ರಕ್ರಿಯೆ ನಡೆಸಲಾಗಿದೆಯೇ? ಅಥವಾ Form-6 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮಾಡಲಾಗಿದೆಯೇ?
ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಹೋದರೆ ‘65.45 ಲಕ್ಷ Shifted’ ಎಂಬ ಅಂಕಿ ಕೇವಲ ಒಂದು ಸಂಖ್ಯೆಯಾಗಿಯೇ ಉಳಿಯುತ್ತದೆ; ಅದರ ಹಿಂದಿರುವ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಪರಿಣಾಮ ಅರ್ಥವಾಗುವುದಿಲ್ಲ.
ಚುನಾವಣಾ ಆಯೋಗ ಸ್ಪಷ್ಟ ಮಾನದಂಡ ಪ್ರಕಟಿಸಬೇಕು
ಚುನಾವಣಾ ಆಯೋಗವು ಈ ಹಿನ್ನೆಲೆಯಲ್ಲಿ ‘ಸ್ಥಳಾಂತರ’, ‘ಶಾಶ್ವತ ಸ್ಥಳಾಂತರ’, ‘ಗೈರು’, ‘ಮೃತ’, ‘ಡುಪ್ಲಿಕೇಟ್’ ಮತ್ತು ‘ಇತರೆ’ ಎಂಬ ವರ್ಗಗಳ ನಡುವೆ ಇರುವ ಸ್ಪಷ್ಟ ಮಾನದಂಡಗಳನ್ನು ಸಾರ್ವಜನಿಕಗೊಳಿಸುವ ಅಗತ್ಯವಿದೆ.
ಅದರಲ್ಲೂ ‘ಶಾಶ್ವತ ಸ್ಥಳಾಂತರ’ ಎಂದು ಗುರುತಿಸಲು ಯಾವ ಸಾಕ್ಷ್ಯ ಬೇಕು, ನೋಟಿಸ್ ನೀಡುವ ವಿಧಾನವೇನು, ಮತದಾರರ ಸ್ಪಷ್ಟೀಕರಣ ಪಡೆಯಲಾಗುತ್ತಿದೆಯೇ, ಹೊಸ ವಿಳಾಸ ಪತ್ತೆಯಾದರೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆಯೇ ಅಥವಾ ಹೊಸದಾಗಿ ನೋಂದಣಿ ಮಾಡಬೇಕಾಗುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಇದು ಕೇವಲ ಚುನಾವಣಾ ಆಯೋಗದ ಮೇಲಿನ ಆರೋಪದ ಪ್ರಶ್ನೆಯಲ್ಲ
ಇದು ಚುನಾವಣಾ ಆಯೋಗದ ವಿರುದ್ಧದ ಆರೋಪ-ಪ್ರತ್ಯಾರೋಪಗಳಿಗಿಂತ ದೊಡ್ಡ ವಿಷಯ. ಚುನಾವಣಾ ಆಯೋಗದ ಮೇಲಿನ ಜನರ ವಿಶ್ವಾಸದ ಪ್ರಶ್ನೆ. ಮತದಾರರ ಪಟ್ಟಿ ಚುನಾವಣೆಯ ಮೂಲ ದಾಖಲೆ. ಅದರಲ್ಲಿರುವ ಒಂದು ಹೆಸರು ಕೇವಲ ಒಂದು ಹೆಸರು ಅಲ್ಲ; ಅದು ಒಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯ ದಾಖಲೆ.
ಆದ್ದರಿಂದ ಒಂದು ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆ ಎಷ್ಟು ಕಟ್ಟುನಿಟ್ಟಾಗಿರಬೇಕೋ, ಅರ್ಹ ವ್ಯಕ್ತಿಯ ಹೆಸರನ್ನು ಮತ್ತೆ ಸೇರಿಸುವ ಪ್ರಕ್ರಿಯೆಯೂ ಅಷ್ಟೇ ಸುಲಭ, ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿರಬೇಕು.
ಮತದಾರರ ಪಟ್ಟಿ ಕೇವಲ ಹೆಸರುಗಳ ಪಟ್ಟಿ ಅಲ್ಲ; ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಸಿಕ್ಕ ಹಕ್ಕಾಗಿದೆ. ಅದನ್ನು ಶುದ್ಧೀಕರಿಸುವ ನೆಪದಲ್ಲಿ ಅರ್ಹ ಮತದಾರರನ್ನು ಹೊರಗಿಡುವುದು ಎಷ್ಟು ಸರಿ? ಮತದಾರರ ವಿಳಾಸ ಬದಲಾಗುವುದು ಸಹಜ, ಆದರೆ ಮತದಾನದ ಹಕ್ಕು ಯಾವುದೇ ಕಾರಣಕ್ಕೂ ಕಳೆದುಹೋಗಬಾರದು.
65.45 ಲಕ್ಷ ‘ಶಾಶ್ವತ ಸ್ಥಳಾಂತರ’ ಎಂದು ವಿಭಾಗಿಸಿರುವುದರ ಹಿಂದೆ ನಿಖರವಾಗಿ ಏನಿದೆ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕಿದೆ. ಏಕೆಂದರೆ ಮತದಾರರ ವಿಳಾಸ ಬದಲಾಗಬಹುದು, ಆದರೆ ಅವರ ಮತದಾನದ ಹಕ್ಕು ಯಾವುದೇ ಕಾರಣಕ್ಕೂ ಕಳೆದುಹೋಗಬಾರದು.
ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ
