ಎಸ್‌ಐಆರ್‌ ಅವಧಿ ಆಗಸ್ಟ್‌ 17ರವರೆಗೆ ವಿಸ್ತರಣೆ; ಮತದಾರರಿಗೆ ಇನ್ನಷ್ಟು ಸಮಯ, ಕರಡು ಪಟ್ಟಿ ಆಗಸ್ಟ್‌ 27ಕ್ಕೆ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗ ಆಗಸ್ಟ್‌ 17ರವರೆಗೆ ವಿಸ್ತರಿಸಿದೆ. ಈ ಹಿಂದೆ ಆಗಸ್ಟ್‌ 8ರಂದು ಮನೆ-ಮನೆ ಸಮೀಕ್ಷೆ ಹಾಗೂ ಎಣಿಕೆ ನಮೂನೆಗಳ (Enumeration Forms) ಸಂಗ್ರಹ ಪೂರ್ಣಗೊಳಿಸಲು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಮತದಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಕ್ರಿಯೆಗೆ ಹೆಚ್ಚುವರಿ ದಿನಗಳನ್ನು ನೀಡಲಾಗಿದೆ. ಎಸ್‌ಐಆರ್‌

ಚುನಾವಣಾ ಆಯೋಗದ ಪರಿಷ್ಕೃತ ವೇಳಾಪಟ್ಟಿಯಂತೆ, ಬಿಎಲ್‌ಒಗಳು (Booth Level Officers) ಆಗಸ್ಟ್‌ 17ರವರೆಗೆ ಮನೆ-ಮನೆಗೆ ತೆರಳಿ ಮತದಾರರ ವಿವರಗಳ ಪರಿಶೀಲನೆ ನಡೆಸಲಿದ್ದಾರೆ. ಈ ಅವಧಿಯಲ್ಲಿ ಇನ್ನೂ ನಮೂನೆ ಸಲ್ಲಿಸದವರು, ತಮ್ಮ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿರುವವರು ಅಥವಾ ತಪ್ಪಾಗಿ ಗೈರು, ಸ್ಥಳಾಂತರ, ಮೃತ ಅಥವಾ ಇತರ ವರ್ಗಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದು ಭಾವಿಸುವವರು ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಮೂಲಕ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಲು ಆಯೋಗ ಕ್ರಮ ಕೈಗೊಂಡಿದೆ.

ಆಗಸ್ಟ್‌ 17ರಂದು ಕ್ಷೇತ್ರವಾರು ಎಣಿಕೆ ನಮೂನೆಗಳ ಸಂಗ್ರಹ ಮತ್ತು ಪರಿಶೀಲನೆ ಮುಕ್ತಾಯಗೊಂಡ ಬಳಿಕ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್‌ 27ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿ ಪ್ರಕಟವಾದ ನಂತರ ಮತದಾರರು ತಮ್ಮ ಹೆಸರು, ವಿಳಾಸ, ವಯಸ್ಸು ಸೇರಿದಂತೆ ಇತರ ವಿವರಗಳಲ್ಲಿ ದೋಷಗಳಿದ್ದರೆ ಆಕ್ಷೇಪಣೆ ಅಥವಾ ತಿದ್ದುಪಡಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಎಸ್‌ಐಆರ್‌

ಇದನ್ನೂ ನೋಡಿ : ಕರ್ನಾಟಕದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಅಂತಿಮ ಹಂತಕ್ಕೆ; 1.09 ಕೋಟಿ ಮತದಾರರು ASDDO ಪಟ್ಟಿಯಲ್ಲಿ

ಈ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿಗೂ ಆದ್ಯತೆ ನೀಡಲಾಗಿದೆ. 2026ರ ಅಕ್ಟೋಬರ್‌ 1ರೊಳಗೆ 18 ವರ್ಷ ಪೂರ್ಣಗೊಳ್ಳುವ ಅರ್ಹ ಯುವಕರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದಾಗಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ವಿಳಾಸ ಬದಲಾಗಿರುವವರು, ವಿವರಗಳಲ್ಲಿ ತಿದ್ದುಪಡಿ ಅಗತ್ಯವಿರುವವರು ಅಥವಾ ಹೆಸರು ತೆಗೆದುಹಾಕುವ ಅಗತ್ಯವಿರುವವರು ಸಂಬಂಧಿತ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಎಸ್‌ಐಆರ್‌ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ಹೆಸರು ಕೈಬಿಡುವ ಆತಂಕ, ASDDO ವರ್ಗೀಕರಣ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಮತ್ತು ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಮತದಾರರಿಗೆ ಸಮರ್ಪಕ ಸಮಯ ನೀಡಬೇಕು ಎಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪರಿಷ್ಕರಿಸಿರುವುದು ಗಮನಾರ್ಹವಾಗಿದೆ.

ಆಯೋಗದ ಪ್ರಕಾರ, ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಬಿಎಲ್‌ಒಗಳ ಮೂಲಕ ಪರಿಶೀಲನೆ ಮುಂದುವರಿಯಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಎಸ್‌ಐಆರ್‌

ಇದನ್ನೂ ನೋಡಿ : ‘ಪ್ರತಿ ಐವರಲ್ಲಿ ಒಬ್ಬ ಮತದಾರ ಪಟ್ಟಿಯಿಂದ ಹೊರಗೆ’ : SIR ವಿರುದ್ಧ ಗಂಭೀರ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *