ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಆಗಸ್ಟ್ 7ರ ಸಂಜೆ 4 ಗಂಟೆಯ ವೇಳೆಗೆ ಮುದ್ರಿಸಿ ವಿತರಿಸಲಾದ 5.54 ಕೋಟಿ ಎಣಿಕೆ ನಮೂನೆಗಳ (Enumeration Forms) ಪೈಕಿ 5,54,32,132 ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದೆ. ಕೇವಲ 182 ನಮೂನೆಗಳಷ್ಟೇ ಬಾಕಿ ಉಳಿದಿದ್ದು, ಡಿಜಿಟೈಸೇಶನ್ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಕರ್ನಾಟಕ
ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಇವರಲ್ಲಿ 4,44,48,231 (ಶೇ.80.18) ಮತದಾರರ ಎಣಿಕೆ ನಮೂನೆಗಳು ಡಿಜಿಟೈಸೇಶನ್ ಆಗಿವೆ. 1,09,83,901 (ಶೇ.19.81) ಮತದಾರರನ್ನು ASDDO (Absent, Shifted, Dead, Duplicate or Others) ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಹಾಗೂ ಬಿಎಲ್‌ಒಗಳಿಗೆ ಪರಿಶೀಲನೆಗಾಗಿ ನೀಡಲಾಗಿದೆ. ತಪ್ಪಾಗಿ ASDDO ಎಂದು ಗುರುತಿಸಲ್ಪಟ್ಟಿದ್ದರೆ ಆಗಸ್ಟ್ 8ರವರೆಗೆ ಬಿಎಲ್‌ಒ ಅಥವಾ ಚುನಾವಣಾ ನೋಂದಣಿ ಅಧಿಕಾರಿಗಳ (ERO) ಮೂಲಕ ತಿದ್ದುಪಡಿ ಮಾಡಿಸಿಕೊಳ್ಳುವ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ASDDO ವರ್ಗೀಕರಣದಲ್ಲಿ 15.90 ಲಕ್ಷ ಮತದಾರರು ಪತ್ತೆಯಾಗದವರು (Untraceable), 66.14 ಲಕ್ಷ ಶಾಶ್ವತವಾಗಿ ಸ್ಥಳಾಂತರಗೊಂಡವರು, 16.34 ಲಕ್ಷ ಮೃತಪಟ್ಟವರು, 6.96 ಲಕ್ಷ ಈಗಾಗಲೇ ಬೇರೆಡೆ ನೋಂದಾಯಿತರಾಗಿರುವವರು ಹಾಗೂ 4.47 ಲಕ್ಷ ಇತರ ಕಾರಣಗಳಿಂದ ಗುರುತಿಸಲ್ಪಟ್ಟಿದ್ದಾರೆ. ಇದೇ ವೇಳೆ 6.98 ಲಕ್ಷ ಮತದಾರರು ಆನ್‌ಲೈನ್ ಮೂಲಕ ಎಣಿಕೆ ನಮೂನೆ ಸಲ್ಲಿಸಿದ್ದಾರೆ.
ಇದನ್ನು ಓದಿ : ಅಡ್ಡಾದಿಡ್ಡಿ ಅಯೋಗ್ಯ ಮತ್ತೇ ಬತ್ತಾನೆ ಕಣ್ಲಾ!
ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 12,43,012 ಅರ್ಜಿಗಳು ಬಂದಿವೆ. ಇದರಲ್ಲಿ ಫಾರ್ಮ್-6 ಅಡಿಯಲ್ಲಿ 3,83,345, ಫಾರ್ಮ್-6ಎ ಅಡಿಯಲ್ಲಿ 3,328, ಫಾರ್ಮ್-7 ಅಡಿಯಲ್ಲಿ 31,275 ಹಾಗೂ ಫಾರ್ಮ್-8 ಅಡಿಯಲ್ಲಿ 8,25,064 ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 1, 2026ರ ವೇಳೆಗೆ 18 ವರ್ಷ ತುಂಬುವ ಅರ್ಹ ಯುವಕರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ.
ಜಿಲ್ಲಾವಾರು ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.6.01 ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದ್ದು, ಬಿಬಿಎಂಪಿ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶೇ.50.72 ಮತದಾರರು ASDDO ಪಟ್ಟಿಯಲ್ಲಿದ್ದಾರೆ. ರಾಜ್ಯದ ಸರಾಸರಿ ASDDO ಪ್ರಮಾಣ ಶೇ.19.81 ಆಗಿದೆ.
ಇದನ್ನೂ ನೋಡಿ : ಕುಡತಿನಿ ಭೂ ಹೋರಾಟ | “ಭೂಮಿ ಕಿತ್ತುಕೊಂಡು ಬದುಕು ಕಸಿದವರನ್ನು ಸೋಲಿಸಿ” – ಜಸ್ಟೀಸ್ ವಿ. ಗೋಪಾಲಗೌಡ
