ನವದೆಹಲಿ: ಪರಿಸರ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರನ್ನು ಶನಿವಾರ ಬೆಳಗಿನ ಜಾವ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ನಡುವೆ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡುತ್ತಿದ್ದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಮಹಿಳೆಯೊಬ್ಬರು ಮಸಿ ಎರಚಿದ ಘಟನೆ ನಡೆದಿದೆ.
ಸೋನಂ ವಾಂಗ್‌ಚುಕ್ ಅವರು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಕಳೆದ 21 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಶನಿವಾರ ಬೆಳಗಿನ ಜಾವ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿಸಿದ ಪೊಲೀಸರು, ಅವರನ್ನು ಜಂತರ್ ಮಂತರ್‌ನಿಂದ ಬಲವಂತವಾಗಿ ತೆರವುಗೊಳಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ಕ್ರಮಕ್ಕೆ ದೇಶದಾದ್ಯಂತ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ವಾಂಗ್‌ಚುಕ್ ಅವರನ್ನು ಕರೆದೊಯ್ದ ಬಳಿಕವೂ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಅಭಿಜಿತ್ ದೀಪ್ಕೆ ಮಾತನಾಡುತ್ತಿದ್ದರು. ಆಗ ಮಹಿಳೆಯೊಬ್ಬರು ಅವರತ್ತ ಮಸಿಯಂತಹ ದ್ರವವನ್ನು ಎರಚಿದರು. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದ ಬೆಂಬಲಿಗರು ವೇದಿಕೆಯತ್ತ ಧಾವಿಸಿದರು. ಬಳಿಕ ಆಯೋಜಕರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಕಾರ್ಯಕ್ರಮವನ್ನು ಮುಂದುವರಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅಭಿಜಿತ್ ದೀಪ್ಕೆ, “ನೀಲಿ ನನ್ನ ಬಣ್ಣ… ಜೈ ಭೀಮ್!” ಎಂದು ಬರೆದು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಅವರ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಮಸಿ ಎರಚಿದ ಮಹಿಳೆಯ ಗುರುತು ಹಾಗೂ ಕೃತ್ಯದ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ದೆಹಲಿ ಪೊಲೀಸರು ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಇದನ್ನೂ ಓದಿ : ಸೋನಂ ವಾಂಗ್‌ಚುಕ್ ಉಪವಾಸ : ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ದಿಲ್ಲಿ ಪೊಲಿಸ್- ಕೇಂದ್ರದ ವಿರುದ್ಧ ವಿಪಕ್ಷಗಳ ಆಕ್ರೋಶ
ಜುಲೈ 20ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ
ಇದೇ ವೇಳೆ, ಸೋನಂ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ಕ್ರಮವನ್ನು ಖಂಡಿಸಿ ಜುಲೈ 20ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ವಿದ್ಯಾರ್ಥಿಗಳು, ಯುವಜನರು, ಶಿಕ್ಷಣ ತಜ್ಞರು ಹಾಗೂ ಪ್ರಜಾಪ್ರಭುತ್ವ ಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಹಾಗೂ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.
ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾ ಸಂಘಟಕರು ಸ್ಪಷ್ಟಪಡಿಸಿದ್ದು, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಚಳವಳಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ :ಅಭಿಜಿತ್ ದೀಪ್ಕೆ ಮೇಲೆ ಮಸಿ ಎರಚಾಟ; “ನೀಲಿ ನನ್ನ ಬಣ್ಣ… ಜೈ ಭೀಮ್!” ಎಂದು ಪ್ರತಿಕ್ರಿಯೆ Janashakthi Media
