ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಆಗ್ರಹಿಸಿ ಸಿಪಿಐಎಂ ಮಾನವ ಸರಪಳಿ ಪ್ರತಿಭಟನೆ

ಮಂಗಳೂರು: ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)  ವತಿಯಿಂದ ನಗರದ ಪಡೀಲ್ ಜಂಕ್ಷನ್‌ನ ನಗರ ಆರೋಗ್ಯ ಕೇಂದ್ರದ ಎದುರು ಶನಿವಾರ ಮಾನವ ಸರಪಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೇರಿಸುವ ಬದಲು ಖಾಸಗಿ ಆಸ್ಪತ್ರೆಗಳ ಪರವಾದ ನೀತಿಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಅನುಸರಿಸುತ್ತಿವೆ ಎಂದು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ವಿಶೇಷ ವೈದ್ಯಕೀಯ ಸೇವೆಗಳ ಅಗತ್ಯ ಹೆಚ್ಚಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಆರಂಭವಾದ ಬಳಿಕ ಸಾವಿರಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂಬುದೇ ಇಲ್ಲಿ ವಿಶೇಷ ಹೃದ್ರೋಗ ಆಸ್ಪತ್ರೆಯ ಅಗತ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಸ್ಥಾಪಿಸಬೇಕೆಂದು ಸಿಪಿಐಎಂ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಈ ವಿಷಯದಲ್ಲಿ ವಿರೋಧ ಪಕ್ಷದ ಬಿಜೆಪಿ ಸಂಸದರು ಮತ್ತು ಶಾಸಕರು ಸಹ ಮೌನ ವಹಿಸಿರುವುದು ಖಂಡನೀಯ ಎಂದು ಟೀಕಿಸಿದರು.

ಸರ್ಕಾರವು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮರುಪರಿಶೀಲಿಸಿ, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಿಪಿಐಎಂ ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಮಂಗಳೂರು ನಗರ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಆರೋಗ್ಯ ಕೇಂದ್ರಗಳ ಕಾರ್ಯನಿರ್ವಹಣೆಯ ಅವಧಿಯನ್ನು ವಿಸ್ತರಿಸಬೇಕು. ಗರ್ಭಿಣಿಯರಿಗೆ ಈ ಹಿಂದೆ ನೀಡಲಾಗುತ್ತಿದ್ದ ಥೈರಾಯ್ಡ್ ಪರೀಕ್ಷೆಯನ್ನು ಮರುಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಬಜಾಲ್ ಕೂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಜಯಂತಿ ಬಿ. ಶೆಟ್ಟಿ, ನಗರ ಸಮಿತಿ ಸದಸ್ಯರಾದ ಜಯಲಕ್ಷ್ಮಿ ಜಪ್ಪಿನಮೊಗರು, ದಿನೇಶ್ ಶೆಟ್ಟಿ, ಲೋಕೇಶ್ ಎಂ., ಸ್ಥಳೀಯ ಮುಖಂಡರಾದ ಉದಯಚಂದ್ರ ರೈ, ವರಪ್ರಸಾದ್, ಗೀತಾ ಜಲ್ಲಿಗುಡ್ಡೆ, ಜಯಪ್ರಕಾಶ್ ಜಲ್ಲಿಗುಡ್ಡೆ, ಇಸಾಕ್ ಕಣ್ಣೂರು, ಅಶೋಕ್ ಸಾಲ್ಯಾನ್, ರೋಹಿಣಿ ಜಲ್ಲಿಗುಡ್ಡೆ, ಆಟೋ ಚಾಲಕರ ಸಂಘಟನೆಯ ಮುಖಂಡ ಲತೀಫ್ ಪಕ್ಕಲಡ್ಕ, ಡಿವೈಎಫ್‌ಐ ಮುಖಂಡರಾದ ಧೀರಾಜ್ ಬಜಾಲ್, ಯಶ್ ರಾಜ್, ದೀಕ್ಷಿತ್ ಭಂಡಾರಿ, ಪ್ರೀತೇಶ್ ಬಜಾಲ್, ಪ್ರಕಾಶ್ ಶೆಟ್ಟಿ, ಪ್ರಶಾಂತ್ ಕುಡ್ತಡ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪಡೀಲ್ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸುವುದು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಕಾರ್ಯಕ್ರಮವನ್ನು ಸಿಪಿಐಎಂ ಬಜಾಲ್ ವಿಭಾಗ ಸಮಿತಿ ಕಾರ್ಯದರ್ಶಿ ದೀಪಕ್ ಬಜಾಲ್ ನಿರೂಪಿಸಿದ್ದು, ಜಗದೀಶ್ ಬಜಾಲ್ ವಂದಿಸಿದರು.

 

Donate Janashakthi Media

Leave a Reply

Your email address will not be published. Required fields are marked *