ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ ಸ್ವ – ಪ್ರಜ್ಞೆ – ಭಾಗ 2

ಶ್ರದ್ಧಾನಂಬಿಕೆಗಳು ಸಾಂಸ್ಥೀಕರಣಕ್ಕೊಳಗಾದಾಗ ವ್ಯಕ್ತಿಗತ ಪ್ರಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ
ವ್ಯವಸ್ಥೆಯ ಉತ್ತರದಾಯಿತ್ವ ಮತ್ತು ಧರ್ಮ
ಈ ಎರಡೂ ವರ್ಗಗಳ ದೋಚಿತರಿಗೆ ಈಗ ಉತ್ತರ ನೀಡುವವರು ಯಾರು ? ಸರಿ ತಪ್ಪುಗಳನ್ನು ಬದಿಗಿಟ್ಟು ನೋಡಿದಾಗ, ಯಾವುದೋ ಒಂದು ನಂಬಿಕೆಗೆ ಬದ್ಧರಾಗಿ ತಮ್ಮ ಸಮಯ, ಜೀವನ, ಆದಾಯವನ್ನು ತ್ಯಾಗ ಮಾಡಿದ ಅಸಂಖ್ಯಾತ ಜನರನ್ನು ತಳಸಮುದಾಯಗಳಲ್ಲಿ ಹಾಗೂ ತಳಸಮಾಜದ ಜನರಲ್ಲಿ ಗುರುತಿಸಬಹುದಲ್ಲವೇ ? ಬಾಬ್ರಿ ಮಸೀದಿ ಧ್ವಂಸಾಚರಣೆಯಲ್ಲಿ ಭೌತಿಕವಾಗಿ ಭಾಗವಹಿಸಿ, ಏಟು ತಿಂದು, ಜೈಲು ಅನುಭವಿಸಿ, ಹುಟ್ಟಿದ ಮನೆಗಳನ್ನೂ ಮರೆತು, ಜೀವನೋಪಾಯಕ್ಕೆ ಧಕ್ಕೆ ತಂದುಕೊಂಡ ಅಪಾರ ಜನಸ್ತೋಮ ಇಲ್ಲಿದೆ. ಗಮನಾರ್ಹ ಸಂಗತಿ ಎಂದರೆ, ಮಂದಿರಕ್ಕಾಗಿ ಹಣಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿದ್ದ ಮೇಲ್ಜಾತಿ ಸಮಾಜಗಳು ಮಸೀದಿಯ ಧ್ವಂಸಾಚರಣೆಯಲ್ಲಿ ಕಾಣುವುದಿಲ್ಲ. ಅಲ್ಲಿ ಇದ್ದವರೆಲ್ಲರೂ   ತಳಸಮುದಾಯಗಳು, ಒಬಿಸಿಗಳು ಮತ್ತು ಶೋಷಿತ ಸಮುದಾಯಗಳು. ನಿಷ್ಠೆ

– ನಾ ದಿವಾಕರ 

ಈ ಸಮಾಜದ ಸದಸ್ಯರಿಗೆ ಉತ್ತರದಾಯಿ ಯಾರು ? ನಾವು ಸಂಗ್ರಹಿಸಿಕೊಟ್ಟ ಹಣ ಏನಾಯಿತು ಅಥವಾ ಕಳೆದ ಎರಡು ವರ್ಷಗಳಲ್ಲಿ ನಾವು ಹುಂಡಿಗೆ ಹಾಕಿದ ಹಣ ಯಾರ ಪಾಲಾಯಿತು ಎಂದು ಪ್ರಶ್ನಿಸಿದಾಗ ಯಾರು ಉತ್ತರಿಸಬೇಕು ? ಬಿಜೆಪಿ, ಆರಎಸ್‌ಎಸ್‌, ಸಮಸ್ತ ಸಂಘಪರಿವಾರ, 1980-90ರ ಮುಂಚೂಣಿ ನಾಯಕರು, ರಾಜಕೀಯ ಫಲಾನುಭವಿಗಳು ಇವರ ಪೈಕಿ ಯಾರು ಉತ್ತರದಾಯಿಯಾಗಬೇಕು ? ಉತ್ತರದಾಯಿತ್ವದ ಔದಾತ್ಯಕ್ಕೆ ಬಹುಮುಖ್ಯವಾಗಿ ಬೇಕಿರುವುದು ಪಾರದರ್ಶಕತೆ. ಆರೆಸ್ಸೆಸ್‌ ತನ್ನ ಇತಿಹಾಸದಲ್ಲೇ ಪಾರದರ್ಶಕತೆಯನ್ನು ಪ್ರದರ್ಶಿಸಿಲ್ಲ. ಇದೇ ನೀತಿಯನ್ನು ಕೇಂದ್ರ ಸರ್ಕಾರವೂ ಅನುಸರಿಸುವುದರಿಂದಲೇ ಪಿಎಂ ಕೇರ್‌ ಫಂಡ್‌ ಸಹ ಸಾರ್ವಜನಿಕರ ಪಾಲಿಗೆ ಅಗೋಚರವಾಗಿಯೇ ಇರುತ್ತದೆ. ಹಾಗೆಯೇ ರಾಮ ಮಂದಿರ ಟ್ರಸ್ಟ್ ಅನ್ನು ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಯಿಂದ  ಹೊರಗಿಡಲಾಗಿದೆ. ನಿಷ್ಠೆ

ಕುತೂಹಲಕಾರಿ ಅಂಶವೆಂದರೆ, ಕಳೆದ ಹಲವು ದಿನಗಳಿಂದ ಒಂದೊಂದಾಗಿ ಹೊರಬರುತ್ತಿರುವ ಅಯೋಧ್ಯಾ ರಾಮಮಂದಿರದ ಭ್ರಷ್ಟಾಚಾರದ ಹಗರಣಗಳಿಗೆ ಈ ಎರಡೂ ವರ್ಗಗಳ ಸದಸ್ಯರು ಪ್ರತಿಕ್ರಿಯಿಸಿಲ್ಲ. ಸೆಕ್ಯುಲರ್‌ ರಾಜಕಾರಣದ ದೃಷ್ಟಿಯಲ್ಲಿ ಇವರೆಲ್ಲರೂ ಅಪರಾಧಿಗಳಾಗಿಯೇ ಕಂಡರೂ, ವೈಯುಕ್ತಿಕ ನೆಲೆಯಲ್ಲಿ, ಸಾಮುದಾಯಿಕ ನೆಲೆಯಲ್ಲಿ ಈ ಎರಡೂ ವರ್ಗದ ಸದಸ್ಯರು ತಮ್ಮ ತನು-ಮನ-ಧನ ಅರ್ಪಿಸಿದ್ದಾರೆ. ಮೂರನೆಯ ಭ್ರಮಾಧೀನ ವರ್ಗ ಅಂಧಭಕ್ತಿಯಿಂದ ಅನುಕರಿಸಿವೆ. ಈ ವರ್ಗಗಳಿಂದ  ಪ್ರತಿರೋಧ, ಅಸಮಾಧಾನ, ಅತೃಪ್ತಿ ಮತ್ತು ಪ್ರಶ್ನೆಗಳು ಹೊರಬರಬೇಕಲ್ಲವೇ ? ಕನಿಷ್ಠ “ ನಮ್ಮ ಪರಿಶ್ರಮ, ಶ್ರದ್ಧೆ ಮತ್ತು ವಿಶ್ವಾಸಕ್ಕೆ ನೀವು ದ್ರೋಹ ಬಗೆದಿದ್ದೀರಿ….” ಎಂಬ ಆಕ್ರೋಶವಾದರೂ ವ್ಯಕ್ತವಾಗಬೇಕು ? ಅಥವಾ “ ಏಕೆ ಹೀಗೆ ಮಾಡಿಬಿಟ್ಟಿರಿ ” ಎಂಬ ಹತಾಶೆಯ ಪ್ರಶ್ನೆಯಾದರೂ ಮೂಡಬೇಕು. ರಾಜಕೀಯ-ಸಾಂಸ್ಕೃತಿಕ-ಸಾಂಸ್ಥಿಕ ಹಾಗೂ ಸಾಂಘಿಕ ಫಲಾನುಭವಿಗಳ ಉತ್ತರದಾಯಿತ್ವ ಇಲ್ಲಿ ಪ್ರಶ್ನೆಗೊಳಗಾಗಬೇಕು. ಆದರೆ ಇಂತಹ ಲಕ್ಷಣಗಳೇ ಕಾಣುತ್ತಿಲ್ಲ. ಇದು ಫ್ಯಾಸಿಸಂನ ಕಾರ್ಯನಿರ್ವಹಣೆಯ ಲಕ್ಷಣಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಫ್ಯಾಸಿಸಂ ಇದ್ದ ಇಟಲಿ ಮತ್ತು ಜರ್ಮನಿಗಳಲ್ಲಿ ಹೀಗೆಯೇ ಆಗಿತ್ತು ಎಂಬುದು ಚರಿತ್ರೆಯಲ್ಲಿ ದಾಖಲಾಗಿರುವ ಸತ್ಯ . ಭಾರತದಲ್ಲಿ ಫಶ್ಚಿಮ ಇನ್ನು ಬಂದಿಲ್ಲ ಎಂದು ಅಂದುಕೊಂಡಿರುವವರಿಗೆ ಈ ನಗ್ನ ಸತ್ಯ ರಾಚುತ್ತಿದೆ.

ಇದನ್ನೂ ಓದಿ: ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ ಸ್ವ-ಪ್ರಜ್ಞೆ – ಭಾಗ 1

ಟ್ರಸ್ಟ್‌ ಮತ್ತು ವಿಶ್ವಾಸದ ನಂಟು

ಧಾರ್ಮಿಕ ಕೇಂದ್ರಗಳ ಮತ್ತು ಅವುಗಳನ್ನು ಪೋಷಿಸುವ ಸ್ಥಾವರಗಳ ನಿರ್ವಹಣೆಯಲ್ಲಿ ಕಾಣುವ ಲೋಪಗಳು ಈ ಪ್ರಶ್ನೆಗಳನ್ನು ಮುನ್ನಲೆಗೆ ತರುತ್ತವೆ. Trust ಎಂಬ ಆಂಗ್ಲ ಪದಕ್ಕೆ ಸಂವಾದಿಯಾಗಿ ನಂಬಿಕೆ/ವಿಶ್ವಾಸ ಪದವನ್ನು ಬಳಸುತ್ತೇವೆ. Trusteeship ಎನ್ನುವುದನ್ನು ಧರ್ಮದರ್ಶಿತ್ವ ಎಂದು ನಿರ್ವಚಿಸುತ್ತೇವೆ. Trustee ಎಂದರೆ ಪಾರುಪತ್ಯಗಾರ ಎಂದೂ ಗುರುತಿಸಲಾಗುತ್ತದೆ.  ಯಾವುದೇ ಅರ್ಥದಲ್ಲಿ ನೋಡಿದರೂ ಒಂದು ಟ್ರಸ್ಟ್‌ ಎನ್ನುವುದು ಮೂಲತಃ ವಿಶ್ವಾಸ ನಂಬಿಕೆಗಳ ಆಗರ. ಧರ್ಮ ಎಂಬ ಪದವನ್ನು ಸಾಮಾನ್ಯವಾಗಿ ನಾವು ಸನ್ನಡತೆ ಅಥವಾ ಪ್ರಾಮಾಣಿಕತೆ, ಪಾರದರ್ಶಕತೆ ಇತ್ಯಾದಿ ನಡವಳಿಕೆಗಳಿಗೆ ಸಂವಾದಿಯಾಗಿ ಬಳಸುತ್ತೇವೆ. ಧರ್ಮಿಷ್ಟರು ಅಥವಾ ಧರ್ಮನಿಷ್ಟರು ಎಂದರೆ ಪ್ರಾಮಾಣಿಕರು ಎಂದು ಭಾವಿಸುವ ಪರಂಪರೆಯೇ ಭಾರತೀಯ ಸಮಾಜದಲ್ಲಿದೆ. ಅದರಲ್ಲೂ ಅವಿವಾಹಿತರು (ಬ್ರಹ್ಮಚಾರಿಗಳು) ಇನ್ನೂ ಹೆಚ್ಚಿನ ಮನ್ನಣೆ, ಗೌರವ ಸಂಪಾದಿಸುತ್ತಾರೆ. ಒಂದು ಟ್ರಸ್ಟ್‌ ನಿರ್ವಹಿಸುವವರಲ್ಲಿ ಈ ಗುಣಗಳು ಅಂತರ್ಗತವಾಗಿರಬೇಕು. ನಿಷ್ಠೆ

ಈ ದೇಶದ ಜಾಯಮಾನದಲ್ಲಿ ಜನರು ನಿಮ್ಮನ್ನು ಸಂಪೂರ್ಣವಾಗಿ ನಂಬುವುದು ಈ ಕೆಳಗಿನ ಲಕ್ಷಣಗಳು ಇದ್ದಾಗ.

1. ನೀವು ಮದುವೆಯಾಗದೆ ಒಂಟಿಯೆಂದು ತೋರಿಸಬೇಕು. (ನೀವು ದೊಡ್ಡ ಹಿಂಬಾಲಕರ ಸಂಸಾರ ಸಮುದ್ರದಲ್ಲಿದ್ದರು ಓಕೆ)

2. ನಿಮ್ಮ ಹೊರ ನೋಟದ ಚರ್ಯೆಗಳು ಬಡತನವನ್ನು ಸೂಸುತ್ತಿರಬೇಕು (ರಾತ್ರಿ ವೇಳೆ ರೀಗಲ್ ಸೇವೆ ಇದ್ದರು ಪರವಾಗಿಲ್ಲ)

3. ನಿಮ್ಮ ಸುತ್ತ ಇರುವ ಭಟ್ಟಂಗಿಗಳು ಸಂಪತ್ತಿನಲ್ಲಿ ತೇಲಾಡುತ್ತಿದ್ದರು ಪರವಾಗಿಲ್ಲ

4.ನೀವು ನಾನು ಮಾಡುವುದೆಲ್ಲವು ಪರಮಾತ್ಮನಿಗೆ ಅರ್ಪಿತ ಅವನು ನಡೆಸಿದಂತೆ ನಡೆಯುತ್ತಿದ್ದೇನೆ ಎನ್ನಬೇಕು (ನಿಮ್ಮ ಹೆಸರಲ್ಲಿ ಬಂಡವಾಳಿಗರು, ವ್ಯಾಪಾರಮಾಡಿ ಲಾಭ ಮಾಡಿಕೊಂಡರು ಪರವಾಗಿಲ್ಲ) ನಿಷ್ಠೆ

5. ಇರುವ ಆರ್ಥಿಕ ವ್ಯವಸ್ಥೆಯ ಬಗ್ಗೆ ಚಕಾರವೆತ್ತ ಕೂಡದು

ಈ ಟ್ರಸ್ಟ್‌ ಅಥವಾ ವಿಶ್ವಾಸ —-ದೇವರು ಎಂಬ ಅಮೂರ್ತ-ಕಾಲ್ಪನಿಕ ಶಕ್ತಿಗಿಂತಲೂ , ನಂಬಿಕೆಯಿಂದ ದೇಣಿಗೆ ನೀಡುವ ಭಕ್ತಾದಿಗಳ ದೃಷ್ಟಿಯಿಂದ ಮುಖ್ಯವಾಗುತ್ತದೆ. ಅಧಿಕೃತವಾಗಿ ಅಯೋಧ್ಯಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮತ್ತು ಧರ್ಮದರ್ಶಿ ಅನಿಲ್‌ ಮಿಶ್ರಾ ರಾಜೀನಾಮೆ ಕೊಟ್ಟಿದ್ದಾರೆ. ಪೊಲೀಸರು ಎಂಟು  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಇವರ ಬಳಿ ಇದ್ದ  80 ಲಕ್ಷರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್‌ ಜುಲೈ 13ರ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ನಡುವೆ ಅಯೋಧ್ಯೆಯಲ್ಲಿ ಈಗ ಕಳೆದುಹೋಗಿರುವುದು ಈ ಜನ ವಿಶ್ವಾಸ, ಧಾರ್ಮಿಕ ಶ್ರದ್ಧಾವಂತರ ಮತ್ತು ನೈಜ ಭಕ್ತರ ನಂಬಿಕೆ ಮತ್ತು ರಾಜಕೀಯವಾಗಿ ಮಂದಿರವನ್ನು ಅಧಿಕಾರಕ್ಕೆ ಸಮೀಕರಿಸಿ ಮತ ನೀಡಿದ ಮತದಾರರ ನಂಬಿಕೆ. ನಿಷ್ಠೆ

ಬಂಡವಾಳ ಮಾರುಕಟ್ಟೆ ಮತ್ತು ಧರ್ಮ

ದೇವರು, ಧರ್ಮ ಮತ್ತು ಧಾರ್ಮಿಕತೆ ಇವೆಲ್ಲವೂ ನವ ಉದಾರವಾದದ ಪರಿಸರದಲ್ಲಿ (Neo liberal Environment) ಬಂಡವಾಳ ಹೂಡಿಕೆ, ನಿರ್ವಹಣೆ, ವಿತರಣೆ ಮತ್ತು ಹಂಚಿಕೆಯ ಪರಿಕರಗಳಾಗಿ ಪರಿವರ್ತನೆಯಾಗಿವೆ. ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದು ಪ್ರಜಾಸತ್ತೆಯ ಲಕ್ಷಣ. ಆದರೆ ಈ ನಂಬಿಕೆಗಳನ್ನು ಗಟ್ಟಿಗೊಳಿಸಲು ಅನುಸರಿಸಲಾಗುವ ಆಚರಣೆಗಳನ್ನು ಸಾಂಸ್ಥೀಕರಿಸುವುದು ಸಮಾಜಗಳನ್ನು ಹಿಮ್ಮುಖ ಚಲನೆಗೆ ಒಳಪಡಿಸುತ್ತವೆ. ಆದಾಗ್ಯೂ ಪಶ್ಚಿಮ ಬಂಗಾಲದ ದುರ್ಗಾ ಪೂಜೆಯಂತಹ ಆಚರಣೆಗಳಿಗೆ ಎಡಪಂಥೀಯ ಸರ್ಕಾರಗಳೂ ಮಾನ್ಯತೆ ನೀಡಬೇಕಾಯಿತು, ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರೇ ದುರ್ಗಾ ಪೆಂಡಾಲ್‌ಗಳ ನಿರ್ವಾಹಕರಾಗಿದ್ದನ್ನೂ ನೋಡಿದ್ದೇವೆ. ಇದು ಭಾರತದ ಸಾಂಪ್ರದಾಯಿಕ ಸಮಾಜದ ಒಂದು ವಿರೋಧಾಭಾಸ. ನಿಷ್ಠೆ

ಪೂಜಾ ಮಂದಿರಗಳು, ದೇವಾಲಯಗಳು ಸರ್ಕಾರಗಳ ನಿಯಂತ್ರಣದಲ್ಲಿ ಇರಬೇಕೆಂದು ವಾದಿಸುವುದಕ್ಕೆ ಕಾರಣ ಅಲ್ಲಿ ಹುಟ್ಟುವ ಆದಾಯ. ಶಬರಿಮಲೆ, ತಿರುಪತಿ, ಪದ್ಮನಾಭಸ್ವಾಮಿ ದೇವಾಲಯ ಇವೆಲ್ಲವೂ ಉದಾಹರಣೆಗಳು. ಖಾಸಗಿ ಟ್ರಸ್ಟ್‌ಗಳಿಗೆ ವಹಿಸಿದರೆ ಏನಾಗಬಹುದು ಎನ್ನುವುದಕ್ಕೆ ಅಯೋಧ್ಯೆ ಸಾಕ್ಷಿಯಾಗಿದೆ. ಈ ಆಡಳಿತದ ಚೌಕಟ್ಟನ್ನು ಮೀರಿ ನೋಡಿದಾಗ, ಚರ್ಚು, ಮಸೀದಿ, ದೇವಾಲಯಗಳ ನಿರ್ವಹಣೆಯಾಗುವುದೇ ಅನುಯಾಯಿಗಳ ಅಥವಾ ಭಕ್ತಾದಿಗಳ ಕಾಣಿಕೆ, ದೇಣಿಗೆ, ದಾನ ಇತ್ಯಾದಿಗಳ ಬಲದಿಂದ.  ಬಹುಪಾಲು ಧಾರ್ಮಿಕ ಕೇಂದ್ರಗಳು ಸಾರ್ವಜನಿಕ ಲೆಕ್ಕ ಪರಿಶೋಧನೆಗೆ (Public Auditing) ಒಳಗಾಗುವುದಿಲ್ಲ ಹಾಗಾಗಿ ಈ ಸಾಂಸ್ಥಿಕ ನಿರ್ವಹಣೆಗೆ ಪಾರದರ್ಶಕತೆ ಅನಿವಾರ್ಯ ಎನಿಸುವುದಿಲ್ಲ. ಪಾರದರ್ಶಕತೆ ಇಲ್ಲದೆ ಉತ್ತರದಾಯಿತ್ವವೂ ಇರುವುದಿಲ್ಲ. ಶಬರಿಮಲೆ, ಪದ್ಮನಾಭಸ್ವಾಮಿ ದೇವಾಲಯ, ತಿರುಪತಿ ದೇವಸ್ಥಾನ ಇವೆಲ್ಲವೂ ಇಂತಹ ಹಗರಣಗಳನ್ನು ಎದುರಿಸಿವೆ. ನಿಷ್ಠೆ

ಅಪರಿಮಿತ ನಂಬಿಕೆ ಮತ್ತು ವಿಶ್ವಾಸದ್ರೋಹ

ವಿಚಿತ್ರ ಎಂದರೆ ಯಾವುದೇ ಸಂದರ್ಭದಲ್ಲೂ ದೈವ ನಂಬಿಕೆಗೊಳಗಾಗಿ ಸೀಮಿತ ಆದಾಯವಿದ್ದರೂ ದೇವಾಲಯಗಳಿಗೆ ನಗದು, ಆಭರಣ ಮತ್ತು ಪೂಜಾಶುಲ್ಕಗಳನ್ನು ಅರ್ಪಿಸುವ ಜನಸಾಮಾನ್ಯರು, ದುರಾಡಳಿತದ ವಿರುದ್ಧ ಸೊಲ್ಲೆತ್ತುವುದಿಲ್ಲ. ಹುಂಡಿಗೆ ಹಾಕಿದ ಹಣವನ್ನು ದೇವರಿಗೆ ಸೇರಿದ್ದು ಎಂದೇ ಭಾವಿಸಲಾದರೂ, ಅದರ ದುರುಪಯೋಗ ಮಾಡುವುದು ಕಲ್ಪಿತ ದೇವರಿಗೆ ನಿಕಟವಾಗಿರುವ ಸಿಬ್ಬಂದಿಗಳೇ,  ಧರ್ಮದರ್ಶಿಗಳೇ ಎಂಬ ವಾಸ್ತವವನ್ನು ಜನರು ಮನಗಾಣುವುದೇ ಇಲ್ಲ. ತಿರುಪತಿಯಲ್ಲಿ ಇಲ್ಲದ ಸಿ ಸಿ ಟಿ ವಿ ಕ್ಯಾಮೆರಾಗಳೆಲ್ಲೂ ಇಲ್ಲ. ಆದರೂ ಅಲ್ಲಿ ದೇವರನ್ನು ನೋಡಲು ಹೋಗುವ ಕ್ಯೂ ನಿಂತವರಿಗೆ ಬೇಗನೆ ದರ್ಶನ ಕೊಡಿಸುವ ಭ್ರಷ್ಟಾಚಾರದ ಅನುಭವಗಳಾಗುತ್ತವೆ. ನಿಷ್ಠೆ

ಇದೇ ಸೂತ್ರವೇ ನಮ್ಮ ರಾಜಕೀಯ ವ್ಯವಸ್ಥೆಗೂ ಹಬ್ಬಿರುವುದರಿಂದಲೇ, ‘ರಾಜಕೀಯ ಉತ್ತರದಾಯಿತ್ವವೂ’ (political Accountabiity) ಪ್ರಶ್ನೆಗೊಳಗಾಗುವುದಿಲ್ಲ. ಅಲ್ಲಿ ದೈವನಿಷ್ಠೆ ಇಲ್ಲಿ ಪಕ್ಷ/ನಾಯಕ ನಿಷ್ಠೆ ನಿರ್ಣಾಯಕವಾಗುತ್ತದೆ. ಭಾರತದ ಪ್ರಜಾಪ್ರಭುತ್ವೀಯ ವ್ಯವಸ್ಥೆಯಲ್ಲಿ, ತಳಮಟ್ಟದ ಪ್ರತಿರೋಧದ ದನಿಗಳನ್ನು ಅಡಗಿಸುವ ಆಡಳಿತಾತ್ಮಕ ಕ್ರಮಗಳಿಗೆ ಈ ಸಾಮಾಜಿಕ ಅಂಧವಿಶ್ವಾಸ ಪ್ರೇರಣೆ ನೀಡುತ್ತದೆ. ನಿಷ್ಠೆ

“ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಸೇರಿದ ಸ್ಥಾವರ, ಹಿಂದೂ ಧಾರ್ಮಿಕ ತೀರ್ಥ ಕ್ಷೇತ್ರ, ಹಿಂದೂಗಳಿಂದಲೇ ನಿರ್ಮಾಣವಾದ ಸ್ಮಾರಕ , ರಾಮ ಭಕ್ತರಿಗೆ ಸೇರಿದ ಪವಿತ್ರ ಸ್ಥಳ ಹಾಗಾಗಿ ಹಿಂದೂಯೇತರರಿಗೆ, ರಾಮಭಕ್ತರಲ್ಲದವರಿಗೆ ಈಗ ಹೊರಬರುತ್ತಿರುವ ಭ್ರಷ್ಟಾಚಾರದ ಹಗರಣವನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಇತ್ಯಾದಿ ” ಇದು ಕೆಲವು ಬಿಜೆಪಿ ನಾಯಕರ ವಾದ. ರಾಜಕೀಯವಾಗಿಯೂ ಇದೇ ಧ್ವನಿ ಕೇಳಿಬರುತ್ತಿದೆ. ಹಿಂದೂ ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ ಸಮಾಜವಾದಿ ಪಕ್ಷಕ್ಕೆ ಈ ಹಗರಣದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಈ ರಾಜಕೀಯ ಭಾವಾತಿರೇಕಗಳನ್ನು ದಾಟಿ ನೋಡಿದಾಗ ಇಡೀ ಹಗರಣದಲ್ಲಿ ಕಾಣಬೇಕಿರುವುದು ಜನಸಾಮಾನ್ಯರ ಶ್ರದ್ಧೆ, ನಂಬಿಕೆ, ವಿಶ್ವಾಸ ಮತ್ತು ಅದಕ್ಕೆ ಸಲ್ಲಬೇಕಾದ ಗೌರವ.

ಈ ಗೌರವಕ್ಕೆ ಧಕ್ಕೆ ಉಂಟಾದಾಗ ಮಾತನಾಡಬೇಕಿರುವುದು ಯಾರು ? ಇದರಿಂದ ಪ್ರಾಮಾಣಿಕವಾಗಿ ನೊಂದ ಜನರು ಬಾಯ್ದೆರೆಯಬೇಕಿತ್ತು. ಆದರೆ ಮೌನವಾಗಿದ್ದಾರೆ. ಹಿಂದೂ ಧಾರ್ಮಿಕ ಸ್ವಾಮೀಜಿಗಳು, ಸಂತರು, ಸಾಂಸ್ಥಿಕ ನೇತಾರರು, ಸಾಮುದಾಯಿಕ ನಾಯಕರು ಪ್ರಶ್ನಿಸಬೇಕಿತ್ತು. ಅವರೂ ಸುಮ್ಮನಿದ್ದಾರೆ. ರಾಮಮಂದಿರದ ಫಲಾನುಭವಿ ರಾಜಕಾರಣಿಗಳು ಪ್ರತಿರೋಧ ವ್ಯಕ್ತಪಡಿಸಿಬೇಕಿತ್ತು. ಅದೂ ಕಾಣುತ್ತಿಲ್ಲ. ಅಂದರೆ ದೇಶದ ಬಹುಸಂಖ್ಯಾತ ಜನತೆ ಒಂದು ಬೃಹತ್‌ ಪ್ರಮಾಣದ ಭ್ರಷ್ಟಾಚಾರ ಹಗರಣವನ್ನು ಪ್ರಶ್ನಿಸುತ್ತಲೂ ಇಲ್ಲ, ಆಕ್ರೋಶವನ್ನೂ ತೋರುತ್ತಿಲ್ಲ, ಪ್ರತಿರೋಧವನ್ನೂ ವ್ಯಕ್ತಪಡಿಸುತ್ತಿಲ್ಲ, ಉತ್ತರದಾಯಿತ್ವವನ್ನೂ ನಿರೀಕ್ಷಿಸುತ್ತಿಲ್ಲ ಎಂದಾಯಿತು. ಭ್ರಷ್ಟರನ್ನು ಶಿಕ್ಷೆಗೊಳಪಡಿಸಲು ಆಗ್ರಹಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದಿಲ್ಲ. ನಿಷ್ಕ್ರಿಯ ಮೌನ ವಹಿಸುವುದು ಈ ಭಾವನೆಗಳನ್ನು ಬಂಧಿಸಿರುವ ಸಂಕೋಲೆಗಳನ್ನು ಬಿಂಬಿಸುತ್ತದೆ. ನಿಷ್ಠೆ

ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕತೆ

ವಿಶಾಲ ಸಮಾಜ (Broader society) ಮತ್ತು ಸಾರ್ವಜನಿಕ ಸ್ವ –ಪ್ರಜ್ಞೆಯ ದೃಷ್ಟಿಯಿಂದ ನೋಡಿದಾಗ  ಈ ಧೋರಣೆ, ಸಾಮಾಜಿಕ ಹಿಮ್ಮುಖ ಚಲನೆಯ ಸಂಕೇತವಾಗಿ ಕಾಣುತ್ತದೆ.  ದೈವ ಸನ್ನಿಧಿ ಅಥವಾ ಧಾರ್ಮಿಕ ಸ್ಥಾವರ/ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ತಳಮಟ್ಟದ ಸಮಾಜದಲ್ಲಿ ದುಡಿಯುವ ಜನತೆಯ ದೃಷ್ಟಿಯಲ್ಲಿ ವಿಶ್ವಾಸದ್ರೋಹವಾಗುತ್ತದೆ. ಏಕೆಂದರೆ ಈ ಜನಸಾಮಾನ್ಯರು ತಮ್ಮ ಬೆವರಿನ ದುಡಿಮೆಯಲ್ಲಿ ಉಳಿತಾಯ ಮಾಡಿದ ಪುಡಿಗಾಸನ್ನು ಅರ್ಪಿಸಿರುತ್ತಾರೆ. ವಿಪರ್ಯಾಸವೆಂದರೆ ಕಾರ್ಪೋರೇಟ್‌ ಬಂಡವಾಳಶಾಹಿ ವ್ಯವಸ್ಥೆ ಈ ಎಲ್ಲ ಸದ್ಭಾವನೆಗಳನ್ನೂ ನಾಶಪಡಿಸಿದೆ. ನೈಸರ್ಗಿಕ ಸಂಪನ್ಮೂಲಗಳನ್ನು, ಅರಣ್ಯ ಸಂಪತ್ತನ್ನು ನಾಶಪಡಿಸುವ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಲೂಟಿ ಮಾಡುವ ಬಂಡವಾಳಶಾಹಿಗಳು ಏಕೆ ಪ್ರಶ್ನಾತೀತವಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಕಾಣುತ್ತದೆ.

ಹಾಗಾಗಿಯೇ ಉತ್ತರದ ಅರಾವಳಿಯಿಂದ ದಕ್ಷಿಣದ ಕರಾವಳಿಯವರೆಗೆ ಅರಣ್ಯ ಸಂಪತ್ತನ್ನು ದೋಚಲಾಗುತ್ತಿದ್ದರೂ, ಮಾರುಕಟ್ಟೆ ಆರ್ಥಿಕತೆಯ ವಾರಸುದಾರರನ್ನು ಪ್ರಜ್ಞಾವಂತ-ಸುಶಿಕ್ಷಿತ ಸಮಾಜಗಳು ಪ್ರಶ್ನಿಸುತ್ತಿಲ್ಲ.  ಶಿಕ್ಷಣ ಮತ್ತು ಉನ್ನತ ಉದ್ಯೋಗ ಪಡೆದ ಸಮಾಜಗಳಲ್ಲಿ ಸಾಂವಿಧಾನಿಕ ಅರಿವು ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆ ಜಾಗೃತವಾಗಿಲ್ಲದಿದ್ದರೆ , ಅಂತಹ ಸಮಾಜಗಳು ʻದೇಶʼ ಅಥವಾ ʻದೇಶದ ಹಿತಾಸಕ್ತಿʼ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತವೆ. ಹಾಗೆಯೇ ಎರಡು ವರ್ಷಗಳ ಹಿಂದೆ ʻಭಾರತದ ಹೆಮ್ಮೆʼ ಎಂದು ಘೋಷಿಸಲ್ಪಟ್ಟ ತೀರ್ಥಸ್ಥಳವೊಂದರಲ್ಲಿ ಕೋಟ್ಯಂತರ ರೂಗಳ ಭ್ರಷ್ಟಾಚಾರ ನಡೆಯುತ್ತಿರುವಾಗ ಈ ಸಮಾಜಗಳ ಸ್ವ-ಪ್ರಜ್ಞೆ ಜಾಗೃತವಾಗಬೇಕಲ್ಲವೇ ? ಇದು ಕಾಣದಿರುವುದು ಭಾರತ ನಡೆಯಬಹುದಾದ ಮುಂದಿನ ಹಾದಿಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಪ್ರಶ್ನಿಸುವ ಹಕ್ಕು ಕಳೆದುಕೊಂಡರೆ ಹೋರಾಡಿ ಗಳಿಸಬಹುದು ಆದರೆ ಪ್ರಶ್ನಿಸುವ ಪ್ರಜ್ಞೆ ಕಳೆದುಕೊಂಡರೆ ಇಡೀ ಸಮಾಜವೇ ಅವನತಿಯತ್ತ ಸಾಗುತ್ತದೆ. ಈ ಎಚ್ಚರ ನಮ್ಮೊಳಗಿದ್ದರೆ ಸಾಕು.

ಒಂದಂತೂ ನಿಜ .ವಿ ಎಚ್ ಪಿ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸುವ ಆಂದೋಲನ ಏಕೆ ಮಾಡುತ್ತಿದೆ ಎಂದು ಗೊತ್ತಾಗುತ್ತದೆ. ಅದು ಹಣ ಹಣ ಹಣ. 40-50 ವರ್ಷ ಆರ್‌ಎಸ್‌ಎಸ್‌  ಗರಡಿಯಲ್ಲಿ ಸೊ ಕಾಲ್ಡ್ ಶುದ್ಧಚಾರಿತ್ರ್ಯ ಪಡೆದುಕೊಂಡ ಮಹನೀಯರು ಟ್ರಸ್ಟೀಗಳಾದಾಗ ಇಷ್ಟೊಂದು ಲೂಟಿಯಾದರೆ, ಇಡೀ ದೇವಾಲಯಗಳು ಸರಕಾರದಿಂದ ಮುಕ್ತಗೊಂಡು ಇಂತಹುದೇ ಟ್ರಸ್ಟ್ಗಳಿಗೆ ರವಾನೆಯಾದಾಗ ಏನಾಗಬಹುದೆಂಬುದಕ್ಕೆ ಇದು  ಜ್ವಲಂತ ಉದಾಹರಣೆಯಾಗಿದೆ.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *