ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ಸಂಭವಿಸಿದ ಕಲ್ಲುಕ್ವಾರಿ ದುರಂತಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CWFI–CITU) ಆಗ್ರಹಿಸಿದೆ.
ಸಂಘಟನೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮಾದಾಪಟ್ಟಣದ ಕಲ್ಲುಕ್ವಾರಿಯಲ್ಲಿ ಸಂಭವಿಸಿದ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಣಿಗಾರಿಕೆ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದೆ.
ಘಟನಾ ಸ್ಥಳದಲ್ಲಿ ಕಾವೇರಿ ಕಲ್ಲುಕ್ವಾರಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಬಸವೇಶ್ವರ ಕಲ್ಲುಕ್ವಾರಿ ಕಾರ್ಯನಿರ್ವಹಿಸುತ್ತಿದ್ದು, ಎರಡರ ನಡುವಿನ ಕಡ್ಡಾಯ ಬಫರ್ ವಲಯವನ್ನು (Buffer Zone) ಉಲ್ಲಂಘಿಸಲಾಗಿದೆ. ಅಕ್ಕಪಕ್ಕದಲ್ಲಿ ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಪಾಲಿಸಬೇಕಾದ ಕನಿಷ್ಠ ಸುರಕ್ಷತಾ ನಿಯಮಗಳು ಹಾಗೂ ಸಮನ್ವಯದ ಕೊರತೆಯೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಫೆಡರೇಷನ್ ಹೇಳಿದೆ.
ಜಿಲ್ಲೆಯಲ್ಲಿ ಇಂತಹ ಗಣಿಗಾರಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಮಾದಾಪಟ್ಟಣ ಕಲ್ಲುಕ್ವಾರಿ ಪ್ರದೇಶ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳ ಕುರಿತು ತಜ್ಞರ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಇದನ್ನೂ ಓದಿ : ₹12,000 ಕೋಟಿ ವೆಚ್ಚದ ದೆಹಲಿ–ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ; 3 ತಿಂಗಳಲ್ಲೇ ಗುಂಡಿಗಳು!
ಇಂತಹ ದುರಂತಗಳು ಪದೇ ಪದೇ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಘಟನೆ ಬಳಿಕ ಔಪಚಾರಿಕ ಸ್ಪಂದನೆಗೆ ಮಾತ್ರ ಸೀಮಿತವಾಗಿವೆ. ಕಾರ್ಮಿಕರಿಗೆ ಸುರಕ್ಷಿತ ಕೆಲಸದ ವಾತಾವರಣ ಕಲ್ಪಿಸುವಲ್ಲಿ ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯಾಗಿದೆ ಎಂದು ಫೆಡರೇಷನ್ ಟೀಕಿಸಿದೆ.
ದುರಂತದ ಬಳಿಕ ಸಿಡಬ್ಲ್ಯುಎಫ್‌ಐ–ಸಿಐಟಿಯು ನಿಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷೆ ಕೆ.ಎಸ್. ಲಕ್ಷ್ಮಿ, ಉಪಾಧ್ಯಕ್ಷ ಎನ್.ಬಿ. ಮಹಾಂತೇಶ್, ಸಿಐಟಿಯು ರಾಮನಗರ ಜಿಲ್ಲಾ ಮುಖಂಡ ಬಿ.ಬಿ. ರಾಘವೇಂದ್ರ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಣ್ಣ ರಂಗಯ್ಯ ಅವರು ಮೃತರ ಕುಟುಂಬಸ್ಥರು ಮತ್ತು ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಈ ಹಿನ್ನೆಲೆಯಲ್ಲಿ ಫೆಡರೇಷನ್ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು, ಮೃತ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಾಗೂ ಕಲ್ಲುಕ್ವಾರಿ ಮಾಲೀಕರು ಸೇರಿ ತಲಾ ₹25 ಲಕ್ಷ ಪರಿಹಾರ ನೀಡಬೇಕು ಮತ್ತು ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದೆ. ತೀವ್ರ ಗಾಯಗೊಂಡವರಿಗೆ ತಲಾ ₹5 ಲಕ್ಷ ಹಾಗೂ ಸಾಮಾನ್ಯ ಗಾಯಾಳುಗಳಿಗೆ ತಲಾ ₹1 ಲಕ್ಷ ಆರೈಕೆ ವೆಚ್ಚವನ್ನು ನೀಡಬೇಕು ಎಂದೂ ಆಗ್ರಹಿಸಿದೆ.
ಇದಲ್ಲದೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಕಲ್ಲುಕ್ವಾರಿ ಮಾಲೀಕರ ವಿರುದ್ಧ ಹಾಗೂ ಸುರಕ್ಷತಾ ಕ್ರಮಗಳ ಪಾಲನೆಯನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫೆಡರೇಷನ್ ಒತ್ತಾಯಿಸಿದೆ.
ಇದನ್ನೂ ನೋಡಿ : LIVE : DSS ದಲಿತ ಜನಗ್ರಹ ಸಮಾವೇಶ
