ಅಂತರರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ವರ್ಗಾವಣೆ ಮತ್ತು ಆರ್ಥಿಕ ಹಿಂಜರಿತದ ಅಪಾಯ

ವಿಶ್ವ ತೈಲ ಬೆಲೆಗಳ ಏರಿಕೆಯ ಸಂಬಂಧವಾಗಿ ಒಂದು ದೇಶದೊಳಗೆ ಎರಡು ನೀತಿಪ್ರತಿಕ್ರಿಯೆಗಳಿರಬಹುದು. ಮೊದಲನೆಯದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಲು ಬಿಡುವುದು. ಇದು ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗವನ್ನು ಸೃಷ್ಟಿಸುತ್ತದೆ; ಎರಡನೇಯದು, ಬೆಲೆಗಳ ಏರಿಕೆಯನ್ನು ಮಾಡದೇ ಇರುವುದು ಮತ್ತು  ಈ ಉತ್ಪನ್ನಗಳ ಸರಬರಾಜನ್ನು ಪಡಿತರಕ್ಕೆ ಒಳಪಡಿಸುವುದು. ಇದು ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಆದರೆ, ಈ ಪರ್ಯಾಯ ನೀತಿಯನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಖಂಡಿತವಾಗಿ ವಿರೋಧಿಸುತ್ತದೆ; ದುಡಿಯುವ ಜನರ ಜೀವನ ಮಟ್ಟದ ರಕ್ಷಣೆ ಮತ್ತು ವಿತ್ತೀಯ ಕೊರತೆಗಳು, ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಸಂಪೂರ್ಣವಾಗಿ ನಿಷಿದ್ಧ. ಆದ್ದರಿಂದ ಅದರ ದಾಸ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಲಕ್ಷಾಂತರ ಬಡವರು ಮತ್ತು ದುಡಿಯುವ ಜನರಿಗೆ ಹಾನಿ ಉಂಟುಮಾಡುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆಯನ್ನೇ ಮಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಒಂದು ಗುರುತರವಾದ ಹಿಂಜರಿತಕ್ಕೆ ತಳ್ಳುತ್ತಿದೆ, ಇದರಲ್ಲಿ  ಆಶ್ಚರ್ಯವೇನಿಲ್ಲ.

– ಅನು: ಕೆ.ಎಂ. ನಾಗರಾಜ್

– ಪ್ರೊ. ಪ್ರಭಾತ್ಪಟ್ನಾಯಕ್

ಪಶ್ಚಿಮ ಏಷ್ಯಾ ಯುದ್ಧವು ವಿಶ್ವ ತೈಲ ಬೆಲೆಗಳನ್ನು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಳ ಮೇಲಕ್ಕೆ ತಳ್ಳಿದೆ. ಕೆಲವು ರಾಜ್ಯಗಳ ಶಾಸನ ಸಭಾ ಚುನಾವಣೆಗಳು ಪೂರ್ಣಗೊಳ್ಳುವವರೆಗೂ ತೈಲ ಉತ್ಪನ್ನಗಳ ಬೆಲೆಗಳನ್ನು ಬದಲಾಯಿಸದೆ ಇರಿಸಿದ್ದ ಭಾರತ ಸರ್ಕಾರವು ಈಗ ಅವುಗಳ ಬೆಲೆಗಳನ್ನು ಏರಿಸಲು ಪ್ರಾರಂಭಿಸಿದೆ. ಈಗಾಗಲೇ ಮೂರು ಸಲ ಬೆಲೆಗಳನ್ನು ಏರಿಸಿಯಾಗಿದೆ ಮಾತ್ರವಲ್ಲ, ಮತ್ತಷ್ಟು ಏರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಬೆಲೆ ಏರಿಕೆಯ ಸಂಬಂಧವಾಗಿ ಹೆಚ್ಚಿನ ಸಂಖ್ಯೆಯ ಅರ್ಥಶಾಸ್ತ್ರಜ್ಞರು, ಏರಿಕೆಯಾದ ವಿಶ್ವ ತೈಲ ಬೆಲೆಗಳನ್ನು ದೇಶೀಯ ಗ್ರಾಹಕರಿಗೆ “ವರ್ಗಾವಣೆ” ಮಾಡಿರುವ ಕ್ರಮವನ್ನು ಸಹಜವಾದ ಒಂದು ಸಂಗತಿ ಎಂದು ಕಾಣುತ್ತಾರೆ. ಇವರಲ್ಲಿ ಅವರಲ್ಲಿ ಭಾರತೀಯ ಜನತಾ ಪಕ್ಷದ ಜೊತೆಯಲ್ಲಿ ಇಲ್ಲದವರೂ ಇದ್ದಾರೆ. ಆದರೆ, ಈ ದೃಷ್ಟಿಕೋನವು ಆರ್ಥವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಒಂದು ದೋಷಪೂರಿತವಾದ ತಿಳುವಳಿಕೆಯನ್ನು ಆಧರಿಸಿದೆ.

ಮುಖ್ಯವಾದ ಅಂಶವೆಂದರೆ, ಪೆಟ್ರೋ-ಉತ್ಪನ್ನಗಳ ಬೇಡಿಕೆಯು ಬೆಲೆಯನ್ನಷ್ಟೇ ಆಧರಿಸಿಲ್ಲ, ಅಂದರೆ, ಅವುಗಳ ಬೆಲೆಗಳು ಎಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತವೆಯೋ, ಅದಕ್ಕನುಗುಣವಾದ ಪ್ರಮಾಣದಲ್ಲಿ ಅವುಗಳ ಮೇಲಿನ ಬೇಡಿಕೆ ಇಳಿಯುವುದಿಲ್ಲ. ಹಾಗಾಗಿ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆದಾರರು ಈ ಉತ್ಪನ್ನಗಳ ಮೇಲಿನ ತಮ್ಮ ಬೇಡಿಕೆಯ ಮಟ್ಟವನ್ನು ಉಳಿಸಿಕೊಳ್ಳುತ್ತಾರೆ ಮತ್ತು ಅದಕ್ಕಾಗಿ ಬೇಕಾಗುವ ವೆಚ್ಚವನ್ನು ಅವರು ಮಾಡುವ ಇತರ ಖರ್ಚು ವೆಚ್ಚಗಳನ್ನು ಕಡಿತ ಮಾಡುವ ಮೂಲಕ ಹೊಂದಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಗೃಹಿಣಿಯರೇ ರಾಷ್ಟ್ರ ನಿರ್ಮಾಪಕರು’: ಅಪಘಾತ ಪರಿಹಾರ ಪ್ರಕರಣಗಳಲ್ಲಿ ತಿಂಗಳಿಗೆ ₹30 ಸಾವಿರ ಆದಾಯ ಪರಿಗಣನೆಗೆ ಸುಪ್ರೀಂ ಕೋರ್ಟ್ ನಿರ್ದೇಶನ

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆಯು ಇತರ ಸರಕುಗಳ ಮೇಲಿನ ಬೇಡಿಕೆಯನ್ನು ಇಳಿಕೆ ಮಾಡುವಷ್ಟು ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೇಡಿಕೆಯನ್ನು ಇಳಿಕೆಗೆ ಮಾಡುವುದಿಲ್ಲ. ಆದ್ದರಿಂದ, ಇದು ಅರ್ಥವ್ಯವಸ್ಥೆಯ ಮೇಲೆ ಒಂದು ಹಿಂಜರಿತವನ್ನು ಉಂಟುಮಾಡುವ ಪರಿಣಾಮ ಬೀರುತ್ತದೆ. ತೈಲ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ಇಳಿಕೆ ಎಷ್ಟು ಹೆಚ್ಚಿನ ಮಟ್ಟದಲ್ಲಿರುತ್ತದೆಯೋ, ಆ ಮಟ್ಟಕ್ಕೆ ಅನುಗುಣವಾಗಿ ಅವುಗಳ ಮೇಲಿನ ಬೇಡಿಕೆಯು ಇಳಿಕೆಯಾಗಬೇಕು ಎಂದಾದರೆ, ಅವುಗಳ ಬೆಲೆಗಳ ಏರಿಕೆಯು ಅತಿ ಹೆಚ್ಚಿನ ಮಟ್ಟದಲ್ಲೇ ಇರಬೇಕಾಗುತ್ತದೆ; ಮತ್ತು ಬೇರೆಡೆಯಿಂದ ಖರ್ಚುಗಳನ್ನು ತಿರುಗಿಸುವುದರಿಂದ ಅರ್ಥವ್ಯವಸ್ಥೆಯಲ್ಲಿ ಉಂಟಾಗುವ ಹಿಂಜರಿತವೂ ಹೆಚ್ಚು ತೀವ್ರವಾಗಿಯೇ ಇರಬೇಕಾಗುತ್ತದೆ.

ಪೂರೈಕೆಗಳ ವಾಸ್ತವ ಕೊರತೆಯೇ ಹೆಚ್ಚಿನ ಸಂದರ್ಭಗಳಲ್ಲಿ ಬೆಲೆ ಏರಿಕೆಗೆ ಆಧಾರವಾಗಿರುವುದಿಲ್ಲ; ಅಸ್ತಿತ್ವದಲ್ಲಿರುವ ದಾಸ್ತಾನುಗಳ ಮಟ್ಟದಲ್ಲಿ ಸ್ವಲ್ಪ ಇಳಿಕೆ ಇದ್ದರೂ ಸರಬರಾಜುಗಳ ಮುಂದುವರಿಕೆಗೆ ಅದು ಸಾಕಾಗುತ್ತದೆ ಎಂಬುದು ಪ್ರಸ್ತುತ ಯುದ್ಧದ ಸಂದರ್ಭದಲ್ಲಿಯೂ ಕಂಡುಬಂದಿದೆ. ಆದರೆ ಮುಂಬರುವ ಕೊರತೆ ಮತ್ತು ಬೆಲೆ ಏರಿಕೆಯ ನಿರೀಕ್ಷೆಗಳು ಬೆಲೆಗಳನ್ನು ನಿಜಕ್ಕೂ ಏರಿಕೆಮಾಡುತ್ತವೆ. ಆದರೆ, ಪೂರೈಕೆಯಲ್ಲಿರುವ ಸ್ವಲ್ಪ ಮಟ್ಟದ ಇಳಿಕೆಯು ವಿಶ್ವ ಬೆಲೆಗಳನ್ನು ಹೆಚ್ಚಿಸಿದೆ ಎಂದೇ ನಾವು ಭಾವಿಸೋಣ.

ಎರಡು ನೀತಿಪ್ರತಿಕ್ರಿಯೆಗಳು

ವಿಶ್ವ ತೈಲ ಬೆಲೆಗಳ ಏರಿಕೆಯ ಸಂಬಂಧವಾಗಿ ಒಂದು ದೇಶದೊಳಗೆ ಬದಲಾಯಿಸಬಹುದಾದ ಎರಡು ನೀತಿ-ಪ್ರತಿಕ್ರಿಯೆಗಳಿರಬಹುದು. ಮೊದಲನೆಯದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಲು ಬಿಡುವುದು ಮತ್ತು ಅವುಗಳನ್ನು ಯಾವ ಸರಕುಗಳ ಉತ್ಪಾದನೆಗೆ ಲಾಗುವಾಡು ರೂಪದಲ್ಲಿ ಬಳಸಲಾವುದೋ ಆ ಎಲ್ಲ ಸರಕುಗಳ ಬೆಲೆಗಳನ್ನೂ ಸಹ ಏರಲು ಬಿಡುವುದು – ಬೆಲೆ ಏರಿಕೆ ಮತ್ತು ಆರ್ಥಿಕ ಹಿಂಜರಿತ ಇವುಗಳ ಸಂಯೋಜನೆಯ ಪರಿಣಾಮವಾಗಿ ಅಂತಹ ಉತ್ಪನ್ನಗಳಿಗೆ ಬೇಡಿಕೆ ಇಳಿಕೆಯಾಗುವಂತೆ ಮಾಡುವ ಉದ್ದೇಶದಿಂದ ಮತ್ತು ಇಳಿಕೆಯಾದ ಈ ಬೇಡಿಕೆಯನ್ನು ಇಳಿಕೆಯಾದ ಪೂರೈಕೆಗಳೊಂದಿಗೆ ಹೊಂದಿಸುವ ಉದ್ದೇಶದಿಂದ. ಈ ಮಾದರಿಯನ್ನು ಅನುಸರಿಸಿದಾಗ ಉಂಟಾಗುವ ಆರ್ಥಿಕ ಹಿಂಜರಿತವು ಅನಿವಾರ್ಯ ಮಾತ್ರವಲ್ಲ, ತೈಲದ ಬೇಡಿಕೆ ಮತ್ತು ಪೂರೈಕೆಯ ನಡುವೆ ಸಮಾನತೆಯನ್ನು ತರುವ ಅದು ಒಂದು ವಾಸ್ತವಿಕ ಮಾರ್ಗವೂ ಹೌದು.

ನೀತಿಯ ಇನ್ನೊಂದು ಸಂಭಾವ್ಯ ಪ್ರತಿಕ್ರಿಯೆಯೆಂದರೆ, ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆಗಳ ಏರಿಕೆಯನ್ನು ಮಾಡದೇ ಇರುವುದು. ಈ ಕ್ರಮವನ್ನು ಅನುಸರಿಸಿದಾಗ ದೇಶದೊಳಗೆ ತಯಾರಾಗುವ ಸರಕು-ಸರಂಜಾಮುಗಳ ಬೆಲೆಗಳು ಏರಿಕೆಯಾಗುವುದಿಲ್ಲ. ಆದರೆ, ಬೆಲೆಗಳು ಏರಿಕೆಯಾದಾಗಲೂ ಪೆಟ್ರೋ-ಉತ್ಪನ್ನಗಳ ಬಳಕೆಯ ಪ್ರಮಾಣವನ್ನು ತಗ್ಗಿಸಲಾರದ ಬಳಕೆದಾರರು ತಮ್ಮ ಇತರೆ ಬಾಬ್ತುಗಳ ಖರ್ಚುಗಳನ್ನು ಕಡಿತ ಮಾಡುವುದರಿಂದ ಮತ್ತು ಈ ಖರ್ಚುಗಳ  ಕಡಿತವು ಉಂಟುಮಾಡುವ ಆರ್ಥಿಕ ಹಿಂಜರಿತವನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜನ್ನು ಪಡಿತರಗೊಳಿಸಬೇಕಾಗುತ್ತದೆ. ಈ ರೀತಿಯ ಪಡಿತರದಲ್ಲಿ ಅಂತಿಮ ಬಳಕೆಯನ್ನು, ಅದರಲ್ಲೂ ಹೆಚ್ಚು ಶ್ರೀಮಂತ ವರ್ಗಗಳ ಬಳಕೆಯನ್ನು, ಮಾತ್ರ ಮೊಟಕುಗೊಳಿಸಬಹುದಲ್ಲದೆ ಲಾಗುವಾಡು ರೂಪದ ಬಳಕೆಯನ್ನು ಮೊಟಕುಗೊಳಿಸಲಾಗದು.

ಪಡಿತರ ಮಾಡಿದಾಗ ಏನಾಗುತ್ತದೆ ಎಂದರೆ, ಪೆಟ್ರೋಲಿಯಂ ಉತ್ಪನ್ನಗಳ ಅಂತಿಮ ಬಳಕೆಯನ್ನು ಪಡಿತರಗೊಳಿಸಿದಾಗ, ಗ್ರಾಹಕರ ಕೈಯಲ್ಲಿ ಖರ್ಚು ಮಾಡದೇ ಉಳಿದ ಹಣವು (ಕೊಳ್ಳುವ ಶಕ್ತಿಯು) ದೇಶೀಯವಾಗಿ ಉತ್ಪಾದಿಸುವ ಇತರ ಸರಕುಗಳನ್ನು ಕೊಳ್ಳಲು ಬಳಕೆಯಾಗುತ್ತದೆ. ಇದು ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ಉತ್ಪಾದನೆ ಹೆಚ್ಚುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಹೀಗಾಗಿ ಮೊದಲನೆಯ ಮಾರ್ಗವು (ಬೆಲೆಗಳನ್ನು ಏರಲು ಬಿಡುವ ಮಾರ್ಗವು) ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗವನ್ನು ಸೃಷ್ಟಿಸುತ್ತದೆ; ಆದರೆ, ಎರಡನೇ ಮಾರ್ಗವು (ಪಡಿತರವು) ಉತ್ಪತ್ತಿಯನ್ನು ಮತ್ತು ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ.

ಆರ್ಥಿಕ ಹಿಂಜರಿತವನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜನ್ನು ಪಡಿತರಗೊಳಿಸಬೇಕಾಗುತ್ತದೆ. ಈ ರೀತಿಯ ಪಡಿತರದಲ್ಲಿ ಅಂತಿಮ ಬಳಕೆಯನ್ನು, ಅದರಲ್ಲೂ ಹೆಚ್ಚು ಶ್ರೀಮಂತ ವರ್ಗಗಳ ಬಳಕೆಯನ್ನು, ಮಾತ್ರ ಮೊಟಕುಗೊಳಿಸಬಹುದು. ಇದು ಉತ್ಪತ್ತಿಯನ್ನು ಮತ್ತು ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಉಂಟುಮಾಡುವ ಸಾಮರ್ಥ್ಯವನ್ನೂ ಹೊಂದಿದೆ.

ಈ ದಾವೆಯು ಮೊದಲ ನೋಟದಲ್ಲಿ ವಿಚಿತ್ರವಾಗಿ ತೋರಬಹುದು. ವಿಶ್ವ ತೈಲ ಉತ್ಪಾದನಾ ಇಳಿಕೆಯ ಕಾರಣದಿಂದ ಇಳಿಕೆಯಾದ ಒಂದು ದೇಶದ ತೈಲ ಆಮದುಗಳು ಆ ದೇಶದ ಉದ್ಯೋಗಗಳ ಮತ್ತು ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಬಹುದು, ಹೇಗೆ? ಉತ್ತರವೆಂದರೆ, ಇಳಿಕೆಯಾದ ತೈಲ ಆಮದುಗಳ ಎಲ್ಲ ಪರಿಣಾಮವೂ ಅಂತಿಮ ಬಳಕೆಯ ಮೇಲೆ ಬೀಳುವುದರಿಂದ ಅದು ಆಮದುಗಳ ಬದಲಿಗೆ  ಬಳಸಬಹುದಾದ ದೇಶೀಯ ಉತ್ಪನ್ನಗಳಿಗೆ ಬೇಡಿಕೆಯಾಗಿ ಪರಿಣಮಿಸುತ್ತದೆ ಎಂದು ನಾವು ಕಲ್ಪಿಸಿಕೊಳ್ಳುತ್ತೇವೆ. ಆಮದು ಇಳಿಕೆಯಾದಾಗ ಅದು ದೇಶೀಯ ಸರಕುಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ. ನಂತರ ಇಡೀ ಅರ್ಥವ್ಯವಸ್ಥೆಯ ಮೇಲೆ ಅದರ ಗುಣಕ ಪರಿಣಾಮವಿರುತ್ತದೆ.

ಸಬ್ಸಿಡಿ ಮತ್ತು ಕೊರತೆ ಹಣಕಾಸು

ತೈಲದ ಜಾಗತಿಕ ಬೆಲೆಗಳು ಏರಿಕೆಯಾದಾಗ, ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆಗಳು ಒಂದು ವೇಳೆ ಬದಲಾಗದೆ ಉಳಿದಿದ್ದರೆ, ದೇಶೀಯ ಪೆಟ್ರೋಲಿಯಂ ಉತ್ಪಾದಕರಿಗೆ ಮತ್ತು ವಿತರಕರಿಗೆ ಸಬ್ಸಿಡಿಯನ್ನು ಒದಗಿಸಬೇಕಾಗುತ್ತದೆ. ಆದರೆ ಈ ಸಬ್ಸಿಡಿಗಾಗಿ ವಿತ್ತೀಯ ಕೊರತೆಯಿಂದ ಹಣಕಾಸು ಒದಗಿಸಿಕೊಂಡಿದ್ದರೂ ಸಹ, ಅದೇ ಒಂದು ಕಳವಳದ ಸಂಗತಿಯಾಗಬಾರದು. ತೈಲದ ಜಾಗತಿಕ ಬೆಲೆ ಶೇ. 20ರಷ್ಟು ಏರಿಕೆಯಾಗಿದೆ ಮತ್ತು ದೇಶದ ಆಮದು ಶೇ. 10ರಷ್ಟು ಇಳಿಕೆಯಾಗಿದೆ ಎಂದು ಭಾವಿಸಿಕೊಳ್ಳೋಣ. ಆಗ ತೈಲ ಆಮದುಗಳ ಬಾಬ್ತು ವಿದೇಶಿ ತೈಲ ಉತ್ಪಾದಕರಿಗೆ ಮಾಡಬೇಕಾಗುವ ಡಾಲರ್ ಪಾವತಿಯು ಶೇ. 8ರಷ್ಟು ಹೆಚ್ಚಾಗುತ್ತದೆ. ಈ ಅಧಿಕ ಮೊತ್ತದ ವಿದೇಶಿ ವಿನಿಮಯವನ್ನು ಹಾಗೋ ಹೀಗೋ ಹೊಂದಿಸಿಕೊಳ್ಳಲೇಬೇಕಾಗುತ್ತದೆ. ಈಗ ಅದನ್ನು ವಿದೇಶಿ ವಿನಿಮಯ ಮೀಸಲುಗಳ ಇಳಿಕೆಯ ಮೂಲಕ ಒದಗಿಸಿಕೊಳ್ಳಲಾಗಿದೆ ಎಂದು ಭಾವಿಸೋಣ. ನಂತರ, ಬೆಲೆಗಳನ್ನು ಏರಿಕೆ ಮಾಡಿದ ಮಾದರಿಯಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದಕರು ಮತ್ತು ವಿತರಕರು ಈ ವಿದೇಶಿ ವಿನಿಮಯವನ್ನು ಖರೀದಿಸಲು ಅಗತ್ಯವಿರುವ ರೂಪಾಯಿ ಸಂಪನ್ಮೂಲಗಳನ್ನು ಗ್ರಾಹಕರಿಂದ ಪಡೆಯುತ್ತಾರೆ; ಬೆಲೆಗಳನ್ನು ಏರಿಕೆ ಮಾಡದೇ ಇದ್ದ ಮಾದರಿಯಲ್ಲಿ, ವಿದೇಶಿ ವಿನಿಮಯವನ್ನು ಖರೀದಿಸಲು ಅಗತ್ಯವಿರುವ ಹಣವನ್ನು ಸರ್ಕಾರ ಒದಗಿಸುತ್ತದೆ.

ಬೆಲೆಗಳನ್ನು ಒಂದು ಸ್ಥಿರ ಮಟ್ಟದಲ್ಲಿ ಕಾಪಾಡಿಕೊಳ್ಳುವುದಕ್ಕಾಗಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದಕರು ಮತ್ತು ವಿತರಕರಿಗೆ ಸಬ್ಸಿಡಿ ನೀಡುವುದಕ್ಕಾಗಿ ಬೇಕಾಗುವ ಹಣವನ್ನು ವಿತ್ತೀಯ ಕೊರತೆಯ ಮೂಲಕ ಒದಗಿಸಿಕೊಂಡಾಗ, ಸರ್ಕಾರವು ಈ ಹಣದ ಮೇಲಿನ ಕೋರಿಕೆಯ ಹಕ್ಕನ್ನು ಕೇಂದ್ರ ಬ್ಯಾಂಕಿನ ಕೈಯಲ್ಲಿ (ವಿದೇಶಿ ವಿನಿಮಯ ಖರೀದಿಗಳ ವಿರುದ್ಧ) ಅಥವಾ ಸಾರ್ವಜನಿಕ ವಲಯದ ಉದ್ಯಮಗಳನ್ನೂ ಒಳಗೊಂಡಂತೆ, ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದಕರ ಮತ್ತು ವಿತರಕ ಕಂಪನಿಗಳ ಕೈಯಲ್ಲಿ ಇರಿಸುತ್ತದೆ. ಬೆಲೆಗಳನ್ನು ಏರಿಕೆ ಮಾಡದೇ ಇದ್ದ ಕಾರಣದಿಂದ ಕೈಗೊಂಡ ಬೃಹತ್‌ ವಿತ್ತೀಯ ಕೊರತೆಯು ಆರ್ಥಿಕ ಹಿಂಜರಿತವನ್ನು ತಡೆಗಟ್ಟುವುದು ಮಾತ್ರವಲ್ಲದೆ ಒಟ್ಟಾರೆ ಬೇಡಿಕೆಯನ್ನು ಆರ್ಥಿಕವಾಗಿ ಪುಷ್ಟೀಕರಿಸುತ್ತದೆ ಮತ್ತು ಒಟ್ಟು ಉದ್ಯೋಗಗಳನ್ನು ಮತ್ತು ಉತ್ಪಾದನೆಯಲ್ಲಿ ಹೆಚ್ಚಳವನ್ನು ವಾಸ್ತವವಾಗಿ ಸಾಧ್ಯಗೊಳಿಸುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಬದಲಾಗದೆ ಇರಿಸುವುದರಿಂದ ಮತ್ತು ಪಡಿತರವು ಶ್ರೀಮಂತರ ಅಂತಿಮ ಬಳಕೆಯ ವಿರುದ್ಧ ನಿರ್ದೇಶಿಸಲ್ಪಟ್ಟಿರುವುದರಿಂದ, ಪಡಿತರ ಪದ್ಧತಿಯನ್ನು ಅನುಸರಿಸುವುದರಿಂದಾಗಿ ಉದ್ಯೋಗಗಳು ಹೆಚ್ಚುವುದು ಮಾತ್ರವಲ್ಲದೆ, ಅಧಿಕವಾಗಿ, ದುಡಿಯುವ ಜನರ ಜೀವನ ಮಟ್ಟವೂ ಕುಸಿಯದು.

ಈ ವಾದದ ಬಗ್ಗೆ ಎರಡು ಪ್ರಶ್ನೆಗಳನ್ನು ಎತ್ತಬಹುದು. ಮೊದಲನೆಯದು, ಪೆಟ್ರೋಲಿಯಂ ಉತ್ಪನ್ನಗಳ ಪಡಿತರದಿಂದಾಗಿ ಖರ್ಚು ಮಾಡದೇ ಉಳಿದ ಹಣವನ್ನು ಇತರ ಸರಕುಗಳ ಮೇಲೆ ಖರ್ಚು ಮಾಡದೇ ಹೋದರೆ (ಅರ್ಥಶಾಸ್ತ್ರಜ್ಞರು ಇದನ್ನು “ಉಳಿತಾಯ” ಎಂದು ಕರೆಯುತ್ತಾರೆ), ಉದ್ಯೋಗಗಳು ಹೆಚ್ಚುವ ಬಗೆಗಿನ ಈ ವಾದವು ಅಸಿಂಧುವಾಗುತ್ತದೆ. ಆದರೆ, ಅಂತಹ ಒಂದು ಸಂದರ್ಭದಲ್ಲಿ ಸರ್ಕಾರವು ದೇಶೀಯ ಪೆಟ್ರೋಲಿಯಂ ಉತ್ಪಾದಕರು ಮತ್ತು ವಿತರಕರಿಗೆ ಸಬ್ಸಿಡಿ ನೀಡಲು ಅಗತ್ಯವಾಗುವುದಕ್ಕಿಂತಲೂ ಹೆಚ್ಚಿನ ಮಟ್ಟದ ವಿತ್ತೀಯ ಕೊರತೆಯನ್ನು ಹೊಂದಬಹುದು ಮತ್ತು ಬೇಡಿಕೆಯನ್ನು ವೃದ್ಧಿಸುವ ಸಲುವಾಗಿ ಮತ್ತು ಆ ಮೂಲಕ ಉದ್ಯೋಗಾವಕಾಶಗಳು ಮತ್ತು ಉತ್ಪಾದನೆಯು ಹೆಚ್ಚುವಂತಾಗಲು ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡಬಹುದು.

ಎರಡನೆಯದು, ಶ್ರೀಮಂತರ ಪೆಟ್ರೋಲಿಯಂ ಉತ್ಪನ್ನಗಳ ಅಂತಿಮ ಬಳಕೆಯನ್ನು ಇಳಿಕೆ ಮಾಡುವ ಉದ್ದೇಶ ಹೊಂದಿದ್ದ ಪಡಿತರವು ಅವುಗಳ ಮೇಲಿನ ದೇಶೀಯ ಬೇಡಿಕೆಯನ್ನು ಇಳಿಕೆಯಾದ ಪೂರೈಕೆಗೆ ಹೊಂದುವಷ್ಟು ಮಟ್ಟದಲ್ಲಿ ತಗ್ಗಿಸದೇ ಹೋಗಬಹುದು. ಆದರೆ, ಮೇಲಿನ ವಾದದ ತರ್ಕವನ್ನು ಅರ್ಥೈಸಿಕೊಂಡ ನಂತರ, ಒಂದು ಸರಿಯಾದ ಚರ್ಚೆಯ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ಮೇಲಿನ ಪಡಿತರವನ್ನು ಶ್ರೀಮಂತ ಗ್ರಾಹಕರಿಂದ ದೊಡ್ಡ ಗ್ರಾಹಕರವರೆಗೆ, ಅಂದರೆ ರಕ್ಷಣಾ ವಲಯದವರೆಗೆ (ರಕ್ಷಣಾ ಇಲಾಖೆಯ ಪೆಟ್ರೋಲಿಯಂ ಉತ್ಪನ್ನಗಳ ಖರೀದಿಯ ಮೇಲೆ 2013ರಲ್ಲಿ ಒಂದು ಪಡಿತರವಿತ್ತು) ವಿಸ್ತರಿಸಬಹುದು ಮತ್ತು ಆ ಮೂಲಕ ಉಳಿತಾಯ ಮಾಡಿದ ಹಣವನ್ನು ಸರ್ಕಾರವು ಬೇಡಿಕೆಯನ್ನು ಮತ್ತು ಉತ್ಪಾದನೆಯನ್ನು ಹೆಚ್ಚಿಸುವಂತಹ ಇತರ ವೆಚ್ಚಗಳತ್ತ ತಿರುಗಿಸಬಹುದು

ನವ-ಉದಾರವಾದ ಬಿಡುವುದಿಲ್ಲ

ಆದರೆ, ಈ ಪರ್ಯಾಯ ನೀತಿಯನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಖಂಡಿತವಾಗಿ ವಿರೋಧಿಸುತ್ತದೆ; ಹಾಗಾಗಿ, ಒಂದು ನವ-ಉದಾರವಾದಿ ಆಳ್ವಿಕೆಯಡಿಯಲ್ಲಿ  ಈ ನೀತಿಯನ್ನು ಅನುಸರಿಸುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಪಡಿತರ, ದುಡಿಯುವ ಜನರ ಜೀವನ ಮಟ್ಟದ ರಕ್ಷಣೆ ಮತ್ತು ವಿತ್ತೀಯ ಕೊರತೆಗಳು, ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅದರ ದಾಸ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಲಕ್ಷಾಂತರ ಬಡವರು ಮತ್ತು ದುಡಿಯುವ ಜನರಿಗೆ ಹಾನಿ ಉಂಟುಮಾಡುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆಯನ್ನು ಮಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಒಂದು ಗುರುತರವಾದ ಹಿಂಜರಿತಕ್ಕೆ ತಳ್ಳುತ್ತಿದೆ. ಇದರಲ್ಲಿ  ಆಶ್ಚರ್ಯವೇನಿಲ್ಲ.

ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅದರ ದಾಸ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಲಕ್ಷಾಂತರ ಬಡವರು ಮತ್ತು ದುಡಿಯುವ ಜನರಿಗೆ ಹಾನಿ ಉಂಟುಮಾಡುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆಯನ್ನು ಮಾಡುತ್ತಿದೆ ಮತ್ತು ಅದೇ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಒಂದು ಗುರುತರವಾದ ಹಿಂಜರಿತಕ್ಕೆ ತಳ್ಳುತ್ತಿದೆ. ಇದರಲ್ಲಿ  ಆಶ್ಚರ್ಯವೇನಿಲ್ಲ.

ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತದ ಈ ಹಾದಿಯನ್ನು ತುಳಿಯುತ್ತಿರುವಲ್ಲಿ, ಭಾರತ ಸರ್ಕಾರ ಮಾತ್ರವಲ್ಲದೆ ಬಂಡವಾಳಶಾಹಿ ಜಗತ್ತಿನ ಇತರ ಸರ್ಕಾರಗಳೂ 1973-74ರ ಮೊದಲ ತೈಲ ಆಘಾತದ ನಂತರ ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಿವೆ. ಆ ಆಘಾತವು ತೈಲ ಬೆಲೆಗಳ ತೀವ್ರ ಏರಿಕೆಗೆ ಕಾರಣವಾಯಿತು. ತೈಲ ಬೆಲೆಗಳ ಈ ಏರಿಕೆಯಿಂದಾಗಿ ಎಲ್ಲ ದೇಶಗಳಲ್ಲೂ ಬಳಕೆಯ ತೈಲೇತರ ವಸ್ತುಗಳ ಮೇಲಿನ ವೆಚ್ಚದಲ್ಲಿ ಕಡಿತ ಕಂಡುಬಂದಿತ್ತು ಮತ್ತು ವೆಚ್ಛಗಳ ಈ ಕಡಿತವು, ಅಗತ್ಯವಿರುವ ತೈಲದ ಬೆಲೆಗಳು ಏರಿಕೆಯಾದ ಕಾರಣದಿಂದ ಉದ್ಭವಿಸಿದ ಬೃಹತ್‌ ವೆಚ್ಚವನ್ನು ಹೊಂದಿಸಿಕೊಳ್ಳುವ ಕಾರಣದಿಂದ ಉಂಟಾಗಿತ್ತು. ಆದ್ದರಿಂದ ಇದು ಬೇಡಿಕೆ-ಸಂಕೋಚನ ಪರಿಣಾಮವನ್ನು ಹೊಂದಿತ್ತು. ಈ ಪರಿಣಾಮವನ್ನು ಎದುರಿಸಲು ಒಂದು ವಿಸ್ತರಣಾ ವಿತ್ತೀಯ ನೀತಿಯನ್ನು ಹೊಂದಿರಬೇಕಾಗುತ್ತದೆ.

ಆದರೆ, ತೈಲ ಬೆಲೆ ಏರಿಕೆಯನ್ನು ಖರೀದಿದಾರರಿಗೆ ವರ್ಗಾಯಿಸಲಾಯಿತು ಮತ್ತು ಅದು ಒಂದು ಬಹು-ಮುಖಿ ಹಣದುಬ್ಬರಕ್ಕೆ ಕಾರಣವಾಯಿತು. ಹಣದುಬ್ಬರ ಉಂಟಾದಾಗಲೆಲ್ಲಾ “ಮಿತವ್ಯಯ” ಕ್ರಮಗಳನ್ನು ಅನುಸರಿಸಬೇಕು ಎಂದು ಹಣಕಾಸು ಬಂಡವಾಳದ ಸಾಂಪ್ರದಾಯಿಕ ವ್ಯವಹಾರಿಕ ತಿಳುವಳಿಕೆ ಹೇಳುತ್ತದೆ (ಆ ಹಣದುಬ್ಬರವು “ವೆಚ್ಚ-ತಳ್ಳು” ರೀತಿಯದ್ದಾಗಿದ್ದು, ಅದನ್ನು “ಮಿತವ್ಯಯ”ವು ಎದುರಿಸುವುದು ಬಹುಶಃ ಸಾಧ್ಯವಾಗದಿದ್ದರೂ ಸಹ). ಆದರೆ, ಸರ್ಕಾರಗಳು ತಮ್ಮ ಖರ್ಚುಗಳ ಕಡಿತದ ವಿರುದ್ಧವಾದ ನೀತಿಯನ್ನು ಅನುಸರಿಸಿದವು. ಅದರ ಪರಿಣಾಮವಾಗಿ 1975ರಲ್ಲಿ ತೈಲ ಆಘಾತದಿಂದ ಉಂಟಾದ ಬೃಹತ್ ಹಣದುಬ್ಬರದ ಜೊತೆಗೆ ಜಾಗತಿಕ ಅರ್ಥವ್ಯವಸ್ಥೆಯು ಒಂದು ತೀವ್ರವಾದ ಆರ್ಥಿಕ ಹಿಂಜರಿತಕ್ಕೆ ತಳ್ಳಲ್ಪಟ್ಟಿತು. ಅದೇ ತಪ್ಪನ್ನು ಇಂದು ಪುನರಾವರ್ತಿಸಲಾಗುತ್ತಿದೆ: ಹಣದುಬ್ಬರ ಮತ್ತು ಹಿಂಜರಿತ ಈ ಎರಡರ ಪರಿಣಾಮಗಳನ್ನು ದುಡಿಯುವ ಜನರು ಅನುಭವಿಸುವ ನೀತಿಯನ್ನು ಎಲ್ಲೆಡೆಯೂ ಅನುಸರಿಸಲಾಗುತ್ತಿದೆ.

ಪೆಟ್ರೋಲಿಯಂ ಉತ್ಪನ್ನಗಳ ಅಂತಿಮ ಬಳಕೆಯ ಪಡಿತರದ ಪರಿಕಲ್ಪನೆಯು ಭಾರತಕ್ಕೆ ಸಂಪೂರ್ಣವಾಗಿ ಪರಕೀಯವಾದದ್ದು ಎಂದೇನಲ್ಲ. ಸಾಮಾನ್ಯ ದಿನಗಳಲ್ಲಿಯೂ ಸಹ, ಬೀಜಿಂಗ್ ಮತ್ತು ಪ್ಯಾರಿಸ್‌ನಂತಹ ನಗರಗಳಲ್ಲಿ ರಸ್ತೆಗಳ ಮೇಲೆ ಕೆಲವು ದಿನಗಳಲ್ಲಿ ಕೆಲವು ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳ ಓಡಾಟದ ಮೇಲೆ ನಿರ್ಬಂಧಗಳಿವೆ ಮತ್ತು ದೆಹಲಿಯಲ್ಲಿಯೇ ಸ್ವಲ್ಪ ಕಾಲದವರೆಗೆ ಸರಿ-ಬೆಸ ಸಂಖ್ಯೆಯ ನಂಬರ್ ಪ್ಲೇಟ್‌ಗಳ ಪ್ರಯೋಗ ನೆಡೆದಿತ್ತು. ಮಾಲಿನ್ಯವನ್ನು ಕಡಿಮೆ ಮಾಡುವುದೇ ಆ ಸಮಯದ ಮೂಲ ಪ್ರೇರಣೆಯಾಗಿತ್ತು. ಹಲವಾರು ವಿನಾಯಿತಿಗಳನ್ನು ನೀಡಿದ್ದರ ಹೊರತಾಗಿಯೂ ಅದು ಮಾಲಿನ್ಯದ ಮಟ್ಟವನ್ನು ಇಳಿಕೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ; ಆದಾಗ್ಯೂ, ಅದು ಇಂಧನ ಬಳಕೆಯಲ್ಲಿ ಸ್ವಲ್ಪ ಉಳಿತಾಯವನ್ನು ಸಾಧಿಸಿತು. ವಿಷಯವೆಂದರೆ, ಅಂತಹ ಪಡಿತರದ ಕ್ರಮಗಳು ಜನಜನಿತವಾಗಿವೆ ಮತ್ತು ಭಾರತದಲ್ಲಿಯೂ ಸಹ ಪ್ರಯತ್ನಿಸಲ್ಪಟ್ಟಿವೆ ಎಂಬುದು. ಪಡಿತರದ ಕ್ರಮಗಳನ್ನು ಮುಂದೊಯ್ಯುವುದರ ಮತ್ತು ಅವುಗಳನ್ನು ಇಡೀ ದೇಶಕ್ಕೆ ಸಾಮಾನ್ಯಗೊಳಿಸುವುದರ ಬದಲು, ಬಿಜೆಪಿ ನೇತೃತ್ವದ ಸರ್ಕಾರದ ತಕ್ಷಣದ ಪ್ರತಿಕ್ರಿಯೆಯೆಂದರೆ, ಖರೀದಿದಾರರಿಗೆ ಬೆಲೆಗಳನ್ನು ಏರಿಸುವುದು. ಇದು ದುಡಿಯುವ ಜನರ ಮೇಲೆ ಗುರುತರವಾದ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

ಇದನ್ನೂ ನೋಡಿ: FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್‌ಗೆ AI ಎಂಟ್ರಿ!

Donate Janashakthi Media

Leave a Reply

Your email address will not be published. Required fields are marked *