– ವರದಿ ಕೃಪೆ: ಸೌವಿಕ್ ಘೋಷ್, ಲೆಫ್ಟ್ ವ್ಯೂಸ್.ಇನ್
ಜಾಧವಪುರ, ಪಶ್ಚಿಮ ಬಂಗಾಳ: ಮಂಗಳವಾರ (ಜೂನ್ 2, 2026) ಸಂಜೆ ಜಾಧವಪುರದ ಬೀದಿ ಬದಿ ವ್ಯಾಪಾರಿ ಸಮುದಾಯಕ್ಕೆ ಬೆಂಬಲವಾಗಿ ಎಡಪಂಥೀಯ ಕಾರ್ಯಕರ್ತರು ಜಮಾಯಿಸಿದ್ದು, ಕೋಲ್ಕತ್ತಾದ ಜಾದವ್ಪುರ ನಿಲ್ದಾಣದಲ್ಲಿ ಯೋಜಿತ ತೆರವು ಕಾರ್ಯಾಚರಣೆಯಿಂದ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ತಾತ್ಕಾಲಿಕವಾಗಿ ಹಿಂದೆ ಸರಿಯುವಂತೆ ಮಾಡಿತು. ಈ ಘಟನೆಯು ಈ ಸಮುದಾಯದ ಪುನರ್ವಸತಿ, ಬೀದಿ ವ್ಯಾಪಾರಿಗಳ ಹಕ್ಕುಗಳು ಮತ್ತು ಪಶ್ಚಿಮ ಬಂಗಾಳದಲ್ಲಿ ದುಡಿಯುವ ಜನರಲ್ಲಿ ನಗರ ತೆರವು ನೀತಿಗಳು ಮತ್ತು ಪ್ರತಿರೋಧ ಚಳುವಳಿಗಳ ನಡುವೆ ಹೆಚ್ಚುತ್ತಿರುವ ಘರ್ಷಣೆಯ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.
ರೈಲ್ವೆ ಅಧಿಕಾರಿಗಳ ನೋಟಿಸ್
ಜಾಧವಪುರ ನಿಲ್ದಾಣ ಮತ್ತು ಸುತ್ತಮುತ್ತ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವವರನ್ನು ಮಂಗಳವಾರ ಹೊರಹಾಕಲಾಗುವುದು ಎಂದು ಭಾರತೀಯ ರೈಲ್ವೆ ಅಧಿಕೃತ ನೋಟೀಸು ನೀಡಿತ್ತು. ದಕ್ಷಿಣ ಕೋಲ್ಕತ್ತಾದ ಈ ಜನನಿಬಿಡ ಸಾರಿಗೆ ಕೇಂದ್ರದಲ್ಲಿ ತಮ್ಮ ದೈನಂದಿನ ಜೀವನೋಪಾಯಕ್ಕೆ ಸಂಪೂರ್ಣವಾಗಿ ತಮ್ಮ ಬೀದಿ ಬದಿ ಅಂಗಡಿಗಳ ಮೇಲೆ ಅವಲಂಬಿತವಾಗಿರುವ ನೂರಾರು ಮಂದಿಗೆ ಯಾವ ಪುನರ್ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂಬುದರ ಕುರಿತು ಈ ನೋಟಿಸ್ ಯಾವುದೇ ಸೂಚನೆಯನ್ನು ನೀಡಿರಲಿಲ್ಲ.
ಈ ಬಡ ವ್ಯಾಪಾರಿ ಸಮುದಾಯಕ್ಕೆ, ಈ ಸೂಚನೆಯು ಕೇವಲ ಆಡಳಿತಾತ್ಮಕ ಅನಾನುಕೂಲತೆಯಾಗಿರಲಿಲ್ಲ. ಇದು ಅವರ ಅಸ್ತಿತ್ವಕ್ಕೇ ಹಾಕಿದ್ದ ಬೆದರಿಕೆಯಾಗಿತ್ತು. ಈ ಮಾರಾಟಗಾರರಲ್ಲಿ ಅನೇಕರು ವರ್ಷಾನುಗಟ್ಟಲೆ ಈ ನಿಲ್ದಾಣದಲ್ಲಿ ತಮ್ಮ ಜೀವನಾಧಾರವನ್ನು ಕಂಡುಕೊಂಡವರು.
ಇದನ್ನೂ ಓದಿ: ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ: ಕುವೈತ್ನಲ್ಲಿ ವಿಮಾನ ಸಂಚಾರ ಸ್ಥಗಿತ; ಒಬ್ಬ ಮೃತ
ಏಕೆಂದರೆ ಇದು ಪ್ರತಿದಿನ ಸಾವಿರಾರು ಜನರು ಹಾದುಹೋಗುವ ನಗರದ ಒಂದು ಅತ್ಯಂತ ಜನನಿಬಿಡ ಉಪನಗರ ರೈಲು ಜಂಕ್ಷನ್. ಪುನರ್ವಸತಿ ಅಥವಾ ಪರಿಹಾರದ ಸ್ಪಷ್ಟ ಯೋಜನೆ ಇಲ್ಲದೆ, ಹಠಾತ್ ತೆರವಿನ ನೋಟೀಸ್ ಸಮುದಾಯವನ್ನು ಭಯಭೀತಗೊಳಿಸಿತು.
ಜಾಧವಪುರ ನಿಲ್ದಾಣದಲ್ಲಿ ಎಡಪಕ್ಷಗಳ ಪ್ರತಿಭಟನೆ
ನೋಟೀಸಿನ ಸುದ್ದಿ ತಿಳಿಯುತ್ತಿದ್ದಂತೆಯೇ ಎಡ ಪಕ್ಷಗಳು ಪ್ರತಿರೋಧಕ್ಕೆ ಸಜ್ಜುಗೊಂಡವು. ಸಂಜೆಯ ಹೊತ್ತಿಗೆ, ಎಡ ಕಾರ್ಯಕರ್ತರು, ಜಾಧವಪುರ ನಿಲ್ದಾಣದಲ್ಲಿ ಜಮಾಯಿಸಿದರು. ತೆರವು ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕೆಂದು ಮತ್ತು ಯಾವುದೇ ಸ್ಥಳಾಂತರವನ್ನು ಪರಿಗಣಿಸುವ ಮೊದಲು ವ್ಯಾಪಾರಿಗಳಿಗೆ ಸರಿಯಾದ ಪುನರ್ವಸತಿಯನ್ನು ಖಾತರಿಪಡಿಸಬೇಕೆಂದು ಒತ್ತಾಯಿಸಿ ಕೆಂಪು ಧ್ವಜಗಳನ್ನು ಮೇಲಕ್ಕೆತ್ತಿ ಘೋಷಣೆಗಳನ್ನು ಮೊಳಗಿಸುತ್ತಾ ನಿಲ್ದಾಣದ ಆವರಣದ ಮೂಲಕ ಮೆರವಣಿಗೆ ನಡೆಸಿದರು.

ಇದು ಕೇವಲ ಸಾಂಕೇತಿಕ ಮೆರವಣಿಗೆಯಾಗಿರಲಿಲ್ಲ. ಬುಲ್ಡೋಜರ್ಗಳನ್ನು ನಿಲ್ದಾಣದ ಆವರಣದೊಳಗೆ ಸಾಗಿಸುವ ಯಾವುದೇ ಪ್ರಯತ್ನವನ್ನು ಸಂಘಟಿತ ಮತ್ತು ದೃಢ ಪ್ರತಿರೋಧದಿಂದ ಎದುರಿಸಲಾಗುವುದು ಎಂದು ಅಧಿಕಾರಿಗಳಿಗೆ ಕೊಟ್ಟ ನೋಟೀಸ್ ಆಗಿತ್ತು. ಈ ರಾತ್ರಿ ಎಂತಹ ಆಪತ್ತು ತರಲಿದೆ ಎಂದು ತಿಳಿಯದೆ ಅನೇಕ ವ್ಯಾಪಾರಿಗಳು ಸಂಜೆಯೆಲ್ಲಾ ತಮ್ಮ ಅಂಗಡಿಗಳಲ್ಲಿ ಆತಂಕದಿಂದ ಕುಳಿತಿದ್ದರು. ಸಿಪಿಐ(ಎಂ) ಮತ್ತು ಸಿಪಿಐ(ಎಂಎಲ್) ಲಿಬರೇಶನ್ ಕಾರ್ಯಕರ್ತರು ಪ್ರತಿಭಟನೆಯ ಉದ್ದಕ್ಕೂ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರು.
ಕತ್ತಲೆಯ ಮರೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆಯ ಈ ಮಾದರಿ
ಜಾಧವಪುರದಲ್ಲಿ ನಡೆದ ಘಟನೆಗಳು ಪ್ರತ್ಯೇಕವಾಗಿ ಸಂಭವಿಸಲಿಲ್ಲ. ಅವು ಪಶ್ಚಿಮ ಬಂಗಾಳದಾದ್ಯಂತ ನಿಲ್ದಾಣಗಳಲ್ಲಿ , ವಿಶೇಷವಾಗಿ ಬಿಜೆಪಿಯ ಡಬಲ್ ಇಂಜಿನ್ ಸರಕಾರ ಬಂದ ನಂತರ, ನಡೆಸುತ್ತಿರುವ ಬಡ ವ್ಯಾಪಾರಿಗಳ ʼತೆರವು ಕಾರ್ಯಾಚರಣೆʼಯ ವ್ಯಾಪಕ ಅಲೆಯ ಭಾಗವಾಗಿದೆ.ಡಂಡಂ ನಿಲ್ದಾಣದಲ್ಲಿ, ಇದು ವಿಶೇಷ ಗಮನ ಸೆಳೆಯಿತು. ಬುಲ್ಡೋಜರ್ಗಳು ಕತ್ತಲೆಯ ಮರೆಯಲ್ಲಿ ಚಲಿಸಿದವು, ಎಚ್ಚರಿಕೆ ಅಥವಾ ಸರಿಯಾದ ಪ್ರಕ್ರಿಯೆಯಿಲ್ಲದೆ ಅಂಗಡಿಗಳನ್ನು ಕೆಡವಿದವು. ವರ್ಷಗಳಿಂದ ಕಟ್ಟಿಕೊಂಡಿದ್ದ ಜೀವನೋಪಾಯಗಳು ರಾತ್ರೋರಾತ್ರಿ ನೆಲಸಮಗೊಂಡವು, ನೂರಾರು ಕುಟುಂಬಗಳನ್ನು ಆದಾಯವಿಲ್ಲದ, ನೆಲೆಯಿಲ್ಲದ ನಿರ್ಗತಿಕರನ್ನಾಗಿ ಮಾಡಿ ಬಿಟ್ಟವು.
ಎಡ ಪಕ್ಷಗಳ ನಾಯಕರು ಈ ತೆರವುಗಳನ್ನು ದುಡಿಯುವ ಬಡವರ ಮೇಲಿನ ದಾಳಿ, ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳಿಲ್ಲದ ದುರ್ಬಲ ಸಮುದಾಯಗಳ ಉಳಿವಿಗಿಂತ ಅವರು ಮೂಲಸೌಕರ್ಯ ಮತ್ತು ನಗರ ಸೌಂದರ್ಯಕ್ಕೆ ಆದ್ಯತೆ ನೀಡುವ ಅಮಾನವೀಯ ನಿಲುವಿನ ದ್ಯೋತಕ ಎಂದು ಜಾಧವಪುರದಲ್ಲಿ, ನಿಲ್ದಾಣದ ಪ್ರದೇಶಕ್ಕೆ ಬುಲ್ಡೋಜರ್ ಪ್ರವೇಶಿಸುವುದನ್ನು ನೋಡಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಪ್ರಭುತ್ವ ಪ್ರಾಯೋಜಿತ ಧ್ವಂಸದ ಒಂದು ರೀತಿಯ ಸಂಕೇತವಾಗಿ ಮಾರ್ಪಟ್ಟಿರುವ ಈ ದೃಶ್ಯವು ತಕ್ಷಣವೇ ಆಕ್ರೋಶದ ಮನಸ್ಥಿತಿಯನ್ನು ಸಂಘರ್ಷಕ್ಕೆ ಪರಿವರ್ತಿಸಿತು. ಧ್ವನಿಗಳು ಏರಿದವು ಮತ್ತು ಜನಸಮೂಹವು ಮುನ್ನುಗ್ಗಿತು.
ಪ್ರತಿಭಟನಾಕಾರರು ಬುಲ್ಡೋಜರ್ ಮುಂದೆ ಮಾನವ ಗೋಡೆಯನ್ನು ನಿರ್ಮಿಸಿದರು, ಅದು ಮುಂದೆ ಹೋಗದಂತೆ ದಾರಿ ನಿರಾಕರಿಸಿದರು. ಇದನ್ನು ಕಂಡು ಧೈರ್ಯ ತುಂಬಿಕೊಂಡ ಬಡ ಬೀದಿ ಬದಿ ವ್ಯಾಪಾರಿಗಳು ಅವರಿಗೆ ಹೆಗಲುಕೊಟ್ಟು ನಿಂತರು. ಸ್ಥಳದಲ್ಲಿದ್ದ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ತಾವು ಈಗ ಒಂದು ದೃಢನಿಶ್ಚಯದ ಮತ್ತು ದೊಡ್ಡದಾಗುತ್ತಲೇ ಇದ್ದ ಜನಸಮೂಹಕ್ಕೆ ಮುಖಾಮುಖಿಯಾಗಿರುವುದನ್ನು ಕಂಡರು. ಇಂತಹ ಪ್ರತಿರೋಧವನ್ನು ಅವರು ನಿರೀಕ್ಷಿಸಿರಲಿಲ್ಲ.ಗಂಟೆಗಳ ಕಾಲ ಉದ್ವಿಗ್ನ ಪ್ರತಿಭಟನೆಯ ವಾತಾವರಣದಲ್ಲಿ, ಮಾತುಕತೆಗಳು ನಡೆದವು. ಮಧ್ಯರಾತ್ರಿ ದಾಟುತ್ತಿದ್ದಂತೆ, ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ತಾತ್ಕಾಲಿಕವಾಗಿ ಹಿಂದಕ್ಕೆ ಸರಿಯಲು ನಿರ್ಧರಿಸಿದರು. ಬುಲ್ಡೋಜರ್ ಹಿಮ್ಮೆಟ್ಟಿತು, ಬೀದಿ ಬದಿ ವ್ಯಾಪಾರಿಗಳಿಗೆ ತಕ್ಷಣದ ಬೆದರಿಕೆ ತಪ್ಪಿತು.
ಎಸ್ಎಫ್ಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೃಜನ್ ಭಟ್ಟಾಚಾರ್ಯ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ ಮತ್ತು ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆಗಳಿಂದ ಹೊರಹೊಮ್ಮಿದ ಭರವಸೆಗಳು ಮತ್ತು ತಿಳುವಳಿಕೆಗಳನ್ನು ವಿವರಿಸಿದರು.
ಟೊಳ್ಳಾದ ಬಿಜೆಪಿ ಶಾಸಕರ ಭರವಸೆ
ಕಳೆದ ಭಾನುವಾರ, ಸ್ಥಳೀಯ ಬಿಜೆಪಿ ಶಾಸಕಿ ಶರ್ಬೋರಿ ಮುಖರ್ಜಿ, ಯಾವುದೇ ತೆರವು ಕಾರ್ಯ ಕೈಗೊಳ್ಳುವ ಮೊದಲು ಬೀದಿ ಬದಿ ವ್ಯಾಪಾರಿಗಳಿಗೆ ಸರಿಯಾಗಿ ಪುನರ್ವಸತಿ ಕಲ್ಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಆದರೆ ಮಂಗಳವಾರ ರಾತ್ರಿ, ಬುಲ್ಡೋಜರ್ ಬಂದಾಗ, ಅವರು ಎಲ್ಲಿಯೂ ಕಾಣಿಸಲಿಲ್ಲ. ಬಿಜೆಪಿ ಅಥವಾ ಟಿಎಂಸಿ ಪ್ರತಿನಿಧಿಗಳಾರೂ ಇರಲಿಲ್ಲ. ಶಾಸಕರ ಮಾತು ಮತ್ತು ಕೃತಿಯ ನಡುವಿನ ಅಂತರವು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಎಡಪಕ್ಷಗಳು ಪ್ರತಿಭಟನೆಗೆ ಆಗಮಿಸಿದ್ದಲ್ಲದೆ, ಪ್ರತಿಭಟನೆಯ ನೇತೃತ್ವ ವಹಿಸಿ ಬೀದಿ ಬದಿ ವ್ಯಾಪಾರಿಗಳಿಗೆ ತಾತ್ಕಾಲಿಕ ಪರಿಹಾರವನ್ನು ಕೂಡ ಗಳಿಸಿ ಕೊಟ್ಟರು. ಇದರಲ್ಲಿ ಭಾಗವಹಿಸಿದ ಅನೇಕರಿಗೆ, ಇದು ಸಂಘಟನೆ, ಸೌಹಾರ್ದ ಮತ್ತು ಬುಲ್ಡೋಜರ್ ಹಾಗೂ ತೆರವನ್ನು ಎದುರಿಸುತ್ತಿರುವ ಬಡ ಜನರ ನಡುವೆ ನಿಲ್ಲುವ ಇಚ್ಛಾಶಕ್ತಿಯ ಮಹತ್ವದ ಕುರಿತ ಒಂದು ಪಾಟವೂ ಆಗಿತ್ತು.
ಹೋರಾಟ ಮುಂದುವರೆಯುತ್ತದೆ
ಬುಲ್ಡೋಜರು ಹಿಂದೆ ಸರಿದ ನಂತರವೂ ಕಾರ್ಯಕರ್ತರು ಎಚ್ಚರಿಕೆಯ ಭಾಗವಾಗಿ ಜಾಧವಪುರ ನಿಲ್ದಾಣದಲ್ಲಿಯೇ ಕಾವಲಾಗಿ ನಿಂತರು. ಪ್ರತಿರೋಧದ ಮುಂದಿನ ಹಂತಗಳನ್ನು ರೂಪಿಸಲು ಬೀದಿ ಬದಿ ವ್ಯಾಪಾರಿಗಳೊಂದಿಗೆ ಔಪಚಾರಿಕ ಚರ್ಚೆಗಳನ್ನು ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು.
ನಿಜ, ಜಾಧವಪುರದಲ್ಲಿ ರಾತ್ರೋರಾತ್ರಿ ದೊರೆತ ಗೆಲುವು ಬೆದರಿಕೆಯ ಒಂದು ತಾತ್ಕಾಲಿಕ ನಿಲುಗಡೆ ಮಾತ್ರ, ಸಮಸ್ಯೆಗೆ ಪರಿಹಾರವಲ್ಲ. ರೈಲ್ವೆ ಅಧಿಕಾರಿಗಳು ತೆರವು ಯೋಜನೆಯನ್ನು ಹಿಂತೆಗೆದುಕೊಂಡಿಲ್ಲ; ಅದನ್ನು ಮುಂದೂಡಿದ್ದಾರಷ್ಟೇ. ಈ ಬಡ ವ್ಯಾಪಾರಿಗಳು ಕಾನೂನು ಮತ್ತು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಅವರ ಭವಿಷ್ಯ ಅನಿಶ್ಚಿತವಾಗಿದೆ. ಆದರೆ ಜೂನ್ ೨ರ ರಾತ್ರಿ ಒಂದು ಮುಖ್ಯ ಸಂಗತಿಯನ್ನು, ಸಂಘಟಿತ, ಸಂಯೋಜಿತ ಮತ್ತು ಸೌಹಾರ್ದ-ಆಧಾರಿತ ಪ್ರತಿರೋಧವನ್ನು ಸರಿಯಾದ ಸಮಯದಲ್ಲಿ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಸಜ್ಜುಗೊಳಿಸಿದರೆ, ಬುಲ್ಡೋಜರನ್ನು ಸಹ ತಡೆದು ನಿಲ್ಲಿಸಬಹುದು ಎಂಬುದನ್ನು ಪ್ರದರ್ಶಿಸಿತು.
ಕೆಂಬಾವುಟಗಳು ಎದ್ದು ನಿಂತಾಗ ಬುಲ್ಡೋಜರ್ ಹಿಮ್ಮೆಟ್ಟಿತು. ದಕ್ಷಿಣ ಕೋಲ್ಕತ್ತಾದ ದುಡಿಯುವ ಜನರ ಒಂದು ಸಮುದಾಯ, ಬೆಳಿಗ್ಗೆ ತಮ್ಮ ಅಂಗಡಿಗಳು ಇನ್ನೂ ಇರುವುದನ್ನು ಕಂಡಿತು.
ಇದನ್ನೂ ನೋಡಿ: ಬೆಂಗಳೂರಿನ ಸರಕಾರಿ ಶಾಲೆಗಳ ದುಸ್ಥಿತಿಗೆ ಯಾರು ಹೊಣೆ? – ಜಯರತ್ನ Janashakthi Media
