ಬೆಂಗಳೂರು: ದ್ವೇಷ ಭಾಷಣ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ವಿಚಾರಣೆ ವೇಳೆ, ಇನ್ನು ಮುಂದೆ ಯಾವುದೇ ರೀತಿಯ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿರುವ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಗಳವಾರ ಮಹತ್ವದ ಬೆಳವಣಿಗೆ ನಡೆಯಿತು. ಪ್ರಕರಣದ ವಿಚಾರಣೆ ವೇಳೆ ದೂರುದಾರರಾದ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಅವರು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾಕರ್ ಭಟ್ ಪರ ವಕೀಲರು, ತಮ್ಮ ಕಕ್ಷಿದಾರರು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದ್ವೇಷಪೂರಿತ ಅಥವಾ ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ ಎಂದು ವರದಿಯಾಗಿದೆ.
ಪ್ರಭಾಕರ್ ಭಟ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ಪ್ರಕರಣಗಳಲ್ಲಿ ಅವರ ಭಾಷಣಗಳು ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಸಾಧ್ಯತೆ ಇದೆ ಎಂಬ ಆರೋಪಗಳೂ ಕೇಳಿಬಂದಿವೆ. ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ “ಮುಸ್ಲಿಂ ಮಹಿಳೆಯರು ನಾಯಿ ಮರಿಯಂತೆ ಮಕ್ಕಳನ್ನು ಹೆರುತ್ತಾರೆ” ಎಂಬ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹೇಳಿಕೆ ವಿರುದ್ಧ ಈಶ್ವರಿ ದೂರು ದಾಖಿಲಿಸಿದ್ದರು.
ಈ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಮಧ್ಯಂತರ ರಿಲೀಫ್ ಮುಂದುವರಿಯಬೇಕೇ ಅಥವಾ ತಡೆಯಾಜ್ಞೆ ತೆರವುಗೊಳ್ಳಬೇಕೇ ಎಂಬುದರ ಕುರಿತು ಹೈಕೋರ್ಟ್ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
