ರಾಜ್ಯಸಭೆ-ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: ಜೂನ್ 18ಕ್ಕೆ ಮತದಾನ, ಅದೇ ದಿನ ಫಲಿತಾಂಶ!

ಬೆಂಗಳೂರು: ವಿಧಾನಸಭೆ ಸಚಿವಾಲಯವು ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್‌‌ನ ಏಳು ಸ್ಥಾನಗಳಿಗೆ ನಡೆಸುವ ದ್ವೈವಾರ್ಷಿಕ ಚುನಾವಣೆ ಸಂಬಂಧ ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ‌ಹಾಗೂ ವಿಧಾನ ಪರಿಷತ್‌‌ಗೆ ಚುನಾಯಿತರಾಗಿರುವ ಸದಸ್ಯರು ಇದೇ ತಿಂಗಳು ನಿವೃತ್ತರಾಗಲಿದ್ದಾರೆ. ಹೀಗಾಗಿ ಚುನಾವಣೆ ನಡೆಯಲಿದ್ದು, ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ.

ರಾಜ್ಯಸಭೆ ಹಾಗೂ ಪರಿಷತ್‌‌ ಸ್ಥಾನಗಳಿಗೆ 2026ರ ಜೂನ್‌ 18ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೇ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಜೂನ್‌ 11ರವರೆಗೆ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ: ಗೋದಾವರಿ ನದಿ ಮಾಲಿನ್ಯ: ಆರೋಗ್ಯ ಅಪಾಯಗಳ ಎಚ್ಚರಿಕೆ; ಡಿಸಿಎಂ ಪವನ್ ಕಲ್ಯಾಣ್ ಕಳವಳ

ಕರ್ನಾಟಕ ವಿಧಾನ ಪರಿಷತ್‌‌ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಚುನಾವಣಾಧಿಕಾರಿಯಾಗಿ ಮತ್ತು ವಿಧಾನಸಭೆಯ ನಿರ್ದೇಶಕ ಬಿ.ಎಸ್‌. ಮಹಾಲಿಂಗೇಶ್‌ ಸಹಾಯಕ ಚುನಾವಣಾಧಿಕಾರಿಯಾಗಿ ಎರಡೂ ಚುನಾವಣೆ ವೇಳೆ ಕರ್ತವ್ಯ ನಿರ್ವಹಿಸಲಿದ್ದಾರೆ.

ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ, ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಕೆ. ನಾರಾಯಣ ಅವರ ಅವಧಿ ಜೂನ್ 25 ರಂದು ಕೊನೆಗೊಳ್ಳಲಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿರುವ ಗೋವಿಂದ ರಾಜು (ಜೆಡಿಎಸ್‌), ನಸೀರ್ ಅಹಮದ್ (ಕಾಂಗ್ರೆಸ್‌), ಎನ್. ನಾಗರಾಜು/ಎಂ.ಟಿ.ಬಿ ನಾಗರಾಜು (ಬಿಜೆಪಿ), ಪ್ರತಾಪ ಸಿಂಹ ನಾಯಕ್ ಕೆ (ಬಿಜೆಪಿ), ತಿಪ್ಪಣ್ಣಪ್ಪ ಕಮಕನೂರ (ಕಾಂಗ್ರೆಸ್‌), ಸುನಿಲ್ ವಲ್ಯಾಪುರೆ (ಬಿಜೆಪಿ) ಹಾಗೂ ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್‌) ಅವರ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.

ವೇಳಾಪಟ್ಟಿ

1. ಅಧಿಸೂಚನೆ: ಸೋಮವಾರ, 2026ರ ಜೂನ್‌ 1

2. ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಸೋಮವಾರ, 2026ರ ಜೂನ್‌ 8

3. ನಾಮಪತ್ರ ಪರಿಶೀಲನೆ: ಮಂಗಳವಾರ, 2026ರ ಜೂನ್‌ 9

4. ನಾಮಪತ್ರ ಹಿಂಪಡೆಯಲು ಕೊನೇ ದಿನ: ಗುರುವಾರ, 2026ರ ಜೂನ್‌ 11

5. ಮತದಾನ: ಗುರುವಾರ, 2026ರ ಜೂನ್‌ 18

6. ಫಲಿತಾಂಶ: ಗುರುವಾರ, 2026ರ ಜೂನ್‌ 18

ಇದನ್ನೂ ನೋಡಿ: ಪಿಣರಾಯಿ ವಿಜಯನ್‌ ಮೇಲಿನ ಇ.ಡಿ. ದಾಳಿ: ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ Janashakthi Media

Donate Janashakthi Media

Leave a Reply

Your email address will not be published. Required fields are marked *