ಮಂಗಳೂರು: ವೈಜ್ಞಾನಿಕ ಕನಿಷ್ಠ ಕೂಲಿ ಜಾರಿ, ಕಾರ್ಮಿಕ ಕಾನೂನುಗಳ ರಕ್ಷಣೆ ಹಾಗೂ ರಾಜ್ಯ ಸರ್ಕಾರ ಪರಿಷ್ಕರಿಸಿರುವ ಕನಿಷ್ಠ ಕೂಲಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಸಿಐಟಿಯು (ಸಿಐಟಿಯು) ನೇತೃತ್ವದಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮ ನಡೆಯಿತು. ವೈಜ್ಞಾನಿಕ
ರಾಜ್ಯಾದ್ಯಂತ ಸಿಐಟಿಯು ನೀಡಿದ್ದ ಕರೆಯಂತೆ ನಡೆದ ಈ ಪ್ರತಿಭಟನೆಯಲ್ಲಿ ವಿವಿಧ ಕ್ಷೇತ್ರಗಳ 300ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದರು. ನಾಗುರಿ ಜಂಕ್ಷನ್ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್, ರಾಜ್ಯ ಸರ್ಕಾರ ಇತ್ತೀಚೆಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿದ್ದರೂ, ವಿವಿಧ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ನಿಗದಿಪಡಿಸುವ ಬದಲು ಬಹುತೇಕ ಕ್ಷೇತ್ರಗಳಿಗೆ ಏಕರೂಪದ ವೇತನ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಬೆಲೆ ಏರಿಕೆ ಹಾಗೂ ಜೀವನ ನಿರ್ವಹಣಾ ವೆಚ್ಚವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ನ ಐತಿಹಾಸಿಕ ರೆಪ್ಟಕೋಸ್ ತೀರ್ಪಿನ ಮಾನದಂಡಗಳ ಆಧಾರದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ನ್ಯಾಯಾಲಯ ಸೂಚಿಸಿದ್ದರೂ ಸರ್ಕಾರ ಅದನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರ ಸರ್ಕಾರ ಹಲವು ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿದರು. ಕಾರ್ಮಿಕರ ಹೋರಾಟಗಳಿಂದ ದೊರೆತ ಹಕ್ಕುಗಳನ್ನು ಸಂರಕ್ಷಿಸಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಹೇಳಿದರು. ವೈಜ್ಞಾನಿಕ
ಇದನ್ನೂ ಓದಿ : ಕಾರ್ಮಿಕರಿಗೆ ಮಾಸಿಕ ₹36 ಸಾವಿರ ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ
ಕಾರ್ಮಿಕ ಚಳವಳಿಯ ಹಿರಿಯ ಮುಖಂಡ ವಸಂತ ಆಚಾರ್ಯ ಮಾತನಾಡಿ, ರಾಜ್ಯ ಸರ್ಕಾರದ ಕನಿಷ್ಠ ಕೂಲಿ ಅಧಿಸೂಚನೆಯಿಂದ ಬೀಡಿ, ಅಗರಬತ್ತಿ, ಗಾರ್ಮೆಂಟ್ಸ್ ಸೇರಿದಂತೆ 19 ಉದ್ದಿಮೆಗಳನ್ನು ಹೊರಗಿಡಲಾಗಿದೆ ಎಂದು ಟೀಕಿಸಿದರು. ಜೊತೆಗೆ ಅಂಗನವಾಡಿ, ಆಶಾ, ಬಿಸಿಯೂಟ ನೌಕರರು ಸೇರಿದಂತೆ ಸ್ಕೀಮ್ ಕಾರ್ಮಿಕರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಮಹಿಳಾ ನಾಯಕಿ ಜಯಂತಿ ಶೆಟ್ಟಿ ಹಾಗೂ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ನೀತಿಗಳನ್ನು ಖಂಡಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸದಂತೆ ವಿಧಿಸಲಾಗಿರುವ ನಿರ್ಬಂಧವನ್ನೂ ವಿರೋಧಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಕೆಲ ಪ್ರಮುಖ ನಾಯಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು. ನಂತರ ಸಿಐಟಿಯು ನಿಯೋಗವೊಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಪ್ರತಿಭಟನೆಗೆ ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ಅಭಿಷೇಕ್ ಬೆಳ್ತಂಗಡಿ ಹಾಗೂ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ವಿನುಷ್ ರಮಣ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಬೆಂಬಲ ಸೂಚಿಸಿದರು.
ಸಿಐಟಿಯು ಜಿಲ್ಲಾ ಮುಖಂಡರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ರೋಹಿದಾಸ್, ರವಿಚಂದ್ರ ಕೊಂಚಾಡಿ, ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ರಾಧಾ ಮೂಡುಬಿದಿರೆ, ಈಶ್ವರಿ ಪದ್ಮುಂಜ, ಜಯಂತ ನಾಯಕ್ ಸೇರಿದಂತೆ ಅನೇಕ ಕಾರ್ಮಿಕ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವೈಜ್ಞಾನಿಕ
ಇದನ್ನೂ ನೋಡಿ : ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ಸಿಐಟಿಯು ಪ್ರತಿಕ್ರಿಯೆ ಏನು? Janashakthi Media
