ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನ್ (ಗ್ಲಾಸ್ ಹೌಸ್)ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲರು ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಜೂನ್
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಹೊಸ ನಾಯಕನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಇದೀಗ ಅಧಿಕೃತ ರೂಪ ಸಿಗುವಂತಾಗಿದೆ.
ಸರ್ಕಾರದ ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಮೊದಲ ಹಂತದಲ್ಲಿ 8 ರಿಂದ 10 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಉಳಿದ ಸಚಿವ ಸಂಪುಟ ವಿಸ್ತರಣೆಯನ್ನು ನಂತರದ ಹಂತದಲ್ಲಿ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಆಂಧ್ರ ಕಾಂಗ್ರೆಸ್ ಅಧ್ಯಕ್ಷೆಗೆ ಕರ್ನಾಟಕದಿಂದ ರಾಜ್ಯಸಭೆ ಟಿಕೆಟ್? ಕಾಂಗ್ರೆಸ್‌ನಲ್ಲಿ ಚರ್ಚೆ ಜೋರು
ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ಹಿರಿಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಸಮಾರಂಭವನ್ನು ಸರಳವಾಗಿ ನಡೆಸುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ.
ರಾಜ್ಯದಲ್ಲಿ 17 ವರ್ಷಗಳ ಬಳಿಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮುಖ್ಯಮಂತ್ರಿ ಬದಲಾವಣೆ ನಡೆಯುತ್ತಿರುವುದು ವಿಶೇಷವಾಗಿದೆ. 2023ರ ವಿಧಾನಸಭೆ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೇ ನಾಯಕತ್ವ ಹಂಚಿಕೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದು, ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಮೂಲಕ ಆ ಅಧ್ಯಾಯಕ್ಕೆ ಅಂತಿಮ ರೂಪ ಸಿಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಲ ವರದಿಗಳ ಪ್ರಕಾರ, ಸಾಮಾಜಿಕ ಹಾಗೂ ಪ್ರಾದೇಶಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಇಬ್ಬರು ಉಪಮುಖ್ಯಮಂತ್ರಿಗಳ ನೇಮಕಾತಿ ಕುರಿತೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಇದನ್ನೂ ನೋಡಿ : “ಮುಗಿದ ಅಧ್ಯಾಯ… ಹೊಸ ಆರಂಭವೇ?” | ಕೆ.ಎಸ್. ವಿಮಲಾ |ನೇರ ಪ್ರಸಾರ
