ಬೆಂಗಳೂರು : ರಾಜ್ಯದಲ್ಲಿ ಕನಿಷ್ಠ ವೇತನ ಅಧಿಸೂಚನೆ ಜಾರಿಗೆ ಒತ್ತಾಯಿಸಿ ಎಐಸಿಸಿಟಿಯು ಕರ್ನಾಟಕ ರಾಜ್ಯ ಸಮಿತಿ ಬುಧವಾರ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಬೆಂಗಳೂರು, ಕೊಪ್ಪಳ, ರಾಯಚೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಘಟನೆಯ ಮುಖಂಡರು ಕಾರ್ಮಿಕ ಇಲಾಖೆಗೆ ಮನವಿ ಪತ್ರ ನೀಡಿದರು. ಕನಿಷ್ಠ
ಮೇ 22, 2026ರಂದು ಹೊರಡಿಸಲಾದ ಕನಿಷ್ಠ ವೇತನ ಅಧಿಸೂಚನೆಯನ್ನು ಸ್ವಾಗತಿಸಿದ ಸಂಘಟನೆ, ವೇತನ ಪರಿಷ್ಕರಣೆ ಕಾನೂನುಬದ್ಧವಾಗಿ 2022ರಲ್ಲೇ ಆಗಬೇಕಾಗಿತ್ತು ಎಂದು ಹೇಳಿದೆ. ಆದ್ದರಿಂದ ಪರಿಷ್ಕೃತ ವೇತನವನ್ನು ಹಿಂದಿನ ದಿನಾಂಕದಿಂದಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.
ಉಡುಪು, ಬೀಡಿ ಹಾಗೂ ತೋಟಗಾರಿಕಾ ಕ್ಷೇತ್ರಗಳನ್ನು ಪ್ರತ್ಯೇಕ ಸಮಿತಿ ಪ್ರಕ್ರಿಯೆಗೆ ಒಳಪಡಿಸಿರುವುದನ್ನು ಸಂಘಟನೆ ತೀವ್ರವಾಗಿ ಟೀಕಿಸಿದೆ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬಹುಪಾಲು ಮಹಿಳೆಯರೇ ಇದ್ದು, ಇತಿಹಾಸಾತ್ಮಕವಾಗಿಯೇ ಇತರೆ ಕೈಗಾರಿಕೆಗಳಿಗಿಂತ ಕಡಿಮೆ ಕನಿಷ್ಠ ವೇತನ ಪಡೆಯುತ್ತಿದ್ದಾರೆ ಎಂದು ಎಐಸಿಸಿಟಿಯು ಆರೋಪಿಸಿದೆ. ಕನಿಷ್ಠ
ಇದನ್ನೂ ಓದಿ : ಸಿಎಂ ಬದಲಾವಣೆ ಊಹಾಪೋಹಕ್ಕೆ ತೆರೆ?: ಸಿದ್ದರಾಮಯ್ಯ – ಹೈಕಮಾಂಡ್ ಸಭೆ ಬಳಿಕ ಸ್ಪಷ್ಟನೆ
ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಗೌರವಯುತ ಬದುಕು ಖಾತ್ರಿಪಡಿಸಲು ತಿಂಗಳಿಗೆ ₹42,000 ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಂಘಟನೆ ಮತ್ತೊಮ್ಮೆ ಒತ್ತಾಯಿಸಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಬಾಡಿಗೆ ಹೆಚ್ಚಳ ಹಾಗೂ ಶಿಕ್ಷಣ-ಆರೋಗ್ಯ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿರುವುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಕನಿಷ್ಠ ವೇತನ ಉಲ್ಲಂಘನೆ ವ್ಯಾಪಕವಾಗಿರುವ ಹಿನ್ನೆಲೆ “ಕನಿಷ್ಠ ವೇತನ ಜಾಗೃತಿ ಅಭಿಯಾನ” ಹಮ್ಮಿಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಟಿವಿ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಿ, ಕಾರ್ಮಿಕ ಸಂಘಟನೆಗಳನ್ನೂ ಈ ಅಭಿಯಾನದಲ್ಲಿ ಭಾಗಿಯಾಗಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಹಾಗೂ ಕನಿಷ್ಠ ವೇತನ ಜಾರಿಯಲ್ಲಿ ಅಗತ್ಯ ಗಮನ ಹರಿಸುವುದಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಎಐಸಿಸಿಟಿಯು ತಿಳಿಸಿದೆ. ಕನಿಷ್ಠ
ಇದನ್ನೂ ನೋಡಿ : ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ
