ಫ್ಯಾಕ್ಟ್‌ ಚೆಕ್‌ : ಬಾಂಗ್ಲಾಕ್ಕೆ ಹೊರಟರೇ ಅಕ್ರಮ ವಲಸೆಗಾರರು? – ಜನಶಕ್ತಿ ಮೀಡಿಯಾ ಪರಿಶೀಲನೆ

ಗುರುರಾಜ ದೇಸಾಯಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋವನ್ನು “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮ ವಲಸೆಗಾರರು ಮತ್ತು ಮತಾಂಧರು ಊರು ಬಿಡುತ್ತಿದ್ದಾರೆ” ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಲಾಗುತ್ತಿದೆ. ಕನ್ನಡದಲ್ಲಿಯೂ ಈ ವಿಡಿಯೋಗೆ ರಾಜಕೀಯ ಬಣ್ಣ ನೀಡಿ ಪೋಸ್ಟ್‌ ಮಾಡಲಾಗುತ್ತಿದೆ. ಆದರೆ ಜನಶಕ್ತಿ ಮೀಡಿಯಾ ನಡೆಸಿದ ಪರಿಶೀಲನೆಯಲ್ಲಿ ಈ ಹೇಳಿಕೆ ಸಂಪೂರ್ಣ ದಾರಿತಪ್ಪಿಸುವಂತದ್ದು ಎಂದು  ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗವಾಗಿದೆ.

ಪೋಸ್ಟ್ ಕಾರ್ಡ್ ಎಂಬ ಹೆಸರಿನಲ್ಲಿ ಅನೇಕ ಸುಳ್ಳು ಸುದ್ದಿಗಳನ್ನು, ಕೋಮುದ್ವೇಷವನ್ನು ಹರಡಲಾಗುತ್ತಿದೆ. ಡೆನಿ ಪೆರೆರಾ ಎಂಬ ವ್ಯಕ್ತಿ ಮೇ 27 ರಂದು Facebook ನಲ್ಲಿ ಪೋಸ್ಟ್ ಕಾರ್ಡ್ ನ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ 1500 ಲೈಕ್ ಬಂದಿದ್ದು 500+ ಜನರು ಶೇರ್ ಮಾಡಿದ್ದಾರೆ.

ವೈರಲ್‌ ಪೋಸ್ಟ್‌ನಲ್ಲಿ ಏನಿದೆ?

ವಿಡಿಯೋದಲ್ಲಿ ಸಾವಿರಾರು ಜನರು ರಸ್ತೆ ಮೂಲಕ ಸಾಮಾನು ಹೊತ್ತು ಸಾಗುತ್ತಿರುವ ದೃಶ್ಯ ಕಾಣಿಸುತ್ತದೆ. ಇದಕ್ಕೆ,
“ಅಬ್ಬಾ! ಇಷ್ಟು ವರ್ಷಗಳ ಕಾಲ ಈ ಹೊರೆಯನ್ನು ನನ್ನ ದೇಶ ಹೊತ್ತುಕೊಂಡಿತ್ತು” ಎಂಬ ಬರಹ ಜೋಡಿಸಿ, ಬಿಜೆಪಿ ಗೆಲುವಿನ ಬಳಿಕ ಬಾಂಗ್ಲಾದೇಶಿ ಅಕ್ರಮ ವಲಸೆಗಾರರು ಪಶ್ಚಿಮ ಬಂಗಾಳ ತೊರೆಯುತ್ತಿದ್ದಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ.

ಪರಿಶೀಲನೆಯಲ್ಲಿ ಸಿಕ್ಕ ಸತ್ಯವೇನು?

ವಿಡಿಯೋವನ್ನು ರಿವರ್ಸ್ ಇಮೇಜ್ ಸರ್ಚ್ ಹಾಗೂ ಫ್ಯಾಕ್ಟ್‌ಚೆಕ್‌ ವರದಿಗಳ ಮೂಲಕ ಪರಿಶೀಲಿಸಿದಾಗ, ಇದು ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ ದೃಶ್ಯವಲ್ಲ ಎಂಬುದು ಸ್ಪಷ್ಟವಾಗಿದೆ.

ಈ ವಿಡಿಯೋ ಪಶ್ಚಿಮ ಬಂಗಾಳದಲ್ಲಿ ನಡೆದ “ಬಿಸ್ವಾ ಇಜ್ತೆಮಾ” (Biswa Ijtema) ಎಂಬ ದೊಡ್ಡ ಇಸ್ಲಾಮಿಕ್ ಧಾರ್ಮಿಕ ಸಮಾವೇಶದ ಸಂದರ್ಭದ ದೃಶ್ಯವಾಗಿದೆ. ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಜನರು ಹಿಂದಿರುಗುವ ಸಂದರ್ಭದ ದೃಶ್ಯವನ್ನೇ ಈಗ ತಪ್ಪು ನಿರೂಪಣೆಯೊಂದಿಗೆ ಹಂಚಲಾಗುತ್ತಿದೆ.

ಮುಖ್ಯವಾಗಿ, ಈ ವಿಡಿಯೋ 2026ರ ಜನವರಿಯಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆಗಿತ್ತು. ಅಂದರೆ, ನಂತರ ನಡೆದ ಯಾವುದೇ ಚುನಾವಣಾ ಅಥವಾ ರಾಜಕೀಯ ಬೆಳವಣಿಗೆಗಳಿಗೆ ಇದರ ಸಂಬಂಧವಿಲ್ಲ.

ಫ್ಯಾಕ್ಟ್‌ಚೆಕ್‌ ಸಂಸ್ಥೆಗಳ ವರದಿ

AFP Fact Check ಸೇರಿದಂತೆ ಹಲವು ಸ್ವತಂತ್ರ ಫ್ಯಾಕ್ಟ್‌ಚೆಕ್‌ ಸಂಸ್ಥೆಗಳು ಈ ವಿಡಿಯೋವನ್ನು ಪರಿಶೀಲಿಸಿ, ಇದು ಧಾರ್ಮಿಕ ಸಮಾವೇಶದ ದೃಶ್ಯವೇ ಹೊರತು “ಅಕ್ರಮ ವಲಸೆಗಾರರು ರಾಜ್ಯ ತೊರೆಯುತ್ತಿರುವ” ದೃಶ್ಯವಲ್ಲ ಎಂದು ಸ್ಪಷ್ಟಪಡಿಸಿವೆ.

ಯಾಕೆ ಇಂತಹ ಪೋಸ್ಟ್‌ಗಳು ವೈರಲ್‌ ಆಗುತ್ತವೆ?

ಹಳೆಯ ಅಥವಾ ಸಂಬಂಧವಿಲ್ಲದ ವಿಡಿಯೋಗಳನ್ನು ಹೊಸ ರಾಜಕೀಯ ಸಂದರ್ಭಗಳಿಗೆ ಜೋಡಿಸಿ ವೈರಲ್ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ವಿಶೇಷವಾಗಿ ಧಾರ್ಮಿಕ ಧ್ರುವೀಕರಣ ಹಾಗೂ ವಲಸೆಗಾರರ ವಿರುದ್ಧ ಅಸಹನೆ ಸೃಷ್ಟಿಸಲು ಇಂತಹ ತಪ್ಪು ನಿರೂಪಣೆಗಳನ್ನು ಬಳಸಲಾಗುತ್ತದೆ.

ಜನಶಕ್ತಿ ಮೀಡಿಯಾ ತೀರ್ಮಾನ

“ಬಿಜೆಪಿ ಗೆದ್ದ ಬಳಿಕ ಬಾಂಗ್ಲಾದೇಶಿ ಅಕ್ರಮ ವಲಸೆಗಾರರು ಪಶ್ಚಿಮ ಬಂಗಾಳ ತೊರೆಯುತ್ತಿದ್ದಾರೆ” ಎಂಬ ಹೇಳಿಕೆಗೆ ವೈರಲ್ ವಿಡಿಯೋ ಯಾವುದೇ ಸಾಕ್ಷಿಯಲ್ಲ.

ವಾಸ್ತವದಲ್ಲಿ, ಅದು “ಬಿಸ್ವಾ ಇಜ್ತೆಮಾ” ಧಾರ್ಮಿಕ ಸಮಾವೇಶದ ಬಳಿಕ ಜನರು ಹಿಂದಿರುಗುತ್ತಿರುವ ದೃಶ್ಯವಾಗಿದೆ. ಹೀಗಾಗಿ ವೈರಲ್ ಪೋಸ್ಟ್‌ ಸುಳ್ಳು ಹಾಗೂ ದಾರಿತಪ್ಪಿಸುವಂತದ್ದು.

Donate Janashakthi Media

Leave a Reply

Your email address will not be published. Required fields are marked *