ಬೆಂಗಳೂರು : ಬೆಂಗಳೂರು ನಗರದ ಪ್ರಮುಖ ಸಂಚಾರ ದಟ್ಟಣೆ ಪ್ರದೇಶವಾದ ಒಕಳಿಪುರಂ ಎಂಟು ಲೇನ್ ಕಾರಿಡಾರ್ನ ಅಂಡರ್ಪಾಸ್ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಿಗೆ 25 ದಿನಗಳ ಗಡುವು ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸ್ಥಳ ಪರಿಶೀಲನೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಚೆನ್ನೈ ರೈಲು ಮಾರ್ಗದಡಿ ರೈಲ್ವೆ ಇಲಾಖೆ ಈಗಾಗಲೇ ಎರಡು ಬಾಕ್ಸ್ ಪುಷಿಂಗ್ ರಚನೆಗಳನ್ನು ಪೂರ್ಣಗೊಳಿಸಿದೆ. ಇದರಲ್ಲಿ ಒಂದರ ಮೂಲಕ ಮೆಜೆಸ್ಟಿಕ್ನಿಂದ ರಾಜಾಜಿನಗರದತ್ತ ವಾಹನ ಸಂಚಾರ ಆರಂಭಿಸಲು ಸಂಪರ್ಕ ರಸ್ತೆ ನಿರ್ಮಾಣವನ್ನು 25 ದಿನಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರ ಜೊತೆಗೆ, ರೈಲು ನಿಲ್ದಾಣದತ್ತ ಸಾಗುವ ಸಂಪರ್ಕ ರಸ್ತೆ, ಮಳೆ ನೀರು ಹರಿವಿಗಾಗಿ 1,200 ಮಿಮೀ ಸಾಮರ್ಥ್ಯದ ಚರಂಡಿ, 63 ಮೀಟರ್ ಉದ್ದದ ರಿಟೈನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗಗಳ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ : ರೈಲ್ವೆ ವ್ಯಾಪಾರಿಗಳ ತೆರವು ವಿರುದ್ಧ ದಮ್ದಮ್ ಕ್ಯಾಂಟೋನ್ಮೆಂಟ್ನಲ್ಲಿ ಜಂಟಿ ಪ್ರತಿಭಟನೆ
ಒಕಳಿಪುರಂ ಎಂಟು ಲೇನ್ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ 2015ರಲ್ಲಿ ಆರಂಭವಾಗಿದ್ದು, ಹಲವು ವರ್ಷಗಳಿಂದ ವಿಳಂಬ ಅನುಭವಿಸುತ್ತಿದೆ. ಸುಮಾರು ₹102 ಕೋಟಿ ವೆಚ್ಚದ ಈ ಯೋಜನೆ ಮೆಜೆಸ್ಟಿಕ್, ರಾಜಾಜಿನಗರ ಹಾಗೂ ಕೆಎಸ್ಆರ್ ರೈಲು ನಿಲ್ದಾಣ ಭಾಗದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ನಗರದಲ್ಲಿ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುರಕ್ಷಿತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಒತ್ತಡವೂ ಅಧಿಕಾರಿಗಳ ಮೇಲಿದೆ.
ಇದನ್ನೂ ನೋಡಿ : ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ
