ರೈಲ್ವೆ ವ್ಯಾಪಾರಿಗಳ ತೆರವು ವಿರುದ್ಧ ದಮ್‌ದಮ್‌ ಕ್ಯಾಂಟೋನ್ಮೆಂಟ್‌ನಲ್ಲಿ ಜಂಟಿ ಪ್ರತಿಭಟನೆ

ಕೋಲ್ಕತ್ತಾ :  ಪಶ್ಚಿಮ ಬಂಗಾಳದ ವಿವಿಧ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವಿರುದ್ಧ ದಮ್‌ದಮ್‌ ಕ್ಯಾಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ಸಿಐಟಿಯು ಮತ್ತು ಐಎನ್‌ಟಿಯುಸಿ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿವೆ. ವ್ಯಾಪಾರಿಗಳ ತೆರವು ತಕ್ಷಣ ನಿಲ್ಲಿಸಿ, ಸೂಕ್ತ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈಲ್ವೆ

ರೈಲ್ವೆ ಅಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಿದ ಸಂಘಟನೆಗಳು, ಇತ್ತೀಚಿನ ತೆರವು ಕಾರ್ಯಾಚರಣೆಗಳಿಂದ ಸಾವಿರಾರು ಬಡ ರೈಲ್ವೆ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿವೆ. ಹಲವು ರೈಲು ನಿಲ್ದಾಣಗಳಲ್ಲಿ ಪೊಲೀಸ್‌ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದರಿಂದ ಕುಟುಂಬಗಳ ಜೀವನೋಪಾಯವೇ ಅಸ್ಥಿರವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನಾ ಮುಖಂಡರು, “ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಿಂದಲೇ ಸಣ್ಣ ವ್ಯಾಪಾರಿಗಳು, ರೈಲ್ವೆ ವ್ಯಾಪಾರಿಗಳು ಹಾಗೂ ಅನೌಪಚಾರಿಕ ವಲಯದ ಕಾರ್ಮಿಕರ ಬದುಕಿನ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಉದ್ಯೋಗ ಕಸಿಯುವ ಕ್ರಮ ಹೆಚ್ಚಾಗಿದೆ” ಎಂದು ಆರೋಪಿಸಿದರು. ರೈಲ್ವೆ

ಇದನ್ನೂ ಓದಿ : ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ: ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ?

ಚಾಕ್ದಹ ರೈಲು ನಿಲ್ದಾಣದ ಯುವ ವ್ಯಾಪಾರಿ ಪ್ರಮಥ ಮಂಡಲ್‌ ಸಾವಿನ ಘಟನೆಯನ್ನೂ ಪ್ರತಿಭಟನಾಕಾರರು ಪ್ರಸ್ತಾಪಿಸಿದ್ದಾರೆ. ತೆರವು ಭೀತಿಯ ನಡುವೆಯೇ ಅವರ ಮೃತದೇಹ ರೈಲು ಹಳಿಯ ಬಳಿ ಪತ್ತೆಯಾಗಿದ್ದು, ಇದರಿಂದ ವ್ಯಾಪಾರಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಹಿಂದೆಯೂ ರೈಲ್ವೆ ಅಭಿವೃದ್ಧಿ ಯೋಜನೆಗಳಿಗಾಗಿ ವ್ಯಾಪಾರಿಗಳು ಚರ್ಚೆಯ ಮೂಲಕ ತಮ್ಮ ಅಂಗಡಿಗಳನ್ನು ಸ್ಥಳಾಂತರಿಸಲು ಸಹಕರಿಸಿದ್ದರು. ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆಯ ಹಿತಾಸಕ್ತಿಗೆ ನಾವು ಯಾವಾಗಲೂ ಸಹಕರಿಸಿದ್ದೇವೆ ಎಂದು ಸಂಘಟನೆಗಳು ಹೇಳಿವೆ. ಅಭಿವೃದ್ಧಿ ಮತ್ತು ಜೀವನೋಪಾಯ ಎರಡಕ್ಕೂ ಹಾನಿಯಾಗದಂತೆ ತ್ರಿಪಕ್ಷೀಯ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : IPL 2026 | ಪ್ಲೇಆಫ್‌ ಪೈಪೋಟಿ: ನಾಲ್ಕು ತಂಡಗಳ ಪ್ಲಸ್‌, ಮೈನಸ್‌ ಮತ್ತು ಕಪ್‌ ಲೆಕ್ಕಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *