ನವದೆಹಲಿ : ದೇಶದಲ್ಲಿ “ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆ” ಹಾಗೂ ಅಕ್ರಮ ನುಸುಳಾಟದ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘೋಷಣೆ ಮಾಡಿದ್ದು, “ಅಕ್ರಮ ನುಸುಳಾಟ ಮತ್ತು ಇತರೆ ಕಾರಣಗಳಿಂದ ಉಂಟಾಗುತ್ತಿರುವ ಜನಸಂಖ್ಯಾ ಬದಲಾವಣೆ ರಾಷ್ಟ್ರದ ಭವಿಷ್ಯಕ್ಕೆ ದೊಡ್ಡ ಸವಾಲು” ಎಂದು ಹೇಳಿದ್ದಾರೆ. ಅಸ್ವಾಭಾವಿಕ
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವಲೇಕರ್ ಅವರ ನೇತೃತ್ವದಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ. ಜನಗಣತಿ ಆಯುಕ್ತರು ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ದುರ್ಗಾ ಶಂಕರ್ ಮಿಶ್ರಾ, ನಿವೃತ್ತ ಐಪಿಎಸ್ ಅಧಿಕಾರಿ ಬಾಲಾಜಿ ಶ್ರೀವಾಸ್ತವ ಮತ್ತು ಆರ್ಥಿಕ ತಜ್ಞೆ ಶಮಿಕಾ ರವಿ ಸದಸ್ಯರಾಗಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಉಂಟಾಗುತ್ತಿರುವ ಅಸಾಮಾನ್ಯ ಜನಸಂಖ್ಯಾ ಬದಲಾವಣೆಗಳ ಮಾದರಿಯನ್ನು ಪರಿಶೀಲಿಸಿ, ಕಾಲಬದ್ಧ ಪರಿಹಾರ ಕ್ರಮಗಳನ್ನು ಸೂಚಿಸುವ ಜವಾಬ್ದಾರಿ ಸಮಿತಿಗೆ ನೀಡಲಾಗಿದೆ. ಅಕ್ರಮ ವಲಸೆ, ಗಡಿ ಪ್ರದೇಶಗಳ ಜನಸಂಖ್ಯಾ ವಿನ್ಯಾಸ ಬದಲಾವಣೆ, ರಾಷ್ಟ್ರೀಯ ಭದ್ರತೆ ಹಾಗೂ ಸಾಮಾಜಿಕ ಸಮತೋಲನದ ಮೇಲಿನ ಪರಿಣಾಮಗಳನ್ನೂ ಸಮಿತಿ ಅಧ್ಯಯನ ಮಾಡಲಿದೆ.
ಇದನ್ನೂ ಓದಿ : ಬಿಹಾರ ಮತದಾರರ ಪಟ್ಟಿಯ ಪರಿಷ್ಕರಣೆ ಮಾನ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಪ್ರಧಾನಿ ನರೇಂದ್ರ ಮೋದಿ ಅವರು 2025ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದ್ದ “ಹೈ ಪವರ್ಡ್ ಡೆಮೋಗ್ರಫಿ ಮಿಷನ್” ಭಾಗವಾಗಿಯೇ ಈ ಸಮಿತಿ ರಚನೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಮಿತಿ ಒಂದು ವರ್ಷದೊಳಗೆ ವರದಿ ಸಲ್ಲಿಸಬೇಕಿದ್ದು, ಅಗತ್ಯವಿದ್ದರೆ ಅವಧಿ ವಿಸ್ತರಿಸುವ ಅವಕಾಶವೂ ಇದೆ.
ಈ ಬೆಳವಣಿಗೆ ರಾಜಕೀಯ ಚರ್ಚೆಗೂ ಕಾರಣವಾಗಿದೆ. ವಿರೋಧ ಪಕ್ಷಗಳು ಹಾಗೂ ಎಡಪಂಥೀಯ ಸಂಘಟನೆಗಳು “ಜನಸಂಖ್ಯಾ ಬದಲಾವಣೆ” ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿವೆ. ಇನ್ನೊಂದೆಡೆ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.
ಇದನ್ನೂ ನೋಡಿ : ನನ್ನ ಮತ ಕಸಿಯುವ ಎಸ್ಐಆರ್ ರದ್ದುಪಡಿಸಿ – ದುಂಡುಮೇಜಿನ ಸಭೆಯಲ್ಲಿ ಆಕ್ರೋಶ Janashakthi Media
