ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ‘ಸೌಹಾರ್ದ ಕರ್ನಾಟಕ’ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ “ಜನಮುಖಿ ಸಾಹಿತ್ಯ : ಯುವ ಬರಹಗಾರರು” ಎಂಬ ರಾಜ್ಯಮಟ್ಟದ ಕಾರ್ಯಾಗಾರವನ್ನು ಮೇ 30 ಮತ್ತು 31ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಜನಮುಖಿ
ಕಬ್ಬನ್ ಪಾರ್ಕ್ ಬಳಿ ಇರುವ ಸಚಿವಾಲಯ ನೌಕರರ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಯುವ ಬರಹಗಾರರನ್ನು ಸೃಜನಶೀಲ ಸಾಹಿತ್ಯ ಚಟುವಟಿಕೆಗಳತ್ತ ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಾಗಾರವನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಮೊದಲ ದಿನ “ಕರ್ನಾಟಕ ಸೌಹಾರ್ದ ಪರಂಪರೆ” ಕುರಿತು ಡಾ. ರಾಜಪ್ಪ ದಳವಾಯಿ ಹಾಗೂ “ಸಾಹಿತ್ಯ ಮತ್ತು ಶ್ರೇಣೀಕೃತ ವ್ಯವಸ್ಥೆ” ಕುರಿತು ಡಾ. ಬಂಜಗೆರೆ ಜಯಪ್ರಕಾಶ್ ವಿಚಾರ ಮಂಡನೆ ಮಾಡಲಿದ್ದಾರೆ.
ಎರಡನೇ ದಿನ “ಸಾಹಿತ್ಯ : ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ” ವಿಷಯವಾಗಿ ಪ್ರೊ. ರಾಜೇಂದ್ರ ಚೆನ್ನಿ ಹಾಗೂ “ಸೆಕ್ಯುಲರ್ ಭಾರತ : ಅಭಿವೃದ್ಧಿಯ ಅಡಿಪಾಯ” ಕುರಿತು ಜಿ.ಎನ್. ನಾಗರಾಜ್ ಮಾತನಾಡಲಿದ್ದಾರೆ.
ಕಾರ್ಯಾಗಾರದಲ್ಲಿ ಯುವ ಬರಹಗಾರರಿಗೆ ವಿಷಯ ಮಂಡಕರೊಂದಿಗೆ ಸಂವಾದ ನಡೆಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಭಾಗವಹಿಸಲಿದ್ದಾರೆ. ಭಾಗವಹಿಸುವವರಿಗೆ ಪ್ರಶಂಸಾಪತ್ರ ನೀಡಲಾಗುವುದು ಎಂದು ಸೌಹಾರ್ದ ಕರ್ನಾಟಕ ಸಂಚಾಲಕರಾದ ಡಾ. ಎಸ್ ವೈ ಗುರುಶಾಂತ್ ತಿಳಿಸಿದ್ದಾರೆ.
ಜನ ಮುಖಿ ಸಾಹಿತ್ಯ ಯುವ ಬರಹಗಾರರ ರಾಜ್ಯಮಟ್ಟದ ಕಾರ್ಯಗಾರಕ್ಕೆ ನೋಂದಾಯಿಸಿಕೊಳ್ಳುವವರು ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹದು. : 9036371588, ಅಥವಾ 9632329955