ಯುಪಿಯಲ್ಲಿ ಭಾರಿ ಪವರ್ ಕಟ್ ಸಂಕಷ್ಟ: ಯೋಗಿ ಸರ್ಕಾರಕ್ಕೆ ತನ್ನದೇ ಶಾಸಕರಿಂದ ಆಕ್ರೋಶ

ಕ್ನೋ: ಬೇಸಿಗೆಯ ಭೀಕರ ಬಿಸಿಲಿನ ನಡುವೆಯೇ ಉತ್ತರ ಪ್ರದೇಶದಲ್ಲಿ (ಯುಪಿ) ರಾಜ್ಯಾದ್ಯಂತ ಎದುರಾಗಿರುವ ತೀವ್ರ ವಿದ್ಯುತ್ ಕಡಿತ ಮತ್ತು ಲೋಡ್ ಶೆಡ್ಡಿಂಗ್ ಸಮಸ್ಯೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಭಾರಿ ರಾಜಕೀಯ ಮುಜುಗರವನ್ನು ತಂದಿಟ್ಟಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈಗ ಸ್ವತಃ ಆಡಳಿತಾರೂಢ ಬಿಜೆಪಿಯ ಶಾಸಕರೇ ತಮ್ಮದೇ ಸರ್ಕಾರದ ಇಂಧನ ಸಚಿವ ಎ.ಕೆ. ಶರ್ಮಾ ಅವರಿಗೆ ಬಹಿರಂಗವಾಗಿ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ನಿರಂತರ ಪವರ್ ಕಟ್, ಲೋ ವೋಲ್ಟೇಜ್ ಮತ್ತು ಟ್ರಾನ್ಸ್‌ಫಾರ್ಮರ್‌ಗಳ ವೈಫಲ್ಯದ ಬಗ್ಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಿಂದ ಕಂಗಾಲಾಗಿರುವ ರಾಜಧಾನಿ ಲಕ್ನೋದ ಬಿಜೆಪಿ ಶಾಸಕರು ಇಂಧನ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುಪಿ

ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ಪೊಲೀಸರ ಸ್ವತಂತ್ರ ತೀರ್ಮಾನ ಎಂದ ಪರಮೇಶ್ವರ್‌

ಲಕ್ನೋ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ನೀರಜ್ ಬೋರಾ ಅವರು ಇಂಧನ ಸಚಿವರಿಗೆ ಖಡಕ್ ಪತ್ರ ಬರೆದಿದ್ದು, “ನಿರಂತರ ವಿದ್ಯುತ್ ಕಡಿತದಿಂದಾಗಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಯುಪಿ

ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಸುಧಾರಿಸಬೇಕು. ಅಷ್ಟೇ ಅಲ್ಲದೆ, ವಿದ್ಯುತ್ ಇಲಾಖೆಯ ಚೀಫ್ ಎಂಜಿನಿಯರ್ ಅವರು ನನ್ನ ಕ್ಯಾಂಪ್ ಆಫೀಸ್‌ಗೆ ಭೇಟಿ ನೀಡಿ, ದಿನನಿತ್ಯ ದೂರು ಹಿಡಿದು ಬರುತ್ತಿರುವ ಸಾರ್ವಜನಿಕರಿಗೆ ಸೂಕ್ತ ಕಾರಣ ಹಾಗೂ ವಾಸ್ತವ ಸ್ಥಿತಿಯನ್ನು ವಿವರಿಸಬೇಕು” ಎಂದು ಆಗ್ರಹಿಸಿದ್ದಾರೆ. ಯುಪಿ

ಮತ್ತೊಂದೆಡೆ, ಸರೋಜಿನಿನಗರ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ವರ್ ಸಿಂಗ್ ಕೂಡ ಇಂಧನ ಸಚಿವರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

“ಪ್ರತಿ ವರ್ಷ ಬೇಸಿಗೆ ಬಂದಾಗಲೂ ಫೀಡರ್ ಟ್ರಿಪ್ಪಿಂಗ್, ಓವರ್‌ಲೋಡ್ ಟ್ರಾನ್ಸ್‌ಫಾರ್ಮರ್‌ಗಳು, ಅಂಡರ್‌ಗ್ರೌಂಡ್ ಕೇಬಲ್ ದೋಷಗಳು ಮತ್ತು ಲೋ ವೋಲ್ಟೇಜ್‌ನಂತಹ ಒಂದೇ ರೀತಿಯ ಸಮಸ್ಯೆಗಳು ಮರುಕಳಿಸುತ್ತಿವೆ. ಇದಕ್ಕೆ ತಾತ್ಕಾಲಿಕ ತೇಪೆ ಹಚ್ಚುವ ಕೆಲಸ ನಿಲ್ಲಿಸಿ, ಶಾಶ್ವತವಾದ ನೀತಿ-ಮಟ್ಟದ ಪರಿಹಾರವನ್ನು ಕಂಡುಕೊಳ್ಳಿ” ಎಂದು ಕಿಡಿಕಾರಿದ್ದಾರೆ.

ಇವರ ಜೊತೆಗೆ ಮತ್ತೊಬ್ಬ ಬಿಜೆಪಿ ಶಾಸಕ ಒ.ಪಿ. ಶ್ರೀವಾಸ್ತವ ಕೂಡ ತಮ್ಮ ಕ್ಷೇತ್ರದಲ್ಲಿ ವಿದ್ಯುತ್ ಸರಬರಾಜು ಹದಗೆಟ್ಟಿರುವುದನ್ನು ಪ್ರಸ್ತಾಪಿಸಿದ್ದು, ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಹಳೆಯ ಲೈನ್‌ಗಳನ್ನು ತುರ್ತಾಗಿ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.

ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷಗಳು!

ಆಡಳಿತ ಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಪತ್ರ ಸಮರ ಸಾರಿರುವುದು ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ. ಈ ಅಭಾವವನ್ನು ಬಳಸಿಕೊಂಡು ಯೋಗಿ ಸರ್ಕಾರದ ಆಡಳಿತ ಮತ್ತು ಮೂಲಸೌಕರ್ಯ ನಿರ್ವಹಣೆಯ ವೈಫಲ್ಯದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಮಾತನಾಡಿ, “ವಿದ್ಯುತ್ ಕಡಿತದಿಂದಾಗಿ ರಾಜ್ಯದಾದ್ಯಂತ ಜನಸಾಮಾನ್ಯರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

ಪಂಪ್‌ಸೆಟ್‌ಗಳು ಕೆಲಸ ಮಾಡದ ಕಾರಣ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ವಿದ್ಯುತ್ ನಂಬಿಕೊಂಡಿದ್ದ ಸಣ್ಣ ಕೈಗಾರಿಕೆಗಳು ಭಾರಿ ನಷ್ಟ ಅನುಭವಿಸುತ್ತಿವೆ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇಂಧನ ಸಚಿವರಿಗೆ ಪತ್ರ ಬರೆದಿರುವ ಅಜಯ್ ರೈ, ತಕ್ಷಣವೇ ಪರಿಸ್ಥಿತಿ ಸುಧಾರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇಲಾಖೆಯ ಸಮರ್ಥನೆ ಏನು?

ಸ್ವಪಕ್ಷ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಇಂಧನ ಸಚಿವ ಎ.ಕೆ. ಶರ್ಮಾ, “ರಾಜ್ಯದಲ್ಲಿ ತೀವ್ರ ಬೇಸಿಗೆ ಇರುವುದರಿಂದ ವಿದ್ಯುತ್ ಬೇಡಿಕೆ ಹಿಂದೆಂದಿಗಿಂತಲೂ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಕೆಲವು ಕಡೆ ವ್ಯತ್ಯಯ ಉಂಟಾಗಿದ್ದು, ಇಲಾಖೆಯು ನಿರಂತರವಾಗಿ ಪೂರೈಕೆಯನ್ನು ಸ್ಥಿರಗೊಳಿಸಲು ಮತ್ತು ಟ್ರಾನ್ಸ್‌ಫಾರ್ಮರ್ ಸಾಮರ್ಥ್ಯವನ್ನು ಹೆಚ್ಚಿಸಲು ಹಗಲಿರುಳು ಶ್ರಮಿಸುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPPCL) ವಿತರಣಾ ವಿಭಾಗದ ನಿರ್ದೇಶಕ ಜ್ಞಾನೇಂದ್ರ ಧರ್ ದ್ವಿವೇದಿ ಮಾತನಾಡಿ, ತೊಂದರೆಗೊಳಗಾದ ಪ್ರದೇಶಗಳಲ್ಲಿ ಹೆಚ್ಚುವರಿ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಮತ್ತು ಹಾನಿಗೊಳಗಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಆದ್ಯತೆಯ ಮೇರೆಗೆ ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: ಗ್ರಾಮದ ನೀರು ವ್ಯವಸ್ಥೆ ಹೊತ್ತವರ ಬದುಕೇ ಅಸ್ಥಿರ; ನೀರಗಂಟಿಗಳ ಸಂಕಷ್ಟ Janashakthi Media

Donate Janashakthi Media

Leave a Reply

Your email address will not be published. Required fields are marked *