ಬೆಂಗಳೂರು: ಗೃಹಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾಗಿರುವ “ಕರ್ನಾಟಕ ಗೃಹಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ” ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಆದರೆ ಮಸೂದೆಯನ್ನು ಇನ್ನಷ್ಟು ಪರಿಶೀಲನೆಗಾಗಿ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಗೃಹಕಾರ್ಮಿಕರ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಕಾರ್ಮಿಕರ ಹಕ್ಕುಗಳು, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ದೂರು ಪರಿಹಾರ ವ್ಯವಸ್ಥೆ ಕುರಿತ ಅಂಶಗಳನ್ನು ಚರ್ಚಿಸಲಾಯಿತು. ಮಸೂದೆ ಜಾರಿಯಾದರೆ ಗೃಹಕಾರ್ಮಿಕರು, ಉದ್ಯೋಗದಾತರು ಮತ್ತು ಸೇವಾ ಪೂರೈಕೆದಾರರ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸಲು ಪ್ರತ್ಯೇಕ ದೂರು ಪರಿಹಾರ ಸಮಿತಿಯನ್ನು ರಚಿಸುವ ಪ್ರಸ್ತಾವವಿದೆ.
ಕರಡು ಮಸೂದೆ ಪ್ರಕಾರ, ಗೃಹಕಾರ್ಮಿಕರನ್ನು ಲಿಖಿತ ಒಪ್ಪಂದವಿಲ್ಲದೆ ಕೆಲಸಕ್ಕೆ ನೇಮಿಸಬಾರದು ಎನ್ನುವ ನಿಯಮವನ್ನು ತರಲು ಸರ್ಕಾರ ಮುಂದಾಗಿದೆ. ಕನಿಷ್ಠ ವೇತನ, ನಿಗದಿತ ಕೆಲಸದ ಅವಧಿ, ವಾರದ ರಜೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಸಂಬಳ ಹಾಗೂ ಹೆರಿಗೆ ಸೌಲಭ್ಯಗಳಂತಹ ಹಕ್ಕುಗಳನ್ನೂ ಮಸೂದೆ ಒಳಗೊಂಡಿದೆ. ಗೃಹಕಾರ್ಮಿಕರ
ಇದನ್ನೂ ಓದಿ : ಕರ್ನಾಟಕ ಸಚಿವ ಸಂಪುಟದಿಂದ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ತೀರ್ಮಾನ
ಇದೇ ವೇಳೆ ಗೃಹಕಾರ್ಮಿಕರು, ಉದ್ಯೋಗದಾತರು ಮತ್ತು ಮಧ್ಯವರ್ತಿ ಏಜೆನ್ಸಿಗಳ ಕಡ್ಡಾಯ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ನಿಯಮ ಉಲ್ಲಂಘಿಸುವ ಏಜೆನ್ಸಿಗಳು ಅಥವಾ ಉದ್ಯೋಗದಾತರ ವಿರುದ್ಧ ದಂಡ ಮತ್ತು ಶಿಕ್ಷೆಯಂತಹ ಕಠಿಣ ಕ್ರಮಗಳನ್ನೂ ಮಸೂದೆ ಪ್ರಸ್ತಾಪಿಸಿದೆ.
ಕಾರ್ಮಿಕ ಸಂಘಟನೆಗಳು ಮತ್ತು ಗೃಹಕಾರ್ಮಿಕರ ಹೋರಾಟ ಸಂಘಟನೆಗಳು ಹಲವು ವರ್ಷಗಳಿಂದ ಪ್ರತ್ಯೇಕ ಕಾನೂನು ಜಾರಿಗೆ ಒತ್ತಾಯಿಸುತ್ತಿವೆ. ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರು ಗೃಹಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೂ, ಅವರಿಗೆ ಸ್ಥಿರ ವೇತನ, ಆರೋಗ್ಯ ಭದ್ರತೆ ಮತ್ತು ಕಾನೂನು ರಕ್ಷಣೆ ಇಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ತಿದ್ದುಪಡಿ ಬಳಿಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಗೃಹಕಾರ್ಮಿಕರ
ಇದನ್ನೂ ನೋಡಿ : ಸಾರಿಗೆ ನೌಕರರ ಮುಷ್ಕರ | 25% ವೇತನ ಹೆಚ್ಚಳ : ಸರಕಾರ ಯಾಕೆ ಒಪ್ಪುತ್ತಿಲ್ಲ? | ಎಸ್ ವರಲಕ್ಷ್ಮಿ Janashakthi Media
