ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ದಾಖಲಾಗಿದ್ದ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕರ್ನಾಟಕ ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಪರ ಹೋರಾಟಗಾರರು, ರೈತ ಸಂಘಟನೆಗಳು, ದಲಿತ ಹೋರಾಟಗಾರರು ಸೇರಿದಂತೆ ವಿವಿಧ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕ
ಹಿಂಪಡೆಯಲಿರುವ ಪ್ರಕರಣಗಳಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ ಸುಮಾರು 10 ಪ್ರಕರಣಗಳು ಸೇರಿವೆ. ಕಾವೇರಿ ಹೋರಾಟ, ಕನ್ನಡ ಪರ ಪ್ರತಿಭಟನೆಗಳು, ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದ ಚಳವಳಿಗಳು, ರೈತರ ಪ್ರತಿಭಟನೆಗಳು ಹಾಗೂ ದಲಿತ ಸಂಘಟನೆಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ಸರ್ಕಾರ ಹಿಂಪಡೆಯಲು ಮುಂದಾಗಿದೆ.
ಇದನ್ನೂ ಓದಿ :ಹದಿಮೂರು ವರ್ಷಗಳ ನಂತರವೂ “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” !
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡ್ಲೆ ಮುಷ್ತಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಏಳು ಪ್ರಕರಣಗಳನ್ನೂ ಹಿಂಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಕೆಲವು ಪ್ರಕರಣಗಳ ಬಗ್ಗೆ ಹೈಕೋರ್ಟ್ ತೀರ್ಮಾನ ಅಗತ್ಯವಿರುವುದರಿಂದ ಅಂತಿಮ ಕ್ರಮ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರಲಿದೆ ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ನಡೆಯುತ್ತಿರುವ ಜನಗಣತಿ ಪೂರ್ವ ಸಿದ್ಧತಾ ಕಾರ್ಯಗಳ ಕುರಿತ ವರದಿಯನ್ನೂ ಸಚಿವ ಸಂಪುಟ ಪರಿಶೀಲಿಸಿದೆ. ಗಣತಿದಾರರ ಸಮೀಕ್ಷೆಯಲ್ಲಿ ರಾಜ್ಯದಾದ್ಯಂತ 48,275 ಮನೆಗಳು ಬೀಗ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುಮಾರು 19.26 ಲಕ್ಷ ಮನೆಗಳು ಖಾಲಿಯಾಗಿರುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಬೀಗ ಹಾಕಿದ ಮತ್ತು ಖಾಲಿ ಮನೆಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media
