ನವದೆಹಲಿ: ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯವನ್ನು ಒಳಗೊಂಡಿದ್ದ ಎನ್‌ಸಿಇಆರ್‌ಟಿ (NCERT) 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿ ಮೂವರು ಶಿಕ್ಷಣ ತಜ್ಞರ ವಿರುದ್ಧ ನೀಡಿದ್ದ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ತಿದ್ದುಪಡಿ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಈ ತಜ್ಞರೊಂದಿಗೆ ಸಂಬಂಧ ಮುಂದುವರಿಸಬೇಕೇ ಬೇಡವೇ ಎಂಬುದನ್ನು ಸ್ವತಂತ್ರವಾಗಿ ನಿರ್ಧರಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. NCERT
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಪ್ರೊಫೆಸರ್ ಮಿಶೆಲ್ ಡ್ಯಾನಿನೋ, ಸುಪರ್ಣಾ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ವಿರುದ್ಧ ಮಾರ್ಚ್ 11ರಂದು ಮಾಡಿದ್ದ ಕೆಲವು ಕಠಿಣ ಟೀಕೆಗಳನ್ನು ಹಿಂಪಡೆದಿದೆ. “ನ್ಯಾಯಾಂಗದ ವಿರುದ್ಧ ನಕಾರಾತ್ಮಕ ಚಿತ್ರಣ ನಿರ್ಮಿಸಲು ಉದ್ದೇಶಪೂರ್ವಕವಾಗಿ ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ” ಎಂಬ ಹಿಂದಿನ ಅಭಿಪ್ರಾಯವನ್ನು ನ್ಯಾಯಾಲಯ ವಾಪಸ್ ಪಡೆದಿದೆ.
ವಿಚಾರಣೆ ವೇಳೆ ಮೂವರು ಶಿಕ್ಷಣ ತಜ್ಞರು ಪಠ್ಯ ರಚನೆ ಒಬ್ಬ ವ್ಯಕ್ತಿಯ ನಿರ್ಧಾರವಲ್ಲ, ಅದು ಸಮೂಹ ಪ್ರಕ್ರಿಯೆಯಾಗಿದ್ದು, ಯಾರೊಬ್ಬರಿಗೂ ಏಕಪಕ್ಷೀಯ ಅಧಿಕಾರ ಇರುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ವಾದವನ್ನು ಪರಿಗಣಿಸಿದ ಪೀಠ, ತನ್ನ ಹಿಂದಿನ ಟೀಕೆಗಳು ವ್ಯಕ್ತಿಗಳ ವಿರುದ್ಧವಲ್ಲ, ಪಠ್ಯದ ವಿಷಯದ ಕುರಿತಾಗಿದ್ದವು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಜೂನ್ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
ಫೆಬ್ರವರಿಯಲ್ಲಿ “ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಎಂಬ ಅಧ್ಯಾಯ ಹೊಂದಿದ್ದ ಎನ್‌ಸಿಇಆರ್‌ಟಿ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳ ವಿತರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ನಿಷೇಧ ಹೇರಿತ್ತು. ನಂತರ ಮಾರ್ಚ್ 11ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮೂವರು ಶಿಕ್ಷಣ ತಜ್ಞರಿಂದ ದೂರ ಉಳಿಯಬೇಕು ಎಂದು ಸೂಚಿಸಿತ್ತು.
ಈ ಪ್ರಕರಣ ಶಿಕ್ಷಣ ಸ್ವಾತಂತ್ರ್ಯ, ಪಠ್ಯಪುಸ್ತಕಗಳ ವಿಷಯ ನಿರ್ಧಾರ ಹಾಗೂ ನ್ಯಾಯಾಂಗದ ವಿಮರ್ಶೆಯ ಮಿತಿಗಳ ಬಗ್ಗೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
