“ಯೋಜನೆಗೆ 80% ಬೆಂಬಲ ಎನ್ನುವುದು ಸುಳ್ಳು; ರೈತರ ವೇಷದಲ್ಲಿ ಡಿಕೆಶಿ ಬೆಂಬಲಿಗರು” – ಟಿ. ಯಶವಂತ್‌

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ “ಸುಮಾರು 80% ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ” ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ಸರ್ಕಾರದ ಹೇಳಿಕೆಗಳು ನೆಲದ ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.

ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧ ಸಾವಿರಾರು ರೈತರು ಕಳೆದ ಕೆಲವು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಬಿಡದಿ ಹಾಗೂ ಹಾರೋಹಳ್ಳಿ ಭಾಗಗಳಲ್ಲಿ ರಸ್ತೆ ತಡೆ ಪ್ರತಿಭಟನೆಗಳಿಂದ ಸಂಚಾರವೂ ದಿನಗಟ್ಟಲೆ ಅಸ್ತವ್ಯಸ್ತಗೊಂಡಿತ್ತು. ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಅವರು ತಿಳಿಸಿದ್ದಾರೆ.

ಯೋಜನೆಗಾಗಿ ಗುರುತಿಸಲಾದ ಭೂ ಪ್ರದೇಶವು ಸಾಮಾನ್ಯ ಜಮೀನುಗಳಲ್ಲ. ನೀರಾವರಿ ಸೌಲಭ್ಯ ಹೊಂದಿರುವ, ವರ್ಷಪೂರ್ತಿ ಬೆಳೆ ಬೆಳೆಯುವ, ಬಹುವಾರ್ಷಿಕ ಕೃಷಿಗೆ ಅನುಕೂಲಕರವಾದ ಅತ್ಯಂತ ಫಲವತ್ತಾದ ಭೂಮಿಯಾಗಿದೆ. ಈ ಪ್ರದೇಶಗಳಲ್ಲಿ ತೆಂಗು, ರಾಗಿ, ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಇಂತಹ ಭೂಮಿಯನ್ನು ಕೈಗಾರಿಕಾ ಹಾಗೂ ರಿಯಲ್‌ ಎಸ್ಟೇಟ್‌ ಉದ್ದೇಶಗಳಿಗೆ ಬಳಸಲು ಸರ್ಕಾರ ಮುಂದಾಗಿರುವುದು ರೈತರ ಬದುಕಿನ ಮೇಲಿನ ನೇರ ದಾಳಿ ಎಂದು ಟಿ. ಯಶವಂತ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಜನಮುಖಿ ಸಾಹಿತ್ಯ – ಯುವ ಬರಹಗಾರರಿಗೆ ರಾಜ್ಯಮಟ್ಟದ ಕಾರ್ಯಾಗಾರ

ರಾಜ್ಯದ ವಿವಿಧ ಭಾಗಗಳಿಂದ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ದಿನೇದಿನೇ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಸರ್ಕಾರಕ್ಕೆ ಹಿನ್ನಡೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಬೆಂಬಲಿಗರು ಹಾಗೂ ರಿಯಲ್‌ ಎಸ್ಟೇಟ್‌ ಹಿತಾಸಕ್ತಿಗಳೊಂದಿಗೆ ಸಂಪರ್ಕ ಹೊಂದಿರುವ ಕೆಲವರನ್ನು ರೈತರಂತೆ ತೋರಿಸಿ ಸಮಾಲೋಚನಾ ಸಭೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

“ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು ನಿಜವಾದ ರೈತರಲ್ಲ. ಸರ್ಕಾರದ ಪರ ವಾತಾವರಣ ಸೃಷ್ಟಿಸಲು ರೈತರ ವೇಷದಲ್ಲಿ ಕೆಲ ರಾಜಕೀಯ ಕಾರ್ಯಕರ್ತರನ್ನು ಕರೆತಂದು ನಾಟಕವಾಡಲಾಗಿದೆ. ಇದರ ಮೂಲಕ ಹೋರಾಟ ನಡೆಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ರೈತರಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯ ಹುಟ್ಟಿಸುವ ಯತ್ನ ನಡೆದಿದೆ” ಎಂದು ಟಿ. ಯಶವಂತ್‌ ಆರೋಪಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಕುರಿತು ರೈತರೊಂದಿಗೆ ಯಾವುದೇ ಪಾರದರ್ಶಕ ಚರ್ಚೆ ನಡೆದಿಲ್ಲ. ಯೋಜನೆಯ ಸಂಪೂರ್ಣ ಮಾಹಿತಿ ಗ್ರಾಮ ಮಟ್ಟದಲ್ಲಿ ಜನರಿಗೆ ನೀಡಲಾಗಿಲ್ಲ. ಬದಲಾಗಿ ಆಡಳಿತಾತ್ಮಕ ಒತ್ತಡ, ಪೊಲೀಸ್‌ ಬಿಗುವಿನ ಮೂಲಕ ರೈತರ ಧ್ವನಿಯನ್ನು ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹೋರಾಟವನ್ನು ಹತ್ತಿಕ್ಕಲು ಸರ್ಕಾರ ದಮನಾತ್ಮಕ ಕ್ರಮಗಳಿಗೆ ಮುಂದಾದರೆ ರಾಜ್ಯದಾದ್ಯಂತ ರೈತ ಸಂಘಟನೆಗಳು ಮತ್ತಷ್ಟು ಬಲಿಷ್ಠ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಅವರು, ರೈತರು ಯಾವುದೇ ಪ್ರಚೋದನೆಗೆ ಒಳಗಾಗದೆ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ಗ್ರಾಮ ಮಟ್ಟದಲ್ಲಿ ಸಭೆಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ರೈತರ ಸಮಾಲೋಚನೆಗಳನ್ನು ನಡೆಸಲಾಗುತ್ತಿದ್ದು, ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಹೋರಾಟ ಮುಂದುವರಿಯಲಿದೆ ಎಂದು ಟಿ. ಯಶವಂತ್‌ ತಿಳಿಸಿದ್ದಾರೆ.

ಇದನ್ನೂ ನೋಡಿ: ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ | “ಮನೆ ಕೊಡಿ ಅಥವಾ ಜೈಲಿಗಾದರೂ ಕಳುಹಿಸಿ” Janashakthi Media

Donate Janashakthi Media

Leave a Reply

Your email address will not be published. Required fields are marked *