59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟದಲ್ಲಿ ಕಾಂಗ್ರೆಸ್: ಟಿವಿಕೆ ಸರ್ಕಾರಕ್ಕೆ ಬೆಂಬಲದ ಫಲ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದಾಗಿ, ಸುಮಾರು 59 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸ್ಥಾನ ಸಿಗುತ್ತಿದೆ. ಟಿವಿಕೆ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಾದ ಎಸ್. ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಮೇ 21ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ತಮಿಳುನಾಡು

ಮದುರೈ ಜಿಲ್ಲೆಯ ಮೆಲೂರು ಕ್ಷೇತ್ರದಿಂದ ಪಿ. ವಿಶ್ವನಾಥನ್ ಹಾಗೂ ಕನ್ಯಾಕುಮಾರಿ ಜಿಲ್ಲೆಯ ಕಿಳಿಯೂರು ಕ್ಷೇತ್ರದಿಂದ ಎಸ್. ರಾಜೇಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಈ ಬೆಳವಣಿಗೆಯನ್ನು ಕಾಂಗ್ರೆಸ್ ನಾಯಕರು ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ಗೆ ಐತಿಹಾಸಿಕ ಕ್ಷಣವೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಅವರು, ಹಿಂದೆ ಹೆಚ್ಚಿನ ಶಾಸಕರಿದ್ದರೂ ಕಾಂಗ್ರೆಸ್‌ಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ| 11,000 ಗ್ರಾಮೀಣ ಸ್ವಚ್ಛತಾ ಕಾರ್ಮಿಕರ ಮುಷ್ಕರ: ವೇತನ, ಹಕ್ಕುಗಳಿಗಾಗಿ ಹೋರಾಟ

“1984 ಮತ್ತು 1991ರಲ್ಲಿ 60ಕ್ಕೂ ಹೆಚ್ಚು ಶಾಸಕರಿದ್ದರೂ ನಾವು ಸರ್ಕಾರದ ಭಾಗವಾಗಿರಲಿಲ್ಲ. 2006ರಲ್ಲಿ 34 ಶಾಸಕರೊಂದಿಗೆ ಡಿಎಂಕೆ ಅಲ್ಪಮತ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಇರಲಿಲ್ಲ. 2021ರಲ್ಲಿ 18 ಶಾಸಕರಿದ್ದರೂ ಪ್ರತಿನಿಧಿತ್ವ ಇರಲಿಲ್ಲ,” ಎಂದು ಅವರು ಹೇಳಿದ್ದಾರೆ.

“ಈಗ ಕೇವಲ 5 ಶಾಸಕರಿದ್ದರೂ ನಮ್ಮ ಇಬ್ಬರು ಸಹೋದ್ಯೋಗಿಗಳು ಸಚಿವರಾಗುತ್ತಿದ್ದಾರೆ. ಸುಮಾರು 60 ವರ್ಷಗಳ ಬಳಿಕ ಕಾಂಗ್ರೆಸ್ ಮತ್ತೆ ತಮಿಳುನಾಡು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದೆ,” ಎಂದು ಅವರು ತಿಳಿಸಿದ್ದಾರೆ.

1952ರಿಂದ 1967ರವರೆಗೆ ಆಗಿನ ಮದ್ರಾಸ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಸಿ. ರಾಜಗೋಪಾಲಾಚಾರಿ, ಕೆ. ಕಾಮರಾಜ್ ಮತ್ತು ಎಂ. ಭಕ್ತವತ್ಸಲಂ ಮುಖ್ಯಮಂತ್ರಿಗಳಾಗಿದ್ದರು. 1967ರಲ್ಲಿ ಡಿಎಂಕೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿತು.

ಆ ಬಳಿಕ ಡಿಎಂಕೆ ಮತ್ತು ಎಐಎಡಿಎಂಕೆ ಎರಡರ ಜೊತೆಯಲ್ಲೂ ಮೈತ್ರಿ ಮಾಡಿಕೊಂಡಿದ್ದರೂ, ಕಾಂಗ್ರೆಸ್‌ಗೆ ಸರ್ಕಾರದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

2006-11ರ ಅವಧಿಯಲ್ಲಿ ಡಿಎಂಕೆ ಸರ್ಕಾರದಲ್ಲಿ ಪಾಲುದಾರಿಕೆಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದರೂ ಅದು ಈಡೇರಲಿಲ್ಲ.

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಡಿಎಂಕೆ ನೇತೃತ್ವದ ಮೈತ್ರಿಯ ಭಾಗವಾಗಿತ್ತು. ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಒತ್ತಾಯಿಸಿದ್ದರೂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅದನ್ನು ತಿರಸ್ಕರಿಸಿದ್ದರು.

ಇದರಿಂದ ಮೈತ್ರಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಆದರೆ ಮೇ 4ರಂದು ಫಲಿತಾಂಶ ಪ್ರಕಟವಾದ ನಂತರ, ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದ್ದ ಟಿವಿಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತು.

ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್‌ಗೆ ಸಚಿವ ಸ್ಥಾನ ಲಭಿಸುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ನೋಡಿ: ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್‌ ಅಡ್ಡಿ – ನಾಯಕರು ಏನಂತಾರೆ? Janashakthi Media

Donate Janashakthi Media

Leave a Reply

Your email address will not be published. Required fields are marked *