ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಸುಮಾರು ₹18,000 ಕೋಟಿ ವೆಚ್ಚದ ಯೋಜನೆ ಕುರಿತು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ‘ಭೂ ಮಾಫಿಯಾ’ ಆರೋಪ ಮಾಡಿರುವ ಕೆಲವೇ ದಿನಗಳ ಬಳಿಕ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇ 20ರಂದು ಅವರನ್ನು ಹಾಗೂ ಅವರ ಪುತ್ರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಕ್ತ ಚರ್ಚೆಗೆ ಆಹ್ವಾನಿಸಿದ್ದಾರೆ.
“ಕುಮಾರಸ್ವಾಮಿ ಚರ್ಚೆ ಬೇಕೆಂದಿದ್ದಾರೆ. ಸಮಯ ಮತ್ತು ಸ್ಥಳವನ್ನು ಅವರು ತೀರ್ಮಾನಿಸಲಿ. ದೇವೇಗೌಡರೂ ಸೇರಬಹುದು,” ಎಂದು ಶಿವಕುಮಾರ್ ತಿಳಿಸಿದ್ದಾರೆ. ಬಿಡದಿ ಪ್ರದೇಶದಲ್ಲಿ ಸುಮಾರು 80% ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಡದಿ
ಮೂರು ದಿನಗಳ ಒಳಗೆ ಗ್ರಾಮವಾರು ಅಂತಿಮ ಭೂಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಲಾಗುತ್ತದೆ. ಜೂನ್ ಆರಂಭದಿಂದ ಪರಿಹಾರ ವಿತರಣೆಯೂ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: 3ನೇ ಮತ್ತು 4ನೇ ಮಗುವಿಗೆ ಪ್ರೋತ್ಸಾಹಕ ಯೋಜನೆ ಖಂಡಿಸಿ ಪ್ರತಿಭಟಣೆ
ಏಪ್ರಿಲ್ 30ರಂದು ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಈ ಯೋಜನೆಯಡಿ, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಒಂಬತ್ತು ಗ್ರಾಮಗಳಲ್ಲಿ ಒಟ್ಟು 7,481 ಏಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿದೆ.
ಈ ಯೋಜನೆಯನ್ನು “ಅಧಿಕೃತ ರಿಯಲ್ ಎಸ್ಟೇಟ್ ವ್ಯವಹಾರ” ಎಂದು ಟೀಕಿಸಿರುವ ಕುಮಾರಸ್ವಾಮಿ, ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಶಿವಕುಮಾರ್ ಹಾಗೂ ಕುಮಾರಸ್ವಾಮಿ ಇಬ್ಬರೂ ರಾಮನಗರ ಜಿಲ್ಲೆಯವರಾಗಿದ್ದು, ರೈತರ ಮೇಲೆ ಹೆಚ್ಚಿನ ಪ್ರಭಾವ ಹೊಂದಿದ್ದಾರೆ.
ಕನಕಪುರ ಶಾಸಕನಾಗಿರುವ ಶಿವಕುಮಾರ್, ಈ ಯೋಜನೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಅಧಿಸೂಚನೆಯಾಗಿತ್ತು ಎಂದು ಹೇಳಿದ್ದಾರೆ. “ಈ ಯೋಜನೆಯನ್ನು ನಾನು ಪ್ರಾರಂಭಿಸಿದದ್ದೇ ಅಲ್ಲ. ಇದನ್ನು ಡಿಎಲ್ಎಫ್ ಕಂಪನಿಗೆ ನೀಡಲಾಗಿತ್ತು. ಆದರೆ ಅದು ಆರ್ಥಿಕವಾಗಿ ಸಾಧ್ಯವಿಲ್ಲವೆಂದು ಹೇಳಿ ಹಿಂದೆ ಸರಿಯಿತು,” ಎಂದು ಅವರು ತಿಳಿಸಿದ್ದಾರೆ.
ರೈತರು ಹೇಳುವಂತೆ, 2006ರಿಂದ ಈ ಯೋಜನೆ ಬಾಕಿಯಲ್ಲೇ ಉಳಿದಿತ್ತು. “ಭೂಮಿಯನ್ನು ‘ರೆಡ್ ಝೋನ್’ ಎಂದು ಗುರುತಿಸಿದ್ದರಿಂದ ಖರೀದಿ-ಮಾರಾಟ ಸಾಧ್ಯವಾಗಿರಲಿಲ್ಲ,” ಎಂದು ಬಿಡದಿಯ ರೈತ ಆಲಸಂದ್ರ ಶ್ರೀನಿವಾಸ್ ತಿಳಿಸಿದ್ದಾರೆ. “ಈಗ ಪರಿಹಾರ ಪ್ರಕ್ರಿಯೆಯಲ್ಲಿ ಮುನ್ನಡೆ ಕಂಡುಬಂದಿದ್ದು, ಏಕರಿಗೆ ₹2 ಕೋಟಿ ಮೀರಿದ ಮೊತ್ತ ನಿಗದಿಯಾಗಿದೆ,” ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಹಾಗೂ ರೈತ ಮುಖಂಡ ಎಚ್. ರಾಜಣ್ಣ ಅವರ ಪ್ರಕಾರ, ಪರಿಹಾರವನ್ನು ಏಕರಿಗೆ ₹2.5 ಕೋಟಿ ವರೆಗೆ ನಿಗದಿಪಡಿಸಲಾಗಿದೆ. ಜೊತೆಗೆ ಕಾವೇರಿ ನೀರು ಸರಬರಾಜು ಮಾಡುವ ಯೋಜನೆಯೂ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ನಡುವೆ, ಉಕ್ಕು ಮತ್ತು ಸಿಮೆಂಟ್ ದರ ಇಳಿಕೆಗೆ ಗಮನ ಹರಿಸುವಂತೆ ಕುಮಾರಸ್ವಾಮಿಗೆ ಶಿವಕುಮಾರ್ ಸಲಹೆ ನೀಡಿದ್ದಾರೆ.
ರೈತರು ತಕ್ಷಣ ಭೂಮಿ ಮಾರಾಟ ಮಾಡಬಾರದು ಎಂದು ತಿಳಿಸಿರುವ ಶಿವಕುಮಾರ್, “ಯೋಜನೆ ಜಾರಿಯಾದ ಬಳಿಕ ಈ ಪ್ರದೇಶದ ಭೂಮಿಯ ಮೌಲ್ಯ ಹೆಚ್ಚಾಗಲಿದೆ. ಅದರ ಭವಿಷ್ಯ ಮೌಲ್ಯವನ್ನು ಇನ್ನೂ ರೈತರು ಅರ್ಥಮಾಡಿಕೊಂಡಿಲ್ಲ,” ಎಂದು ಹೇಳಿದರು.
ಯೋಜನೆಯಡಿ ಕನಕಪುರ ರಸ್ತೆ, ಬೆಂಗಳೂರು-ಮೈಸೂರು ರಸ್ತೆ ಹಾಗೂ ನೈಸ್ ರಸ್ತೆಗಳನ್ನು ಸಂಪರ್ಕಿಸುವ 40 ಕಿ.ಮೀ. ರಸ್ತೆ ಜಾಲ ನಿರ್ಮಾಣವಾಗಲಿದೆ. ಜೊತೆಗೆ ಸ್ಯಾಟಲೈಟ್ ಟೌನ್ ರಿಂಗ್ ರೋಡ್ನೊಂದಿಗೆ ಸಂಪರ್ಕ ಕಲ್ಪಿಸುವ ಯೋಜನೆಯೂ ಇದೆ.
ಇದನ್ನೂ ನೋಡಿ: ಸಾರಿಗೆ ನೌಕರರ ಮುಷ್ಕರ | 25% ವೇತನ ಹೆಚ್ಚಳ : ಸರಕಾರ ಯಾಕೆ ಒಪ್ಪುತ್ತಿಲ್ಲ? | ಎಸ್ ವರಲಕ್ಷ್ಮಿ Janashakthi Media
