ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಸಚಿವ ಸಂಪುಟವನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸಿದ್ದು, 23 ಹೊಸ ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ವಿಸ್ತರಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡು
ಚೆನ್ನೈನಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಹೊಸ ಸಚಿವರು ಅಧಿಕಾರ ಸ್ವೀಕರಿಸಿದರು. ಸಚಿವ ಸಂಪುಟ ವಿಸ್ತರಣೆಯ ವಿಶೇಷ ಅಂಶವೆಂದರೆ, ಸುಮಾರು ಆರು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷ ಮತ್ತೆ ತಮಿಳುನಾಡು ಸರ್ಕಾರದ ಭಾಗವಾಗಿರುವುದು. ಕಾಂಗ್ರೆಸ್ ಶಾಸಕರಾದ ರಾಜೇಶ್ ಕುಮಾರ್ ಮತ್ತು ಪಿ. ವಿಶ್ವನಾಥನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕೊನೆಯ ಬಾರಿ 1960ರ ದಶಕದಲ್ಲಿ ತಮಿಳುನಾಡು ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿತ್ತು. ಇದೀಗ ವಿಜಯ್ ನೇತೃತ್ವದ ಹೊಸ ರಾಜಕೀಯ ಸಮೀಕರಣದಲ್ಲಿ ಕಾಂಗ್ರೆಸ್‌ಗೆ ಅವಕಾಶ ದೊರೆತಿರುವುದು ರಾಷ್ಟ್ರೀಯ ರಾಜಕೀಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ನಿರ್ಧಾರಕ್ಕೆ ಅನುಮೋದನೆ ನೀಡಿದ್ದು, ಪಕ್ಷದ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : ಹರಿಯಾಣ| 11,000 ಗ್ರಾಮೀಣ ಸ್ವಚ್ಛತಾ ಕಾರ್ಮಿಕರ ಮುಷ್ಕರ: ವೇತನ, ಹಕ್ಕುಗಳಿಗಾಗಿ ಹೋರಾಟ
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಅಚ್ಚರಿಯ ಗೆಲುವು ಸಾಧಿಸಿತ್ತು. ಬಳಿಕ ಮುಖ್ಯಮಂತ್ರಿ ಪಟ್ಟಕ್ಕೇರಿದ ವಿಜಯ್, ಮೊದಲ ಹಂತದಲ್ಲೇ ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ಗೃಹ, ಪೊಲೀಸ್, ನಗರಾಡಳಿತ, ಯುವಜನ ಕಲ್ಯಾಣ ಸೇರಿದಂತೆ ಹಲವು ಪ್ರಮುಖ ಇಲಾಖೆಗಳನ್ನು ವಿಜಯ್ ನೋಡಿಕೊಳ್ಳುತ್ತಿದ್ದಾರೆ.
ಈಗ ಸಚಿವ ಸಂಪುಟ ವಿಸ್ತರಣೆಯ ಮೂಲಕ ಪ್ರಾದೇಶಿಕ ಸಮತೋಲನ, ಸಾಮಾಜಿಕ ಪ್ರತಿನಿಧಿತ್ವ ಹಾಗೂ ಮೈತ್ರಿ ರಾಜಕಾರಣಕ್ಕೆ ಒತ್ತು ನೀಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈ ಸೇರಿದಂತೆ ಹಲವು ಭಾಗಗಳಿಗೆ ಹೆಚ್ಚುವರಿ ಪ್ರತಿನಿಧಿತ್ವ ನೀಡಲಾಗಿದೆ.
ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸಾಂಪ್ರದಾಯಿಕ ಪ್ರಭಾವವಿದ್ದ ತಮಿಳುನಾಡಿನಲ್ಲಿ ವಿಜಯ್ ಸರ್ಕಾರದ ಈ ಹೆಜ್ಜೆ ಹೊಸ ರಾಜಕೀಯ ಅಧ್ಯಾಯಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಕಾಂಗ್ರೆಸ್‌ಗೆ ಸಚಿವ ಸ್ಥಾನ ನೀಡಿರುವುದು ಭವಿಷ್ಯದ ರಾಷ್ಟ್ರೀಯ ರಾಜಕೀಯ ಮೈತ್ರಿಗಳ ದೃಷ್ಟಿಯಿಂದಲೂ ಮಹತ್ವದ್ದೆಂದು ಪರಿಗಣಿಸಲಾಗಿದೆ.
ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media
