ಬಿಡದಿ ಟೌನ್‌ಶಿಪ್ ಯೋಜನೆ ರದ್ದುಪಡಿಸಿ : ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಬೆಂಗಳೂರು:ಫಲವತ್ತಾದ ಕೃಷಿ ಭೂಮಿಯನ್ನು ನಾಶಗೊಳಿಸಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಪರಿಸರ ವಿನಾಶಕಾರಿ ಎಂದು ಆರೋಪಿಸಿರುವ ಸಂಯುಕ್ತ ಹೋರಾಟ ಕರ್ನಾಟಕ, ಯೋಜನೆಗೆ ನೀಡಿರುವ ರಾಜ್ಯ ಸಂಪುಟದ ಅನುಮೋದನೆಯನ್ನು ಕೂಡಲೇ ವಾಪಸ್ ಪಡೆದು ಸುಮಾರು 9,640 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದೆ. ಬಿಡದಿ

ಸೋಮವಾರ ನಗರದ ಗಾಂಧಿ ಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಸಿದ್ದನಗೌಡ ಪಾಟೀಲ, ನೂರ್ ಶ್ರೀಧರ್, ಟಿ. ಯಶವಂತ, ಪಿ.ಪಿ. ಅಪ್ಪಣ್ಣ, ಪ್ರಕಾಶ್ ಸೇರಿದಂತೆ ಹಲವು ರೈತ ಮುಖಂಡರು ಮಾತನಾಡಿದರು.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 25 ಗ್ರಾಮಗಳ 9,640 ಎಕರೆ ಪ್ರದೇಶ ವರ್ಷಪೂರ್ತಿ ನೀರಾವರಿ ಹೊಂದಿರುವ ಸಮೃದ್ಧ ಕೃಷಿಭೂಮಿಯಾಗಿದ್ದು, ಇಲ್ಲಿ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳ ಜೊತೆಗೆ ರೇಷ್ಮೆ, ಹೈನುಗಾರಿಕೆ, ಜೋಳ, ರಾಗಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ವಿವರಿಸಿದರು.

ಈ ಪ್ರದೇಶವು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸುವ ಪ್ರಮುಖ ಆಹಾರ ಉತ್ಪಾದನಾ ವಲಯವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ಯಮಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತದ ಭೂಸ್ವಾಧೀನ ಹೇರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ 13,273 ಟನ್ ಕಸ ಸಂಗ್ರಹ, 10,826 ಟನ್ ಮಾತ್ರ ಸಂಸ್ಕರಣೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ 17(1) ಅಡಿಯಲ್ಲಿ 2025ರ ಮಾರ್ಚ್ 13ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3,500ಕ್ಕೂ ಹೆಚ್ಚು ರೈತರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರೂ ಸರ್ಕಾರ ಇದುವರೆಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿದರು.

ಕಳೆದ ಒಂದೂವರೆ ವರ್ಷಗಳಿಂದ ರೈತರು ವಿವಿಧ ರೀತಿಯ ಹೋರಾಟ ನಡೆಸುತ್ತಿದ್ದು, 428 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದ್ದರೂ ಸರ್ಕಾರ ಭಾಧಿತ ರೈತರ ಮಾತು ಕೇಳದೇ ಸಂಪುಟ ಅನುಮೋದನೆ ನೀಡಿರುವುದು ರೈತರ ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಸುತ್ತಮುತ್ತಲಿನ ಹಸಿರು ಪ್ರದೇಶಗಳನ್ನು ನಾಶಮಾಡಿ ನಿರ್ಮಿಸಲಾದ ಬಡಾವಣೆಗಳು ಮತ್ತು ಲೇಔಟ್‌ಗಳಿಂದ ಈಗಾಗಲೇ ನಗರ ಉಷ್ಣಾಂಶ ಹೆಚ್ಚಳ, ನೀರಿನ ಸಂಕಷ್ಟ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿದೆ. ಲಕ್ಷಾಂತರ ನಿವೇಶನಗಳು ಮತ್ತು ನೂರಾರು ಅಪಾರ್ಟ್‌ಮೆಂಟ್‌ಗಳು ಖಾಲಿ ಬಿದ್ದಿರುವ ಸಂದರ್ಭದಲ್ಲಿಯೂ ಹೊಸ ಟೌನ್‌ಶಿಪ್ ಯೋಜನೆಗಳನ್ನು ಮುಂದಿರಿಸುವುದು ರಿಯಲ್ ಎಸ್ಟೇಟ್ ಹಿತಾಸಕ್ತಿಗೆ ಸರ್ಕಾರ ಕೆಲಸ ಮಾಡುತ್ತಿರುವುದರ ಸೂಚನೆ ಎಂದು ಟೀಕಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ವಿರೋಧವನ್ನು ಕಡೆಗಣಿಸಿ ಯೋಜನೆ ಪರವಾಗಿ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದ ಹೋರಾಟಗಾರರು, ಆಡಳಿತ ಯಂತ್ರದ ಮೂಲಕ ದಮನಾತ್ಮಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರು.

“ಬಿಡದಿ ಮತ್ತೊಂದು ದೇವನಹಳ್ಳಿ ಆಗಲಿದೆ”

“ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ. ಸರ್ಕಾರ ಬಂಡವಾಳಿಗರ ಬೆಂಗಳೂರು ನಿರ್ಮಾಣಕ್ಕೆ ಹೊರಟಿದೆ. ಇದೇ ರೀತಿ ರೈತ ವಿರೋಧಿ ನೀತಿ ಮುಂದುವರಿದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು” ಎಂದು ಹೋರಾಟಗಾರರು ಎಚ್ಚರಿಸಿದರು.

ಕುಡಿತಿನಿ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೆ

ಬಳ್ಳಾರಿ ಜಿಲ್ಲೆಯ ಕುಡಿತಿನಿ ಭಾಗದಲ್ಲಿ 2012ರಲ್ಲಿ ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಕೆಐಎಡಿಬಿ ಮೂಲಕ ಸುಮಾರು 12,500 ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡರೂ ಇಂದಿಗೂ ಕೈಗಾರಿಕೆ ಸ್ಥಾಪನೆಯಾಗಿಲ್ಲ ಎಂದು ಸಂಯುಕ್ತ ಹೋರಾಟ ಕರ್ನಾಟಕ ಆರೋಪಿಸಿದೆ.

ಅರ್ಸೆಲರ್ ಮಿತ್ತಲ್ ಸೇರಿದಂತೆ ಕಂಪನಿಗಳ ಹೆಸರಿನಲ್ಲಿ ವಶಪಡಿಸಿಕೊಂಡ ಭೂಮಿಯನ್ನು ನಂತರ ಜಿಂದಾಲ್ ಕಂಪನಿಗೆ ವರ್ಗಾವಣೆ ಮಾಡಿರುವುದು ಕಾನೂನುಬಾಹಿರ ಹಾಗೂ ಭ್ರಷ್ಟಾಚಾರದ ಕೃತ್ಯ ಎಂದು ಟೀಕಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ನ್ಯಾಯಸಮ್ಮತ ಬೆಲೆ ನಿಗದಿ ಮಾಡಿ ಕೈಗಾರಿಕೆ ಸ್ಥಾಪಿಸಬೇಕು ಅಥವಾ ರೈತರಿಗೆ ಭೂಮಿಯನ್ನು ವಾಪಸು ನೀಡಬೇಕು ಎಂದು ಆಗ್ರಹಿಸಿದೆ.

ಹೋರಾಟ ನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಸಂಘಟನೆ, ದಮನಕಾರಿ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.

ಮೈಸೂರು ನಿಮ್ಹಾನ್ಸ್ ಆಸ್ಪತ್ರೆ ಸ್ಥಳಾಂತರಕ್ಕೆ ಆಗ್ರಹ

ಮೈಸೂರು ನಗರದ ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದ ನೀರಾವರಿ ಕೃಷಿಭೂಮಿಯಲ್ಲಿ ಬಗರ್ ಹುಕಂ ಸಾಗುವಳಿದಾರರನ್ನು ತೆರವುಗೊಳಿಸಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವವನ್ನೂ ಸಂಯುಕ್ತ ಹೋರಾಟ ಕರ್ನಾಟಕ ವಿರೋಧಿಸಿದೆ.

ಮೈಸೂರು ನಗರದಲ್ಲಿಯೇ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿದ್ದು, ಈಗಾಗಲೇ ಖಾಸಗಿ ಕಂಪನಿಗಳಿಗೆ ನೀಡಲಾಗಿರುವ ಬಳಕೆಯಾಗದ ಭೂಮಿಯಲ್ಲೇ ಆಸ್ಪತ್ರೆ ನಿರ್ಮಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಇದನ್ನೂ ನೋಡಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media

Donate Janashakthi Media

Leave a Reply

Your email address will not be published. Required fields are marked *