ಬೆಂಗಳೂರು : ಮನೆ ಕಳೆದುಕೊಂಡಿರುವ ಕೋಗಿಲು ಲೇಔಟ್ ಸ್ಲಂ ನಿವಾಸಿಗಳು ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮೇ 18ರಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಹಗಲು-ರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ. ಹಲವು ತಿಂಗಳಿಂದ ಬೀದಿಯಲ್ಲೇ ಜೀವನ ಸಾಗಿಸುತ್ತಿರುವ ಕುಟುಂಬಗಳು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿವೆ. ಮನೆ
ಪ್ರತಿಭಟನಾಕಾರರ ಆರೋಪದ ಪ್ರಕಾರ, ಕಳೆದ ಡಿಸೆಂಬರ್‌ನಲ್ಲಿ ಜಿಬಿಎ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸಿದ ಬಳಿಕ ನೂರಾರು ಕುಟುಂಬಗಳು ಆಶ್ರಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಕುಟುಂಬಗಳು ಮಕ್ಕಳೊಂದಿಗೆ ಬೀದಿಯಲ್ಲೇ ದಿನ ಕಳೆಯುವಂತಾಗಿದೆ. ಮಳೆ, ಬಿಸಿಲು, ಚಳಿ ನಡುವೆಯೇ ತಾತ್ಕಾಲಿಕ ಶೆಡ್‌ಗಳಲ್ಲಿ ಬದುಕು ಸಾಗಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
“ಸರ್ಕಾರ ಎಲ್ಲರಿಗೂ ಮನೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಂದಿಗೂ ಶಾಶ್ವತ ನೆಲೆ ಒದಗಿಸಿಲ್ಲ. ಕನಿಷ್ಠ ತಾತ್ಕಾಲಿಕ ಪುನರ್ವಸತಿಯನ್ನೂ ಕಲ್ಪಿಸಿಲ್ಲ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ವಲಯಗಳು ನಿವಾಸಿಗಳ ವಿರುದ್ಧ ತಪ್ಪು ಪ್ರಚಾರ ನಡೆಸುತ್ತಿವೆ ಎಂದು ಕೂಡ ಅವರು ಆರೋಪಿಸಿದ್ದಾರೆ. ಮನೆ
ಇದನ್ನೂ ಓದಿ : ಬೆಂಗಳೂರು | ಫಕೀರ್ ಕಾಲೋನಿ, ಕೋಗಿಲು ಲೇಔಟ್ ನಲ್ಲಿ ಬಡವರ ಗಣರಾಜ್ಯೋತ್ಸವ ಆಚರಣೆ
“ಮನೆ ಕೊಡಿ ಅಥವಾ ಜೈಲಿಗಾದರೂ ಕಳುಹಿಸಿ” ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಹೋರಾಟಕ್ಕೆ ವಿವಿಧ ಜನಪರ, ದಲಿತ ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ, ದುಡಿಯುವ ಜನರ ವೇದಿಕೆಯ ಮನೋಹರ, ಚಂದ್ರಮ್ಮ, ನಂದಿನಿ, ದಲಿತ ನಾಯಕ ಮುನಿ ಅಂಜಿನಪ್ಪ ನಿಶಾಗೋಳೂರು ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು ಭಾಗವಹಿಸಿ ನಿವಾಸಿಗಳ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮನೆ ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. “ಬಡವರ ಬದುಕನ್ನು ಬೀದಿಗೆ ತಳ್ಳುವ ಅಭಿವೃದ್ಧಿ ಯೋಜನೆಗಳು ಮಾನವೀಯತೆಯ ವಿರುದ್ಧ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪೂರ್ಣ ಪುನರ್ವಸತಿ ಕಲ್ಪಿಸಿ, ಶಾಶ್ವತ ಮನೆ ಹಾಗೂ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೊಗಿಲು ಲೇಔಟ್ ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಮನೆ
ಇದನ್ನೂ ನೋಡಿ : ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media
