ನವದೆಹಲಿ : ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಶ್ನೆಪತ್ರಿಕೆ ರಚನಾ ಸಮಿತಿಯೊಂದಿಗೇ ಸಂಪರ್ಕ ಹೊಂದಿದ್ದ ಜೀವಶಾಸ್ತ್ರ ಉಪನ್ಯಾಸಕರನ್ನು ಸಿಬಿಐ ಬಂಧಿಸಿದೆ. ಈ ಬಂಧನದಿಂದ ಪ್ರಶ್ನೆಪತ್ರಿಕೆ ಸೋರಿಕೆಯ ಜಾಲ ನೇರವಾಗಿ ಪರೀಕ್ಷಾ ವ್ಯವಸ್ಥೆಯ ಒಳವಲಯದವರೆಗೂ ತಲುಪಿರುವ ಶಂಕೆ ಮತ್ತಷ್ಟು ಬಲಗೊಂಡಿದೆ.
ಸಿಬಿಐ ತನಿಖೆ ಪ್ರಕಾರ, ಮಹಾರಾಷ್ಟ್ರದ ಪುಣೆ ಮೂಲದ ಪಿ.ವಿ. ಕುಲಕರ್ಣಿ ಹಲವು ವರ್ಷಗಳಿಂದ ನೀಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಎನ್‌ಟಿಎ ಪರವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಕಾರಣ ಅವರಿಗೆ ಪ್ರಶ್ನೆಪತ್ರಿಕೆಗಳಿಗೆ ಪ್ರವೇಶ ದೊರಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಸಂಸ್ಥೆಯ ಆರೋಪದಂತೆ, ಕುಲಕರ್ಣಿ ಗುಪ್ತ ತರಗತಿಗಳ ಮೂಲಕ ಕೆಲ ಅಭ್ಯರ್ಥಿಗಳಿಗೆ ಪ್ರಶ್ನೆಗಳು, ಬಹು ಆಯ್ಕೆ ಉತ್ತರಗಳು ಹಾಗೂ ಸರಿಯಾದ ಉತ್ತರಗಳನ್ನು ಮುಂಚಿತವಾಗಿ ತಿಳಿಸಿದ್ದರು. ವಿದ್ಯಾರ್ಥಿಗಳು ಇದಕ್ಕಾಗಿ ಲಕ್ಷಾಂತರ ರೂಪಾಯಿ ಪಾವತಿಸಿದ್ದರು ಎಂದು ಸಿಬಿಐ ಹೇಳಿದೆ. ಬಳಿಕ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳು ಮತ್ತು ಈ ತರಗತಿಗಳಲ್ಲಿ ನೀಡಲಾದ ಪ್ರಶ್ನೆಗಳು ಒಂದಕ್ಕೊಂದು ಹೊಂದಿಕೆಯಾಗಿದ್ದವು ಎಂಬುದೂ ತನಿಖೆಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಕನಸ್ಸನ್ನು ವ್ಯಾಪಾರವಾಗಿಸಿರುವ “ಎಗ್ಜಾಮ್ ಮಾಫಿಯಾ”
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ರಾಜಸ್ಥಾನ, ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಬಿಐ ದಾಳಿ ಮತ್ತು ತನಿಖೆ ಮುಂದುವರಿಸಿದೆ. ಪ್ರಶ್ನೆಪತ್ರಿಕೆ ‘ಗಸ್ ಪೇಪರ್’ ಹೆಸರಿನಲ್ಲಿ ವಿವಿಧ ಕೋಚಿಂಗ್ ಜಾಲಗಳ ಮೂಲಕ ಹರಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ನೀಟ್-ಯುಜಿ 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ಎನ್‌ಟಿಎ ಈಗಾಗಲೇ ರದ್ದುಗೊಳಿಸಿದೆ. ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಕುರಿತು ದೇಶಾದ್ಯಂತ ಗಂಭೀರ ಚರ್ಚೆ ಆರಂಭವಾಗಿದೆ.
ಇದನ್ನೂ ನೋಡಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
