ಬೆಂಗಳೂರು | ಕಣ್ಮರೆಯಾಗುತ್ತಿರುವ ಪಾದಚಾರಿ ಮಾರ್ಗ; ಹೆಚ್ಚುತ್ತಿರುವ ರಸ್ತೆ ಸಾವುಗಳು

ಬೆಂಗಳೂರು :  ಐಟಿ ನಗರ ಬೆಂಗಳೂರು ದಿನೇದಿನೇ ವಾಹನ ದಟ್ಟಣೆ, ಹಾಳಾದ ರಸ್ತೆಗಳು ಹಾಗೂ ಅಸುರಕ್ಷಿತ ಪಾದಚಾರಿ ಮಾರ್ಗಗಳ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದೆ. ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಒಡೆದು ಹೋಗಿರುವುದು, ಅತಿಕ್ರಮಣಕ್ಕೊಳಗಾಗಿರುವುದು ಹಾಗೂ ಕಾಮಗಾರಿಗಳಿಗಾಗಿ ತೋಡಿಬಿಟ್ಟು ಹಾಗೆಯೇ ಬಿಟ್ಟಿರುವುದು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ನಗರದ ಸಂಚಾರ ತಜ್ಞರು ಮತ್ತು ನಾಗರಿಕ ಹೋರಾಟಗಾರರ ಪ್ರಕಾರ, ಸುರಕ್ಷಿತ ಪಾದಚಾರಿ ಮಾರ್ಗಗಳ ಕೊರತೆಯಿಂದ ಜನರು ರಸ್ತೆ ಮೇಲೆಯೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು ಹಾಗೂ ಮಹಿಳೆಯರು ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ. ವೇಗದ ವಾಹನ ಸಂಚಾರದ ನಡುವೆ ಪಾದಚಾರಿಗಳು ರಸ್ತೆಗೆ ಇಳಿಯಬೇಕಾಗುತ್ತಿರುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಅಂಕಿಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ. 2024ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಒಟ್ಟು 893 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 233 ಮಂದಿ ಪಾದಚಾರಿಗಳು. ಅಂದರೆ ಒಟ್ಟು ರಸ್ತೆ ಸಾವುಗಳಲ್ಲಿ ಸುಮಾರು 26 ರಿಂದ 28 ಶೇಕಡಾ ಮಂದಿ ಪಾದಚಾರಿಗಳೇ ಆಗಿದ್ದಾರೆ. 2023ರಲ್ಲಿ 287 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದರೆ, 2022ರಲ್ಲಿ ಈ ಸಂಖ್ಯೆ 248 ಆಗಿತ್ತು. 2025ರ ನವೆಂಬರ್‌ವರೆಗೆ ನಡೆದ ಅಪಘಾತಗಳಲ್ಲಿ ಮೃತಪಟ್ಟ 763 ಮಂದಿಯಲ್ಲಿ 218 ಮಂದಿ ಪಾದಚಾರಿಗಳೇ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ಮೂರು ವರ್ಷಗಳಲ್ಲಿ ಮಾತ್ರ 768 ಪಾದಚಾರಿಗಳು ಬೆಂಗಳೂರಿನ ರಸ್ತೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾಳಾದ ರಸ್ತೆಗಳು, ಗುಂಡಿಗಳು, ಸರಿಯಾದ ಸೂಚನಾ ಫಲಕಗಳ ಕೊರತೆ, ಅಕ್ರಮ ಪಾರ್ಕಿಂಗ್‌ ಹಾಗೂ ಅತಿಕ್ರಮಿತ ಪಾದಚಾರಿ ಮಾರ್ಗಗಳು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ನಾಗರಿಕ ಸಂಘಟನೆಗಳು ಆರೋಪಿಸಿವೆ. ನಗರದ ಅನೇಕ ಭಾಗಗಳಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಿಟುಮಿನ್‌ ಕೊರತೆ ಹಾಗೂ ಅಪೂರ್ಣ ಕಾಮಗಾರಿಗಳಿಂದ ಪ್ರಮುಖ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ : ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರ ಮತದಾನ: 10 ಮಂದಿ ಬಂಧನ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, 2023ರಲ್ಲಿ ಬೆಂಗಳೂರಿನಲ್ಲಿ ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ 20 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಹಾಳಾದ ರಸ್ತೆಗಳು, ಗುಂಡಿಗಳು, ಒಡೆದ ಅಥವಾ ಅತಿಕ್ರಮಣಗೊಂಡ ಪಾದಚಾರಿ ಮಾರ್ಗಗಳು ಪ್ರಮುಖ ಕಾರಣಗಳಾಗಿದ್ದವು. 2024ರಲ್ಲಿ ಕೂಡ ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ 17 ಮಂದಿ ಸಾವನ್ನಪ್ಪಿದ್ದು, ದೇಶದ ಮಹಾನಗರಗಳಲ್ಲಿ ಬೆಂಗಳೂರು ಮತ್ತೆ ಮೊದಲ ಸ್ಥಾನದಲ್ಲಿತ್ತು ಎಂದು ವರದಿ ಹೇಳಿದೆ.

ಈ ನಡುವೆ, ಸಾರ್ವಜನಿಕ ಸಾರಿಗೆ ಹಾಗೂ ಪಾದಚಾರಿ ಸ್ನೇಹಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡದೇ ಕೇವಲ ಮೇಲ್ಸೇತುವೆಗಳು ಮತ್ತು ರಸ್ತೆ ವಿಸ್ತರಣೆಯ ಮೇಲೆಯೇ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ವ್ಯಕ್ತವಾಗುತ್ತಿವೆ. ನಗರ ಯೋಜನೆಯ ವೈಫಲ್ಯ, ಪಾದಚಾರಿ ಮಾರ್ಗಗಳ ಕೊರತೆ ಹಾಗೂ ಆಡಳಿತದ ನಿರ್ಲಕ್ಷ್ಯ ನೇರವಾಗಿ ಜನರ ಜೀವಕ್ಕೆ ಅಪಾಯವಾಗುತ್ತಿದೆ ಎಂಬ ಆತಂಕ ಈಗ ಮತ್ತಷ್ಟು ಗಂಭೀರವಾಗಿದೆ.

2025-26ರ ಬಜೆಟ್‌ನಲ್ಲಿ ಎಲ್ಲಾ ಕಾರ್ಪೊರೇಷನ್‌ಗಳ 369 ವಾರ್ಡ್‌ಗಳಿಗೆ ಒಟ್ಟು 2.25 ಕೋಟಿ ರೂ. ಅನುದಾನ ನೀಡಲಾಗಿದೆ. ಒಟ್ಟಾರೆ ಇದು ಸುಮಾರು 1,000 ಕೋಟಿ ರೂ.ಗಳಿಗೆ ಸಮನಾಗುತ್ತದೆ. ಆದರೆ ಈ ಹಣವನ್ನು ಸಾಮಾನ್ಯವಾಗಿ ಕಾಲುವೆ ಹೂಳು ತೆಗೆಯುವುದು, ಪಾದಚಾರಿ ಮಾರ್ಗದ ಕಲ್ಲುಗಳನ್ನು ದುರಸ್ತಿ ಮಾಡುವುದು ಮುಂತಾದ ಸಣ್ಣಪುಟ್ಟ ಕಾಮಗಾರಿಗಳಿಗೆ ಬಳಸಲಾಗುತ್ತಿದೆ.

ಎಲ್ಲರಿಗೂ ಸುರಕ್ಷಿತ ಮತ್ತು ಸುಗಮ ಪಾದಚಾರಿ ಮಾರ್ಗಗಳನ್ನು ಒದಗಿಸುವ ರಾಜಕೀಯ ಇಚ್ಛಾಶಕ್ತಿ ಪ್ರತಿಯೊಂದು ಕಾರ್ಪೊರೇಷನ್‌ಗೂ ಅಗತ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ನೋಡಿ : ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *