ಕಳೆದ ವಾರ ಕಳೆದ ಎರಡು ದಶಕಗಳ ಬೆಳವಣಿಗೆಯ(ಅವನತಿಯ?) ಒಂದು ಸಂಕ್ಷಿಪ್ತ ನೋಟ ಕಾಣ ಬಂತು- ಎಪ್ರಿಲ್ ೨೪ರಂದು ಅಧ್ಯಕ್ಷ ಟ್ರಂಪ್ ರವರ ʼನರಕದ ಗುಂಡಿʼ ಪೋಸ್ಟ್, ಅದೇ ದಿನ ವಾಶಿಂಗ್ಟನ್ನಲ್ಲಿ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಗಳ ʼತಳಮಳʼ , ಮರುದಿನ ಅದನ್ನು ಅವರು ನಿರಾಕರಿಸುತ್ತಿರುವಂತೆಯೇ ಅಧ್ಯಕ್ಷ ಟ್ರಂಪ್ ಗೆ ನಮ್ಮಪ್ರಧಾನಿಗಳು ಸಮಾಧಾನ/ ಸಾಂತ್ವನ ನೀಡಲು ಧಾವಿಸಿದ ಒಟ್ಟು ನೋಟ-ದೇಶದ ವ್ಯಂಗ್ಯಚಿತ್ರಕಾರರ ಸಂಗಡ.
ವ್ಯಂಗ್ಯಚಿತ್ರ ಕೃಪೆ:ಸತೀಶ ಆಚಾರ್ಯ @ ಫೇಸ್ ಬುಕ್
ಎಪ್ರಿಲ್ ೨೪ರಂದು ಭಾರತ ಒಂದು ನರಕದ ಗುಂಡಿ ಎಂದಿತ್ಯಾದಿ ಯುಎಸ್ ನ ಒಬ್ಬ ರೇಡಿಯೋ ಹೋಸ್ಟ್ ಹೇಳಿದ್ದನ್ನು ಅಧ್ಯಕ್ಷ ಟ್ರಂಪ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಮುಖ್ಯವಾಗಿ ತನ್ನ ಯಾವುದೇ ಸ್ವಂತ ಟಿಪ್ಪಣಿ ಸೇರಿಸದೆ, ಬಲಪಂಥೀಯ ಎಂದು ಮಾಧ್ಯಮಗಳೇ ಹೇಳಿರುವ ಒಬ್ಬ ವ್ಯಕ್ತಿಯ ಮಾತುಗಳನ್ನು ಪೂರ್ಣವಾಗಿ ಪೋಸ್ಟ್ ಮಾಡಿದ್ದು, ಇದು ಟ್ರಂಪ್ರವರ ಅಭಿಪ್ರಾಯ ಕೂಡ ಎಂದು ಪರಿಗಣಿಸಲಾಗಿದೆ. ಯಥಾಪ್ರಕಾರ ಅವರ ʼವೆರಿಗುಡ್ ಫ್ರೆಂಡ್ʼ ಇದರ ಬಗ್ಗೆ ಹಾ-ಹೂ ಅನ್ನಲಿಲ್ಲ. ಭಾರತದ ವಿದೇಶಾಂಗ ಮಂತ್ರಿಗಳೂ ಮತ್ತು ಬಿಜೆಪಿ-ಆರೆಸ್ಸೆಸ್ನ ಮುಖಂಡರೂ ಕೂಡ..
“ಅದೃಷ್ಟವಶಾತ್, ಸರಕಾರದಲ್ಲಿ ಯಾರೂ ಗಾಯಗೊಂಡಿಲ್ಲ- ಅವರೆಲ್ಲ ಪ್ರಚಾರದಲ್ಲಿದ್ದರು.”!
ವ್ಯಂಗ್ಯಚಿತ್ರ ಕೃಪೆ:ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಪತ್ರಿಕಾಗೋಷ್ಠಿಯಲ್ಲಿ ಮೊದಲಿಗೆ ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ವಿದೇಶಾಂಗ ಇಲಾಖೆಯ ವಕ್ತಾರರು, ಈ ಬಗ್ಗೆ ಬಹಳಷ್ಟು ಪ್ರಶ್ನೆಗಳು ಎದ್ದಾಗ, ಇದು ”ಮಾಹಿತಿಯಿಲ್ಲದ, ಸೂಕ್ತವಲ್ಲದ, ದುರಭಿರುಚಿಯ” ಟಿಪ್ಪಣಿ ಎಂದು ಹೇಳಿ ಸುಮ್ಮನಾದರು. ಟ್ರಂಪ್ರವರ ಹೆಸರಿನ ಪ್ರಸ್ತಾಪವೂ ಇರಲಿಲ್ಲ. ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ “ನಮ್ಮ ಅಧ್ಯಕ್ಷರು ಭಾರತ ನನ್ನ ಒಬ್ಬ ವೆರಿಗುಡ್ ಫ್ರೆಂಡ್ ಅತ್ಯುನ್ನತ ಸ್ಥಾನದಲ್ಲಿರುವ ಒಂದು ಮಹಾನ್ ದೇಶ ಎಂದು ಹೇಳಿದ್ದಾರೆ” ಎಂದು ಸಮಜಾಯಿಷಿ ಕೊಟ್ಟಿತು.
ಟ್ರಂಪ್ರವರ ಇತ್ತೀಚಿನ ಹೇಳಿಕೆಗಳ ಸರಮಾಲೆ ನೋಡಿದವರಿಗೆ, ಕೇಳಿದವರಿಗೆ ಇದೇನು ಮಹಾಸುದ್ದಿ, ಅದಕ್ಕೇಕೆ ನಮ್ಮ ಪ್ರಧಾನಿಗಳು ಪ್ರತಿಕ್ರಿಯಿಸಬೇಕು ಎಂದನಿಸುವುದು ಸಹಜ. ಆದರೆ ಅದರ ಬೆನ್ನಿಗೇ ಇದನ್ನೂ ಪ್ರಶ್ನಿಸುವ ಇನ್ನೆರಡು ಸುದ್ದಿಗಳು ಪ್ರಕಟವಾದವು.
***
ಇದನ್ನೂ ಓದಿ :ಸಾಮ್ರಾಜ್ಯಶಾಹಿ ಯು.ಎಸ್ ವಿರುದ್ಧ ಇರಾನ್ ಪ್ರತಿರೋಧ ಜಾಗತಿಕವಾಗಿ ಮನ್ನಣೆ – ರಾಘವಲು
ಎಪ್ರಿಲ್ ೨೬ರಂದು ವಾಶಿಂಗ್ಟನ್ನಿನಲ್ಲಿ ಅಧ್ಯಕ್ಷರು, ಅವರ ಪತ್ನಿ, ಉಪಾಧ್ಯಕ್ಷರು ಮತ್ತು ಸರಕಾರದ ಹಲವು ಹಿರಿಯ ಅಧಿಕಾರಿಗಳು ಮತ್ತು ನೂರಾರು ಗಣ್ಯರು ಹಾಗೂ ಪತ್ರಕರ್ತರು ಭಾಗವಹಿಸಿದ್ದ ಶ್ವೇತಭವನದ ಬಾತ್ಮೀದಾರರ ವಾರ್ಷಿಕ ಔತಣ ಕೂಟ ನಡೆಯುತ್ತಿದ್ದಾಗ , ಅದರ ಕೆಳಗಿನ ಮಹಡಿಯಲ್ಲಿ ಗುಂಡುಹಾರಾಟದ ಸದ್ದು ಬಂದು ಅಧ್ಯಕ್ಷರನ್ನು ಮತ್ತು ಇತರ ಗಣ್ಯರನ್ನು ಭದ್ರತಾ ಪಡೆಯವರು ಅವಸರವಸರವಾಗಿ ಪಾರು ಮಾಡಿದರು ಎಂಬುದು ಮೊದಲ ಸುದ್ದಿ. .ಅದಕ್ಕಿಂತ ಹೆಚ್ಚಾಗಿ ಇದನ್ನು ತಕ್ಷಣವೇ ನಮ್ಮ ಪ್ರಧಾನಿಗಳು ಖಂಡಿಸಿದರು ಎಂಬುದು.
“ಅಧ್ಯಕ್ಷ ಟ್ರಂಪ್ ಮತ್ತು ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತರಾಗಿದ್ದಾರೆ ಎಂದು ಕೇಳಿ ಸಮಾಧಾನವಾಗಿದೆ…ಅವರು ಮುಂದೆಯೂ ಸುರಕ್ಷಿತರಾಗಿರಲಿ ಮತ್ತು ಚೆನ್ನಾಗಿರಲಿ ಎಂಬುದು ನನ್ನ ಸದಾಶಯಗಳು” ಎಂದು ಎಕ್ಸ್ನಲ್ಲಿ ಟ್ವೀಟ್ ಮಾಡಿರುವುದಾಗಿ ವರದಿಯಾಗಿದೆ. ಯಥಾಪ್ರಕಾರ “ಒಂದು ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ, ಇದನ್ನು ನಿಸ್ಸಂದಿಗ್ಧವಾಗಿ ಖಂಡಿಸಲೇ ಬೇಕು “ ಎಂಬ ವಾಕ್ಯವಂತೂ ಇದ್ದೇ ಇತ್ತು.
ವ್ಯಂಗ್ಯಚಿತ್ರ ಕೃಪೆ:ಪಿ.ಮಹಮ್ಮದ್ @ ಫೇಸ್ ಬುಕ್
ನಿಜ, ನಮ್ಮ ಪ್ರಧಾನ ಮಂತ್ರಿಗಳು ಮಾತ್ರವಲ್ಲ, ಜಗತ್ತಿನ ಇನ್ನೂ ಹಲವು ಮಖಂಡರುಗಳಿಂದಲೂ ಇಂತಹುದೇ ಉದ್ಗಾರಗಳು ಬಂದವು. ಅವರಲ್ಲಿ ಎಷ್ಟು ಮಂದಿ ಇದೇ ಅಮೆರಿಕ ಮತ್ತು ಅದರ ಮಿತ್ರದೇಶ ಇಸ್ರೇಲ್ನ ಪಡೆಗಳು ಮಾಡಿದ ಆಸ್ಪತ್ರೆಯ ಮೇಲಿನ ದಾಳಿಯಲ್ಲಿ ಅಮಾಯಕ ನಾಗರಿಕರು ಸತ್ತಾಗ, ಶಾಲೆಯ ಮೇಲೆ ದಾಳಿ ಮಾಡಿದಾಗ ಮುಗ್ಧ ಹೆಣ್ಣುಮಕ್ಕಳು ಸತ್ತಾಗ ಖಂಡಿಸಲು ಹೀಗೆ ಧಾವಿಸಿದರು ಎಂದು ಲೆಕ್ಕಕ್ಕೆ ಸಿಕ್ಕಿಲ್ಲ.
ವ್ಯಂಗ್ಯಚಿತ್ರ ಕೃಪೆ: ಆರ್.ಪ್ರಸಾದ್
***
ಇವೆಡರ ನಡುವೆ ಮತ್ತೊಂದು ಸುದ್ದಿ, ಬಿಜೆಪಿಯ ಮಾಜೀ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಮತ್ತು ಹಿರಿಯ ಆರೆಸ್ಸೆಸ್ ಮುಖಂಡ ರಾಂ ಮಾಧವ್ ವಾಶಿಂಗ್ಟನ್ನಿನ ಹಡ್ಸನ್ ಇನ್ಸ್ಟಿಟ್ಯೂಟ್ನಲ್ಲಿ ಭಾರತ -ಯುಎಸ್ ನ ಸಂಬಂಧಗಳ ಪ್ರಸ್ತುತ ಸ್ಥಿತಿ-ಗತಿಯ ಬಗ್ಗೆ ತಳಮಳದ, ತಪ್ಪೊಪ್ಪಿಗೆಯಂತಹ ಉದ್ಗಾರಗಳನ್ನು ಮಾಡಿದರು ಎಂಬುದು.
“ ಭಾರತ-ಯುಎಸ್ ಸಂಬಂಧಗಳಲ್ಲಿ ಮುನ್ನಡೆಯ ಹೊಸ ದಾರಿಗಳು” ಎಂಬ ಒಂದು ಪ್ಯಾನಲ್ ಚರ್ಚೆಯಲ್ಲಿ ಮಾತನಾಡುತ್ತ ಅವರು “ನಾವು ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆವು, ಇದಕ್ಕೆ ವಿಪಕ್ಷಗಳಿಂದ ಎಷ್ಟೊಂದು ಟೀಕೆಯನ್ನು ಎದುರಿಸಿದೆವು. ನಾವು ೫೦% ಸುಂಕದರಗಳಿಗೆ ಒಪ್ಪಿದೆವು, … ಹೊಸ ವ್ಯಾಪಾರ ಒಪ್ಪಂದದಲ್ಲಿ ಕೂಡ ೧೮% ಸುಂಕದರಗಳಿಗೆ ಒಪ್ಪಿದೆವು” ಎಂದು ಹೇಳಿರುವುದಾಗಿ ವರದಿಯಾಗಿದೆ. ಹೀಗಿದ್ದರೂ “ಅಮೆರಿಕಾದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ”(!) ನಾವೆಲ್ಲಿ ಎಡವಿದೆವು ಎಂದು ಈ ಮಹಾನ್ ದೇಶಪ್ರೇಮಿ ಸಂಘಟನೆಯ ಹಿರಿಯ ಮುಖಂಡ ಕಳವಳ ಪಡುವಂತಿತ್ತು ಎಂದು ವರದಿಗಳು ಹೇಳುತ್ತವೆ(ಇಂಡಿಯನ್ ಎಕ್ಸ್ಪ್ರೆಸ್, ಮೇ೧).
ಆಗಷ್ಟೇ, ʼನರಕದ ಗುಂಡಿʼಯ ಟಿಪ್ಪಣಿಯ ಸಂದರ್ಭದಲ್ಲಿ ವಿದೇಶಾಂಗ ಇಲಾಖೆಯ ವಕ್ತಾರರು ಆ ಟಿಪ್ಪಣಿ “ಖಂಡಿತವಾಗಿಯೂ ಭಾರತ-ಯುಎಸ್ ಸಂಬಂಧದ ವಾಸ್ತವತೆಯನ್ನು ಬಿಂಬಿಸುವುದಿಲ್ಲ, ಇದು ದೀರ್ಘಕಾಲದಿಂದ ಪರಸ್ಪರ ಗೌರವ ಮತ್ತು ಸಮಾನ ಹಿತಾಸಕ್ತಿಗಳನ್ನು ಆಧರಿಸಿದ್ದು” ಎಂದು ಹೇಳಿದರಂತೆ.
ಆದರೆ ರಾಂ ಮಾಧವರು ಅದನ್ನು ಒಪ್ಪಿದಂತೆ ಕಾಣುವುದಿಲ್ಲ. ʼನರಕದ ಗುಂಡಿʼಯ ಟಿಪ್ಪಣಿಯ ಬಗ್ಗೆ ಮಾತಾಡುತ್ತ ಅವರು, ಪ್ರಸಕ್ತ ಘಟ್ಟವನ್ನು ಸಂಬಂಧಗಳು ಮುರಿದುಬಿದ್ದ ಘಟ್ಟವೆಂದು ಹೇಳಲಾಗದಿದ್ದರೂ, ಈ ಬಗ್ಗೆ ಸಂತೃಪ್ತ ಭಾವದಿಂದಿರಬಾರದು ಎಂದು ಎಚ್ಚರಿಸಿದರಂತೆ. “ಈ ಘಟ್ಟ ಸರಿದು ಹೋಗುತ್ತದೆ ಎಂದೇನೋ ಹೇಳಬಹುದು, ಆದರೆ ದೇಶಗಳಿಗೆ ನಾಲ್ಕು ವರ್ಷಗಳು ಸರಿದು ಹೋಗುವ ಒಂದು ಘಟ್ಟ ಎಂದು ಹೇಳುವ ಲಕ್ಷುರಿ ಇರುವುದಿಲ್ಲ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.
ಭೌಗೋಳಿಕ-ಆಯಕಟ್ಟಿನ ವಿಷಯಗಳು ಮತ್ತು ಆರ್ಥಿಕ ವಿಷಯಗಳಲ್ಲಿ ಮಾತ್ರವಲ್ಲ ಎರಡು ದೇಶಗಳ ಜನರ ನಡುವಿನ ಕೊಂಡಿಗೂ ಏಟು ಬಿದ್ದಿರುವುದು ಕಳವಳಕಾರಿ ಎಂದು ಮುಂದುವರೆದು ಅವರು ಹೇಳುತ್ತಾರೆ.
“ ಟ್ರಂಪ್ ೧.೦ ಅವಧಿಯಲ್ಲಿ ನಮ್ಮೆರಡು ಸರಕಾರಗಳ ನಡುವಿನ ನಲುಮೆ ನನಗೆ ನೆನಪಾಗುತ್ತದೆ.ಎಷ್ಟೆಂದರೆ, ೨೦೨೦ರಲ್ಲಿ ಭಾರತದ ಜನರು ಟ್ರಂಪ್ರವರ ವಿಜಯಕ್ಕೆ ಪ್ರಾರ್ಥಿಸುತ್ತಿದ್ದರು. ಇಂದು ಆ ಜನಗಳ ನಡುವೆ ಹೋಗಿ ಕೇಳಿ-ಅವರು ಬೇರೆ ಮಾತೇ ಹೇಳುತ್ತಾರೆ. ನಾವು ಮತ್ತೆ ವಿಶ್ವಾಸವನ್ನು ಕಟ್ಟಬೇಕು” ಎಂದು ಅವರು ಹೇಳಿರುವುದಾಗಿ ಈ ವರದಿ ಹೇಳುತ್ತದೆ. ಟ್ರಂಪ್ ವಿಜಯಕ್ಕೆ ಪ್ರಾರ್ಥಿಸಿದ್ದು ನಮ್ಮ ಇಡೀ ದೇಶವಲ್ಲ, ʼಭಕ್ತಗಣʼ ಮಾತ್ರ ಎಂಬುದು ಬೇರೆ ಮಾತು.
ನಿಜ, ಮರುದಿನವೇ ಅವರು ಭಾರತ ಸರಕಾರ ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿತು, ೫೦% ಸುಂಕದರಕ್ಕೆ ಒಪ್ಪಿತು, ಎಂದೆಲ್ಲ ಹೇಳಿದ್ದು ತಪ್ಪು ಮಾಹಿತಿ ಎಂದು ಹೇಳಿರುವುದಾಗಿಯೂ ವರದಿಯಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಕೇಳಬರುವಂತೆ ತನ್ನ ಮಾತನ್ನು ತಿರುಚಲಾಗಿದೆ ಎಂದು ಹೇಳಲಿಲ್ಲ, “ನಾನು ಹೇಳಿದ್ದು ತಪ್ಪು. ಭಾರತ ಎಂದೂ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಲು ಒಪ್ಪಲಿಲ್ಲ, ೫೦% ಸುಂಕದರವನ್ನು ಜೋರಾಗಿ ವಿರೋಧಿಸಿತು. ನಾನು ಬೇರೆ ಪ್ಯಾನಲಿಸ್ಟರಿಗೆ ಎದುರಾಗಿ ಒಂದು ಸೀಮಿತ ಪ್ರತ್ಯಂಶ ಮಂಡಿಸುತ್ತಿದ್ದೆ. ಆದರೆ ಅದು ತಪ್ಪು ಸಂಗತಿಯಾಗಿತ್ತು” ಎನ್ನುತ್ತ ಕ್ಷಮೆಯನ್ನೇ ಕೇಳಿದರು!! ಆದರೆ ತಮ್ಮತಳಮಳದ ಬಗ್ಗೆ ಕ್ಷಮೆ ಕೇಳಲಿಲ್ಲ. ಅದನ್ನು ಮೇ ೨ರಂದು ʼಇಂಡಿಯನ್ ಎಕ್ಸ್ಪ್ರೆಸ್ʼನಲ್ಲಿ ಬರೆದ ತನ್ನ ಅಂಕಣ ಲೇಖನದಲ್ಲಿ ಪುನರುಚ್ಛರಿಸಿದರು!ಸ್ಯಾವೇಜ್ ಪೋಸ್ಟಿನಲ್ಲಿ ʼನರಕದ ಗುಂಡಿʼಗಳಿಂದ ಬಂದವರನ್ನು ʼಲ್ಯಾಪ್ ಟಾಪ್ ಗ್ಯಾಂಗ್ಸ್ಟರ್ʼಗಳುʼ (ನಮ್ಮ ಉನ್ನತ ಅಧಿಕಾರಸ್ಥರು ʼಅರ್ಬನ್ ನಕ್ಸಲ್ʼ ಎಂದಿರುವಂತೆ?) ಎಂದೂ ಆರೋಪಿಸಿರುವ ಬಗ್ಗೆಯೂ ʼಕಳವಳʼ ವ್ಯಕ್ತಪಡಿಸಿದರು!
ಅದೇನೇ ಇರಲಿ, ಬಚ್ಚಿಟ್ಟ ನಿಜ ಸಂಗತಿಗಳು ಹೀಗೆ ಬಾಯಿ ತಪ್ಪಿ (ಅಥವ ಲೆಕ್ಕಾಚಾರ ಹಾಕಿಯೇ?) ಬಯಲಿಗೆ ಬಂದಾಗ ಆಳುತ್ತಿರುವವರ ಇಂತಹ ತಿಪ್ಪರಲಾಗಗಳು ದೇಶದ ಜನರಿಗೆ ಅಭ್ಯಾಸವಾಗಿ ಬಿಟ್ಟಿದೆ ತಾನೇ? ಸುಮಾರು ಎರಡೂವರೆ ದಶಕಗಳ ಹಿಂದೆ ಇದೇ ಆಳುವ ಪಕ್ಷದ ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ಆಗಿನ ತನ್ನ ಪಕ್ಷದ ಪ್ರಧಾನ ಮಂತ್ರಿಗಳನ್ನು “ಮುಖೌಟಾ” (ಮುಖವಾಡ) ಎಂದಿರುವುದನ್ನು ಹಲವರು ಮರೆತಿರಬಹುದೇನೋ. ಆದರೆ ಹಾಲೀ ಗೃಹಮಂತ್ರಿಗಳ “ಜುಮ್ಲಾ” ಮತ್ತು “ಕ್ರೊನೊಲೊಜಿ” ಹೇಳಿಕೆಗಳನ್ನಂತೂ ಖಂಡಿತ ಮರೆತಿರಲಿಕ್ಕಿಲ್ಲ.
***
“… ಈ ದೇಶಕ್ಕೆ ಇವರ ವಿಧೇಯತೆ ಎಂಬುದು ಸುಮಾರಾಗಿ ಇಲ್ಲವೇ ಇಲ್ಲ” -ಇದು ನಮ್ಮಲ್ಲೇ ಕಳೆದ ಒಂದು ದಶಕದಲ್ಲಿ ಮತ್ತೆ-ಮತ್ತೆ ಕೇಳುವ ಮಾತು ಎಂದನಿಸುತ್ತಿಲ್ಲವೇ? ನಮ್ಮ ಉಚ್ಛ ಅಧಿಕಾರಸ್ಥರ ʼಘುಸ್ಪೈಟಿಯೇʼ (ನುಸುಳುಕೋರರು) ಎಂಬ ಇನ್ನೊಂದು ಜಪ ನೆನಪಾಗುತ್ತಿದೆಯೇ? ಆದರೆ ಇದು ವಾಸ್ತವವಾಗಿ ಅಧ್ಯಕ್ಷ ಟ್ರಂಪ್ ಪೂರ್ಣವಾಗಿ ಹಾಕಿಕೊಂಡಿರುವ ಮೈಕೆಲ್ ಸ್ಯಾವೇಜ್ ರವರ ಪೋಸ್ಟಿನಲ್ಲಿರುವ ಒಂದು ವಾಕ್ಯ. ಬಹುಶಃ ಇದರಿಂದಾಗಿಯೇ ಪ್ರಧಾನಿಗಳು ಸೇರಿದಂತೆ ಆಳುವ ಕೂಟದ ಮುಖಂಡರು ಈ ಬಗ್ಗೆ ತುಟಿ ಪಿಟಕ್ಕೆಂದಿಲ್ಲ.
“ಒಂದು ಮಗು ಇಲ್ಲಿ ತಕ್ಷಣವೇ ಪೌರತ್ವ ಪಡೆಯುತ್ತದೆ. ಮತ್ತು ನಂತರ ಅವರು ಇಡೀ ಕುಟುಂಬವನ್ನು ಚೀನಾದಿಂದಲೋ, ಭಾರತದಿಂದಲೋ ಅಥವ ಈ ಗೃಹದ ಮೇಲಿರುವ ಇತರ ಕೆಲವು ನರಕದ ಗುಂಡಿಗಳಿಂದಲೋ ತರುತ್ತಾರೆ. ಅದನ್ನು ನೋಡಲು ಬಹಳ ದೂರ ಹೋಗಬೇಕಾಗಿಲ್ಲ. ಇಲ್ಲೀಗ ಇಂಗ್ಲಿಷ್ ಮಾತಾಡುವುದಿಲ್ಲ. ಈ ದೇಶಕ್ಕೆ ವಿಧೇಯತೆ ಎಂಬುದು ಇಂದು ವಲಸೆ ಬರುತ್ತಿರುವ ವರ್ಗದ ನಡುವೆ ಸುಮಾರಾಗಿ ಇಲ್ಲವೇ ಇಲ್ಲ. ಹಿಂದೆ ಇದು ಹೀಗಿರಲಿಲ್ಲ. ಇಲ್ಲ, ಇವರು ಇಂದಿನ ಯುರೋಪಿಯನ್ ಅಮೆರಿಕನ್ನರ ಪೂರ್ವಜರಂತಲ್ಲ…”! -ಇದು ಸ್ಯಾವೇಜ್ ಪೋಸ್ಟಿನ ಒಂದು ಪ್ಯಾರಾ.
***
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಈ ಟ್ರಂಪ್ ಪೋಸ್ಟಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ಭಾರತದಲ್ಲಿನ ಇರಾನೀ ರಾಯಭಾರ ಕಚೇರಿಗಳ ವಕ್ತಾರರು!
ವ್ಯಂಗ್ಯಚಿತ್ರ ಕೃಪೆ: ರಾಕೇಶ್ ರಂಜನ್, ಮೊಲಿಟಿಕ್ಸ್.ಇನ್
ಮುಂಬೈಯಲ್ಲಿರುವ ಇರಾನೀ ಕಾನ್ಸುಲೇಟ್ ಕಚೇರಿಯ ಮುಖ್ತಸ್ಥರು ಇಂತಹ ʼಬಕ್ವಾಸ್ʼ(ಬೊಗಳೆ)ಗಳನ್ನು ಕಡಿಮೆ ಮಾಡಲು ಟ್ರಂಪ್ಗೆ ʼವಿಷನಿವಾರಕʼಗಳು ಬೇಕಾಗಿವೆ ಎನ್ನುತ್ತ, “ಯಾವಾಗಾದರೂ ಭಾರತಕ್ಕೆ ಬಂದು ನೋಡಿ, ನಂತರ ಮಾತಾಡಿʼ ಎಂದು ತನ್ನ ಎಕ್ಸ್ ಪೋಸ್ಟಿನಲ್ಲಿ ಹೇಳಿದ್ದಾರೆ, ನರಕದ ಗುಂಡಿಯ ಉಲ್ಲೇಖಕ್ಕೆ ಎದುರಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಂಪರೆಯನ್ನು ತೋರಿಸುವ ವೀಡಿಯೋವನ್ನೂ ಹಾಕಿದ್ದಾರೆ.
ಹೈದರಾಬಾದಿನಲ್ಲಿರುವ ಇರಾನೀ ಕಾನ್ಸುಲೇಟ್ ಈ ಟಿಪ್ಪಣಿಗಳನ್ನು “ಜನಾಂಗವಾದಿ” ಮತ್ತು “ಅಜ್ಞಾನ” ಎಂದು ಹೇಳುತ್ತ ಭಾರತ ಮತ್ತು ಚೀನಾ ನಾಗರಿಕತೆಯ ತೊಟ್ಟಿಲುಗಳು ಎಂದು ಸಮರ್ಥಿಸಿಕೊಂಡಿದೆ. ನಿಜವಾದ ನರಕದ ಗುಂಡಿಗಳಿರುವುದು ಇರಾನಿನ ನಾಗರಿಕತೆಯನ್ನು ಹೇಳಹೆಸರಿಲ್ಲದಂತೆ ಮಾಡುತ್ತೇನೆ ಎಂದಿರುವ ಯುದ್ಧಾಪರಾಧಿ ಅಧ್ಯಕ್ಷ ಇರುವಲ್ಲಿ ಎಂದು ಲೇವಡಿ ಮಾಡಿದೆ!
ಭಾರತ,ಚೀನಾ ನಾಗರಿಕತೆಯ ತೊಟ್ಟಿಲುಗಳು
ನಿನ್ನ ಇತಿಹಾಸದ ಅಂಕಗಳು ಖಂಡಿತಾ ಭಾರತದ ಒಂದು ಆವಿಷ್ಕಾರ
ವ್ಯಂಗ್ಯಚಿತ್ರ ಕೃಪೆ: ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್
ಇದನ್ನೂ ನೋಡಿ : ಇರಾನ್ ಪ್ರತಿರೋಧ – ಯು.ಎಸ್ (ಅಮೆರಿಕ) ಪತನದ ಆರಂಭವೆ? ಡಾ. ಬಿ.ಆರ್. ಮಂಜುನಾಥ್ , ಗುರುರಾಜ ದೇಸಾಯಿ ಮಾತುಕತೆ

