ನೀಟ್ ಅವಾಂತರ ಖಂಡಿಸಿ ಎಡ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಎನ್‌ಟಿಎ ರದ್ದುಗೊಳಿಸಲು ಮತ್ತು ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹ!
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಖಂಡಿಸಿ ಜೂನ್‌ 21ರಂದು ಎಐಎಸ್ಎಫ್, ಎಸ್ಎಫ್ಐ, ಎಐಡಿಎಸ್ಓ, ಎಐಎಸ್ಎ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು. ನಗರದ ಫ್ರೀಡಂ ಪಾರ್ಕಿನಲ್ಲಿ ಸೇರಿದ ವಿದ್ಯಾರ್ಥಿಗಳು ಎನ್‌ಟಿಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್ಎಫ್ಐ ರಾಜ್ಯ ಅಧ್ಯಕ್ಷರಾದ ಶಿವಪ್ಪ ಅಂಬಲಿ ಮಾತನಾಡಿ, “ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಪರೀಕ್ಷೆ ಬರೆಯಬೇಕು. ಆದರೆ ಇಂದು ಅತೀವ ಭಯದಲ್ಲಿ ವಿದ್ಯಾರ್ಥಿಗಳಿದ್ದಾರೆ. ಅನೇಕ ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿ ನೀಟ್ ಅವಾಂತರದಿಂದಾಗಿ 29 ವಿದ್ಯಾರ್ಥಿಗಳು ಸತ್ತು ಹೋಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರವೇ ಇದಕ್ಕೆ ಹೊಣೆ. ನೀಟ್ ಸೇರಿದಂತೆ ಸರ್ಕಾರ ನಡೆಸುವ ಎಲ್ಲ ಪರೀಕ್ಷೆಗಳು ವಿಫಲವಾಗುತ್ತಿವೆ. ಕೂಡಲೇ ಈ ಪರೀಕ್ಷೆಗಳನ್ನು ನಡೆಸುತ್ತಿರುವ ಎನ್ ಟಿ ಎಯನ್ನು ರದ್ದುಗೊಳಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಎಐಎಸ್ಎ ನ ಶಶಿರೇಖಾ ಮಾತನಾಡಿ, “ಈಗಾಗಲೇ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ನೀಟ್ ಅವಾಂತರವು ಈ ಬೆಂಕಿಗೆ ಪೆಟ್ರೋಲ್ ಸುರಿದಂತಿದೆ. ದಿನದಿಂದ ದಿನಕ್ಕೆ ಶಿಕ್ಷಣವು ಕೇವಲ ಉಳ್ಳವರ ಸ್ವತ್ತಾಗಿದೆ ಬಡ ಮತ್ತು ಹಿಂದುಳಿದ ವರ್ಗಗಳಿಂದ ಶಿಕ್ಷಣವನ್ನು ಶಿಕ್ಷಣ ಕಿತ್ತುಕೊಳ್ಳಲಾಗುತ್ತಿದೆ. ದೇಶದ ಎಲ್ಲ ವಿದ್ಯಾರ್ಥಿಗಳೂ ಈ ಅನ್ಯಾಯದ ವಿರುದ್ಧ ಹೋರಾಡಬೇಕು” ಎಂದು ಹೇಳಿದರು.

ಇದನ್ನೂ ಓದಿ: ಕಮ್ಯುನಿಸ್ಟ್ ಮತ್ತು ದಲಿತ ಚಳುವಳಿಯ ಬೆಸುಗೆ RB ಮೋರೆ

ಎಐಎಸ್ಎಫ್ ನ ರಾಜ್ಯ ಅಧ್ಯಕ್ಷರಾದ ವೀಣಾ ನಾಯಕ್ ಮಾತನಾಡಿ, “ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಮಾಡಿರುವ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮಕ್ಕೆ ಕೊಳ್ಳಿ ಇಟ್ಟಿದೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮತ್ತು ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಯಾವುದೇ ಸ್ಪಂದನೆ ನೀಡಿಲ್ಲ. ಕೂಡಲೇ ಅವರು ರಾಜಿನಾಮೆ ನೀಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಎಐಡಿಎಸ್ಓ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್ ಮಾತನಾಡಿ, “ದೇಶದಲ್ಲಿ ಶಿಕ್ಷಣದ ವ್ಯಾಪಾರೀಕರಣಕ್ಕೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ಸು. ಈಗ ಬಿಜೆಪಿಯು ಶಿಕ್ಷಣವನ್ನು ಕಾರ್ಪೊರೇಟೀಕರಣಗೊಳಿಸುತ್ತಿದೆ. ಇಂದು ನೀಟ್ ಅನ್ನು ಸಂಪೂರ್ಣವಾಗಿ ಕೋಚಿಂಗ್ ಮಾಫಿಯಾಗೆ ವಶಕ್ಕೆ ನೀಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ಅವಾಂತರದ ವಿರುದ್ಧ ದೇಶಾದ್ಯಂತ ಹೋರಾಟ ನಡೆದಿದೆ. ಆದರೆ ನಿಜವಾದ ಜನಹೋರಾಟ ಬೆಳೆಯುವುದು ವೈಚಾರಿಕ ಸ್ಪಷ್ಟತೆಯಿಂದ. ಇದು ಎಡ ವಿದ್ಯಾರ್ಥಿ ಸಂಘಟನೆಗಳಿಂದ ಮಾತ್ರ ಸಾಧ್ಯ. ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳನ್ನು ಒಟ್ಟುಗೂಡಿಸಿ ಎಡ ವಿದ್ಯಾರ್ಥಿ ಸಂಘಟನೆಗಳು ಈ ಹೋರಾಟವನ್ನು ಮುನ್ನಡೆಸಬೇಕು.” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಐಎಸ್ಎಫ್, ಎಸ್ಎಫ್ಐ, ಎಐಡಿಎಸ್ಓ, ಎಐಎಸ್ಎ ಸದಸ್ಯರು ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಇದನ್ನೂ ನೋಡಿ: ಬೀಜ ಇಲ್ಲ, ಗೊಬ್ಬರ ಇಲ್ಲ, ಬಡವರಿಗೆ ಸೂರು ಇಲ್ಲ | ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು Janashakthi Media

Donate Janashakthi Media

Leave a Reply

Your email address will not be published. Required fields are marked *