ಬೆಂಗಳೂರು: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೊಮ್ಮೆ ಹೆಚ್ಚಳವಾದ ಹಿನ್ನೆಲೆ, ಇದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು (ಸಿಪಿಐಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಕರೆ ನೀಡಿದ್ದಾರೆ.
ಮಾರ್ಚ್ 1ರಂದು ವಾಣಿಜ್ಯ ಸಿಲಿಂಡರ್‌ಗೆ ರೂ.114.50 ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1ರಂದು ಮತ್ತೆ ರೂ.195.50 ಏರಿಕೆ ಮಾಡಿರುವುದು ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಹಾಕಿದಂತಾಗಿದೆ. ಈಗಾಗಲೇ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಇದು ಮತ್ತಷ್ಟು ಬಾಧೆ ತಂದಿದೆ ಎಂದು ಆರೋಪಿಸಿದ್ದಾರೆ.
ಮೊದಲ ಹಂತದ ಬೆಲೆ ಏರಿಕೆಯ ನಂತರವೇ ಅನೇಕ ಸಣ್ಣ ಹೋಟೆಲ್‌ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ದು, ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಪಕ್ಷ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಬೆಲೆ ಏರಿಕೆ ಮಾಡಿರುವುದು ಆರ್ಥಿಕವಾಗಿ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಇದನ್ನೂ ಓದಿ : ಪುಸ್ತಕ ವಿಮರ್ಶೆ | ಧರ್ಮಾಂದತೆಯ ದಳ್ಳುರಿಯಲ್ಲಿ ನಲುಗಿದವರ ಕರುಳಿನ ಕಥೆಯೇ “ಕರಾವಳಿಯ ರಕ್ತ ಕಣ್ಣೀರು”
ಇನ್ನೊಂದೆಡೆ, Shell plc ಹಾಗೂ Nayara Energy ಸೇರಿದಂತೆ ಕೆಲವು ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದರ ಹೆಚ್ಚಳವೂ ಜನರ ಬದುಕಿಗೆ ಹೊರೆ ಹೆಚ್ಚಿಸಿದೆ ಎಂದು ಹೇಳಲಾಗಿದೆ. ವಿಶೇಷವಾಗಿ ಆಟೊ ಚಾಲಕರು ಹಾಗೂ ಬಾಡಿಗೆ ವಾಹನ ಚಾಲಕರು ದಿನನಿತ್ಯದ ಆದಾಯ ಹಾಗೂ ಸಾಲ ತೀರಿಕೆಗೆ ಕಷ್ಟಪಡುವಂತಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆ, ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸಿ ರಾಜ್ಯದಾದ್ಯಂತ ಪಕ್ಷದ ಘಟಕಗಳು ಜನರನ್ನು ಸಂಘಟಿಸಿ ಪ್ರತಿಭಟನೆ ನಡೆಸಲಿವೆ ಎಂದು ರಾಜ್ಯ ಸಮಿತಿ ತಿಳಿಸಿದೆ.
ಇದನ್ನೂ ನೋಡಿ : ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಗೆ ಖಂಡನೆ: ಸೌದೆ ಒಲೆ ಹಚ್ಚಿ ಸಿಪಿಐ(ಎಂ) ಪ್ರತಿಭಟನೆ Janashakthi Media
