ವಿ.ವಿಗಳಲ್ಲಿ ಮಾನವಿಕ ವಿಷಯಗಳ ಕಡ್ಡಾಯ ಓದುವಿಕೆ ಅಗತ್ಯ: ಬರಗೂರು ರಾಮಚಂದ್ರಪ್ಪ

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದುವಂತೆ ಮಾಡುವ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ನಗರದಲ್ಲಿ ಮಾರ್ಚ್‌ 27ರಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಶ್ರೀಪಾದ ಭಟ್‌ ಅವರ ‘ಉನ್ನತ ಶಿಕ್ಷಣ-ಒಳಗೂ ಹೊರಗೂ’ (ನವ ಉದಾರೀಕರಣದ ಭಾರತ) ಪುಸ್ತಕ ಜನಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣದಲ್ಲಿ ಬ್ಯುಸಿನೆಸ್ ಮ್ಯಾನೆಜ್‌ಮೆಂಟ್ ಓದುವವರ ಸಂಖ್ಯೆ ಹೆಚ್ಚಿದೆ. ಕೆಲವರು ವಾಸ್ತುಶಿಲ್ಪ, ಮತ್ತೆ ಕೆಲವರು ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಾರೆ. ಏಳು ವರ್ಷಗಳ ಹಿಂದೆ ನಡೆದ ಸಮೀಕ್ಷೆ ಪ್ರಕಾರ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳನ್ನು ತೆಗೆದುಕೊಳ್ಳುವವರು ಶೇಕಡ 5 ಮಾತ್ರ. ಇದು ಬಹಳ ಅಪಾಯಕಾರಿ ಸನ್ನಿವೇಶ ಎಂದು ಆತಂಕ ವ್ಯಕ್ತಪಡಿಸಿದರು.

ಮಾನವಿಕ ವಿಷಯಗಳೆಂದರೆ ಸಾಹಿತ್ಯ, ಚರಿತ್ರೆ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ. ಒಬ್ಬ ವೈದ್ಯ, ಎಂಜಿನಿಯರ್‌, ಅಥವಾ ಐ.ಟಿ ಉದ್ಯೋಗಿಗೆ ದೇಶದ ಇತಿಹಾಸ ಗೊತ್ತಿಲ್ಲದಿದ್ದರೆ, ಸಮಾಜದ ಚಲನೆ, ಸಾಮಾಜಿಕ ಸಂರಚನೆಯ ವಿಷಯಗಳ ಅರಿವಿಲ್ಲದಿದ್ದರೆ, ಎಂತಹ ಪ್ರಜೆ ಆಗಬಹುದು? ಹಾಗಾಗಿ ಸಂವಿಧಾನ ಓದು ಹೇಗೆ ಕಡ್ಡಾಯ ಮಾಡಲಾಗಿದೆಯೋ ಅದೇ ರೀತಿ ಮಾನವಿಕ ವಿಷಯಗಳನ್ನು ಬಿಟ್ಟುಕೊಡದೇ ಇರುವಂತ ಪಠ್ಯಕ್ರಮವನ್ನು ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಒಂದು ಕಾಲದಲ್ಲಿ ಖಾಸಗಿ ಕಾಲೇಜುಗಳು ಅನುದಾನ ಕೇಳುತ್ತಿದ್ದವು. ಖಾಸಗೀಕರಣದ ಪರಿಣಾಮ ಅನುದಾನ ಬೇಡವೆನ್ನುತ್ತಿದ್ದಾರೆ. ಮೀಸಲಾತಿ ಕೊಡಬೇಕು ಎಂಬ ಕಾರಣಕ್ಕೆ ಹಾಗೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಅನುದಾನರಹಿತವಾಗಿ ಇರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನೋಡುತ್ತಿದ್ಧೇವೆ ಎಂದು ತಿಳಿಸಿದರು.

ಸರ್ಕಾರ, ಶಿಕ್ಷಣ ನೀತಿ ರೂಪಿಸಿದ ಮೇಲೆ ಅದಕ್ಕೆ ಅನುಗುಣವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಅನುಸರಿಸಬೇಕೆಂದು ಹೇಳುವ ಅಧಿಕಾರವೇ ಶಿಕ್ಷಣಕ್ಕೆ ಇಲ್ಲವೆಂದರೆ ಅದು ಪ್ರಜಾಸತಾತ್ಮಕ ಅಲ್ಲ ಎಂದು ಭಾವಿಸಿದ್ದೇನೆ. ಒಂದು ಬಾರಿ ಕೆಟ್ಟ ಸರ್ಕಾರ ಬರಬಹುದು, ಮತ್ತೊಂದು ಬಾರಿ ದುಷ್ಟ ಸರ್ಕಾರ ಬರಬಹುದು. ಒಳ್ಳೆಯ ಸರ್ಕಾರ ಯಾವಾಗ ಬರಲಿದೆ ಗೊತ್ತಿಲ್ಲ. ಆದರೆ, ದುಷ್ಟ ಸರ್ಕಾರಕ್ಕಿಂತ ಕೆಟ್ಟ ಸರ್ಕಾರ ಉತ್ತಮ ಎಂಬ ಸ್ಥಿತಿಯಲ್ಲಿದ್ದೇವೆ ಎಂದು ನುಡಿದರು.

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ, ಲೇಖಕರಾದ ಕೆ.ವಿ.ನೇತ್ರಾವತಿ, ರವಿಕುಮಾರ್‌ ಬಾಗಿ, ಬಿ.ಶ್ರೀಪಾದ ಭಟ್, ಮನಮೋಹನ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್‌, ದಲಿತ ಮುಖಂಡ ಮಾವಳ್ಳಿ ಶಂಕರ್ ಹಾಜರಿದ್ದರು.

ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media

Donate Janashakthi Media

Leave a Reply

Your email address will not be published. Required fields are marked *