₹3426 ಕೋಟಿ ಬಜೆಟ್‌: ಅಭಿವೃದ್ಧಿಗೆ ಒತ್ತು, ಹೊಸ ಯೋಜನೆಗಳ ಘೋಷಣೆ

ಬೆಂಗಳೂರು: 2026-27ನೇ ಸಾಲಿನಲ್ಲಿ ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧವನ್ನು ಒಳಗೊಂಡಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯು 3426.55 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿ, ಎಲ್ಲವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದೆ. ಚೊಚ್ಚಲ ಬಜೆಟ್‌ನಲ್ಲೇ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿ, ಜನರಲ್ಲಿ ಭರವಸೆಯ ಬೀಜ ಬಿತ್ತಿದೆ. ಬಜೆಟ್‌

ಪಾಲಿಕೆ ಆಯುಕ್ತ ಪಿ.ರಾಜೇಂದ್ರ ಚೋಳನ್‌ ಅವರು ನಗರದ ಪುರಭವನದಲ್ಲಿ ಮಾರ್ಚ್‌ 27ರಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸಮ್ಮುಖದಲ್ಲಿ ಪ್ರಸಕ್ತ ಸಾಲಿನಲ್ಲಿ 64.60 ಲಕ್ಷ ಪ್ರಾರಂಭಿಕ ಶಿಲ್ಕುದೊಂದಿಗೆ 3427.34 ಕೋಟಿ ರೂ. ಆದಾಯ ನಿರೀಕ್ಷಿಸಿ, 3426.55 ಕೋಟಿ ವೆಚ್ಚದ ಮುಂಗಡಪತ್ರವನ್ನು ಮಂಡನೆ ಮಾಡಿದರು. ಆ ಮುಖೇನ 78.65 ಲಕ್ಷ ರೂ.ಗಳ ಮಿಗತೆ ಆಯವ್ಯಯವನ್ನು ಜನರ ಮುಂದಿರಿಸಿದರು. ಬಜೆಟ್‌

ಆದಾಯ ಕ್ರೋಡೀಕರಣ ಹೇಗೆ ?

ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸ್ವಂತ ಸಂಪನ್ಮೂಲಗಳಿಂದ 2342.20 ಕೋಟಿ ರೂ. ಆದಾಯ ಕ್ರೋಡೀಕರಿಸುವ ಗುರಿ ಹೊಂದಿದೆ. ರಾಜ್ಯ ಮತ್ತು ಕೇಂದ್ರ ಸರಕಾದಿಂದ 884.50 ಕೋಟಿ ರೂ. ಅನುದಾನ ನಿರೀಕ್ಷಿಸಿದೆ. ಮುನಿಸಿಪಲ್‌ ಬಾಂಡ್‌ಗಳ ವಿತರಣೆ ಮೂಲಕ 200 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಲಾಗಿದೆ. ಬಜೆಟ್‌

ಇದನ್ನೂ ಓದಿ: ರಾಜಕೀಯ ಪಕ್ಷದ ಮುದ್ರೆಯಿರುವ ದಾಖಲೆಯ ಪ್ರಸರಣವನ್ನು “ಕ್ಲೆರಿಕಲ್” ದೋಷವೆಂದು ತಳ್ಳಿಹಾಕಲಾಗುವುದಿಲ್ಲ – ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಹೊಸ ಖಾತಾ ವ್ಯವಸ್ಥೆ ಹಾಗೂ ಬಹುಮಹಡಿ ಕಟ್ಟಡಗಳ ಖಾತಾಗಳಿಗೆ ಬಲ್‌್ಕ ಅನುಮೋದನೆ ನೀಡಿ, ತೆರಿಗೆ ವಲಯಕ್ಕೆ ಸೇರಿಸಲು ನಿರ್ಧರಿಸಲಾಗಿದೆ. 2025-26ರಲ್ಲಿ900 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಮುಂದಿನ ಹಣಕಾಸು ವರ್ಷದಲ್ಲಿ1,150 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ.

ಕೇಂದ್ರ ಸರಕಾರದ 16 ನೇ ಹಣಕಾಸು ಆಯೋಗದಿಂದ 112.25 ಕೋಟಿ ರೂ., ರಾಜ್ಯದ ಎಸ್‌ಎಫ್‌ಸಿ ಅನುದಾನದಡಿ 90.97 ಕೋಟಿ ರೂ., ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 200 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನದಡಿ 75 ಕೋಟಿರೂ., ವಿಶೇಷ ಮೂಲಸೌಕರ್ಯ ಬಂಡವಾಳ ಯೋಜನೆಯಡಿ 375.61 ಕೋಟಿ ರೂ., ಪ್ರೀಮಿಯಂ ಎಫ್‌ಎಆರ್‌ನಿಂದ 350 ಕೋಟಿ ರೂ., ನಕ್ಷೆ ಮಂಜೂರಾತಿಯಿಂದ 209.75 ಕೋಟಿ ರೂ., ಪಾಲಿಕೆ ಸ್ವತ್ತುಗಳ ಬಾಡಿಗೆಯಿಂದ 58 ಕೋಟಿ ರೂ., ಮಾರುಕಟ್ಟೆ ಮಳಿಗೆಗಳ ಬಾಡಿಗೆಯಿಂದ 25 ಕೋಟಿ ರೂ. ಹಾಗೂ ಜಾಹೀರಾತಿನಿಂದ 192 ಕೋಟಿ ರೂ. ರಾಜಸ್ವ ನಿರೀಕ್ಷೆ ಮಾಡಲಾಗಿದೆ. ಬಜೆಟ್‌

ಚುನಾವಣೆ ಜಪದಲ್ಲಿ ಭರಪೂರ ಯೋಜನೆ

78 ಚ.ಕಿ.ಮೀ. ವಿಸ್ತೀರ್ಣ ಹಾಗೂ 22 ಲಕ್ಷ ಜನಸಂಖ್ಯೆಯನ್ನು ಒಳಗೊಂಡಿರುವ ಕೇಂದ್ರ ನಗರ ಪಾಲಿಕೆ ಆಯುಕ್ತರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಿರ್ದೇಶನದಂತೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮುಂಗಡಪತ್ರದಲ್ಲಿ ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಬಜೆಟ್‌

ರಸ್ತೆ, ಕೆರೆಗಳು, ರಾಜಕಾಲುವೆಗಳ ಅಭಿವೃದ್ಧಿ, ಉದ್ಯಾನ, ತ್ಯಾಜ್ಯ ನಿರ್ವಹಣೆ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಾದಚಾರಿಗಳ ಸುರಕ್ಷತೆಗೆ ‘ಹೆಜ್ಜೆ ಹೆಜ್ಜೆಗೆ ಸುರಕ್ಷೆ’, ಬೈಕ್‌ ಆಯಂಬುಲೆನ್ಸ್‌ ಸೇವೆ, ಆಹಾರ ಪ್ರಿಯರಿಗಾಗಿ ಕಿರು ಮಳಿಗೆ-ಶುದ್ಧ ಆಹಾರ ಎಂಬ ಯೋಜನೆಗಳನ್ನು ಪ್ರಕಟಿಸಿ, ಅನುದಾನ ಒದಗಿಸಲಾಗಿದೆ.

ಹೊಸ ಮಹಾಯೋಜನೆ:

ಜಾಗತಿಕ ಕಾಸ್ಮೋಪಾಲಿಟನ್‌ ನಗರವಾಗಿ ಬೆಳೆದಿರುವ ನಗರದ ಮುಂದಿನ 25 ವರ್ಷಗಳ ಸುಸ್ಥಿರ ಅಭಿವೃದ್ಧಿಗಾಗಿ ಹೊಸ ಮಹಾ ಯೋಜನೆಯನ್ನು ಜಿಬಿಎ ರೂಪಿಸುತ್ತಿದೆ. ಬಹುತೇಕ ಅಭಿವೃದ್ಧಿಗೊಂಡಿರುವ ಕೇಂದ್ರ ಭಾಗದ ಪ್ರದೇಶಗಳ ಪುನರ್‌ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಹಾಯೋಜನೆ ತಯಾರಿಕೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದ್ದು, ಈ ಕಾರ್ಯಕ್ಕೆ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಇದೇ ಯೋಜನೆಯ ಭಾಗವಾಗಿ ಚಾಮರಾಜಪೇಟೆ ವ್ಯಾಪ್ತಿಯ ಪಾದರಾಯನಪುರ ಮುಖ್ಯರಸ್ತೆಯನ್ನು 9 ಮೀಟರ್‌ನಿಂದ 24 ಮೀಟರ್‌ಗೆ ವಿಸ್ತರಿಸುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕೇಂದ್ರ ನಗರ ಪಾಲಿಕೆಯು ವಿಧಾನಸೌಧ, ಹೈಕೋರ್ಟ್‌, ಕೇಂದ್ರ ವಿವಿ, ಕೆ.ಆರ್‌.ಮಾರುಕಟ್ಟೆ, ರಸೆಲ್‌ ಮಾರುಕಟ್ಟೆ, ಚಿನ್ನಸ್ವಾಮಿ ಕ್ರೀಡಾಂಗಣ, ಪಾರಂಪರಿಕ ಕೋಟೆ, ಡಿಆರ್‌ಡಿಒ, ಬಿಇಎಂಎಲ್‌, ಎನ್‌ಎಎಲ್‌, ಸಾರಿಗೆ ಸಂಪರ್ಕದ ಹೆಬ್ಬಾಗಿಲಾದ ಕೆಂಪೇಗೌಡ ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಫ್ರೀಡಂಪಾರ್ಕ್, ಚಿತ್ರೋದ್ಯಮದ ಗಾಂಧಿನಗರ, ರೇಷ್ಮೆ ವ್ಯಾಪಾರಕ್ಕೆ ಪ್ರಸಿದ್ಧವಾದ ಚಿಕ್ಕಪೇಟೆಯನ್ನು ಒಳಗೊಂಡಿದೆ.

2026-27ನೇ ಸಾಲಿನ ಆಯವ್ಯಯ ವೆಚ್ಚಗಳು:

ವೆಚ್ಚಗಳ ವರ್ಗೀಕರಣ ಮೊತ್ತ (ಕೋಟಿ ರೂ.ಗಳಲ್ಲಿ) ಶೇಕಡಾವಾರು

ಸಿಬ್ಬಂದಿ ವೇತನ 364.73 11

ಆಡಳಿತ 110.88 3

ಘನತ್ಯಾಜ್ಯ ನಿರ್ವಹಣೆ 225 7

ಕಾರ್ಯಾಚರಣೆ ಮತ್ತು ನಿರ್ವಹಣೆ 297.45 9

ಆರೋಗ್ಯ, ಶಿಕ್ಷಣ, ಕಲ್ಯಾಣ 174.79 5

ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳು 2146.60 63

ಠೇವಣಿ ಮತ್ತು ಕರಗಳ ಮರುಪಾವತಿ 107.10 3

ಒಟ್ಟು 3426.55 100

ಪಾಲಿಕೆಯ ಆದಾಯದ ಮೂಲಗಳು:

ಆದಾಯ ಮೂಲ ಮೊತ್ತ (ಕೋಟಿ ರೂ.ಗಳಲ್ಲಿ) ಶೇಕಡಾವಾರು

ಆಸ್ತಿ ತೆರಿಗೆ, ಕರಗಳು, ತೆರಿಗೆ ಸಂಬಂಧಿತ ಅದಾಯ 1406.80 41

ತೆರಿಗೆಯೇತರ ಆದಾಯ 470.24 13

ಕೇಂದ್ರದ ಅನುದಾನ 142.92 4

ರಾಜ್ಯ ಸರಕಾರದ ಅನುದಾನ 90.97 3

ರಾಜ್ಯದ ಬಂಡವಾಳ ಅನುದಾನ 650.61 19

ಮುನಿಸಿಪಲ್‌ ಬಾಂಡ್‌ ವಿತರಣೆ 200 6

ಅಸಾಧಾರಣ ಆದಾಯ 465.80 14

ಒಟ್ಟು 3427.34 100

ವಿವೇಚನಾ ಅನುದಾನದ ವಿವರ:

ಉಪ ಮುಖ್ಯಮಂತ್ರಿಗಳ ವಿವೇಚನೆಗೆ ಒಳಪಟ್ಟ ಅನುದಾನ- 61.50 ಕೋಟಿ ರೂ.

ಮೇಯರ್‌ ವಿವೇಚನೆಗೆ- 16 ಕೋಟಿ ರೂ.

ಉಪ ಮೇಯರ್‌ ವಿವೇಚನೆಗೆ- 8 ಕೋಟಿ ರೂ.

ಮುಖ್ಯ ಆಯುಕ್ತರ ವಿವೇಚನೆಗೆ- 7 ಕೋಟಿ ರೂ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ವಿವೇಚನೆಗೆ- 8 ಕೋಟಿ ರೂ.

ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *