15–20 ವರ್ಷ ದುಡಿದ ಕಾರ್ಮಿಕರಿಗೆ ಏಕಾಏಕಿ ಕೆಲಸದಿಂದ ಗೇಟ್ಪಾಸ್; ಸಾಲ ತೀರಿಸಲಾಗದೆ, ಊಟಕ್ಕೂ ಪರದಾಟ
ಮಂಗಳೂರು: ಸುರತ್ಕಲ್ನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಸಂಸ್ಥೆಯಲ್ಲಿ ಕಳೆದ 15ರಿಂದ 20 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಗಲಕೋಟೆ ಮೂಲದ ನಾಲ್ವರು ಮಹಿಳೆಯರನ್ನು ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲಸ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಕಳೆದ 50ಕ್ಕೂ ಹೆಚ್ಚು ದಿನಗಳಿಂದ ಸಂಸ್ಥೆಯ ಪ್ರಧಾನ ಗೇಟ್ ಮುಂಭಾಗ ಧರಣಿ ನಡೆಸುತ್ತಿದ್ದು, ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಡಿವೈಎಫ್ಐ, ಕಾರ್ಮಿಕರಿಗೆ ತಕ್ಷಣ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯನ್ನು ಒತ್ತಾಯಿಸಿದೆ. ಸುರತ್ಕಲ್
ಶರಣವ್ವ ಬಜಂತ್ರಿ, ಪಾರವ್ವ ಗಾಣಿಗೇರ, ಸುವರ್ಣ ಪಾಟೀಲ್ ಮತ್ತು ಸುರೇಖ ಕೊಲ್ಲದ್ ಅವರು ಎಚ್ಪಿಸಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದೂವರೆ ದಶಕದಿಂದಲೂ ಇದೇ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದ ಈ ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದರಿಂದ ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಡಿವೈಎಫ್ಐ ತಿಳಿಸಿದೆ.
ಜೀವನ ನಿರ್ವಹಣೆಗಾಗಿ ಈಗಾಗಲೇ ಸಾಲ ಮಾಡಿಕೊಂಡಿರುವ ಈ ಮಹಿಳೆಯರಿಗೆ ಕೆಲಸ ಕಳೆದುಕೊಂಡ ಬಳಿಕ ಸಾಲ ಮರುಪಾವತಿ ಮಾಡಲೂ ಸಾಧ್ಯವಾಗುತ್ತಿಲ್ಲ. ದಿನನಿತ್ಯದ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಾಲ್ವರು ಮಹಿಳೆಯರ ಪೈಕಿ ಸುವರ್ಣ ಪಾಟೀಲ್ ಅವರ ಮನೆಯೂ ಕುಸಿದು ಬಿದ್ದಿದ್ದು, ಅದನ್ನು ದುರಸ್ತಿಪಡಿಸಲು ಹಣವಿಲ್ಲದೆ ಅವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳ ಕಾಲ ದುಡಿದು ಬದುಕು ಕಟ್ಟಿಕೊಂಡಿದ್ದ ಮಹಿಳೆಯರು ಇಂದು ಜೀವನ ನಿರ್ವಹಣೆಗೂ ಪರದಾಡುವಂತಾಗಿರುವುದು ಕಾರ್ಮಿಕರ ಬದುಕಿನ ಅಸುರಕ್ಷತೆಯನ್ನು ಎತ್ತಿತೋರಿಸುತ್ತದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಸುರತ್ಕಲ್
ಇದನ್ನೂ ಓದಿ :ಹಳೆಯ ಕಾಯ್ದೆ ಓದಿ ಹೇಳುವುದಲ್ಲ, ಜಾರಿಗೊಳಿಸಿ ತೋರಿಸಿ: ಡಿವೈಎಫ್ಐ ಆಗ್ರಹ
ನ್ಯಾಯಕ್ಕಾಗಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ
ಕೆಲಸದಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸಿ ನಾಲ್ವರು ಮಹಿಳೆಯರು ಎಚ್ಪಿಸಿಎಲ್ ಪ್ರಧಾನ ಗೇಟ್ ಮುಂಭಾಗದಲ್ಲಿ 50 ದಿನಗಳಿಗೂ ಹೆಚ್ಚು ಕಾಲದಿಂದ ಧರಣಿ ನಡೆಸುತ್ತಿದ್ದಾರೆ. ಈ ಮಹಿಳೆಯರ ಪರವಾಗಿ ಕಾರ್ಮಿಕ ಸಂಘಟನೆ ಸಿಐಟಿಯು ಬೆಂಬಲಕ್ಕೆ ನಿಂತಿದ್ದು, ಸಂಬಂಧಪಟ್ಟ ಇಲಾಖೆಗಳಿಗೂ ದೂರು ಸಲ್ಲಿಸಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಹಿಳಾ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಡಿವೈಎಫ್ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್, ಯಾವುದೇ ಕಾರಣ ನೀಡದೆ ದೀರ್ಘಕಾಲ ದುಡಿದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವುದು ಅವರ ಕುಟುಂಬಗಳ ಬದುಕನ್ನೇ ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ, ಕೆಲಸ ಕಳೆದುಕೊಂಡಿರುವ ನಾಲ್ವರು ಮಹಿಳಾ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಅವರ ಉದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಹಾಗೂ ಅವರ ಜೀವನೋಪಾಯಕ್ಕೆ ಭದ್ರತೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್ಐ ಮುಖಂಡರಾದ ವಿನುಶ ರಮಣ ಮತ್ತು ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ವಿನಾಯಕ ಮಂಗಳೂರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಎಸ್ಐಆರ್ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!
