ಹಳೆಯ ಕಾಯ್ದೆ ಓದಿ ಹೇಳುವುದಲ್ಲ, ಜಾರಿಗೊಳಿಸಿ ತೋರಿಸಿ: ಡಿವೈಎಫ್‌ಐ ಆಗ್ರಹ

ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಸುಲಿಗೆಗೆ ಕಡಿವಾಣ ಹಾಕಿ; ಜಿಲ್ಲಾ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಿ
ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಸುಲಿಗೆಯಿಂದ ಜನಸಾಮಾನ್ಯರು ತತ್ತರಿಸುತ್ತಿರುವಾಗ, 2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ)ಯ ನಿಯಮಗಳನ್ನು ಓದಿ ಹೇಳಿಕೆ ನೀಡುವ ಮೂಲಕ ಆರೋಗ್ಯ ಸಚಿವ ಯು.ಟಿ. ಖಾದರ್ ಜನರ ಕಣ್ಣಿಗೆ ಮಣ್ಣೆರಚಬಾರದು. ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ. ಹಳೆಯ 

2007ರಿಂದಲೇ ಜಾರಿಯಲ್ಲಿರುವ ಕಾಯ್ದೆಯ ನಿಯಮಗಳನ್ನು ಈಗಷ್ಟೇ ಕಂಡುಕೊಂಡವರಂತೆ ಮಾತನಾಡುವುದರಿಂದ ಜನರ ಆರೋಗ್ಯ ಸಮಸ್ಯೆಗಳು ಬಗೆಹರಿಯುವುದಿಲ್ಲ. ಕಾಯ್ದೆ ಮತ್ತು ನಿಯಮಗಳು ಅಸ್ತಿತ್ವದಲ್ಲಿದ್ದರೂ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕದ ಮೇಲೆ ಪರಿಣಾಮಕಾರಿ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಆಡಳಿತದ ವೈಫಲ್ಯವಾಗಿದೆ. ಕಾಯ್ದೆಯ ನಿಯಮಗಳನ್ನು ಮಾಧ್ಯಮಗಳ ಮುಂದೆ ಓದಿ ಹೇಳುವುದಕ್ಕಿಂತ, ಅವುಗಳನ್ನು ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಈವರೆಗೆ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಆರೋಗ್ಯ ಸಚಿವರು ಜನರಿಗೆ ತಿಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಒಂದೇ ಚಿಕಿತ್ಸೆಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ವಿಭಿನ್ನ ದರ ವಿಧಿಸುವುದು, ಸಾಮಾನ್ಯ ಜನರ ಕೈಗೆಟುಕದ ಚಿಕಿತ್ಸಾ ವೆಚ್ಚ, ಅಗತ್ಯವಿಲ್ಲದ ವೈದ್ಯಕೀಯ ಪರೀಕ್ಷೆಗಳ ಹೊರೆ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಕಾಡುವ ಬಿಲ್‌ಗಳ ಆತಂಕ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾಗಿವೆ. ಒಂದೇ ಚಿಕಿತ್ಸೆಗೆ ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ದರ ವಿಧಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡುವುದರಲ್ಲಿ ಹೊಸತೇನೂ ಇಲ್ಲ. ಇಂತಹ ಅಕ್ರಮಗಳನ್ನು ತಡೆಯುವ ಅಧಿಕಾರ ಹೊಂದಿರುವ ಸರ್ಕಾರವೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ಹೇಳಿದೆ. ಹಳೆಯ 

2015ರಿಂದಲೇ ಹೋರಾಟ: ಡಿವೈಎಫ್‌ಐ ನೆನಪು

ಡಿವೈಎಫ್‌ಐ 2015ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಒತ್ತಾಯಿಸುತ್ತಾ ಬಂದಿದೆ. ಇದೇ ಬೇಡಿಕೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಬೇಕೆಂದೂ ಆಗ್ರಹಿಸಿದೆ. ಆಗಲೂ ಆರೋಗ್ಯ ಸಚಿವರಾಗಿದ್ದವರು ಯು.ಟಿ. ಖಾದರ್ ಅವರೇ. ಅಂದಿನಿಂದ ಇಂದಿನವರೆಗೆ ಜನರ ನ್ಯಾಯಯುತ ಬೇಡಿಕೆಗೆ ಪೂರ್ಣ ಪ್ರಮಾಣದ ಪರಿಹಾರ ಕಲ್ಪಿಸಲು ಸಾಧ್ಯವಾಗದಿದ್ದರೆ, ಈಗಿನ ಹೇಳಿಕೆಗಳಿಂದ ಜನರಿಗೆ ಯಾವ ಪ್ರಯೋಜನವಿದೆ ಎಂದು ಸಂಘಟನೆ ಪ್ರಶ್ನಿಸಿದೆ. ಹಳೆಯ

ಹಲವು ವರ್ಷಗಳ ಹಿಂದೆಯೇ ಡಿವೈಎಫ್‌ಐ ಮುಂದಿಟ್ಟಿದ್ದ ಬೇಡಿಕೆಯನ್ನು ಹೊಸ ಆಲೋಚನೆಯಂತೆ ಮಂಡಿಸುವ ಬದಲು, ಅದನ್ನು ಜಾರಿಗೊಳಿಸಿ ತೋರಿಸಬೇಕು. ರೋಗಿಗಳ ಅಸಹಾಯಕತೆಯನ್ನು ಲಾಭ ಗಳಿಸುವ ಅವಕಾಶವಾಗಿ ಬಳಸಿಕೊಳ್ಳುವ ಖಾಸಗಿ ಆಸ್ಪತ್ರೆಗಳ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕಬೇಕು. ಆಸ್ಪತ್ರೆಗಳ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿಯದೆ ಜನರ ಪರವಾಗಿ ನಿಲ್ಲುವ ಧೈರ್ಯವನ್ನು ಆರೋಗ್ಯ ಸಚಿವರು ಪ್ರದರ್ಶಿಸಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ. ಹಳೆಯ

ಇದನ್ನೂ ಓದಿ : ಎಸ್‌ಐಆರ್‌ ವಿರುದ್ಧ ದೆಹಲಿಯಲ್ಲಿ ಜನತಾ ಮೆರವಣಿಗೆ: ಚುನಾವಣಾ ಆಯೋಗದ ಕಚೇರಿಯತ್ತ ಪ್ರತಿಭಟನಾಕಾರರ ಹೆಜ್ಜೆ

ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಒತ್ತಾಯ

ಖಾಸಗಿ ಆಸ್ಪತ್ರೆಗಳ ಮೇಲಿನ ಜನರ ಅನಿವಾರ್ಯ ಅವಲಂಬನೆಯನ್ನು ಕಡಿಮೆ ಮಾಡಲು ಮೊದಲು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಖಾಸಗಿ ಆಸ್ಪತ್ರೆಗಳಿಗೆ ಸಮರ್ಥ ಪರ್ಯಾಯವಾಗಿ ರೂಪಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ತಜ್ಞ ವೈದ್ಯರು, ಔಷಧಗಳು, ಆಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲೇ ಗುಣಮಟ್ಟದ ಚಿಕಿತ್ಸೆ ಲಭ್ಯವಾದಾಗ ಮಾತ್ರ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಬಾಗಿಲು ತಟ್ಟುವ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಇದರ ಜೊತೆಗೆ, ಪ್ರತಿಯೊಂದು ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ನಿಮಾನ್ಸ್‌ನಂತಹ ವಿಶೇಷ ಚಿಕಿತ್ಸಾ ಸಂಸ್ಥೆಗಳ ಘಟಕಗಳನ್ನು ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಮ್ಮ ಜಿಲ್ಲೆಗಳಲ್ಲೇ ಕೈಗೆಟುಕುವ ದರದಲ್ಲಿ ವಿಶೇಷ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಇಂತಹ ಶಾಶ್ವತ ಪರಿಹಾರಗಳಿಗೆ ಆದ್ಯತೆ ನೀಡಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ.

ಜಿಲ್ಲಾ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಿ

ಕೆಪಿಎಂಇ ಕಾಯ್ದೆಯಡಿ ಕಾರ್ಯನಿರ್ವಹಿಸುವ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ, ಅಗತ್ಯ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು ಎಂಬುದು ಡಿವೈಎಫ್‌ಐನ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಖಾಸಗಿ ಆಸ್ಪತ್ರೆಗಳ ತಪ್ಪಾದ ಚಿಕಿತ್ಸಾ ಕ್ರಮಗಳು, ಅನಗತ್ಯ ಪರೀಕ್ಷೆಗಳು, ಅಕ್ರಮ ಶುಲ್ಕ ವಸೂಲಿ ಹಾಗೂ ಕಾಯ್ದೆಯ ಉಲ್ಲಂಘನೆಗಳ ಕುರಿತು ದೂರುಗಳು ಬಂದಾಗ ತ್ವರಿತ ತನಿಖೆ ನಡೆಸಿ, ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಹಳೆಯ

ಹಳೆಯ ಕಾಯ್ದೆಯ ನಿಯಮಗಳನ್ನು ಓದಿ ಹೇಳಿಕೆ ನೀಡುವುದಕ್ಕೆ ಸೀಮಿತವಾಗದೆ, ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆರೋಗ್ಯ ಸಚಿವರು ಮುಂದಾಗಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಜಿಲ್ಲಾ ಮಟ್ಟದ ನಿಯಂತ್ರಣ ಪ್ರಾಧಿಕಾರಗಳಿಗೆ ಹೆಚ್ಚಿನ ಅಧಿಕಾರ ನೀಡಿ, ಖಾಸಗಿ ಆಸ್ಪತ್ರೆಗಳ ಅನಿಯಂತ್ರಿತ ಶುಲ್ಕ ವಸೂಲಿ ಮತ್ತು ನಿಯಮಬಾಹಿರ ಚಿಕಿತ್ಸಾ ಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಲವಿತ್ರ ವಸ್ರದ್ ಮತ್ತು ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಒತ್ತಾಯಿಸಿದ್ದಾರೆ. ಹಳೆಯ 

ಇದನ್ನೂ ನೋಡಿ : ಎಸ್‌ಐಆರ್‌ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!

Donate Janashakthi Media

Leave a Reply

Your email address will not be published. Required fields are marked *