56,432 ಸರ್ಕಾರಿ ಹುದ್ದೆ ನೇಮಕಾತಿ: ಮಾದಿಗ ಸಮುದಾಯದಲ್ಲಿ ಆತಂಕ

ಬೆಂಗಳೂರು: 56,432 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದೂ, ಈ ನೇಮಕಾತಿಯಲ್ಲಿ “ಒಳಮೀಸಲಾತಿ” ಅನ್ವಯಿಸದೇ ಹಳೆಯ ಪದ್ಧತಿಯಲ್ಲೇ ಮುಂದುವರಿಯಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ, ಮಾದಿಗ (ದಲಿತ ಎಡಗೈ) ಸಮುದಾಯದಲ್ಲಿ ಆತಂಕ ಮೂಡಿದೆ. ಸರ್ಕಾರಿ

ಇದೇ ಕಾರಣಕ್ಕೆ ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಸೇರಿದಂತೆ ಇತರರು ಮಾರ್ಚ್‌ 2ರ ರಾತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನೇರ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯನ್ನು ಜಾರಿಗೊಳಿಸುವ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎನ್ನವ ಮಾಹಿತಿ ಲಭ್ಯವಾಗಿದೆ. ಶಾಸಕ ಬಸವಂತಪ್ಪ, ಮಾಜಿ ಸಂಸದ ಎಲ್. ಹನುಮಂತಯ್ಯ, ಬಿ.ಎನ್. ಚಂದ್ರಪ್ಪ ಮತ್ತು ಮಾಜಿ ಎಂಎಲ್ಸಿ ಧರ್ಮಸೇನ ಅವರುಗಳು ಸಮುದಾಯದ ಧ್ವನಿಯಾಗಿ ಈ ಸಭೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ

ಏನಿದು ಒಳಮೀಸಲಾತಿ?

ಪರಿಶಿಷ್ಟ ಜಾತಿಗಳಿಗೆ (SC) ಸಿಗುತ್ತಿರುವ ಶೇ.15 ರಷ್ಟು ಮೀಸಲಾತಿಯು (ನಂತರ ಶೇ.17 ಕ್ಕೆ ಏರಿಸಲಾಗಿದೆ) ಎಲ್ಲ 101 ಉಪಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಇದನ್ನು ಪರಿಶೀಲಿಸಲು 2005ರಲ್ಲಿ ಅಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರವು ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿತು. ಸರ್ಕಾರಿ

ಇದನ್ನೂ ಓದಿ: ಯುವಜನರಲ್ಲಿ ಮಾನಸಿಕ ಆರೋಗ್ಯ ಕುಸಿತ: ಜಾಗತಿಕ ವರದಿಯಲ್ಲಿ 60ನೇ ಸ್ಥಾನ

ಸುಮಾರು 7 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ, ಪ್ರತಿ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಆಯೋಗವು 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿತು. ಇದು ಕರ್ನಾಟಕದ ಎಸ್‌ಸಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ದಾಖಲಿಸಿದ ಮೊದಲ ಸಮಗ್ರ ವರದಿಯಾಗಿದೆ. ಸರ್ಕಾರಿ

2024ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನ ಏಳು ನ್ಯಾಯಾಧೀಶರ ಪೀಠವು, “ರಾಜ್ಯ ಸರ್ಕಾರಗಳು ಎಸ್‌ಸಿ-ಎಸ್‌ಟಿ ಒಳಮೀಸಲಾತಿ ಕಲ್ಪಿಸಲು ಸ್ವತಂತ್ರ ಅಧಿಕಾರ ಹೊಂದಿವೆ” ಎಂದು ತೀರ್ಪು ನೀಡಿದೆ. ಈ ಐತಿಹಾಸಿಕ ತೀರ್ಪಿನ ನಂತರವೂ ನೇಮಕಾತಿಯಲ್ಲಿ ಇದನ್ನು ಜಾರಿಗೆ ತರದಿದ್ದರೆ, ಮಾದಿಗ ಸಮುದಾಯಕ್ಕೆ ಸಿಗಬೇಕಾದ ಶೇ.6 ರಷ್ಟು ಒಳಮೀಸಲಾತಿ ಕೈತಪ್ಪಿ ಹೋಗಬಹುದು ಎಂಬುದು ಈ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಚರ್ಚೆಗಳೇನು?

ಒಳಮೀಸಲಾತಿ ಅನ್ವಯ ಶೇ.56 ರಿಂದ ಹಳೆ ಮೀಸಲಾತಿ ಮಾದರಿಯಲ್ಲಿಯೇ ಶೇ.50ಕ್ಕೆ ಇಳಿಸಿದರೆ ಸಮುದಾಯಕ್ಕೆ ಅನ್ಯಾಯವಾಗಲಿದೆ. ಇದರಿಂದಾಗಿ ಸರಕಾರಿ ಉದ್ಯೋಗದಲ್ಲಿ ಶೇ.6 ರಷ್ಟು ಮಾದಿಗ ಸಮುದಾಯಕ್ಕೆ ಹೊಡೆತ ಬೀಳಲಿದೆ. ಹಳೆ ಮೀಸಲಾತಿ ಪದ್ದತಿಯಿಂದಾಗಿ ಜನ ಸಂಖ್ಯೆಯಲ್ಲಿ ದೊಡ್ಡ ಪಾಲನ್ನು ಹೊಂದಿದ್ದರೂ, ಮಾದಿಗ ಸಮುದಾಯದ ಅಭ್ಯರ್ಥಿಗಳು ಮುಕ್ತ ಸ್ಪರ್ಧೆಯಲ್ಲಿ (ಅದರಲ್ಲೂ ಎಸ್‌ಸಿ ಕೋಟಾದಡಿ) ಹಿಂದುಳಿಯುತ್ತಿದ್ದಾರೆ. ನೇರ ನೇಮಕಾತಿಯಲ್ಲಿ ಇವರಿಗೆ ಸಿಗಬೇಕಾದ ಶೇ.6 ಒಳಮೀಸಲಾತಿ ಸಿಗದಿದ್ದರೆ, ಸಾವಿರಾರು ಹುದ್ದೆಗಳು ಈ ಬಾರಿ ಸಮುದಾಯದ ಕೈತಪ್ಪಲಿವೆ. ಈ ಪದ್ಧತಿಯಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತುಸು ಮುಂದುವರಿದಿರುವ ಕೆಲವು ಉಪಜಾತಿಗಳು ಸಿಂಹಪಾಲನ್ನು ಪಡೆಯುತ್ತಿವೆ.

ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಶೇ. 17 ಮೀಸಲಾತಿಯನ್ನು ಯಾವುದೇ ವರ್ಗೀಕರಣವಿಲ್ಲದೆ ಒಂದೇ ಗುಂಪಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲೇ ಒಳಮೀಸಲಾತಿ ಅನ್ವಯಿಸುವಂತೆ ವಿಶೇಷ ನಿಯಮಾವಳಿ ತರಬೇಕಿದೆ. ರಾಜ್ಯಾಪಾಲರ ಅಂಕಿತದ ಮೂಲಕ ಒಳ ಮೀಸಲಾತಿ ಜಾರಿಗೊಳಿಸಬೇಕು. “ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ” ಜಾರಿಗೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಈಗ ಅವಕಾಶವಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಸರಿ ಅಲ್ಲ. ಇದರಿಂದಾಗಿ ಮುಂದಿನ ಚುನಾವಣೆಗಳ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಒಳಮೀಸಲಾತಿ ಜಾರಿಯಾಗುವವರೆಗೆ ನೇರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಅಥವಾ ಈ ನೇಮಕಾತಿಯಲ್ಲೇ ‘ಹಂಗಾಮಿ ಒಳಮೀಸಲಾತಿ’ (Provisional Internal Reservation) ತರಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸರಕಾರಕ್ಕೂ ತಾಂತ್ರಿಕ ಸವಾಲುಗಳು

ಸರ್ಕಾರವು ಒಳಮೀಸಲಾತಿ ಜಾರಿಗೆ 6-6-5 ಸೂತ್ರವನ್ನು (ಎಡಗೈ-ಶೇ.6%, ಬಲಗೈ-ಶೇ.6, ಸ್ಪರ್ಶ್ಯ ಮತ್ತು ಇತರರು- ಶೇ.5) ಒಪ್ಪಿಕೊಂಡಿದೆಯಾದರೂ, ಸದ್ಯದ ನೇಮಕಾತಿಯಲ್ಲಿ ಇದನ್ನು ತಾಂತ್ರಿಕವಾಗಿ ಹೇಗೆ ಅಳವಡಿಸಬೇಕು ಎಂಬ ಗೊಂದಲವಿದೆ. ಕೋರ್ಟ್ ಮೆಟ್ಟಿಲೇರಿರುವ ಪ್ರಕರಣಗಳು ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಬಾರದು ಎಂಬುದು ಸರ್ಕಾರದ ಗೊಂದಲಕ್ಕೆ ಕಾರಣವಾಗಿದೆ.

ಮಾರ್ಚ್ 11ರ ಪ್ರತಿಭಟನೆ

ಒಳ ಮೀಸಲಾತಿ ಸಮಿತಿಯ ವರದಿ ಬರಲು ಸಮಯ ಬೇಕಾಗುತ್ತದೆ ಎಂಬ ಕಾರಣ ನೀಡಿ, ಈಗಿನ 56,000 ಹುದ್ದೆಗಳ ನೇಮಕಾತಿಯನ್ನು ಹಳೆಯ ಪದ್ಧತಿಯಲ್ಲೇ ನಡೆಸಲು ಸರ್ಕಾರ ಮುಂದಾಗಿದೆ. ಒಮ್ಮೆ ಅಧಿಸೂಚನೆ ಹೊರಬಿದ್ದರೆ, ಈ ಹುದ್ದೆಗಳಿಗೆ ಒಳಮೀಸಲಾತಿ ಅನ್ವಯಿಸುವುದು ಕಾನೂನಾತ್ಮಕವಾಗಿ ಕಷ್ಟವಾಗುತ್ತದೆ ಎಂಬುದು ಸಮುದಾಯದ ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಈಗಾಗಲೇ ವಿವಿಧ ಮಾದಿಗ ಸಂಘಟನೆಗಳು ಮಾ.11ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಮೂಲಕ ಸರ್ಕಾರದ ಮೇಲೆ ಭಾರಿ ಒತ್ತಡ ಹೇರುವ ಸಾಧ್ಯತೆಗಳಿವೆ.

ಇದನ್ನೂ ನೋಡಿ: ಸೈದ್ದಾಂತಿಕ ಭಿನ್ನಾಭಿಪ್ರಾಯಕ್ಕೆ ಉತ್ತರ ಗಲಭೆಯೇ? Azim Premji Universityನಲ್ಲಿ ನಿಜವಾಗಿ ಏನಾಯಿತು?

Donate Janashakthi Media

Leave a Reply

Your email address will not be published. Required fields are marked *