ಅಸಹಿಷ್ಣುತೆಯ ಹೊಗೆಯಿಂದ ಮಸುಕಾದ ಸಾರ್ವಜನಿಕ ವಲಯ, ಸಂಘಟಿತ ಪ್ರಚಾರದಿಂದ ರೂಪುಗೊಳ್ಳುತ್ತಿರುವ ದ್ವೇಷದ ರಾಜಕೀಯ, ಮತ್ತು ಗೊಂದಲಗೊಳಗಾದ ಯುವ ಮನಸ್ಸುಗಳನ್ನು ಹಿಂಸೆಯತ್ತ ದಿಕ್ಕು ತೋರಿಸುವ ಸಂಚಾಲಿತ ವ್ಯವಸ್ಥೆ—ಇವೆಲ್ಲವನ್ನು ನಿರ್ದಾಕ್ಷಿಣ್ಯವಾಗಿ ಎದುರುಗಾಣಿಸುವ ರಂಗಪ್ರಯೋಗವೇ ಬೆಂಗಳೂರು ಸಮುದಾಯದ ‘ಭಗವಂತನ ಮರಣ’.
– ಗುರುರಾಜ ದೇಸಾಯಿ
ಧಾರ್ಮಿಕ ಅಸಹಿಷ್ಣುತೆಯ ಹೆಸರಿನಲ್ಲಿ ದೇಶದ ಹಲವೆಡೆ ಉಕ್ಕಿಬರುತ್ತಿರುವ ಹಿಂಸೆ, ಅದರ ಹಿಂದೆ ಅಡಗಿರುವ ರಾಜಕೀಯ ಲೆಕ್ಕಾಚಾರ, ಮತ್ತು ಅಮಾಯಕ ಯುವಕರ ಮನಸ್ಸುಗಳನ್ನು ಮೌಢ್ಯ, ಮೂಲಭೂತವಾದದತ್ತ ತಳ್ಳುವ ವ್ಯವಸ್ಥಿತ ಪ್ರಚಾರ, ಈ ಎಲ್ಲವನ್ನು ಪ್ರಶ್ನಿಸುವ ತೀಕ್ಷ್ಣ ರಂಗಪ್ರಯೋಗವೇ ಬೆಂಗಳೂರು ಸಮುದಾಯದ ಹೊಸ ನಾಟಕ ‘ಭಗವಂತನ ಮರಣ’. ಭಗವಂತ
ಇದು ಕೇವಲ ಕಥೆ ಅಲ್ಲ; ಇದು ಕಾಲದ ಕನ್ನಡಿ. ಇಂದಿನ ಸಮಾಜದ ಕಳವಳ, ಭಯ, ಗೊಂದಲ ಮತ್ತು ಮೌಲ್ಯಸಂಕಟವನ್ನು ವೇದಿಕೆಯ ಮೇಲೆ ಜೀವಂತಗೊಳಿಸುವ ಪ್ರಾಮಾಣಿಕ ಪ್ರಯತ್ನ.
ಇದನ್ನೂ ಓದಿ: ಸುಗಂಧ ದ್ರವ್ಯಗಳ ಗೋದಾಮಿನಲ್ಲಿ ಬೆಂಕಿ ಅವಘಡ; ಅಪಾರ ನಷ್ಟ
ಹತ್ಯೆಯ ಕ್ಷಣದಲ್ಲಿ ಹುಟ್ಟುವ ಸಂವಾದ
ನಾಟಕದ ಕೇಂದ್ರದಲ್ಲಿ ಒಬ್ಬ ಯುವಕ—ಹಿಂದುತ್ವ ಸಂಘಟನೆಯೊಂದರ ಕಾರ್ಯಕರ್ತ. ಸಂಘಟನೆಯ ಆದೇಶದಂತೆ ಒಬ್ಬ ಪ್ರಾಧ್ಯಾಪಕನನ್ನು ಹತ್ಯೆ ಮಾಡಲು ಅವನು ಬರುತ್ತಾನೆ. ಅವನ ಕೈಯಲ್ಲಿ ಬಂದೂಕು. ಮನಸ್ಸಿನಲ್ಲಿ ದ್ವೇಷದ ಬೀಜ. ತಲೆ ತುಂಬಿ “ಧರ್ಮರಕ್ಷಣೆ” ಎಂಬ ಘೋಷಣೆ. ಆದರೆ ನಿರೀಕ್ಷಿತ ಕ್ಷಣದಲ್ಲಿ ಗುಂಡಿನ ಸದ್ದು ಕೇಳಿಸದು. ಬದಲಾಗಿ, ಆರಂಭವಾಗುವುದು ಸಂವಾದ.
ಯುವಕ ಮತ್ತು ಪ್ರಾಧ್ಯಾಪಕರ ನಡುವಿನ ವಾದ–ಪ್ರತಿವಾದ ಕೇವಲ ಎರಡು ವ್ಯಕ್ತಿಗಳ ಮಾತುಕತೆ ಅಲ್ಲ; ಅದು ಎರಡು ಮನೋಭಾವಗಳ ಘರ್ಷಣೆ. ಒಂದೆಡೆ ಅಂಧ ನಂಬಿಕೆಯಿಂದ ಕಟ್ಟಲ್ಪಟ್ಟ ಮನಸ್ಸು, ಮತ್ತೊಂದೆಡೆ ವಿಚಾರಬದ್ಧತೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಿಂತ ಚಿಂತನೆ. “ಧರ್ಮ ಎಂದರೆ ಏನು?”, “ರಾಷ್ಟ್ರಪ್ರೇಮದ ಅರ್ಥವೇನು?”, “ಭಕ್ತಿ ಮತ್ತು ಮೌಢ್ಯ ನಡುವಿನ ಅಂತರ ಎಲ್ಲಿದೆ?” ಈ ಪ್ರಶ್ನೆಗಳು ಒಂದರ ಮೇಲೊಂದು ಬೀಳುತ್ತವೆ. ಪ್ರತಿಯೊಂದು ಪ್ರಶ್ನೆ ಯುವಕನ ʼಧರ್ಮದ ಆಫೀಮಿನ ಮನಸ್ಸಿನ ಗೋಡೆಯ ಮೇಲೆ ಬಿರುಕು ಮೂಡಲಾರಂಭಿಸುತ್ತದೆ.

ಇದೇ ನಾಟಕದ ಶಕ್ತಿ, ಹಿಂಸೆಯ ತೀವ್ರತೆಯನ್ನು ಸಂವಾದದ ಆಳಕ್ಕೆ ಪರಿವರ್ತಿಸುವ ಸಾಮರ್ಥ್ಯ. ಪ್ರೇಕ್ಷಕರು ಕೇವಲ ನೋಡುವವರಾಗಿರದೆ, ಆ ವಾದ–ಪ್ರತಿವಾದದ ಸಹಭಾಗಿಗಳಾಗುತ್ತಾರೆ.
ಬಸವಣ್ಣನ ವಚನಗಳ ಜೀವಂತ ಶಕ್ತಿ
ನಾಟಕದ ಮತ್ತೊಂದು ಮಹತ್ವದ ಆಯಾಮ ಬಸವಣ್ಣನ ವಚನಗಳ ಬಳಕೆ. ವಚನಗಳು ಇಲ್ಲಿ ಕೇವಲ ಅಲಂಕಾರಿಕ ಉಲ್ಲೇಖಗಳಾಗಿ ಬರುವುದಿಲ್ಲ; ಅವು ಚಿಂತನೆಯ ತಿರುವು ತರುವ ತಾತ್ವಿಕ ಹಸ್ತಕ್ಷೇಪಗಳಾಗಿ ಕಾರ್ಯನಿರ್ವಹಿಸುತ್ತವೆ. ವೇದಿಕೆಯ ಮೇಲೆ ಉಚ್ಚರಿಸಲ್ಪಡುವ ಪ್ರತಿಯೊಂದು ವಚನವೂ ಕಥೆಯ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಸಂಭಾಷಣೆಯ ತೀವ್ರತೆಯ ಮಧ್ಯೆ ಅವು ತಾರ್ಕಿಕ ವಿರಾಮಗಳನ್ನು ಸೃಷ್ಟಿಸುತ್ತವೆ. ಪ್ರೇಕ್ಷಕರಿಗೂ, ಪಾತ್ರಗಳಿಗೂ ಆತ್ಮಪರಿಶೀಲನೆಗೆ ಅವಕಾಶ ಕೊಡುತ್ತವೆ.
ಕೊಲ್ಲಲು ಬಂದ ಯುವಕನ ಮನಸ್ಸಿನಲ್ಲಿ ಮೊದಲಿಗೆ ಪ್ರತಿರೋಧ ಮೂಡುತ್ತದೆ. ಅವನಿಗೆ ವಚನಗಳು ದುರ್ಬಲತೆ ಅಥವಾ ಭಾವನಾತ್ಮಕ ಉಪದೇಶಗಳಂತೆ ತೋರುತ್ತವೆ. ಆದರೆ ವಚನಗಳ ಸರಳತೆ ಮತ್ತು ನೈತಿಕ ಸ್ಪಷ್ಟತೆ ಅವನೊಳಗಿನ ದ್ವಂದ್ವವನ್ನು ಕೆದಕುತ್ತವೆ. “ಕಾಯಕವೇ ಕೈಲಾಸ”, “ಮನುಷ್ಯನೇ ದೇವರು” ಎಂಬ ಅರ್ಥಪೂರ್ಣ ಸಂದೇಶಗಳು ಅವನಿಗೆ ಹೊಸ ಅಳತೆಗೋಲನ್ನು
ನೀಡುತ್ತವೆ. ಅವನು ರಕ್ಷಿಸಲು ಹೊರಟಿರುವ ‘ಧರ್ಮ’ ಮನುಷ್ಯನನ್ನೇ ಹಾಳುಮಾಡುತ್ತಿದ್ದರೆ, ಅದು ಧರ್ಮವೇನಾ ಎಂಬ ಪ್ರಶ್ನೆ ಅವನೊಳಗೆ ಮೊಳೆದುಕೊಳ್ಳುತ್ತದೆ.
ಇಲ್ಲಿ ದ್ವೇಷದ ಭಾಷೆ ನಿಧಾನವಾಗಿ ಪ್ರಶ್ನೆಗಳಾಗಿ ಪರಿವರ್ತಿತವಾಗುತ್ತದೆ. ಆ ಪ್ರಶ್ನೆಗಳು ಆತ್ಮಪರಿಶೀಲನೆಗೆ ದಾರಿ ಮಾಡಿಕೊಡುತ್ತವೆ. ತನ್ನ ಕ್ರಿಯೆಯ ನೈತಿಕ ಅರ್ಥವನ್ನು ಅವನು ಮರುಪರಿಶೀಲಿಸಲು ಪ್ರಾರಂಭಿಸುತ್ತಾನೆ. ಸಂಘಟನೆಯ ಆದೇಶವೇ ಸತ್ಯವೋ, ಅಥವಾ ಮನುಷ್ಯತ್ವವೇ ಸತ್ಯವೋ ಎಂಬ ಅಂತರಂಗದ ಸಂಘರ್ಷ ತೀವ್ರಗೊಳ್ಳುತ್ತದೆ. ಬದಲಾವಣೆಗೊಂಡ ಯುವಕ ತನ್ನ ನಾಯಕರನ್ನೇ ಪ್ರಶ್ನಿಸಲು ಸಜ್ಜಾಗುವ ಕ್ಷಣ, ಇದು ನಾಟಕದ ಪ್ರಮುಖ ಜೀವಾಳ. ಹಿಂಸೆಗೆ ಸಿದ್ಧನಾಗಿದ್ದ ಕೈ, ಚಿಂತನೆಗೆ ಸಿದ್ಧವಾಗುತ್ತದೆ.
ಎಂ.ಎಂ. ಕಲಬುರ್ಗಿ ನೆನಪು
ಎಂ.ಎಂ ಕಲಬುರ್ಗಿಯವರ ಹ್ಯತ್ಯೆಯ ಸುತ್ತ ಹೆಣೆದ ನಾಟಕವೆಂಬಂತೆ ಇದು ಮನಸ್ಸಿ ಭಾಸವಾಗುತ್ತದೆ. ಕಲಬುರ್ಗಿಯವರು ಬಸವಣ್ಣನನ್ನು ಪೌರಾಣಿಕ ಪ್ರತಿಮೆಯಾಗಿ ನೋಡದೆ, ಸಾಮಾಜಿಕ ಕ್ರಾಂತಿಕಾರಿಯಾಗಿ ಅಧ್ಯಯನ ಮಾಡಿಕೊಂಡವರು ಬಸವಣ್ಣನ ವಚನಗಳ ತರ್ಕಬದ್ಧ, ಸಮಾನತಾವಾದಿ ಮತ್ತು ಮೌಢ್ಯವಿರೋಧಿ ಅಂಶಗಳನ್ನು ಅವರು ವಿಶೇಷವಾಗಿ ಉಲ್ಲೇಖಿಸುತ್ತಿದ್ದರು. ಧರ್ಮವನ್ನು ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶ. ಮೂರ್ತಿಪೂಜೆ, ಕರ್ಮಕಾಂಡ, ಬ್ರಾಹ್ಮಣಿಕ ಏಕಾಧಿಕಾರ ಇವೆಲ್ಲವನ್ನು ಶರಣ ಚಳವಳಿಯೇ ಪ್ರಶ್ನಿಸಿತ್ತು. ಭಕ್ತಿ ಎಂದರೆ ಅಂಧಾನುಸರಣೆ ಅಲ್ಲ; ಅದು ನೈತಿಕ ಜವಾಬ್ದಾರಿ ಎಂದು ಅವರು ತಮ್ಮ ಸಾಹಿತ್ಯದಲ್ಲಿ ಸಾಬೀತು ಮಾಡಿದ್ದರು.

ಕಲಬುರ್ಗಿಯವರ ಪ್ರಶ್ನಿಸುವ ಧೈರ್ಯ ಮತ್ತು ಬಸವಣ್ಣನ ಸಮಾನತೆಯ ತತ್ವ ಈ ನಾಟಕದಲ್ಲಿ ಸೇರುತ್ತವೆ. ಪ್ರಾಧ್ಯಾಪಕನ ಧ್ವನಿ ತರ್ಕದ್ದು; ವಚನಗಳ ಧ್ವನಿ ನೈತಿಕ ಬಲದದು. ಈ ಎರಡು ಸೇರಿ ಯುವಕನ ಮನಸ್ಸಿನಲ್ಲಿ ಬದಲಾವಣೆ ಬಿತ್ತಿತ್ತದೆ. ಅವನನ್ನು ಅಧ್ಯಯನ ಶೀಲನನನಾಗಿ ರೂಪಿಸುತ್ತದೆ.
ಕಳೆದ ಕೆಲವು ವರ್ಷಗಳಲ್ಲಿ ನಡೆದ ಚಿಂತಕರ ಹತ್ಯೆಗಳ ನೆರಳು ನಾಟಕದ ಹಿನ್ನೆಲೆಯಾಗಿ ಕಾಣಿಸುತ್ತದೆ. ಪ್ರೊ. ಎಂ.ಎಂ. ಕಲಬುರ್ಗಿ ಅವರ ವಿಚಾರಧಾರೆ, ಗೌರಿ ಲಂಕೇಶ್, ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆಗಳ ಸ್ಮರಣೆ ಸಂಭಾಷಣೆಯೊಳಗೆ ಪ್ರತಿಧ್ವನಿಸುತ್ತದೆ.
ನಾಟಕ ಉಪದೇಶ ನೀಡುವುದಿಲ್ಲ; ಆದರೆ “ಚಿಂತನೆಗೆ ಗುಂಡು ಹೊಡೆಯಬಹುದೇ?” ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರಿಸುತ್ತದೆ. ವಿಚಾರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಹಕ್ಕಿನ ಬಗ್ಗೆ ಗಂಭೀರ ಚಿಂತನೆಗೆ ಇದು ಆಹ್ವಾನ ನೀಡುತ್ತದೆ.
ಅಭಿನಯ ಮತ್ತು ನಿರ್ದೇಶನ
ನಟರ ತಂಡದಲ್ಲಿ ಬಹುತೇಕರು ಹೊಸಬರು. ಆದರೂ ವೇದಿಕೆಯ ಮೇಲೆ ಅವರ ಹಿಡಿತ ಗಮನಾರ್ಹ. ಸಂಭಾಷಣೆಯ ತೀವ್ರತೆ, ಭಾವನಾತ್ಮಕ ಕ್ಷಣಗಳ ನಿಖರ ಅಭಿವ್ಯಕ್ತಿ, ಮೌನದ ಪರಿಣಾಮಕಾರಿ ಬಳಕೆ ಇವೆಲ್ಲ ನಾಟಕವನ್ನು ಜೀವಂತವಾಗಿಸುತ್ತವೆ. ಅನುಭವದ ಕೊರತೆ ಎಲ್ಲಿಯೂ ಗೋಚರಿಸುವುದಿಲ್ಲ.
“ನಿನಗೆ ಯಾರು ಪ್ರೀತಿಯನ್ನು ತೋರಿಸಿಲ್ಲವೇನೋ” ಎಂದು ಪ್ರೋ ಅವನ ತಲೆ ಸವರುತ್ತಿರುವಾಗ ನಮ್ಮ ಕಣ್ಣು ಒದ್ದೆಯಾಗುತ್ತವೆ. ದೇಹದಲ್ಲಿ ಸಂಚಲನವೊಂದು ಮೂಡುತ್ತದೆ. “ ತನ್ನ ಪ್ರಿಯೆತಮೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬ ಸುದ್ದಿ ಕೇಳಿದಾಗ ಆ ಯುವಕನ ಅಭಿನಯ ಎದೆಯೊಳಗಿನ ಸಂಕಟವನ್ನು ತೋರುತ್ತದೆ. ಫ್ಲ್ಯಾಶ್ಬ್ಯಾಕ್ ದೃಶ್ಯಗಳ ಪ್ರಯೋಗ ಈ ನಾಟಕದ ಹೊಸತನವನ್ನು ತೋರಿಸುತ್ತದೆ. ವಿಚಾರಗಳನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ ಎಂಬುದು ಕ್ಲೈಮ್ಯಾಕ್ಸ್ ದೃಶ್ಯ ಚನ್ನಾಗಿ ಕಟ್ಟಿಕೊಟ್ಟಿದೆ.

ಕೆ.ಆರ್. ಮೀರಾ ಅವರ ಮೂಲ ಮಲಯಾಳಂ ಕಥೆ “ಭಗವಂತೆ ಮರಣಂ” ಆಧಾರಿತವಾಗಿದ್ದು, ನಿರ್ದೇಶಕ ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಅವರು ರೂಪಾಂತರ ಮಾಡಿರುವುದು ಗಮನಾರ್ಹ. ಕನ್ನಡ ಅನುವಾದ ಕೆ. ಪ್ರಭಾಕರನ್ ಅವರದ್ದು. ಸಾಹಿತ್ಯದ ಆಳವನ್ನೂ, ರಂಗಭೂಮಿಯ ಚೈತನ್ಯವನ್ನೂ ಸಮತೋಲನಗೊಳಿಸಿರುವ ಈ ಪ್ರಯತ್ನ ರಂಗಾಸಕ್ತರನ್ನು ಸೆಳೆಯುತ್ತಿದೆ.
“ಭಗವಂತನ ಮರಣ” ಎಂದರೇನು?
ಶೀರ್ಷಿಕೆಯೇ ಒಂದು ಸವಾಲು. ಭಗವಂತನ ಮರಣ ಎಂದರೆ ಏನು? ಯಾರು ಸಾಯುತ್ತಾರೆ? ನಂಬಿಕೆನಾ? ಮನುಷ್ಯತ್ವನಾ? ಅಥವಾ ಮೌಢ್ಯವೇ? ಈ ಪ್ರಶ್ನೆಗಳ ಉತ್ತರವನ್ನು ಓದಿ ತಿಳಿಯಲು ಸಾಧ್ಯವಿಲ್ಲ; ಅದನ್ನು ಅನುಭವಿಸಬೇಕು. ವೇದಿಕೆಯ ಮೇಲೆ ನಡೆಯುವ ಸಂವಾದವನ್ನು ಕೇಳಬೇಕು. ಪಾತ್ರಗಳ ಕಣ್ಣಿನೊಳಗಿನ ಸಂಘರ್ಷವನ್ನು ನೋಡಬೇಕು. ಮೌನದ ಭಾರವನ್ನು ಅನುಭವಿಸಬೇಕು.
ಧಾರ್ಮಿಕ ಅಸಹಿಷ್ಣುತೆಯನ್ನು ಸೋಲಿಸಲು ಸಂವಾದ, ಓದು ಬಹುದೊಡ್ಡ ಅಸ್ತ್ರ ಎಂಬು ನಾಟಕದ ಹಂದರವನ್ನು ತಪ್ಪಿಸಿಕೊಳ್ಳಬೇಡಿ. ಫೆಬ್ರವರಿ 26ರಂದು ರಂಗಶಂಕರದಲ್ಲಿ ಎರಡನೆಯ ಪ್ರದರ್ಶನ ನಡೆಯುತ್ತಿದೆ. ಹಿಂಸೆಯ ಕಾಲದಲ್ಲಿ ಸಂವಾದವೇ ಪ್ರತಿರೋಧ ‘ಭಗವಂತನ ಮರಣ’
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಏನು ಹೇಳುತ್ತದೆ? Janashakthi Media
