ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ: ಉನ್ನತ ಶಿಕ್ಷಣದ ಸ್ವಾಯತ್ತತೆಗೆ ಬಂದಿರುವ ದೊಡ್ಡ ಸವಾಲು

ನವದೆಹಲಿ: ಡಿಸೆಂಬರ್‌ 2025ರಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿ, ಈಗ ಸಂಯುಕ್ತ ಸಂಸತ್‌ ಸಮಿತಿ (JPC) ಪರಿಶೀಲನೆಯಲ್ಲಿ ಇರುವ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ (VBSA) ಮಸೂದೆ–2025 ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಭವಿಷ್ಯ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶಿಕ್ಷಣ ತಜ್ಞರು ಮತ್ತು ರಾಜಕೀಯ ಸಂಘಟನೆಗಳು ಈ ಮಸೂದೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆಯುಂಟುಮಾಡಲಿದೆ ಎಂದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

HECI (VBSA) ವಿರುದ್ಧದ ಸಂಯೋಜನಾ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದರು, ವಿಶ್ವವಿದ್ಯಾಲಯ ಶಿಕ್ಷಕರು ಮತ್ತು ವಿದ್ಯಾರ್ಥಿ ನಾಯಕರು ಭಾಗವಹಿಸಿದರು. ಮಸೂದೆ ಕೇಂದ್ರ ಸರ್ಕಾರಕ್ಕೆ ಅತಿಯಾದ ಅಧಿಕಾರ ನೀಡುತ್ತದೆ; ಇದರ ಪರಿಣಾಮವಾಗಿ ರಾಜ್ಯಗಳ ಪಾತ್ರ ಕುಗ್ಗಿ, ಸಾರ್ವಜನಿಕ ಶಿಕ್ಷಣ ನಿಧಾನವಾಗಿ ಖಾಸಗೀಕರಣದ ದಾರಿಗೆ ಹೋಗಲಿದೆ ಎಂದು ಅವರು ಎಚ್ಚರಿಸಿದರು. ಇದು ಕೇವಲ ಆಡಳಿತಾತ್ಮಕ ಬದಲಾವಣೆ ಅಲ್ಲ, ಶಿಕ್ಷಣದ ಸ್ವರೂಪವನ್ನೇ ಬದಲಿಸುವ ನಿರ್ಧಾರ ಎಂದು ವಕ್ತಾರರು ಅಭಿಪ್ರಾಯಪಟ್ಟರು.

ಒಂದು ತಿಂಗಳಿಗಿಂತ ಹೆಚ್ಚು ಕಾಲ ಸಂಯುಕ್ತ ಸಂಸತ್‌ ಸಮಿತಿ ಚರ್ಚೆ ನಡೆಸುತ್ತಿದ್ದರೂ, ಮಸೂದೆಯ ಸಂಪೂರ್ಣ ಕರಡು ಮತ್ತು ಸಾರ್ವಜನಿಕರಿಂದ ಬಂದ ಸಲಹೆಗಳು ಇನ್ನೂ ಬಹಿರಂಗವಾಗಿಲ್ಲ. ಜನರ ಭವಿಷ್ಯಕ್ಕೆ ಸಂಬಂಧಿಸಿದ ಕಾನೂನು ಜನರಿಂದ ದೂರವಿಟ್ಟು ರೂಪಿಸಲಾಗುತ್ತಿದೆ ಎಂಬ ಪ್ರಶ್ನೆ ಚರ್ಚೆಯಲ್ಲಿ ಮುಖ್ಯವಾಗಿ ಕೇಳಿಬಂತು.

ಇದನ್ನೂ ಓದಿ :ಧರ್ಮಸ್ಥಳದ 74 ಅಸಹಜ ಸಾವುಗಳು: ಯುಡಿಆರ್‌ಗಳಿಗೆ ಎಫ್‌ಐಆರ್‌? ಹೈಕೋರ್ಟ್ ಮುಂದೆ ಸರ್ಕಾರದ ಸ್ಪಷ್ಟ ಭರವಸೆ

VBSA ಮಸೂದೆ ಜಾರಿಯಾದರೆ, UGC, AICTE ಮತ್ತು NCTEಗಳ ಬದಲು ಒಂದೇ ಕೇಂದ್ರಿಕೃತ ಉನ್ನತ ಸಂಸ್ಥೆ ಕಾರ್ಯನಿರ್ವಹಿಸಲಿದೆ. ನಿಯಂತ್ರಣ, ಮಾನ್ಯತೆ ಮತ್ತು ಮಾನದಂಡಗಳಿಗಾಗಿ ಮೂರು ಮಂಡಳಿಗಳಿದ್ದರೂ, ಅವುಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರುವುದರಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಕಡಿಮೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಅದಕ್ಕಿಂತ ಗಂಭೀರವಾಗಿ, ಶಿಕ್ಷಣದ ನಿಯಂತ್ರಣವನ್ನು ಅನುದಾನದಿಂದ ಬೇರ್ಪಡಿಸುವ ಮೂಲಕ ಸಾರ್ವಜನಿಕ ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ಕೈತೊಳೆದುಕೊಳ್ಳುವ ಸಾಧ್ಯತೆ ಇದೆ ಎಂದು  ಎಚ್ಚರಿಸಿದರು.

ಬಿಹಾರದ ಸಂಸದ ರಾಜಾ ರಾಮ್‌ ಸಿಂಗ್ ಮಾತನಾಡಿ, ದಲಿತರು, ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳವರೆಗೆ ತಲುಪುವಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಅತ್ಯಂತ ಪ್ರಮುಖ ಎಂದು ಹೇಳಿದರು. ರಾಜ್ಯಗಳ ಅಧಿಕಾರವನ್ನು ಕುಗ್ಗಿಸಿ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ; ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳಿಗೆ ನಿಜವಾದ ಸ್ವಾಯತ್ತತೆ ಇರಬೇಕು ಎಂದು ಅವರು ಒತ್ತಾಯಿಸಿದರು.

ಶಿಕ್ಷಕರ ಸಂಘಟನೆಗಳು ಈ ಮಸೂದೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ–2020ರ ಮುಂದುವರಿದ ಭಾಗವೆಂದು ಟೀಕಿಸಿವೆ. ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ನಿಧಾನವಾಗಿ ದುರ್ಬಲಗೊಳಿಸಿ ಖಾಸಗಿ ಮತ್ತು ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳಿಗೆ ಜಾಗ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಖಾಸಗೀಕರಣದಿಂದ ಗುಣಮಟ್ಟದ ಶಿಕ್ಷಣ ಸಾಮಾನ್ಯ ಜನರಿಗೆ ಕೈಗೆಟುಕದಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ವಿದ್ಯಾರ್ಥಿ ನಾಯಕರು ಕ್ಯಾಂಪಸ್‌ಗಳ ನೈಜ ಸ್ಥಿತಿಯನ್ನು ಮುಂದಿಟ್ಟರು. ಆಡಳಿತದ ನಿಯಂತ್ರಣ ಹೆಚ್ಚಾಗುತ್ತಿದೆ, ಪಠ್ಯಕ್ರಮ ಬದಲಾವಣೆ, ಭಿನ್ನಮತದ ಮೇಲೆ ನಿರ್ಬಂಧ, ವಿದ್ಯಾರ್ಥಿವೇತನಗಳ ವಿಳಂಬ ಮತ್ತು ಶುಲ್ಕದ ಹೊರೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. VBSA ಮಸೂದೆ ಈಗಾಗಲೇ ನಡೆಯುತ್ತಿರುವ ಈ ಪ್ರವೃತ್ತಿಗಳಿಗೆ ಕಾನೂನು ಮಾನ್ಯತೆ ನೀಡುತ್ತದೆ ಎಂಬುದೇ ಅವರ ಆತಂಕ.

ಸಂಸದ ಸಂಜಯ್‌ ಸಿಂಗ್ ಮಾತನಾಡಿ, ದೇಶದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಐದು ಶೇಕಡಕ್ಕೂ ಕಡಿಮೆ ಅನುದಾನ ಇರುವ ವಾಸ್ತವವನ್ನು ನೆನಪಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಮುಚ್ಚುವಿಕೆ ನಡೆಯುತ್ತಿರುವಾಗ ಕೇವಲ ಘೋಷಣೆಗಳ ಮೂಲಕ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.

VBSA ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬ ಬೇಡಿಕೆಯಿಂದ ದೇಶವ್ಯಾಪಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಸಮಿತಿ ನಿರ್ಧರಿಸಿದೆ. ಉನ್ನತ ಶಿಕ್ಷಣ ಕೇವಲ ಅಕಾಡೆಮಿಕ್ ವಿಷಯವಲ್ಲ; ಅದು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಪ್ರಶ್ನೆಯಾಗಿದೆ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಈ ಹೋರಾಟದ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದನ್ನೂ ನೋಡಿ : ಫೆ12ರ ಮುಷ್ಕರ | ಕೃಷಿ ರೈತರದ್ದು, ಕಾರ್ಪರೇಟ್‌ ಕಂಪನಿಗಳದ್ದು ಅಲ್ಲ | ಸಿದ್ಧನಗೌಡ ಪಾಟೀಲ್‌ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *