ಸಂಸತ್ತು ಡ್ರಾಮಾದ ಸ್ಥಳವಲ್ಲ, ಡೆಲಿವರಿಯ ಸ್ಥಳವಾಗಬೇಕು-ಇದು ಡಿಸೆಂಬರ್ 1ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನ ಸಂಸತ್ತಿನ ಹೊರಗೆ ನಿಂತುಕೊಂಡು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳ ಉದ್ಗಾರ. ಡ್ರಾಮಾ
ವೇದರಾಜ ಎನ್ ಕೆ
ಈಗ 12 ರಾಜ್ಯಗಳಲ್ಲಿ ಆರಂಭವಾಗಿರುವ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ಉಂಟು ಮಾಡಿರುವ ಸಮಸ್ಯೆಗಳು, ಎತ್ತಿರುವ ಪ್ರಶ್ನೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸರಕಾರದ ನಿರಾಕರಣೆ ಮತ್ತು ಇನ್ನೊಂದೆಡೆಯಲ್ಲಿ ಚರ್ಚೆ ನಡೆಯಲೇಬೇಕು ಎಂಬ ಪ್ರತಿಪಕ್ಷಗಳ ಪಟ್ಟಿನಿಂದ ಉದ್ಭವವಾಗಿರುವ ಇಕ್ಕಟ್ಟಿನ ಸಂದರ್ಭದಲ್ಲಿ ಅವರ ಈ ಉದ್ಗಾರ ಬಂದಿದೆ. ಡ್ರಾಮಾ
ಎಸ್ಐಆರ್ ಪ್ರಕ್ರಿಯೆಯಲ್ಲಿ ಬುಡಮಟ್ಟದಲ್ಲಿ ಕೆಲಸ ಮಾಡುವ ಬಿಎಲ್ಒಗಳ ಸಾವು-ನೋವಿನ ಸುದ್ದಿಗಳು ದೇಶದಲ್ಲೆಲ್ಲ ಆತಂಕ ಉಂಟು ಮೂಡಿಸಿವೆ. ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ 46 ವರ್ಷದ ಸರ್ವೇಶ್ ಸಿಂಗ್ ನವಂಬರ್ 20ರಂದು ಆತ್ಮಹತ್ಯೆ ಮಾಡಿಕೊಂಡರು ಎಂದು ವರದಿಯಾಯಿತು. ಬಿಜನೋರಿನಲ್ಲಿ 56 ವರ್ಷದ ಶೋಭಾರಾಣಿ ಇದೇ ಕೆಲಸದ ಒತ್ತಡಕ್ಕೆ ಬಲಿಯಾದರು. ರಾಜಸ್ತಾನದ ದೋಲ್ಪುರದಲ್ಲಿ 40ವರ್ಷದ ಅನುಜ್ ಗರ್ಗ್ ಹೃದಯಾಘಾತದಿಂದ ಸಾವಪ್ಪಿದರು.
ಉತ್ತರ ಪ್ರದೇಶದ ಗೊಂಡ ದ ವಿಪಿಯಾದವ್, ಫತೇಪುರ ಸುಧೀರ್ ಕುಮಾರ್- ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತಿದೆ. ಇವರೆಲ್ಲರ ಸಂಬಂಧಿಗಳ ಪ್ರಕಾರ ಈ ಸಾವು-ನೋವುಗಳಿಗೆ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂದರೆ ಎಸ್ಐಆರ್ ಕೆಲಸದ ವಿಪರೀತಕಾರಣ. ಸ್ಪೆಕ್ಟ್ಫೌಂಡೇಷನ್ ಎಂಬ ಒಂದು ಸಂಶೋಧನಾ ಸಂಸ್ಥೆಯ ವರದಿಯ ಪ್ರಕಾರ ಆರು ರಾಜ್ಯಗಳಲ್ಲಿ 33 ಬಿಎಲ್ಒಗಳು ಆತ್ಮಹತ್ಯೆಯಿಂದ ಅಥವ ವೈದ್ಯಕೀಯ ತುರ್ತಿನಿಂದಾಗಿ ಸಾವನ್ನಪ್ಪಿದ್ದಾರೆ (ದಿವೈರ್, ಡಿ.8). ಇದರಲ್ಲಿ ಪಶ್ಚಿಮ ಬಂಗಾಲ ಸರಕಾರವೇ ಹೇಳುತ್ತಿರುವ ಸುಮಾರು 40 ಬಿಎಲ್ಒಗಳ ಹೆಸರುಗಳು ಸೇರಿಲ್ಲ. ಡ್ರಾಮಾ
ಚುನಾವಣಾ ಆಯೋಗ ಈ ಬಗ್ಗೆ ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಬದಲಾಗಿ ಕೇರಳದಲ್ಲಿ ಬಿಎಲ್ಒಗಳು ತಮ್ಮ ಕೆಲಸದ ನಡುವೆ ಬಿಡುವಿನಲ್ಲಿ ಸಾಮೂಹಿಕ ನೃತ್ಯದಲ್ಲಿ ತೊಡಗಿರುವ ವೀಡಿಯೋಗಳನ್ನು ಪ್ರಕಟಿಸಿದೆ!

ಕ್ಷಿಪ್ರ ವಿರಾಮ,
ಹೆಚ್ಚು ಬಲಿಷ್ಟಪಡೆ,
ಸರ್!
“ಇನ್ನೊಬ್ಬ ಬಿಎಲ್ಒ ಸಾವು”
ವ್ಯಂಗ್ಯ ಚಿತ್ರ: ಸತೀಶ ಆಚಾರ್ಯ @ಫೇಸ್ಬುಕ್
ಅತ್ಯಂತ ಆತುರಾತುರವಾಗಿ ನಡೆಸುವಂತೆ ಕಾಣುತ್ತಿರುವ ಈ ಇಡೀ ಪ್ರಕ್ರಿಯೆಯ ನಿಜವಾದ ಆಶಯ ಮತ್ತು ಉದ್ದೇಶಗಳ ಬಗ್ಗೆ ಸಹಜವಾಗಿಯೇ ಕಳವಳ ವ್ಯಕ್ತಗೊಳ್ಳುತ್ತಿದೆ. ಆದರೆ ಇದು ಚುನಾವಣಾ ಆಯೋಗದ ಕಾರ್ಯವ್ಯಾಪ್ತಿಯ ವಿಷಯ, ಸರಕಾರದ ಪಾತ್ರ ಇದರಲ್ಲಿ ಏನೂ ಇಲ್ಲ ಎಂಬ ಸರಕಾರದ ತರ್ಕ ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಅಸಹಜವೇನಲ್ಲ. ಆದರೆ ಪ್ರಧಾನ ಮಂತ್ರಿಗಳು ಇದನ್ನು ಬಿಹಾರದಲ್ಲಿ ತಮ್ಮ ವಿಜಯ ಮತ್ತು ಇಂಡಿಯಾ ಬಣದ ಪರಾಜಯದೊಡನೆ ತಳುಕು ಹಾಕಲು ಬಳಸಿಕೊಂಡಂತೆ ಕಾಣುತ್ತದೆ. “ಸೋಲು ಅಡೆತಡೆಯೊಡ್ಡಲು ಆಧಾರವಾಗಬಾರದು, ಗೆಲುವು ಕೂಡ ಧಿಮಾಕು ಆಗಿ ಪರಿವರ್ತನೆಗೊಳ್ಳಬಾರದು” ಎನ್ನುತ್ತಲೇ ಪ್ರಧಾನಿಗಳು ಪ್ರತಿಪಕ್ಷಗಳಿಗೆ ತಮ್ಮ ಸೋಲಿನ ಹತಾಶೆಯಿಂದ ಹೊರಬರಲು ಕೆಲವು ಟಿಪ್ಸ್ ಕೊಡುತ್ತೇನೆ ಎಂದರು!
ಇದನ್ನೂ ಓದಿ: ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆ ಸಾರಿಗೆ ದಟ್ಟಣೆಗೆ ಉತ್ತರವೇ?
ನಿಜ, ಕೊನೆಗೂ ಎಸ್ಐಆರ್ ಬಗ್ಗೆ ನೇರವಾಗಿಯಲ್ಲವಾದರೂ ಚರ್ಚೆಗೆ ಅವಕಾಶವನ್ನು ಕೊಡಲು ಸರಕಾರ ಒಪ್ಪಲೇ ಬೇಕಾಗಿ ಬಂತು. “ಚುನಾವಣಾ ಸುಧಾರಣೆಗಳು” ಎಂಬ ಶಿರೋನಾಮೆಯ ಅಡಿಯಲ್ಲಿ ಎಸ್ಐಆರ್ ಬಗ್ಗೆ ಪ್ರತಿಪಕ್ಷಗಳು ಮತದಾರರಲ್ಲಿ ಎದ್ದಿರುವ ಪ್ರಶ್ನೆಗಳನ್ನು ಸಂಸತ್ತಿನ ವೇದಿಕೆಯಲ್ಲಿ ಎತ್ತಲು ಸಾಧ್ಯವಾಗಿದೆ. ಅಂದರೆ ಇದು ಕೇವಲಚುನಾವಣೆಸೋತವರ ಹತಾಶೆಯ ವಿಷಯವಲ್ಲ ಎಂದು ಸರಕಾರವೂ ಒಪ್ಪಿಕೊಂಡಿದೆಯೇ?.
ಇಲ್ಲಿ ಡ್ರಾಮಾ ಯಾರದು, ಧಿಮಾಕು ಯಾರದ್ದು ಎಂಬ ಪರಾಮರ್ಶೆ ಬಹುಶಃ ಅನಗತ್ಯ.
ಪ್ರಧಾನಿಗಳು ಡ್ರಾಮಾ ಎಂದಾಗ ನಮ್ಮ ಪ್ರಖ್ಯಾತ ವ್ಯಂಗ್ಯ ಚಿತ್ರಕಾರರಿಗಂತೂ ನೆನಪಾದದ್ದು ಕಳೆದ 12 ವರ್ಷಗಳ ವಿವಿಧ ಡ್ರಾಮಾಗಳೇ. ಪ್ರಧಾನಿಗಳೂ ಸೇರಿದಂತೆ ಆಳುವ ಮಂದಿ ಬಹುಶಃ ನೆನಪಿಸಿಕೊಳ್ಳಲೂ ಅಳುಕುವ ನೋಟುರದ್ಧತಿ ಮತ್ತು ಲಾಕ್ಡೌನ್ ಒತ್ತಟ್ಟಿಗಿರಲಿ, ಈಗ ಡಾಲರಿಗೆ ಎದುರಾಗಿ ರೂಪಾಯಿ ಬೆಲೆ ಪ್ರತಿದಿನ ಎಂಬಂತೆ ಹೊಸ-ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವಾಗಲೂ ಪ್ರಧಾನಿಗಳ ಈ ಡ್ರಾಮಾ ಮತ್ತು ಡೆಲಿವರಿಯ ಉದ್ಗಾರಗಳು ಅಕ್ಷರಶಃ ‘ಸಾರ್ಥಕ’ವಾಗುತ್ತಿವೆ!


ವ್ಯಂಗ್ಯಚಿತ್ರ: ಪಿ.ಮಹಮ್ಮದ್ @ ಫೇಸ್ಬುಕ್
ಡ್ರಾಮಾ ನಹೀಂ ಡೆಲಿವರಿ!
ವ್ಯಂಗ್ಯಚಿತ್ರ: ಮಂಜುಲ್ @ ಫೇಸ್ಬುಕ್
ನಮ್ಮ ಮುಖ್ಯ ಚುನಾವಣಾ ಆಯುಕ್ತರಿಗೆ ಅಂತರ್ರಾಷ್ಟ್ರೀಯ ಮನ್ನಣೆ!?
ಹೌದು, ಎಸ್ಐಆರ್ ಖ್ಯಾತಿಯ ನಮ್ಮ ಮುಖ್ಯ ಚುನಾವಣಾ ಆಯುಕ್ತರು ಈಗ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವಿನ ಸಂಸ್ಥೆ (ಇಂಟರ್ನ್ಯಾಷನಲ್ ಐಡಿಇಎ)ಯ 2026ರ ಅವಧಿಯ ಅಧ್ಯಕ್ಷರಾಗಿದ್ದಾರೆ.
ಇದು ಭಾರತೀಯ ಚುನಾವಣೆಗಳನ್ನು “ಯಶಸ್ವಿಯಾಗಿ ನಡೆಸಿರುವುದಕ್ಕೆ” ಅವರಿಗೆ ದೊರೆತಿರುವ ಅಂತರ್ರಾಷ್ಟ್ರೀಯ ಮನ್ನಣೆ ಎಂದು ಭಾರತದ ಚುನಾವಣಾ ಆಯೋಗ ವರ್ಣಿಸಿದೆ.
ಸ್ವತಃ ಮುಖ್ಯ ಚುನಾವಣಾ ಆಯುಕ್ತರು ಕೂಡ “ಜಗತ್ತು ಭಾರತದಲ್ಲಿ ಮುಕ್ತ, ನ್ಯಾಯಯುತ ಮತ್ತುಪಾರದರ್ಶಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ಗುರುತಿಸಿದೆ. 30 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಗತ್ತಿನ 37 ಪ್ರಜಾಪ್ರಭುತ್ವ ರಾಷ್ಟ್ರಗಳ ಗುಂಪು ಭಾರತವನ್ನು ಅಧ್ಯಕ್ಷ ಸ್ಥಾನಕ್ಕೆ ಆಹ್ವಾನಿಸಿವೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹೇಳಿಕೆಯಲ್ಲಿ ತಿಳಿಸುತ್ತ ಇದು ಭಾರತೀಯ ನಾಗರಿಕರಿಗೆ ಅಪಾರ ಹೆಮ್ಮೆಯ ಒಂದು ಕ್ಷಣವಾಗಿದೆ ಎಂದು ವರ್ಣಿಸಿರುವುದಾಗಿಯೂ ವರದಿಯಾಗಿದೆ.
ನಿಜವಾಗಿಯೂ, ನಮ್ಮ ಮುಖ್ಯ ಚುನಾವಣಾ ಆಯುಕ್ತರಿಗೆ ಇಲ್ಲಿ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿರುವುದಕ್ಕಾಗಿ ಈ ಹುದ್ದೆ ದೊರಕಿದೆಯೇ?
ಅಧಿಕೃತ ದಸ್ತಾವೇಜುಗಳು ಮತ್ತು ಇಂಟರ್ನ್ಯಾಷನಲ್ ಐಡಿಇಎ ಯ ಶಾಸನಗಳು ಹೇಳುವ ಕತೆಯೇ ಬೇರೆ ಎನ್ನುತ್ತಾರೆ ಪತ್ರಕರ್ತ ಪವನ್ ಕೊರಾಡ (ದಿ ವೈರ್, ಡಿ.4).
ಇದು ಸರತಿಯಂತೆ ಭಾರತಕ್ಕೆ ಬಂದಿರುವ ಆಹ್ವಾನವೇ ಹೊರತು, ಅರ್ಹತೆಯನ್ನು ಆಧರಿಸಿದ ಆಹ್ವಾನ ಅಲ್ಲ, ಮಹಾರಾಷ್ಟçದಲ್ಲಾಗಲೀ, ಬಿಹಾರದಲ್ಲಾಗಲೀ, ಅಥವ ಇಡೀ ದೇಶದಲ್ಲಾಗಲೀ “ಮುಕ್ತ, ನ್ಯಾಯಯುತ, ಪಾರದರ್ಶಕ” ಚುನಾವಣೆಗಳು ನಡೆಯುವ ಮೊದಲೇ ನಿರ್ಧಾರವಾಗಿದ್ದ ಸಂಗತಿ ಎಂದು ಅವರು ಈ ದಸ್ತಾವೇಜುಗಳು ಮತ್ತು ಶಾಸನಗಳ ಆಧಾರದಲ್ಲಿ ಹೇಳುತ್ತಾರೆ.
ಈ ಅಂತರ್ರಾಷ್ಟ್ರೀಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಅದರ ಅಧ್ಯಕ್ಷ ಹುದ್ದೆ, ಪ್ರತಿವರ್ಷ ಸರದಿಯಂತೆ ಮೊದಲೇ ಪ್ರಾದೇಶಿಕವಾಗಿ ನಿರ್ಧಾರವಾಗುತ್ತದೆ. 2025ರಲ್ಲಿ ಯುರೋಪು ಪ್ರದೇಶದ ಸ್ವಿಝರ್ಲೆಂಡ್ ಗೆ ಅಧ್ಯಕ್ಷ ಪದವಿ ನಿರ್ಧಾರವಾಗಿದ್ದರೆ, 2026ಕ್ಕೆ ಏಷ್ಯಾ, ಆಫ್ರಿಕಾ ಮತ್ತು ಶಾಂತಸಾಗರ ಪ್ರದೇಶದ ಭಾರತಕ್ಕೆ ಎಂದು ಬಹಳ ಹಿಂದೆಯೇ ನಿರ್ಧಾರವಾಗಿತ್ತು. ಈ ರೀತಿ 2033ರ ವರೆಗಿನ ಅಧ್ಯಕ್ಷ ಹುದ್ದೆಯ ಸರತಿ ಈಗಾಗಲೇ ನಿರ್ಧಾರವಾಗಿದೆ ಎಂದು ಕೊರಾಡ ಹೇಳುತ್ತಾರೆ.
ಮುಂದುವರೆದು ಅವರು, ಭಾರತದ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರು ಭಾರತ ಸರಕಾರದ ಮತ್ತು ಅದರ ಮುಖ್ಯಸ್ಥರ ಚಾಳಿಯನ್ನು ಅನುಸರಿಸಿ ಇಂತಹ ಹೇಳಿಕೆಗಳನ್ನು ನೀಡಿರುವಂತೆ ಕಾಣುತ್ತದೆ ಎನ್ನುತ್ತಾರೆ.
ಜಿ-20ರ ಅಧ್ಯಕ್ಷತೆ ಕೂಡ ಸರತಿಯಂತೆ ಬರುವ ಸ್ಥಾನವಾಗಿದ್ದು, ಎಲ್ಲ ದೇಶಗಳು ಅದನ್ನು ಒಂದು ರಾಜತಾಂತ್ರಿಕ ಕರ್ತವ್ಯ ಎಂದು ವಹಿಸಿಕೊಂಡರೆ, ಭಾರತಕ್ಕೆ ಕಳೆದ ವರ್ಷ ದೊರೆತ ಅದರ ಅಧ್ಯಕ್ಷ ಸ್ಥಾನದ ಮೇಲೆ ಅದು ತನಗೆ ‘ವಿಶ್ವಗುರು’ವಾಗಿ ಸಂದ ಗೌರವ ಎಂಬಂತೆ ರಾಜಕೀಯ ಅಭಿಯಾನವನ್ನೇ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಂಚಾರ ಸಾಥಿ ಎಂಬ ‘ಡ್ರಾಮಾ’ ಮತ್ತು ‘ಡೆಲಿವರಿ’
ನವಂಬರ್ 28ರಂದು ಭಾರತ ಸರಕಾರದ ದೂರಸಂಪರ್ಕ ಇಲಾಖೆ (ಡಿಒಟಿ) ಭಾರತದಲ್ಲಿ ಪ್ರತಿಯೊಂದು ಹೊಸ ಫೋನಿನಲ್ಲಿ ಡಿಒಟಿಯ ‘ಸಂಚಾರ್ ಸಾಥಿ’ ಆಪ್ನ್ನು ಮೊದಲೇ ಲೋಡ್ ಆಗಿರಬೇಕು ಎಂದು ಮೊಬೈಲ್ ತಯಾರಕರಿಗೆ ಮತ್ತು ಮಾರಾಟಗಾರರಿಗೆ ನಿರ್ದೇಶನವನ್ನು ಹೊರಡಿಸಿತು ಎಂದು ರಾಯ್ಟರ್ ಸುದ್ದಿ ಸಂಸ್ಥೆ ಮತ್ತು ಮೀಡಿಯನಾಮ ಡಿಸೆಂಬರ್ 1ರಂದು ಪ್ರಕಟಿಸಿದವು. ಇದಕ್ಕೆ ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ರಾಜಕೀಯ ಪಕ್ಷಗಳಿಂದಲೂ ಭಾರೀ ಪ್ರತಿರೋಧ ವ್ಯಕ್ತಗೊಂಡಿತು.
ನಿರ್ದಿಷ್ಟವಾಗಿ ಈ ಆದೇಶದ 7ಬಿ ಯಲ್ಲಿ ಈ ಆಪ್ನ್ನು “ಡಿಸೇಬಲ್” ಮಾಡಲಾಗದ ರೀತಿಯಲ್ಲಿ ಮತ್ತು ಸೀಮಿತಗೊಳಿಸಲಾಗದ ರೀತಿಯಲ್ಲಿ ಲೋಡ್ ಮಾಡಬೇಕು ಮತ್ತು ಈಗಾಲೇ ಮಾರಾಟವಾಗಿರುವ ಮೊಬೈಲುಗಳಲ್ಲಿ ಯೂ ಸಾಫ್ಟ್ವೇರ್ ಅಪ್ಡೇಟ್ ಮೂಲಕ ಈ ಆಪ್ನ್ನು ಮುಂದೊತ್ತಬೇಕು ಎಂದೂ ಹೇಳಲಾಗಿದೆ ಎಂದು ವರದಿಯಾಗಿದೆ. ಈ ಆದೇಶವನ್ನು ಪಾಲಿಸಲು 90 ದಿನಗಳ ಗಡುವು ಕೂಡ ಈ ಆದೇಶ ಹಾಕಿತು.
ಇದನ್ನೂ ನೋಡಿ: ಭೂಮಿಯನ್ನು ಉಳಿಸಿಕೊಳ್ಳಲು ಸರಕಾರದ ವಿರುದ್ಧದ ಹೋರಾಟ ಬಲಗೊಳ್ಳಲಿದೆ – ಯು. ಬಸವರಾಜ Janashakthi Media
ಸರಕಾರ ಒಂದೆಡೆಯಲ್ಲಿ ಮೇಲೆ ಹೇಳಿದ 7ಬಿಯ ಹೊರತಾಗಿಯೂ ಈ ಆಪ್ನ್ನು ಕಡ್ಡಾಯಗೊಳಿಸಿಲ್ಲ ಎಂದು ಹೇಳುತ್ತಲೇ ಜನಗಳ ಬಳಿ ಇರುವ ಮೊಬೈಲುಗಳು ಅಸಲಿ ಎಂದುಪರಿಶೀಲಿಸಲು ನೆರವಾಗಲು, ಸೈಬರ್ ವಂಚನೆಗಳಿಂದ ಜನಗಳನ್ನು ಕಾಪಾಡಲು, ಈ ಕ್ರಮದ ಬಗ್ಗೆ ಯೋಚಿಸಲಾಯಿತು ಎಂದು ಸಮರ್ಥಿಸಿಕೊಂಡಿದೆ. ಆದರೆ ಯಾವುದೇ ಸಾರ್ವಜನಿಕ ಸಮಾಲೋಚನೆ ಇಲ್ಲದೆ, ಮೊಬೈಲು ಹೊಂದಿರುವವರ ಒಪ್ಪಿಗೆ ಪಡೆಯದೆ ಇದನ್ನು ಜಾರಿಗೆ ತರಲಾಗುತ್ತಿದೆ. ಇದು ಪ್ರತಿಯೊಬ್ಬ ನಾಗರಿಕರನ್ನು ರಕ್ಷಿಸುವ ಹೆಸರಲ್ಲಿ ಅವರನ್ನು ಸರಕಾರದ ಗೂಢಚಾರಿಕೆಗೆ ಒಳಪಡಿಸುತ್ತದೆ, ನಾಗರಿಕರ ಖಾಸಗಿತ್ವದ ಹಕ್ಕಿನ ಉಲ್ಲಂಘನೆಯಾಗಿದೆ ಎಂಬ ಆಕ್ರೋಶ ವ್ಯಾಪಕವಾಗಿ ವ್ಯಕ್ತಗೊಂಡಿತು.
ಡಿಸೆಂಬರ್ 3 ರಂದು, ಸರಕಾರ ಈ ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಪ್ರಕಟಿಸಿದೆ. ಆದರೆ ಹಾಗೆ ಮಾಡುವಾಗ ಇದು ನಾಗರಿಕರ, ಪ್ರತಿಪಕ್ಷಗಳ ಪ್ರತಿಭಟನೆಗೆ ಸಿಕ್ಕ ಗೆಲುವು ಎಂದಾಗಬಾರದೆಂದು ಬಿಂಬಿಸಲು ಶತಪ್ರಯತ್ನ ಪಟ್ಟಿದೆ. ಹಲವಾರು ಬಳಕೆದಾರರು ಈ ಆಪ್ನ್ನು ಸ್ವಯಂಪ್ರೇರಿತರಾಗಿಯೇ ಡೌನ್ಲೋಡ್ ಮಾಡಿರುವುದರಿಂದ, ಇದನ್ನು ಕಡ್ಡಾಯ ಮಾಡುವ ಅಗತ್ಯವೇನೂ ಉಳಿದಿಲ್ಲ ಎಂಬ ಕಾರಣಕ್ಕೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅದು ಹೇಳಿಕೊಂಡಿದೆ.
ಸರಕಾರದ ಪ್ರಕಾರ 1.4 ಕೋಟಿ ಬಳಕೆದಾರರು ಈ ಆಪ್ನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್ನ್ನು ಮೊದಲೇ ಲೋಡ್ ಮಾಡಿಕೊಡಬೇಕು ಎಂಬ ಆದೇಶದ ಉದ್ದೇಶ ಈ ಆಪ್ ಈ ವಿಷಯದಲ್ಲಿ ಸಾಕಷ್ಟು ಜಾಗೃತಿ ಇಲ್ಲದ ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ಒಂದೇ ದಿನದಲ್ಲಿ 6ಲಕ್ಷ ನಾಗರಿಕರು, ಅಂದರೆ 10 ಪಟ್ಟು ಹೆಚ್ಚು ಮಂದಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಲು ರಿಜಿಸ್ಟರ್ ಮಾಡಿಕೊಂಡರು, ಇದು ಸರಕಾರ ಒದಗಿಸಿರುವ ಈ ರಕ್ಷಕ ಆಪ್ ಬಗ್ಗೆ ನಾಗರಿಕರು ತಮ್ಮ ವಿಶ್ವಾಸವನ್ನು ದೃಢಪಡಿಸಿರುವುದನ್ನು ತೋರಿಸುತ್ತದೆ ಎಂದು ಸರಕಾರ ಹೇಳಿರುವುದಾಗಿ ವರದಿಯಾಗಿದೆ (ನ್ಯೂಸ್ಮಿನಿಟ್, ಡಿ.3)
ಅಂದರೆ ಸರಕಾರ ಈ ಆದೇಶ ಹೊರಡಿಸಿ ಈ ಅಪ್ನ್ನು ಉತ್ಪಾದಕರಿಗೆ ಕಡ್ಡಾಯಗೊಳಿಸಲು ಆದೇಶಿಸಿರುವುದು ಒಂದು ‘ಸದುದ್ದೇಶದ ಡ್ರಾಮ’ವಾಗಿಯಷ್ಟೇ? 1.4 ಕೋಟಿ ಮಂದಿ ಅದನ್ನು ಡೌನ್ಲೋಡ್ ಮಾಡಿಕೊಂಡಿರುವುದರಿಂದ ಎರಡೇ ದಿನಗಳೊಳಗೆ ಆದೇಶವನ್ನು ಸಂತೋಷದಿಂದ ಹಿಂತೆಗೆದುಕೊಳ್ಳಲಾಯಿತು!? ಆದರೆ ಒಂದು ವರದಿಯ ಪ್ರಕಾರ ಭಾರತದಲ್ಲಿ ಒಟ್ಟು ಮೊಬೈಲ್ ಚಂದಾದಾರರ ಸಂಖ್ಯೆ ಆಗಸ್ಟ್ 2025ರಲ್ಲಿ 108 ಕೋಟಿ!

“ಈಗ ನೀವು ದಿನಕ್ಕೆ 22 ಗಂಟೆಕೆಲಸ ಮಾಡ್ಬೇಕು, ಸರ್!”
ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಸೌತ್ ಫಸ್ಟ್

ನಿಮ್ಮ ಸಂಪರ್ಕಗಳು, ಕ್ಯಾಮರ ಮತ್ತು ಪ್ರಜ್ಞೆಗೆಪ್ರ ವೇಶವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ
ಓಕೆನಾ?
ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ
(ಸಂಗ್ರಹ: ಕೆ.ವಿ.)
