ಬಿ.ಎಸ್.ಎನ್.ಎಲ್. ಮೊಬೈಲ್ ಬಳಸುತ್ತಿರುವವರು ದಿನ ಬೆಳಗಾದರೆ ಅದರ ಸೇವೆಯಲ್ಲಿ ಸದಾ ಉಂಟಾಗುತ್ತಿರುವ ವ್ಯತ್ಯಯಕ್ಕೆ ಶಾಪ ಹಾಕ್ತಾ ಇದಾರೆ. ದರೆ ಪ್ರಶ್ನೆ ಇರುವುದು ಯಾರಿಗೆ ಶಾಪ ಹಾಕಬೇಕು? ಎನ್ನುವುದು ನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಟೆಲಿಫೋನ್ ಸಂಸ್ಥೆಗೋ ಅಥವಾ ಆ ಸಂಸ್ಥೆಯನ್ನು ಸಾಯಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರಕ್ಕೋ ? ಮಹೋತ್ಸವ
-ಟಿ. ಸುರೇಂದ್ರ ರಾವ್
ಅಕ್ಟೋಬರ್ 1 ನೇ ತಾರೀಖಿಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ.ಎಸ್.ಎನ್.ಎಲ್) ರಚನೆಯಾಗಿ ರಜತ ಮಹೋತ್ಸವ ಆಗಿದೆ – 25 ವರ್ಷಗಳಾಗಿವೆ. ಅದು ತನ್ನ ಕೈಲಾದಷ್ಟು ಪ್ರಾಮಾಣಿಕ ಸೇವೆ ಸಲ್ಲಿಸಿದೆ. ಅದಕ್ಕೂ ಮುಂಚೆ ಇದ್ದ ದೂರವಾಣಿ ಸೇವಾ ಇಲಾಖೆ (ಡಿಪಾರ್ಟ್ ಮೆಂಟ್ ಆಫ್ ಟೆಲಿಕಾಂ ಸರ್ವಿಸಸ್) ಮತ್ತು ದೂರವಾಣಿ ಕಾರ್ಯಾಚರಣೆ ಇಲಾಖೆ (ಡಿಪಾರ್ಟ್ಮೆಂಟ್ ಆಫ್ ಟೆಲಿಕಾಂ ಆಪರೇಚನ್ಸ್) ಎರಡು ಕೇಂದ್ರ ಸರ್ಕಾರದ ಇಲಾಖೆಗಳನ್ನು ಬಿ.ಎಸ್.ಎನ್.ಎಲ್. ಎಂದು ಪರಿವರ್ತಿಸಲಾಗಿತ್ತು. ಉದ್ದೇಶ ಸ್ಪಷ್ಟವಾಗಿತ್ತು – ಕ್ರಮೇಣವಾಗಿ ಅದರಲ್ಲಿರುವ ಸರ್ಕಾರದ ಹಣವನ್ನು ಅದರಿಂದ ಹಿಂತೆಗೆದುಕೊಳ್ಳುವುದು (ಕೇಂದ್ರ ಸರ್ಕಾರ ತನ್ನ ಪಾಲಿನ ಶೇರುಗಳನ್ನು ಮಾರಾಟ ಮಾಡುವುದು). ನಂತರ ಅದನ್ನು ಖಾಸಗೀ ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆದು ಕೊಡುವುದಾಗಿತ್ತು.
ಕಳೆದ 25 ವರ್ಷಗಳಲ್ಲಿ ಬಿ.ಎಸ್.ಎನ್.ಎಲ್. ಸಮಾಜದ ಅಂಚಿನಲ್ಲಿರುವ ಹಾಗೂ ದೂರದ ಪ್ರದೇಶಗಳಲ್ಲಿ ಇರುವ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಿತ್ತು. ಸಾರ್ವಜನಿಕ ವಲಯದ ಬಗ್ಗೆ ಅಭಿಮಾನ ಮತ್ತು ಬದ್ಧತೆ ಇರುವ ನನ್ನಂತಹ ಕೋಟ್ಯಾಂತರ ಜನರು ಕೂಡ ಬಿ.ಎಸ್.ಎನ್.ಎಲ್. ನ ಗ್ರಾಹಕರಾಗಿ ಮುಂದುವರಿದಿದ್ದೇವೆ ಮತ್ತು ಈಗಲೂ ಅದನ್ನೇ ನಂಬಿದ್ದೇವೆ. ಖಾಸಗಿ ದೂರವಾಣಿ ಸಂಸ್ಥೆಗಳು ದೂರದ ಊರುಗಳಿಗೆ ಮತ್ತು ಸಾಮಾನ್ಯ ಜನರ ಸೇವೆ ಮಾಡುವಲ್ಲಿ ಆಸಕ್ತಿ ಹೊಂದಿರಲಿಲ್ಲ.
ಇದನ್ನೂ ಓದಿ: ಬಳ್ಳಾರಿ |ಪಿ ಜಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಸರ್ಟಿಫಿಕೇಟ್ ನೀಡಿಲ್ಲ ಎಂದು ಎಸ್ ಎಫ್ ಐ ಆರೋಪ
ದೇಶದಲ್ಲಿ ಪ್ರವಾಹ, ಚಂಡಮಾರುತ, ಸುನಾಮಿಗಳಂತಹ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ, ಪರಿಹಾರ ಮತ್ತು ಸಿಲುಕಿಕೊಂಡಿರುವ ಜನರ ರಕ್ಷಣೆ ಕಾರ್ಯಾಚರಣೆ ಸಂದರ್ಭಗಳಲ್ಲಿ ಬಿ.ಎಸ್.ಎನ್.ಎಲ್. ಅಂತಹ ಪ್ರದೇಶಗಳಿಗೆ ಧಾವಿಸುತ್ತಿತ್ತು. ಅಂತಹ ಸಮಯದಲ್ಲಿ ಖಾಸಗಿ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದ್ದವು ಎಂಬುದನ್ನು ನಾವು ಮರೆಯಬಾರದು!
ಖಾಸಗಿ ದೂರವಾಣಿ ಕಂಪನಿಗಳು ದೂರವಾಣಿ ಗ್ರಾಹಕರನ್ನು ನಿರ್ದಯವಾಗಿ ಸುಲಿಗೆ ಮಾಡುತ್ತಿರುವಾಗ ಗ್ರಾಹಕರ ನೆರವಿಗೆ ಧಾವಿಸುತ್ತಿದ್ದದು ಬಿ.ಎಸ್.ಎನ್.ಎಲ್. ಆಗಿತ್ತೇ ವಿನಃ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾಗಿರಲಿಲ್ಲ. ಬಿ.ಎಸ್.ಎನ್.ಎಲ್. ಇದ್ದ ಕಾರಣದಿಂದಾಗಿಯೇ ಖಾಸಗಿ ದೂರವಾಣಿ ಕಂಪನಿಗಳು ಬೇಕಾಬಿಟ್ಟಿಯಾಗಿ ಫೋನ್ ಕರೆಗಳ ದರಗಳನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ.
ಉದಾಹರಣೆಗೆ, ಜುಲೈ 2024 ರಲ್ಲಿ ಖಾಸಗಿ ಕಂಪನಿಗಳು ದೂರವಾಣಿ ದರಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದಾಗ , ಅವುಗಳ ಲಕ್ಷಾಂತರ ಗ್ರಾಹಕರು ಖಾಸಗಿ ಕಂಪನಿಗಳಿಂದ ಬಿ.ಎಸ್.ಎನ್.ಎಲ್. ಗೆ ಬದಲಾಯಿಸಿಕೊಂಡರು. ಅತ್ಯಂತ ದೊಡ್ಡ ಟೆಲಿಕಾಂ ಕಂಪನಿಯಾದ ಜಿಯೋ, 40 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಕಳೆದುಕೊಂಡಿತು. ಖಾಸಗಿ ಕಂಪನಿಗಳಿಗೆ ಅದು ಪಾಠವಾಗಿ ಪರಿಣಮಿಸಿತು.
ಹೀಗಿದ್ದಾಗ್ಯೂ, ಬಿ.ಎಸ್.ಎನ್.ಎಲ್. ಸೇವೆಯ ಬಗ್ಗೆ ದೊಡ್ಡ ಪ್ರಮಾಣದಲ್ಲಿ ದೂರುಗಳಿವೆ. ಖಾಸಗಿಯವರು ಒದಗಿಸುವ ಉತ್ತಮ ಸೇವೆಯನ್ನು ಬಿ.ಎಸ್.ಎನ್.ಎಲ್. ಒದಗಿಸುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅದಕ್ಕೆ ಕಾರಣಗಳೇನು? ಕಳೆದ 25 ವರ್ಷಗಳಲ್ಲಿ ಎಲ್ಲಾ ಸರ್ಕಾರಗಳು – ವಾಜಪೇಯಿ ಸರ್ಕಾರವಾಗಲೀ, ಮನಮೋಹನ್ ಸಿಂಗ್ ಸರ್ಕಾರವಾಗಲೀ ಅಥವಾ ಈಗಿನ ನರೇಂದ್ರ ಮೋದಿ ಸರ್ಕಾರವಾಗಲೀ ಯಾವುದೂ ಬಿ.ಎಸ್.ಎನ್.ಎಲ್. ಪರವಾಗಿರದೇ ಸಂಪೂರ್ಣ ಖಾಸಗಿ ಕಂಪನಿಗಳ ಪರ ನೀತಿಗಳನ್ನು ಅನುಸರಿಸುತ್ತಿವೆ.
ಎರಡು ಉದಾಹರಣೆಗಳನ್ನು ನೀಡಬಹುದು. 2007 ರಿಂದ 2012 ರವರೆಗೆ ಬಿ.ಎಸ್.ಎನ್.ಎಲ್. ತನ್ನ ಮೊಬೈಲ್ ಜಾಲ ವಿಸ್ತರಣೆಗೆ ಉಪಕರಣಗಳನ್ನು ಕೊಳ್ಳಲು ಅನುಮತಿ ನೀಡಲಿಲ್ಲ. ಈ ಅವಧಿಯಲ್ಲಿ ಬಿ.ಎಸ್.ಎನ್.ಎಲ್. ಕರೆದ ಎಲ್ಲಾ ಟೆಂಡರುಗಳನ್ನೂ ಒಂದಲ್ಲಾ ಒಂದು ಕಾರಣ ನೀಡಿ ಸರ್ಕಾರ ರದ್ದುಮಾಡಿದೆ. ಇದರ ಪರಿಣಾಮವಾಗಿ ಬಿ.ಎಸ್.ಎನ್.ಎಲ್. ತನ್ನ ಮೊಬೈಲ್ ಸೇವೆಯನ್ನು ವಿಸ್ತರಿಸಲಾಗಲಿಲ್ಲ ಮತ್ತು ಅದರ ಫಲವಾಗಿ ಸೇವೆ ಕ್ಷೀಣಿಸುತ್ತಾ ಹೋಯಿತು. ಈ ಅವಧಿಯಲ್ಲಿ ಬಿ.ಎಸ್.ಎನ್.ಎಲ್. ನಷ್ಟ ಅನುಭವಿಸಬೇಕಾಯಿತು. ಇದು ಮೊದಲ ಉದಾಹರಣೆ.
ಎರಡನೇ ಉದಾಹರಣೆ: ಈಗ ನಾವು ಕಾಣುತ್ತಿರುವುದು. ಖಾಸಗಿ ದೂರವಾಣಿ ಕಂಪನಿಗಳು ವಿದೇಶಿ ಕಂಪನಿಗಳಾದ ನೋಕಿಯಾ, ಎರಿಕ್ಸನ್ ಮತ್ತು ಸ್ಯಾಮ್ಸಂಗ್ ಉಪಕರಣಗಳನ್ನು ಖರೀದಿಸುತ್ತಿವೆ ಮತ್ತು ಅವು 4ಜಿ ಹಾಗೂ 5ಜಿ ತಂತ್ರಜ್ಞಾನವನ್ನು ಒದಗಿಸುತ್ತಿವೆ. ಆದರೆ ಅದೇ ಸಮಯದಲ್ಲಿ, ಬಿ.ಎಸ್.ಎನ್.ಎಲ್. ಗೆ ಭಾರತೀಯ 4ಜಿ ಉಪಕರಣಗಳನ್ನು ಮಾತ್ರ ಖರೀದಿ ಮಾಡಬೇಕೆಂದು ಸರ್ಕಾರ ಬಲವಂತ ಮಾಡಿತು.
ಕಳಪೆ ಕಂಪನಿ ಟಿಸಿಎಸ್ ನಿಂದ ಮಾತ್ರವೇ ಖರೀದಿಸಬೇಕಾದ ಅನಿವಾರ್ಯತೆ ಬಂತು. ಈ ಸ್ಥಿತಿಯು ಗ್ರಾಹಕರ ತೀವ್ರ ಅತೃಪ್ತಿಗೆ ಕಾರಣವಾಯಿತು ಮತ್ತು ಗ್ರಾಹಕರು ಬಿ.ಎಸ್.ಎನ್.ಎಲ್.ನಿಂದ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ಕಂಪನಿಗಳತ್ತ ವಲಸೆ ಹೋಗುವಂತಾಯಿತು. ಸರ್ಕಾರವೇ ತನ್ನ ಒಡೆತನದ ಕಂಪನಿಯನ್ನು ದುರ್ಬಲಗೊಳಿಸಲು ಪಿತೂರಿ ಮಾಡಿತು !
ಇಲ್ಲಿ ನಾವು ಹೇಳಲೇಬೇಕಾದ ಸಂಗತಿಯೇನೆಂದರೆ, ಕೇಂದ್ರ ಸರ್ಕಾರದ ಬಿ.ಎಸ್.ಎನ್.ಎಲ್ ವಿರೋಧಿ ನೀತಿಗಳ ವಿರುದ್ಧ ಬಿ.ಎಸ್.ಎನ್.ಎಲ್. ನಲ್ಲಿರುವ ನೌಕರರ ಸಂಘಗಳು ಸಂಘಟಿಸಿದ ಬೃಹತ್ ಪ್ರಮಾಣದ ಉಗ್ರ ಹೋರಾಟಗಳಿಂದಾಗಿ ಇವತ್ತು ಬಿ.ಎಸ್.ಎನ್.ಎಲ್. ಇನ್ನೂ ಜೀವಂತವಾಗಿದೆ. ಈ ಹೋರಾಟಗಳನ್ನು ಸಂಘಟಿಸಲು ಬಿ.ಎಸ್.ಎನ್.ಎಲ್. ನೌಕರರ ಸಂಘವು (ಬಿ.ಎಸ್.ಎನ್.ಎಲ್. ಎಂಪ್ಲಾಯೀಸ್ ಯೂನಿಯನ್) ಪ್ರಮುಖ ಪಾತ್ರ ವಹಿಸಿತ್ತು. ಹಲವಾರು ಹೋರಾಟಗಳು ನಡೆದಿವೆ, ಆದರೆ ಈ ಕೆಳಗಿನ ಮೂರು ಪ್ರಮುಖ ಹೋರಾಟಗಳನ್ನು ನೆನಪಿನಲ್ಲಿಡಬೇಕಾಗಿದೆ. ಮಹೋತ್ಸವ
ಮೊದಲನೆಯದು, ಜುಲೈ 2007 ರಲ್ಲಿ 45 ಮಿಲಿಯನ್ ಲೈನುಗಳಿಗಾಗಿ ಬಿ.ಎಸ್.ಎನ್.ಎಲ್. 2ಜಿ ಉಪಕರಣಗಳಿಗಾಗಿ ಕರೆದ ಟೆಂಡರನ್ನು ಕಮ್ಯುನಿಕೇಷನ್ ಸಚಿವರು ರದ್ದು ಮಾಡಿದ್ದರ ವಿರುದ್ಧ ನಡೆಸಿದ ಒಂದು ದಿನದ ಮುಷ್ಕರ. ಮೊಟ್ಟ ಮೊದಲ ಬಾರಿಗೆ, ಅಧಿಕಾರಿಗಳು ಮತ್ತು ನೌಕರರು ಒಗ್ಗೂಡಿ ಸಂಘಟಿಸಿದ ಮುಷ್ಕರ ಅದಾಗಿತ್ತು. ಮಹೋತ್ಸವ
ಎರಡನೇ ಮುಷ್ಕರವು 2010 ರ ಡಿಸೆಂಬರ್ 1 ರಿಂದ ಮಾಡಿದ ಮೂರು ದಿನಗಳದ್ದಾಗಿತ್ತು. ಬಿ.ಎಸ್.ಎನ್.ಎಲ್. ನಲ್ಲಿದ್ದ ಸರ್ಕಾರದ ಆಯಕಟ್ಟಿನ ಶೇರುಗಳ ಮಾರಾಟ, ಬಿ.ಎಸ್.ಎನ್.ಎಲ್.ಗೆ ಒಬ್ಬ ಆಯಕಟ್ಟಿನ ಪಾಲುದಾರನ ನೇಮಕ ಮತ್ತು ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿ.ಆರ್.ಎಸ್.) ಯಡಿ ಭಾರಿ ಪ್ರಮಾಣದಲ್ಲಿ ನೌಕರರನ್ನು ವಜಾಮಾಡುವ ಸ್ಯಾಮ್ ಪಿಟ್ರೋಡಾ ಉನ್ನತಾಧಿಕಾರ ಸಮಿತಿಯ ಶಿಫಾರಸುಗಳ ವಿರುದ್ಧ ಸಂಘಟಿಸಿದ ಮುಷ್ಕರ ಅದು. ಮುಷ್ಕರದ ಭಾರಿ ಯಶಸ್ಸಿನಿಂದಾಗಿ ಆ ಉನ್ನತಾಧಿಕಾರದ ಶಿಫಾರಸುಗಳನ್ನು ಸರ್ಕಾರ ಕೈಬಿಟ್ಟಿತು. ಮಹೋತ್ಸವ
ಮೂರನೆಯ ಬಹು ದೊಡ್ಡ ಮುಷ್ಕರ 2016 ರ ಡಿಸೆಂಬರ್ ನಲ್ಲಿ ದೂರವಾಣಿ ಗೋಪುರಗಳಿಗಾಗಿ ಅಂಗಸಂಸ್ಥೆಯೊಂದನ್ನು ರಚಿಸಿದ್ದರ ವಿರುದ್ಧ ನಡೆಯಿತು. ಬಿ.ಎಸ್.ಎನ್.ಎಲ್. ಹೊಂದಿದ್ದ ದೂರವಾಣಿ ಗೋಪುರಗಳನ್ನು ಕಸಿದುಕೊಂಡು ದನ್ನು ದುರ್ಬಲಗೊಳಿಸಬೇಕೆಂಬ ಹುನ್ನಾರ ಸರ್ಕಾರದ್ದಾಗಿತ್ತು. ಶಕ್ತಿಯುತವಾದ ಮುಷ್ಕರವು ಸರ್ಕಾರಕ್ಕೆ ತೀಕ್ಷ್ಣವಾದ ಸಂದೇಶವನ್ನು ರವಾನಿಸಿದ್ದರಿಂದ, ಆ ಪ್ರಸ್ತಾಪವನ್ನು ಸರ್ಕಾರ ಹಿಂತೆಗೆದುಕೊಂಡಿತು. ಮಹೋತ್ಸವ
ದೇಶದ ದುಡಿಯುವ ಜನರು ಹಾಗೂ ತುಳಿತಕ್ಕೊಳಗಾದ ಜನರ ಸೇವೆಗಾಗಿ ಬಿ.ಎಸ್.ಎನ್.ಎಲ್. ಸಂಸ್ಥೆಯನ್ನು ರಕ್ಷಿಸಿ ಸಬಲಗೊಳಿಸಬೇಕಾದ ಅವಶ್ಯಕತೆ ಇದೆ. ಬಿ.ಎಸ್.ಎನ್.ಎಲ್. ದೇಶದ ಜನರಿಗಾಗಿ ಉತ್ತಮ ಗುಣಮಟ್ಟದ ಹಾಗೂ ತೃಪ್ತಿಕರ ಸೇವೆಯನ್ನು ಒದಗಿಸಬೇಕು. ಆದರೆ ಸರ್ಕಾರಕ್ಕೆ ಬೇರೆಯದೇ ಆದ ಯೋಜನೆ ಇದೆ.
ಸಾರ್ವಜನಿಕ ರಂಗದಲ್ಲಿದ್ದ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ಕಾರ್ಪೊರೇಟ್ ಕಂಪನಿಗೆ ಧಾರೆಯೆರೆದಂತೆ ಬಿಎಸ್ಎನ್ಎಲ್ ನ್ನೂ ವಹಿಸಿಕೊಡಬೇಕೆಂಬುದು ಸರ್ಕಾರದ ನಿಲುವಾಗಿದೆ. ಮಹೋತ್ಸವ
ಬಿ.ಎಸ್.ಎನ್.ಎಲ್. ಸರ್ಕಾರಿ ಒಡೆತನದ ಸಂಸ್ಥೆಯಾಗಿ ಇರಕೂಡದು ಎಂಬುದು ಖಾಸಗಿ ದೂರವಾಣಿ ಕಂಪನಿಗಳ ಬಯಕೆಯಾಗಿದೆ. ಆಗ ಮಾತ್ರವೇ ಖಾಸಗೀ ಕಂಪನಿಗಳು ಮನಸ್ಸಿಗೆ ಬಂದ ಹಾಗೆ ದರ ಹೆಚ್ಚಿಸಿ ಜನರನ್ನು ಸುಲಿಗೆ ಮಾಡಲು ಸಾಧ್ಯವಾಗುತ್ತದೆ. ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಈ ಆಟವನ್ನು ದೇಶದ ಜನಸಮುದಾಯದ ಸಹಾಯದಿಂದ ಮಾತ್ರವೇ ಸೋಲಿಸಲು ಸಾಧ್ಯ. ಬಿ.ಎಸ್.ಎನ್.ಎಲ್.ನಲ್ಲಿರುವ ಕಾರ್ಮಿಕ ಚಳವಳಿಯು ಈ ಕೆಲಸಕ್ಕೆ ಆದ್ಯತೆ ನೀಡಬೇಕು.
ಇದನ್ನೂ ನೋಡಿ: ‘ರೈತ, ಕಾರ್ಮಿಕ, ಜನ ವಿರೋಧಿ ಸರ್ಕಾರ ಉಳಿಯುವುದಿಲ್ಲ’ | ಕರಡು ದಹಿಸಿ ಆಕ್ರೋಶ Janashakthi Media
