ಅಕ್ಟೋಬರ್ 31 : ನಿರಂಜನ ಶತಮಾನೋತ್ಸವ ಸಮಾರೋಪಕ್ಕೆ ಬನ್ನಿ!

ಅಕ್ಟೋಬರ್ 31ರಂದು ‘ನಿರಂಜನ ಶತಮಾನೋತ್ಸವದ ಸಮಾರೋಪ’ ಬೆಂಗಳೂರಿನಲ್ಲಿ ನಡೆಯಲಿದೆ. ಸಮಾರೋಪದಲ್ಲಿ “ನಿರಂಜನ : ಶತಮಾನದ ಮರುಓದು” ವಿಚಾರ ಸಂಕಿರಣ ಮತ್ತು `ನಿರಂಜನ 100 ಮರು-ಓದು ಮಾಲಿಕೆ’ಯ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ನಿರಂಜನ (1924-1992) ಅವರ ಶತಮಾನದ ವರ್ಷವಿದು.  ಸೃಜನಶೀಲ ಬರಹಗಾರ, ಪ್ರಗತಿಶೀಲ ಸಾಹಿತ್ಯ ಚಳುವಳಿಕಾರ, ವಿಮರ್ಶಕ, ಪತ್ರಕರ್ತ, ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ನಾಯಕ, ಜ್ಞಾನಗಂಗೋತ್ರಿ, ವಿಶ್ವ ಕಥಾಕೋಶದಂತಹ ಮಹಾ ಕನಸು ಕಂಡು ಅವನ್ನು ನನಸು ಮಾಡಬಲ್ಲ ಧೀಮಂತ – ಹೀಗೆ ಹಲವು ಆಯಾಮಗಳನ್ನು ನಿರಂಜನ ಹೊಂದಿದ್ದರು. ನಿರಂಜನ

ನಿರಂಜನರ ಶತಮಾನದ ಈ ಹೊತ್ತಿನಲ್ಲಿ ಅವರನ್ನು ನೆನಪಿಸಿಕೊಳ್ಳುತ್ತ ಕನ್ನಡ ಸಾಹಿತ್ಯ ಮತ್ತು ಪ್ರಗತಿಪರ ಲೋಕಕ್ಕೆ ಅವರ ಕೊಡುಗೆಯನ್ನು ದಾಖಲಿಸುವ ಮತ್ತು ಅದು ಎಂದಿಗೂ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವುದು ಎಲ್ಲ ಕನ್ನಡಿಗರ ಕರ್ತವ್ಯವಾಗಿತ್ತು. ಶತಮಾನೋತ್ಸವ ವರ್ಷ ಮುಗಿಯುತ್ತಾ ಬಂದಿದೆ. ಲಭ್ಯ ಮಾಹಿತಿಯ ಪ್ರಕಾರ ರಾಜ್ಯದ ವಿವಿಧೆಡೆ ನಿರಂಜನರ ಸಾಹಿತ್ಯದ ಕುರಿತು 3-4 ವಿಚಾರಸಂಕಿರಣಗಳು ನಡೆದಿವೆ. ‘ಚಿರಸ್ಮರಣೆ’ ಟಿವಿ ಧಾರಾವಾಹಿಯನ್ನು ಮರು ಪ್ರಸಾರ ಮಾಡಲಾಯಿತು. ಆದರೆ ಆಗಬೇಕಿದ್ದಷ್ಟು ಕಾರ್ಯಕ್ರವiಗಳು ಆಗಿಲ್ಲ.

ಈ ನಿಟ್ಟಿನಲ್ಲಿ ‘ಜನಶಿಕ್ಷಣ ಟ್ರಸ್ಟ್’ ಮತ್ತು ‘ಕ್ರಿಯಾ ಮಾಧ್ಯಮ’ವರ್ಷಪೂರ್ತಿ ಕಾರ್ಯಕ್ರಮ ಹಾಕಿಕೊಂಡಿದ್ದವು. ಶತಮಾನೋತ್ಸವ ಉದ್ಘಾಟನೆ ಜುಲೈ 27, 2024 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಿತು. ಪುಸ್ತಕ ಬಿಡುಗಡೆ, ಮರು ಓದು ವಿಚಾರ ಸಂಕಿರಣಗಳು ಉದ್ಘಾಟನಾ ಕಾರ್ಯಕ್ರಮದಲ್ಲಿದ್ದವು. ಈ ಕಾರ್ಯಕ್ರಮಕ್ಕೆ ಹಿಂದೆ ನಿರಂಜನರ ಸಮಗ್ರ ಸಂಪುಟಗಳ ಪ್ರಕಟಣೆ ಮಾಡಿದ್ದ ಐ.ಬಿ.ಎಚ್ ಸಹಯೋಗ ನೀಡಿತ್ತು. ಈ ಕಾರ್ಯಕ್ರಮದಲ್ಲಿ ಐ.ಬಿ.ಎಚ್ ಮರುಪ್ರಕಟಿಸಿದ ನಿರಂಜನ ಸಮಗ್ರ ಬರಹಗಳ ಮಾಲಿಕೆಯ (ನಿರಂಜನರ ಸಮಗ್ರ ಕತೆಗಳು ಇರುವ ಧ್ವನಿ-1 ಮತ್ತು ಧ್ವನಿ-2, ಹಾಗೂ ಮೂರು ಕಾದಂಬರಿಗಳ ಸಂಪುಟ) ಮೂರು ಸಂಪುಟಗಳು, ಮತ್ತು ಕ್ರಿಯಾ ಮಾಧ್ಯಮ ಪ್ರಕಟಿಸಿದ  ‘ಮೃತ್ಯುಂಜಯ’ ನಾಟಕ ರೂಪವನ್ನು ಬಿಡುಗಡೆ ಮಾಡಲಾಯಿತು. ಲೇಖಕರು, ಸಾಂಸ್ಕೃತಿಕ ಸಂಶೋಧಕರು ಮತ್ತು ಚಿಂತಕರಾದ (ಮತ್ತು ನಿರಂಜನರ ಹಿರಿಯ ಮಗಳೂ ಆದ) ತೇಜಸ್ವಿನಿ ನಿರಂಜನರು ಬಿಡುಗಡೆ ಮಾಡಿದರು. ಮರು ಓದು ವಿಚಾರ ಸಂಕಿರಣದಲ್ಲಿ ‘ನಿರಂಜನರ ಕಾದಂಬರಿಗಳು’ (ರಘುನಾಥ ಚ.ಹ),  “ದೃಶ್ಯ ಮಾಧ್ಯಮಗಳಲ್ಲಿ ನಿರಂಜನರ ಕತೆ ಕಾದಂಬರಿಗಳು’ (ಬಿ.ಸುರೇಶ), ನಿರಂಜನರ ಕಥಾ ಪ್ರಪಂಚ (ಬಿ.ಆರ್.ಮಂಜುನಾಥ) ಪ್ರಬಂಧಗಳನ್ನು ಮಂಡಿಸಲಾಯಿತು. ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ನಿರಂಜನರ ಬದುಕು ಬರಹಗಳ ಬಗೆಗಿನ ಡಾಕ್ಯುಮೆಂಟರಿ ಮತ್ತು ‘ಮೃತ್ಯುಂಜಯ’ ನಾಟಕ ಮತ್ತು ‘ಚಿರಸ್ಮರಣೆ’ ಟಿವಿ ಧಾರಾವಾಹಿಗಳ ತುಣುಕುಗಳ ವಿಡಿಯೊಗಳನ್ನು ತೋರಿಸಲಾಯಿತು. ‘ಮೃತ್ಯುಂಜಯ’ ನಾಟಕದ ಹಾಡುಗಳನ್ನು ಹಾಡಲಾಯಿತು.

‘ಜನಶಿಕ್ಷಣ ಟ್ರಸ್ಟ್’ ವರ್ಷಪೂರ್ತಿ ‘ನಿರಂಜನರ ಮರುಓದು ಉಪನ್ಯಾಸ ಸರಣಿ’ಯಲ್ಲಿ ಹಲವು ಉಪನ್ಯಾಸಗಳನ್ನು ಸಂಘಟಿಸಿತು. ಇವನ್ನು ‘ಜನಶಕ್ತಿ ಮೀಡಿಯಾ’ ಯೂ ಟ್ತೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು. ‘ಚಿರಸ್ಮರಣೆ’ ಕಾದಂಬರಿಯ ಅಡಿಯೋ ಬುಕ್ ತಯಾರಿಸಲಾಗಿದೆ. ನಿರಂಜನರ ಕತೆಗಳ ಅಡಿಯೊ ಬುಕ್ ತಯಾರಿಯಲ್ಲಿದೆ.   ‘ಕ್ರಿಯಾ ಮಾಧ್ಯಮ’ ‘ರೈತರಿಗಾಗಿ ನಿರಂಜನ’ ಎಂಬ ಪುಸ್ತಕ ಪ್ರಕಟಿಸಿತು. ಇದು ಮೂರನೇ ಮರುಮುದ್ರಣವನ್ನು ಕಂಡಿದೆ.

ಇದನ್ನೂ ಓದಿ : ನಿರಂಜನ100 | ನಿರಂಜನ ಮರು ಓದು ಆರಂಭವಾಗಲಿದೆ

‘ಕ್ರಿಯಾ ಮಾಧ್ಯಮ’ `ನಿರಂಜನ 100 ಮರು-ಓದು ಮಾಲಿಕೆ’ಯ ಪ್ರಕಟಣೆಯನ್ನು ಹಮ್ಮಿಕೊಂಡಿದ್ದು, ಈ ಮಾಲಿಕೆಯಲ್ಲಿ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದೆ. ತೇಜಸ್ವಿನಿ ನಿರಂಜನ ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಈ ಮಾಲಿಕೆಯ ಪುಸ್ತಕಗಳಿಗೆ ನವೆಂಬರ್ 30ರ ವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಇದೇ ಅಕ್ಟೋಬರ್ 31ರಂದು ‘ನಿರಂಜನ ಶತಮಾನೋತ್ಸವದ ಸಮಾರೋಪ’ ಬೆಂಗಳೂರಿನಲ್ಲಿ ನಡೆಯಲಿದೆ. ಸಮಾರೋಪದಲ್ಲಿ “ನಿರಂಜನ : ಶತಮಾನದ ಮರುಓದು” ವಿಚಾರ ಸಂಕಿರಣ ಮತ್ತು `ನಿರಂಜನ 100 ಮರು-ಓದು ಮಾಲಿಕೆ’ಯ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಖ್ಯಾತ ಲೇಖಕರು, ವಿಮರ್ಶಕರು, ಚಿಂತಕರು ಆದ ರಾಜೇಂದ್ರ ಚೆನ್ನಿ ವಹಿಸಲಿದ್ದು ಆಶಯ ಭಾಷಣವನ್ನು ಮಾಡಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ಮಾಡಲಿದ್ದಾರೆ. ಬಿಡುಗಡೆಯಾಗುವ ಪುಸ್ತಕಗಳು – ಬದುಕು-ಬರಹಗಳ ಕತೆ (ಸಂ. ತೇಜಸ್ವಿನಿ ನಿರಂಜನ), ಆಯ್ದ ಕತೆಗಳು (ಸಂ: ಎಂ.ಜಿ.ಹೆಗಡೆ),  ಆಯ್ದ ಅಂಕಣ ಬರಹಗಳು(ಸಂ: ವಿಶ್ವ ಕುಂದಾಪುರ) ಆಯ್ದ ಸಾಹಿತ್ಯಕ ಬರಹಗಳು (ಸಂ: ಮೀನಾಕ್ಷಿ ಬಾಳಿ).

ಇದನ್ನೂ ನೋಡಿ : ನಿರಂಜನ 100 | ದೇಶ -ವಿದೇಶದಲ್ಲಿ ಹೆಸರಾದ ನಿರಂಜನ – ವಿಶ್ಲೇಷಣೆ – ಜಿ.ಎನ್.‌ ನಾಗರಾಜ Janashakthi Media

ವಿಚಾರ ಸಂಕಿರಣದಲ್ಲಿ ‘ನಿರಂಜನರ ಕಥಾಸಾಹಿತ್ಯದಲ್ಲಿ ಮಹಿಳಾ ಪ್ರಶ್ನೆ’ (ಎನ್.ಗಾಯತ್ರಿ), ‘ನಿರಂಜನ: ಪ್ರಗತಿಶೀಲ ಚಳುವಳಿಯ ನಂತರದ ಸಾಹಿತ್ಯದ ಮೇಲೆ ಪ್ರಭಾವ’ (ಎಚ್.ದಂಡಪ್ಪ), ‘ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ’ (ಎಂ.ಜಿ.ಹೆಗಡೆ) ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಪುಸ್ತಕಗಳ ಪರಿಚಯವನ್ನು ಅನಂತ ಶಾಂದ್ರೇಯ (ಬದುಕು-ಬರಹಗಳ ಕತೆ), ಪ್ರತಿಭಾ ಭಟ್ (ಆಯ್ದ ಕತೆಗಳು),  ನವೀನ್ ಸೂರಿಂಜೆ (ಆಯ್ದ ಅಂಕಣ ಬರಹಗಳು), ರಂಗನಾಥ ಕಂಟನಕುಂಟೆ (ಆಯ್ದ ಸಾಹಿತ್ಯಕ ಬರಹಗಳು) ಮಾಡಲಿದ್ದಾರೆ.

ಈ ಪುಸ್ತಕದ ಸೆಟ್ ಪ್ರತಿ ಮನೆಯಲ್ಲೂ ಇರಬೇಕಾದ್ದು. ಹಾಗಾಗಿ ಈ ಮಾಲಿಕೆಯ ಪುಸ್ತಕಗಳಿಗೆ ನವೆಂಬರ್ 30ರ ವರೆಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.  ರೂ 600 ಮುಖಬೆಲೆಯ ಈ 4 ಪುಸ್ತಕಗಳ ಸೆಟ್ ನ್ನು ರೂ 450 ರ ರಿಯಾಯಿತಿ ಬೆಲೆಗೆ ನವೆಂಬರ್ 30ರ ವರೆಗೆ. ಬಿಡಿ ಪುಸ್ತಕಗಳಿಗೂ ನವೆಂಬರ್ 30ರ ವರೆಗೆ ವಿಶೇಷ ರಿಯಾಯಿತಿ ಇರುತ್ತದೆ. ಬಿಡಿ ಪುಸ್ತಕಗಳ ಮೂಲ ಬೆಲೆ, ರಿಯಾಯಿತಿ ಬೆಲೆ, ಪುಸ್ತಕಗಳಿಗೆ ಆರ್ಡರ್ ಮಾಡಲು, ಹಣಪಾವತಿ ಮಾಡಲು ವಿವರಗಳು ಜತೆಗಿರುವ ಪೋಸ್ಟರ್ ನಲ್ಲಿದೆ.

ನಿರಂಜನ ಶತಮಾನೋತ್ಸವದ ಉದ್ಘಾಟನೆ, ಸಮಾರೋಪ ಮತ್ತು ಆನ್-ಲೈನ್ ಉಪನ್ಯಾಸ ಸರಣಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಂಡಿಸಲಾದ ಮತ್ತು ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಮರು ಓದು ಸರಣಿಯ 5ನೇಯ ಪುಸ್ತಕ ಆ ಮೇಲೆ ಪ್ರಕಟಿಸಲಾಗುವುದು.

ಇದನ್ನೂ ನೋಡಿ : ನಿರಂಜನ -100| ಬುದ್ಧಿ ಭಾವ ಬದುಕು – ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *