ಕೋಲಾರ: ಈಚೆಗೆ ದಾಳಿ ನಡೆಸಿ ಜಿಲ್ಲೆಯಾದ್ಯಂತ ಸಂಗ್ರಹಿಸಲಾಗಿದ್ದ ಒಟ್ಟು 48 ಹಾಲಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 18 ಮಾದರಿಗಳಲ್ಲಿ ಕಡಿಮೆ ಗುಣಮಟ್ಟ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಭವನದಲ್ಲಿ ಮಾರ್ಚ್ 27ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು. ಮಾದರಿ
‘ಸಂಬಂಧಿಸಿದ ಹಾಲಿನ ಸಂಗ್ರಹ ಮತ್ತು ಶೇಖರಣಾ ಕೇಂದ್ರಗಳ ಮಾಲೀಕರು, ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.
ಇದನ್ನೂ ಓದಿ: ದಾವಣಗೆರೆ ಉಪ ಚುನಾವಣೆ | ಚುನಾವಣಾ ಅಖಾಡದಲ್ಲೇ ಉಳಿದ ಸಾದಿಕ್ ಪೈಲ್ವಾನ್
ವಿಶೇಷವಾಗಿ ಖಾಸಗಿ ಡೇರಿಗಳು ಲಾಭದ ಉದ್ದೇಶಕ್ಕಾಗಿ ಹಾಲಿನಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಕಲಬೆರಕೆ ಮಾಡುತ್ತಿರುವುದು ಕಂಡುಬಂದಿದೆ. ಗುಣಮಟ್ಟವಿಲ್ಲದ ಹಾಲು ಸರಬರಾಜು ಮಾಡುತ್ತಿರುವ ಡೇರಿಗಳ ವಿರುದ್ಧ ಎಫ್‍ಎಸ್‍ಎಸ್‍ಎಐ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿರುವ 12 ಹಾಲು ಸಂಗ್ರಹಣಾ ಕೇಂದ್ರಗಳು ಪರವಾನಗಿ ಪಡೆಯದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ನಿಯಮಾನುಸಾರ ಪರವಾನಗಿ ಪಡೆಯಲು 7 ದಿನ ಕಾಲಾವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೇವಿಸುವ ಹಾಲನ್ನು ಯಾವುದೇ ರೀತಿಯಲ್ಲಿ ಕಲಬೆರಕೆ ಮಾಡಿ ಸರಬರಾಜು ಮಾಡಬಾರದು ಎಂದರು.
ಬಸ್ ನಿಲ್ದಾಣದ ಬಳಿಯ ಹೋಟೆಲ್‍ಗಳು ಸೇರಿದಂತೆ ಪ್ರಮುಖ ಹೋಟೆಲ್‍ಗಳ ಮೇಲೆ ದಾಳಿ ನಡೆಸಿದಾಗ ನೀರಿನಲ್ಲಿ ವಿಷಕಾರಕ ಅಂಶಗಳು ಹಾಗೂ ಅಡುಗೆ ಮನೆಯಲ್ಲಿ ಅಶುಚಿತ್ವ ಕಂಡುಬಂದಿದೆ. ಅಂತಹ ಹೋಟೆಲ್‍ಗಳ ಪರವಾನಗಿ ರದ್ದುಪಡಿಸಲು ನಗರಸಭೆ ಮತ್ತು ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಹೋಟೆಲ್‍ಗಳಲ್ಲಿ ಬಿಸಿ ಆಹಾರವನ್ನು ಪ್ಲಾಸ್ಟಿಕ್ ಕವರ್‌ಗಳ ಮೇಲೆ ಬಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಅದರ ಬದಲಿಗೆ ಬಾಳೆ ಎಲೆ ಬಳಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಗ್ಯಾಸ್ ಏಜೆನ್ಸಿ ಮತ್ತು ತೈಲ ಕಂಪನಿಗಳೊಂದಿಗೆ ಚರ್ಚಿಸಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಆತಂಕದಿಂದ ಮುಂಗಡವಾಗಿ ಸಂಗ್ರಹಿಸಿ ಗೊಂದಲ ಸೃಷ್ಟಿಸಬಾರದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಆಹಾರ ಸುರಕ್ಷತಾ ಇಲಾಖೆ ಜಿಲ್ಲಾ ಅಂಕಿತಾಧಿಕಾರಿ ಡಾ.ರಾಕೇಶ್ ಇದ್ದರು.
ಇದನ್ನೂ ನೋಡಿ: “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media
