ಮಳೆಯ ಕೊರತೆ: ಅಥಣಿ ತಾಲ್ಲೂಕಿನ 14 ಗ್ರಾಮಗಳಿಗೆ ಕುಡಿಯುವ ನೀರಿನ ತೀವ್ರ ಸಂಕಷ್ಟ

ಬೆಳಗಾವಿ: ಜೂನ್ ತಿಂಗಳ ಮೂರನೇ ವಾರ ಆರಂಭವಾದರೂ ಕೃಷ್ಣಾ ನದಿ ತಟ ಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗದ ಹಿನ್ನೆಲೆ, ಹಿಪ್ಪರಗಿ ಬ್ಯಾರೇಜ್‌ನಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ ಬಳಕೆಗೆ ಯೋಗ್ಯವಾದ ನೀರು ಇಲ್ಲದ ಸ್ಥಿತಿ ಉಂಟಾಗಿದೆ. ಇದರಿಂದ ಅಥಣಿ ತಾಲ್ಲೂಕಿನ ಕಾಕಮಾರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಬಿಡುಗಡೆ ಶನಿವಾರದಿಂದ ಸ್ಥಗಿತಗೊಳಿಸಲಾಗಿದೆ.

ಇದರ ಪರಿಣಾಮವಾಗಿ ಕಾಕಮಾರಿ ಸೇರಿದಂತೆ ಇನ್ನೂ 13 ಗ್ರಾಮಗಳ ಜನರು ತೀವ್ರ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 5,000 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿತ್ತು. ಕೆಲವೆಡೆ ಆಗಿರುವ ಚದುರಿದ ಮಳೆಯಿಂದಲೂ ಸ್ವಲ್ಪ ಪ್ರಮಾಣದ ನೀರು ಸೇರ್ಪಡೆಯಾಗಿದೆ. ಆದಾಗ್ಯೂ, ಹಿಪ್ಪರಗಿ ಬ್ಯಾರೇಜ್‌ನಲ್ಲಿ ಬಳಕೆಗೆ ಯೋಗ್ಯವಾದ ನೀರಿಲ್ಲದ ಕಾರಣ ಕಾಕಮಾರಿ ಯೋಜನೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಕಾಕ್ರೋಚ್‌ ಪ್ರತಿಭಟನೆ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಧಾನ್‌ ರಾಜೀನಾಮೆಗೆ ಆಗ್ರಹ

120 ಗ್ರಾಮಗಳಿಗೆ ಆತಂಕ

ಬೆಳಗಾವಿ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ಮೇಲ್ಭಾಗದಲ್ಲಿ 13 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಅವು ಅಥಣಿ, ರಾಯಬಾಗ ಹಾಗೂ ಚಿಕ್ಕೋಡಿ ತಾಲ್ಲೂಕಿನ 120 ಗ್ರಾಮಗಳಿಗೆ ನೀರು ಪೂರೈಸುತ್ತಿವೆ. ಇದಲ್ಲದೆ ಸಾವಡಿ, ಝುಂಜರವಾಡ, ಶಿರಹಟ್ಟಿ ಮತ್ತು ಬಲವಾಡ ಗ್ರಾಮಗಳ ಏಕಗ್ರಾಮ ಯೋಜನೆಗಳೂ ಇದೇ ನದಿಯನ್ನು ಅವಲಂಬಿಸಿವೆ.

ಅಧಿಕಾರಿಗಳ ಪ್ರಕಾರ, ಈಗ ಲಭ್ಯವಿರುವ ನೀರು ಇನ್ನೂ ಒಂದು ವಾರ ಮಾತ್ರ ಸಾಲುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಸಮರ್ಪಕ ಮಳೆಯಾಗದಿದ್ದರೆ ಇನ್ನಷ್ಟು ಯೋಜನೆಗಳು ನೀರಿನ ಕೊರತೆಯನ್ನು ಎದುರಿಸಬೇಕಾಗಬಹುದು.

ಪೈಪ್‌ಲೈನ್ ಸಮಸ್ಯೆ, ಟ್ಯಾಂಕರ್ ಮೂಲಕ ನೀರು

ಚಿಕ್ಕೋಡಿ ಉಪವಿಭಾಗದಲ್ಲಿ ಒಟ್ಟು 38 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಅಂಕಲಿ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಪೈಪ್‌ಲೈನ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನ ಜೈನಾಪುರ ಯೋಜನೆಯಡಿ ನೀರು ಪೂರೈಕೆ ಸ್ಥಗಿತಗೊಂಡಿದೆ.

“ಹೆದ್ದಾರಿ ಕಾಮಗಾರಿಯನ್ನು ನಡೆಸುತ್ತಿರುವ ಸಂಸ್ಥೆ ಪೈಪ್‌ಲೈನ್ ಮರುಸ್ಥಾಪನೆ ಮಾಡುವ ಭರವಸೆ ನೀಡಿದ್ದು, ಶೀಘ್ರದಲ್ಲೇ ನೀರು ಪೂರೈಕೆ ಪುನರಾರಂಭವಾಗಲಿದೆ,” ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತಾ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಪಾಂಡುರಂಗ ರಾವ್ ತಿಳಿಸಿದ್ದಾರೆ.

ಜೈನಾಪುರ ಯೋಜನೆ ಸ್ಥಗಿತಗೊಂಡಿರುವುದರಿಂದ ಪ್ರಸ್ತುತ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇತ್ತೀಚೆಗೆ ಸ್ಥಗಿತಗೊಂಡಿದ್ದ ಹಿರೇಕೋಡಿ ಬಹುಗ್ರಾಮ ಯೋಜನೆಯಡಿ ನೀರು ಪೂರೈಕೆ ಭಾನುವಾರದಿಂದ ಮರುಪ್ರಾರಂಭಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *