ನವದೆಹಲಿ: ಹಬ್ಬದ ಋತುವಿನ ಮುನ್ನ ಸಕ್ಕರೆ ಬೆಲೆ ಏರಿಕೆಯಾಗಲು ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ದಾಸ್ತಾನುದಾರರು ಮತ್ತು ಕಾಳಸಂತೆಕೋರರಿಗೆ ಅನುಕೂಲ ಮಾಡಿಕೊಡುವ ಮೂಲಕ ₹36,000 ಕೋಟಿ ಮೌಲ್ಯದ ಸಕ್ಕರೆ ಹಗರಣಕ್ಕೆ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಕ್ಕರೆ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗುವ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಏಪ್ರಿಲ್ನಲ್ಲೇ ಮಾಹಿತಿ ಇದ್ದರೂ ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸಕ್ಕರೆಯ ಚಿಲ್ಲರೆ ಬೆಲೆ ಪ್ರತಿ ಕೆ.ಜಿಗೆ ಸುಮಾರು ₹40ರಿಂದ ₹75ಕ್ಕೆ ಏರಿಕೆಯಾಗಿದೆ ಎಂದು ಸುರ್ಜೇವಾಲಾ ಹೇಳಿದರು. ಆಗಸ್ಟ್ನಿಂದ ನವೆಂಬರ್ವರೆಗೆ ದೇಶದಲ್ಲಿ ಸುಮಾರು 1.2 ಕೋಟಿ ಟನ್ ಸಕ್ಕರೆ ಬಳಕೆಯಾಗುವ ನಿರೀಕ್ಷೆಯಿದೆ. ಪ್ರತಿ ಕೆ.ಜಿಗೆ ಹೆಚ್ಚುವರಿಯಾಗಿ ₹30 ಪಾವತಿಸಬೇಕಾದ ಪರಿಸ್ಥಿತಿ ಬಂದರೆ, ಗ್ರಾಹಕರ ಮೇಲೆ ಸುಮಾರು ₹36,000 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಈ ಹಣ ದಾಸ್ತಾನುದಾರರು ಮತ್ತು ಕಾಳಸಂತೆಕೋರರ ಪಾಲಾಗಲಿದೆ ಎಂದು ಅವರು ಆರೋಪಿಸಿದರು.
ಸಕ್ಕರೆ ಬೆಲೆ ಏರಿಕೆಗೆ ಕಡಿಮೆ ಉತ್ಪಾದನೆ ಹಾಗೂ ದಾಸ್ತಾನು ಬೇರೆಡೆಗೆ ವರ್ಗಾವಣೆಯಾಗಿರುವುದು ಕಾರಣ ಎಂದು ಸುರ್ಜೇವಾಲಾ ಆರೋಪಿಸಿದರು. ಹಬ್ಬದ ಸಂದರ್ಭದಲ್ಲಿ ಸಕ್ಕರೆ ಬೆಲೆ ಏರಿಕೆಯಿಂದ ದಸರಾ ಮತ್ತು ದೀಪಾವಳಿ ಆಚರಿಸುವ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ ಎಂದರು.
ಎಥನಾಲ್ ಉತ್ಪಾದನೆಗೆ ಕಬ್ಬು ಬಳಕೆ
ಕಬ್ಬಿಗೆ ರೈತರಿಗೆ ಸಮರ್ಪಕ ಬೆಲೆ ಸಿಗದ ಕಾರಣ ಕಬ್ಬು ಬೆಳೆಯುವ ರೈತರ ಸಂಖ್ಯೆ ಮತ್ತು ಉತ್ಪಾದನೆ ಕಡಿಮೆಯಾಗಿದೆ ಎಂದು ಸುರ್ಜೇವಾಲಾ ಹೇಳಿದರು. ಇದೇ ವೇಳೆ 2025ರ ನವೆಂಬರ್ನಿಂದ 2026ರ ಜುಲೈವರೆಗೆ ಶೇ.32ರಷ್ಟು ಕಬ್ಬಿನ ದಾಸ್ತಾನನ್ನು ಇ20 ಇಂಧನ ಉತ್ಪಾದನೆಗೆ ಬಳಸಲಾಗಿದೆ. ಇದರಿಂದ ಗ್ರಾಹಕರಿಗೆ ಲಭ್ಯವಾಗುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ಆರೋಪಿಸಿದರು.
ಇ20 ಇಂಧನದ ಸಾಧನೆಯ ಶ್ರೇಯಸ್ಸನ್ನು ಕೇಂದ್ರ ಸರ್ಕಾರ ಪಡೆಯುತ್ತಿದೆ, ಆದರೆ ಅದರ ಪರಿಣಾಮವನ್ನು ಜನರು ಬೆಲೆ ಏರಿಕೆಯ ರೂಪದಲ್ಲಿ ಅನುಭವಿಸುತ್ತಿದ್ದಾರೆ ಎಂದು ಸುರ್ಜೇವಾಲಾ ಟೀಕಿಸಿದರು. ಸಕ್ಕರೆ
ಇದನ್ನೂ ಓದಿ : ಸಿಜೆಐ ಸೂರ್ಯಕಾಂತ್ ಆಹ್ವಾನಕ್ಕೆ ವಿರೋಧ: ಬೆಂಗಳೂರಿನ ಎನ್ಎಲ್ಎಸ್ಐಯು ಘಟಿಕೋತ್ಸವ ರದ್ದು ಸಕ್ಕರೆ
ಸಬ್ಸಿಡಿ ದರದಲ್ಲಿ ಸಕ್ಕರೆ ನೀಡಲು ಆಗ್ರಹ
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 500 ಗ್ರಾಂ ಸಕ್ಕರೆಯನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದರು.
ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಕ್ಕರೆ ಬೆಲೆ ಏರಿಕೆಯ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳದಂತೆ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇದನ್ನೂ ನೋಡಿ :ಬೀದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವವರು ಯಾರು? ಸುಪ್ರೀಂ ಕೋರ್ಟ್ ಹೇಳಿರುವುದು ಏನು? Janashakthi Media
