ವರ್ಥೂರಿನ ಎಸ್‌ಟಿಪಿ ದುರಂತ: 10 ದಿನಗಳಾದರೂ ಕಾರ್ಮಿಕನ ಸಂಪೂರ್ಣ ಶವ ಪತ್ತೆಯಾಗಿಲ್ಲ

ಬೆಂಗಳೂರು: ವರ್ಥೂರಿನ ಮಲಿನಜಲ ಶುದ್ಧೀಕರಣ ಘಟಕ (ಎಸ್‌ಟಿಪಿ) ಟ್ಯಾಂಕ್‌ನಲ್ಲಿ ಇಬ್ಬರು ಕಾರ್ಮಿಕರು ಕೊಚ್ಚಿಹೋಗಿದ ಘಟನೆಗೆ 10 ದಿನಗಳು ಕಳೆದರೂ, ಒಬ್ಬರ ಶವ ಇನ್ನೂ ಸಂಪೂರ್ಣವಾಗಿ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು, ಇದುವರೆಗೆ ಕಾರ್ಮಿಕನ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿವೆ ಎಂದು ತಿಳಿಸಿದ್ದಾರೆ. ವರ್ಥೂರಿನ

ಬಿಡಬ್ಲ್ಯೂಎಸ್‌ಎಸ್‌ಬಿಯ ಬಾಳೆಗೇರೆ ಎಸ್‌ಟಿಪಿ ಪ್ರದೇಶಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಒಳಗೆ ಬಿಡಲಾಗಿಲ್ಲ. ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು, “ಎರಡು ದಿನಗಳ ಹಿಂದೆ ಕಾಲಿನ ಒಂದು ಭಾಗ ಸಿಕ್ಕಿದೆ. ಶೋಧ ಕಾರ್ಯ ಮುಂದುವರಿದಿದೆ” ಎಂದು ತಿಳಿಸಿದ್ದಾರೆ. ವರ್ಥೂರಿನ

ಜೂನ್ 18ರಂದು ಬಿಹಾರ ಮೂಲದ 27 ವರ್ಷದ ಬ್ರಿಜೇಶ್ ಕುಮಾರ್ ಅವರು ಟ್ಯಾಂಕ್‌ನ ‘ವೆಟ್ ವೆಲ್’ ಭಾಗಕ್ಕೆ ಬಿದ್ದು ಕಾಣೆಯಾಗಿದ್ದರು. ಅವರೊಂದಿಗೆ ಇದ್ದ ಮೇಲ್ವಿಚಾರಕ ಎಂಜಿನಿಯರ್ ಅಗಿಲನ್ ಮೋಹನ್ ಅವರು ಕೂಡ ಕೊಚ್ಚಿಹೋಗಿದ್ದು, ಜೂನ್ 21ರ ಬೆಳಗಿನ ಜಾವ ಅವರ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಕೊಲ್ಕತ್ತಾ ಗೋದಾಮು ಕುಸಿತ, ನಜೀರಾಬಾದ್ ಅಗ್ನಿ ದುರಂತ: ಕಾರ್ಮಿಕರ ಜೀವಹಾನಿ ಹಿಂದೆ ವ್ಯವಸ್ಥೆಯ ವೈಫಲ್ಯ

ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಟ್ಯಾಂಕ್ ಸುಮಾರು 40 ಅಡಿ ಆಳ ಮತ್ತು 80 ಅಡಿ ವ್ಯಾಸ ಹೊಂದಿದ್ದು, ರಕ್ಷಣಾ ಕಾರ್ಯ ಕಷ್ಟಕರವಾಗಿದೆ.

“ನೀರಿನ ಮಟ್ಟ ಕಡಿಮೆಯಾದರೂ, ಸುಮಾರು ಐದು ಅಡಿ ಮಟ್ಟಿಗೆ ಕೆಸರು, ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಇದೆ. ಟ್ಯಾಂಕ್‌ಗೆ ಪ್ರವೇಶಿಸಲು ಕೇವಲ ಸಣ್ಣ ದ್ವಾರವಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಧಾರ ಕಾರ್ಯಕ್ಕೆ ಎಕ್ಸ್ಕವೇಟರ್‌ಗಳು, ಶವ ಪತ್ತೆ ಸಾಧನಗಳು ಮತ್ತು ಆಮ್ಲಜನಕ ಟ್ಯಾಂಕ್‌ಗಳೊಂದಿಗೆ ಡೈವರ್‌ಗಳನ್ನು ಬಳಸಲಾಗುತ್ತಿದೆ. ಆದರೂ, ತ್ಯಾಜ್ಯ ಸಂಗ್ರಹದಿಂದ ಕಾರ್ಯ ನಿಧಾನಗತಿಯಾಗಿದೆ. ಬ್ರಿಜೇಶ್ ಅವರ ದೇಹ ಪಂಪ್‌ಗಳಲ್ಲಿ ಸಿಲುಕಿರಬಹುದು ಅಥವಾ ಕೆಸರಿನಡಿ ಹೂತುಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಘಟನೆ ಜೂನ್ 18ರಂದು ಸಂಜೆ ಸಂಭವಿಸಿದ್ದು, ಗೇಟ್ ದುರಸ್ತಿ ವೇಳೆ ಕಾರ್ಮಿಕರು ಒಳಗೆ ಇಳಿದಿದ್ದರು. ಕಾರ್ತಿಕ್ ಎಂಬ ಕಾರ್ಮಿಕ ಪಾರಾಗಿ ಮಾಹಿತಿ ನೀಡಿದರೆ, ಉಳಿದ ಇಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ, ವರ್ಥೂರು ಪೊಲೀಸ್ ಠಾಣೆಯಲ್ಲಿ ಚೆನ್ನೈ ಮೂಲದ ವಿ.ಎ ಟೆಕ್ ವಾಬಾಗ್ ಲಿಮಿಟೆಡ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 125ರಡಿ ಪ್ರಕರಣ ದಾಖಲಾಗಿದೆ.

ಕಾಂಟ್ರಾಕ್ಟರ್ ಸಂಸ್ಥೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ಒದಗಿಸುವ ಜವಾಬ್ದಾರಿ ಸಂಸ್ಥೆಯದ್ದೇ ಆಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆಯ ಬಳಿಕ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷೆ ಎನ್. ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ, ಶೋಧ ಕಾರ್ಯವನ್ನು ವೇಗಗೊಳಿಸಲು ಸೂಚನೆ ನೀಡಿದರು. ಜೊತೆಗೆ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *